ಉಸಿರಿಗೆ ಹಸಿರು ನೀಡೋ ಜೀವಜಲ, ಈ ಭೂಮಿ ಮೇಲೆ ಬದುಕಬೇಕಂದ್ರೆ ನೀರು ಅನಿವಾರ್ಯ. ಆದರೆ ಅಭಿವೃದ್ಧಿಯ ಹೆಸರಲ್ಲಿ ನೈಸರ್ಗಿಕ ಸಂಪತ್ತಿನ ಲೂಟಿಯಾಗುತ್ತಿದೆ. ಅತಿಯಾದ ಬಳಕೆಯಿಂದಾಗಿ ಜೀವಜಲ ಬತ್ತಿಹೋಗುತ್ತಿದ್ದು, ನೀರನ್ನು ಮಿತವಾಗಿ ಬಳಸಿ ಉಳಿಸುವ ಮೂಲಕ ಅತ್ಯಮೂಲ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಹಾಗೂ ಪ್ರತಿಯೊಬ್ಬ ಮಾನವನ ಕರ್ತವ್ಯವೂ ಸಹ ಹೌದು.
ಇತ್ತೀಚಿನ ದಿನಗಳಲ್ಲಿ ಜಲ ಸಂಪತ್ತನ್ನು ಉಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ದೇಶವ್ಯಾಪಿ ಜನಾಂದೋಲಗಳನ್ನು ಮೂಡಿಸಲು ಮುಂದಾಗಿವೆ. ರಾಜ್ಯದಲ್ಲಿಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಲಸಂರಕ್ಷಣೆಗೆ ಪಣ ತೊಟ್ಟಿದ್ದು, ಕಲ್ಯಾಣಿಗಳ ಪುನಶ್ಚೇತನ, ಸರ್ಕಾರಿ ಜಾಗಗಳಲ್ಲಿ ಬದುಗಳ ನಿರ್ಮಾಣ ಹಾಗೂ ಕೆರೆ ಕಟ್ಟೆಗಳ ಪುನರುಜ್ಜೀವನ ಕಾರ್ಯಕ್ರಮಗಳು ಸೇರಿದಂತೆ ಹಲವು ಯೋಜನೆಗಳನ್ನು ಅಂತರ್ಜಲ ಹೆಚ್ಚಳಕ್ಕೆ ಮತ್ತು ಜಲ ಸಂರಕ್ಷಣೆಗಾಗಿ ನಿರಂತರವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಭಾಗಶಃ ಬರಪೀಡಿತ ಜಿಲ್ಲೆಯಾಗಿರುವ ರಾಜ್ಯದ ದಕ್ಷಿಣ ಭಾಗದ ಗಡಿ ಜಿಲ್ಲೆ ಚಾಮರಾಜನಗರ. ಜಿಲ್ಲೆಯಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗದಷ್ಟು ಪಾತಾಳಕ್ಕೆ ಸೇರಿದೆ ಅಂತರ್ಜಲ. ಭೂಮಿಯ ಒಡಲು ಬರಿದಾಗಿದ್ದು, ವಾರ್ಷಿಕವಾಗಿ ಜಿಲ್ಲೆಗೆ ಬೀಳುವ ಮಳೆ ಪ್ರಮಾಣ ಸರಾಸರಿ 811.75 ಮಿ.ಮೀ ಆಗಿದೆ. ಅಗಾಧವಾದ ಅರಣ್ಯ ಸಂಪತ್ತು, ಬೆಟ್ಟ ಗುಡ್ಡಗಳನ್ನು ಹೊಂದಿದ್ದರೂ ಅದಕ್ಕನುಗುಣವಾಗಿ ನಿರೀಕ್ಷಿತ ಮಳೆಯಾಗದಿರುವುದು ಮಾನವನ ದುರಾಸೆಗೆ ಹಿಡಿದ ಕೈಗನ್ನಡಿಯಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳ ಜೊತೆಗೆ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚಾಮರಾಜನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದೆ. ಅವುಗಳು ಈ ಕೆಳಗಿನಂತಿವೆ.
ಬದುಗಳ ನಿರ್ಮಾಣ: ರೈತರುಗಳ ಖಾಸಗಿ ಜಮೀನು, ಸಮುದಾಯ ಅಥವಾ ಸರ್ಕಾರಿ ಗೋಮಾಳಗಳಲ್ಲಿ 1 ರಿಂದ 2 ಅಡಿ ಅಂತರದಲ್ಲಿ 1*1 ಅಗಲ ಮತ್ತು 4 ಅಡಿ ಆಳದ ಗುಂಡಿಗಳನ್ನು ತೋಡುವ ಮೂಲಕ ಮಳೆ ನೀರು ಇಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತಿದೆ. ಹೀಗೆ ಗುಂಡಿಗಳಲ್ಲಿ ಸಂಗ್ರಹವಾದ ನೀರನ್ನು ರೈತರು ತಮ್ಮ ಬೆಳೆಗಳಿಗೆ ಬಳಸಿಕೊಳ್ಳುವ ಜೊತೆಗೆ ನೀರು ನಿರಂತರವಾಗಿ ಅಲ್ಲಿಯೇ ನಿಂತಿರುವುದರಿಂದ ಇಂಗಿದ ನೀರು ಅಂತರ್ಜಲ ಸೇರುವ ಮೂಲಕ ಅಂತರ್ಜಲ ಹೆಚ್ಚಳಕ್ಕೂ ಸಹಕಾರಿಯಾಗಿದೆ. ಪ್ರಸ್ತುತ ನರೇಗಾ ಯೋಜನೆಯಡಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ 15ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಿಕೊಂಡು ಬದುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ನಾಲಾಬದು ನಿರ್ಮಾಣ: ಜಿಲ್ಲೆಯಲ್ಲಿ ಕೈಗೊಳ್ಳಲಾದ ಜಲ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಇದೂ ಸಹ ಒಂದು. ಗ್ರಾಮಗಳ ಸುತ್ತಲಿನ 1 ಅಥವಾ 2 ಕಿ.ಮೀ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರಿನ ಹರಿವು ಈ ನಾಲಾಬದುವಿಗೆ ಬಂದು ಸೇರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಲಭ್ಯವಿರುವ ರೈತರ ಭೂಮಿ ಅಥವಾ ಸರ್ಕಾರಿ ಜಾಗಗಳಲ್ಲಿ ಬೃಹತ್ತಾದ ಕಟ್ಟೆಯಂತಹ ಬದುವೊಂದನ್ನು ನಿರ್ಮಿಸಿ ಅತಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಇಲ್ಲಿ ಸಂಗ್ರಹವಾದ ನೀರನ್ನು ಸುಮಾರು 15 ರಿಂದ 20 ರೈತರು ತಮ್ಮ ತೋಟಗಳಿಗೆ/ಬೆಳೆಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಜಾನುವಾರುಗಳು ಸಹ ಈ ನೀರನ್ನು ಕುಡಿಯಬಹುದಾಗಿರುತ್ತದೆ. ಇದೊಂದು ಬೃಹತ್ ಕಟ್ಟೆಯ ರೀತಿಯಲ್ಲಿರುವುದರಿಂದ ಇದರಲ್ಲಿ ಸಂಗ್ರಹವಾದ ನೀರು ಹಲವು ದಿನಗಳ ವರೆಗೆ ಶೇಖರಣೆಯಾಗಿ ಕ್ರಮೇಣ ಇಂಗಿ ಅಂತರ್ಜಲ ಸೇರಿಕೊಳ್ಳುವುದರಿಂದ ಸುತ್ತಮುತ್ತಲಿನ ಅಂತರ್ಜಲ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಿದೆ.
ಕೆರೆಗಳ ಪುನಶ್ಚೇತನ ಹಾಗೂ ಕೃಷಿ ಹೊಂಡ ನಿರ್ಮಾಣ: ಹಿಂದಿನಿಂದಲೂ ಗ್ರಾಮಗಳನ್ನು ಸುಭೀಕ್ಷವಾಗಿಡಲು ಪಾರಂಪರಿಕವಾಗಿ ನಿರ್ಮಾಣ ಮಾಡಿರುವ ಕೆರೆಗಳು ಮಾನವನ ದುರಾಸೆಯಿಂದ ಅಳಿವಿನಂಚಿಗೆ ತಲುಪಿವೆ. ಅತಿಯಾದ ಒತ್ತುವರಿಯಿಂದಾಗಿ ಎಕರೆಗಳಷ್ಟಿದ್ದ ಕರೆಗಳು ಗುಂಟೆಗಳಲ್ಲಿವೆ. ಇದರಿಂದಾಗಿ ನೀರಿನ ಶೇಖರಣೆಯ ಪ್ರಮಾಣ ಕುಗ್ಗಿಹೋಗಿದ್ದು, ಇಂತಹ ಕೆರೆಗಳ ಪುನಶ್ಚೇತನಕ್ಕೂ ಕ್ರಮ ವಹಿಸಲಾಗುತ್ತಿದೆ. ಒತ್ತುವರಿ ತೆರವು ಮತ್ತು ಹೂಳನ್ನು ತೆಗೆಯುವ ಮೂಲಕ ನೀರಿನ ಒಳಹರಿವಿಗೆ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ಬತ್ತಿಹೋಗಿದ್ದ ಸುತ್ತಮುತ್ತಲಿನ ಬೋರ್‌ವೆಲ್‌ಗಳಿಗೆ ಅಂತರ್ಜಲ ಮರುಪೂರಣ ಮಾಡುವ ಮೂಲಕ ಮರುಜೀವ ನೀಡಲಾಗುತ್ತಿದೆ. ಇದರ ಜೊತೆಗೆ ಬಿಸಿಲ ಬೇಗೆಯಲ್ಲಿ ಜಾನುವಾರುಗಳ ದಾಹ ಇಂಗಿಸಲು ಕೆರೆಗಳು ಪೂರಕವಾಗುವಂತೆ ಮಾಡಲಾಗುತ್ತಿದೆ.
ಕೃಷಿ ಹೊಂಡಗಳನ್ನು ಸಾಮಾನ್ಯವಾಗಿ ರೈತರ ಜಮೀನಿನಲ್ಲಿ 3000-4000 ಲೀ ಸಾಮರ್ಥ್ಯವನ್ನು ಹೊಂದುವ ರೀತಿಯಲ್ಲಿ ಜಾಗದ ಲಭ್ಯತೆಗನುಗುಣವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಗಳಿಗೆ ಸಕಾಲದಲ್ಲಿ ನೀರು ಹರಿಸುವುದರಿಂದ ಬೆಳೆಗಳನ್ನು ಕಾಪಾಡಿಕೊಳ್ಳಬಹುದಾಗಿದೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಇದು ಸಹಕಾರಿಯಾಗಿದ್ದು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಹಿಡಿದಿಡಲು ಸಹಕಾರಿಯಾಗಿದೆ.
ಇದಿಷ್ಟೇ ಅಲ್ಲದೆ ಕೊಳವೆ ಬಾವಿಗಳ ಮರುಪೂರಣ ಮತ್ತು ಸಮರ್ಪಕ ದ್ರವ ತ್ಯಾಜ್ಯ ನಿರ್ವಹಣೆಗೆ ವೈಯಕ್ತಿಕ/ಸಮುದಾಯ ಇಂಗುಗುಂಡಿಗಳ ನಿರ್ಮಾಣ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಕೇವಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಷ್ಟೇ ಅಲ್ಲದೆ ಸಣ್ಣ ನೀರಾವರಿ ಇಲಾಖೆ ಹಾಗೂ ಕೃಷಿ ಇಲಾಖೆಯೂ ಕೂಡ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಜಲ ಸಂರಕ್ಷಣೆಗೆ ಒತ್ತು ನೀಡಲು ಮುಂದಾಗಿದೆ.
ಒಟ್ಟಿನಲ್ಲಿ ಜಲ ಸಂರಕ್ಷಣೆ ಕೇವಲ ಸರ್ಕಾರಗಳ ಜವಾಬ್ದಾರಿಯಾಗಿರದೆ ಪ್ರತಿಯೊಬ್ಬ ಮಾನವನ ಕರ್ತವ್ಯವೂ ಆಗಿದೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ ಮತ್ತು ಅಂತರ್ಜಲ ಹೆಚ್ಚಿಸುವ ಕೆಲಸಕ್ಕೆ ಪ್ರತಿಯೊಬ್ಬ ನಾಗರಿಕನೂ ಇಂದೇ ಕೈಜೋಡಿಸಲಿ. ನೀರನ್ನು ಮಿತವಾಗಿ ಬಳಸಿ ಜಲ ಸಾಕ್ಷರರಾಗುವ ಮೂಲಕ ಇದನ್ನು ಸಾಕಾರಗೊಳಿಸಲಿ ಎಂಬುದೇ ನಮ್ಮ ಆಶಯ.
3,799 total views, 1 views today