ಸೈಕಲ್ ಸಹ ಓಡಿಸಲು ಬಾರದ, ಮನೆಯ ಹೊಸ್ತಿಲು ದಾಟಲು ಭಯಪಡುತ್ತಿದ್ದ ಮಹಿಳೆ ಇಂದು ಧೈರ್ಯದಿಂದ ಸ್ವಚ್ಛ ವಾಹಿನಿ ಚಲಾಯಿಸಿ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಸಾಧಿಸುವ ಛಲ, ಧೃಢ ಮನೋಬಲವಿದ್ದರೆ ಸಾಧನೆ ಸಾಧ್ಯ ಎಂದು ನಿರೂಪಿಸಿದ್ದಾರೆ. ಅನಿಷ್ಠ ದೇವದಾಸಿ ಪದ್ಧತಿಯನ್ನು ಮೀರಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಆಸೆ, ಗೌರವಯುತ ಬದುಕು ಕಟ್ಟಿಕೊಳ್ಳಬೇಕೆಂದು ಹಂಬಲ ಹೊಂದಿದ್ದ ಆ ಮಹಿಳೆಯೇ ಅಡಿವೆಮ್ಮ. ಈ ದಿಟ್ಟ ಮಹಿಳೆ ಇಂದು ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದು ಅಸಮಾನ್ಯವೆ ಸರಿ.
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಮೌಢ್ಯತೆಗೆ ಬಲಿಯಾಗಿ ದೇವದಾಸಿ ಪದ್ಧತಿಯಿಂದ ನಲುಗಿದ್ದರು. ಕಷ್ಟಗಳನ್ನೆಲ್ಲಾ ಮೆಟ್ಟಿ ನಿಂತು ಸ್ವಚ್ಛ ವಾಹಿನಿ ಚಾಲಕಿಯಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿ ಇತರರಿಗೂ ಮಾದರಿಯಾಗಿದ್ದಾರೆ.
ಚಾಲಕಿಯಾಗುವ ಮುನ್ನ ಅಡಿವೆಮ್ಮ ನರೇಗಾ ಯೋಜನೆಯಡಿಯಲ್ಲಿ ಕೆಲವು ದಿನ ಕೆಲಸ ಮಾಡುತ್ತಿದ್ದರು. ತಾನೂ ಎಲ್ಲರೊಳಗೊಂದಾಗಬೇಕು ಎಂದು ಸಂಜೀವಿನಿ ಯೋಜನೆಗೆ ಸೇರಿದರು. ಸ್ವಯಂ ಉದ್ಯೋಗ ಕೈಗೊಳ್ಳಲು ಮನಸ್ಸಿರುವವರಿಗೆ ಅವಕಾಶ ಕಲ್ಪಿಸಲು ಗ್ರಾಮ ಪಂಚಾಯಿತಿ ಮುಂದಾದಾಗ ಅಡಿವೆಮ್ಮ ಅವರು ಉತ್ಸುಕತೆಯನ್ನು ತೋರಿದರು. ಜೊತೆಗೆ ಪಿ.ಡಿ.ಓ ಅವರು ನೀಡಿದ ಪ್ರೋತ್ಸಾಹದಿಂದ ಅಡಿವೆಮ್ಮ ಅವರು ಚಾಲನಾ ತರಬೇತಿಗೆ ಸೇರಿ ಈಗ ಸ್ವಚ್ಛ ವಾಹಿನಿ ಚಾಲಕಿಯಾಗಿದ್ದಾರೆ.
ಅಡಿವೆಮ್ಮ ಅವರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಮುಂಜಾನೆ ಸ್ವಚ್ಛವಾಹಿನಿಯಲ್ಲಿ ಹೋಗಿ ಕಸ ಸಂಗ್ರಹಿಸುತ್ತಾರೆ. ಒಣ ಕಸ, ಹಸಿ ಕಸ ಬೇರ್ಪಡಿಸಿ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಈ ಕುರಿತು ಅಡಿವೆಮ್ಮ ಅವರ ಗ್ರಾಮದ ಜನರು ಕೂಡ ಹೆಮ್ಮೆ ವ್ಯಕ್ತಪಡಿಸುತ್ತಾರೆ.
"ಹೈಸ್ಕೂಲ್ ಓದುತ್ತಿದ್ದಾಗ ಮನೆಯವರು ತಿಳಿಯದೆ ನನ್ನನ್ನು ದೇವದಾಸಿಯಾಗಿಸಿದರು. ಇದರಿಂದ ಬಹಳಷ್ಟು ನೋವು ಹಾಗೂ ಅಪಮಾನ ಅನುಭವಿಸಿದೆ. ನನಗೆ ನನ್ನದೇ ಆದ ಗುರುತಿರಲಿಲ್ಲ. ಈ ಪದ್ಧತಿಯಿಂದ ಈಗ ಹೊರ ಬಂದಿರುವೆ. ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುತ್ತಿರುವೆ. ನನ್ನ ಮೂವರು ಮಕ್ಕಳನ್ನು ದಡ ಸೇರಿಸುವ ನಂಬಿಕೆಯಿದೆ. ಮಹಿಳೆಯರು ಮೂಢನಂಬಿಕೆಗಳಿಗೆ ಬಲಿಯಾಗಬಾರದು. ಹೆಣ್ಣು ಮಕ್ಕಳು ಆಚೆ ಬಂದು ದುಡಿದು ಆರ್ಥಿಕ ಸ್ವಾವಲಂಬಿಗಳಾಗಬೇಕು. ಕಷ್ಟ ಬಂದಾಗ ಸಂಘ ಸಂಸ್ಥೆಗಳ ಸಹಾಯ, ಮಾರ್ಗದರ್ಶನ ಪಡೆಯಬೇಕು. ಮಹಿಳೆಯರು ಪ್ರತಿಕ್ಷೇತ್ರದಲ್ಲೂ ಮುಂದೆ ಬರಬೇಕು. ಹೆಣ್ಣು ಅಬಲೆಯಲ್ಲ, ಸಬಲೆ " ಎಂದು ಅಡಿವೆಮ್ಮ ವಿಶ್ವಾಸದಿಂದ ಮಾತನಾಡುತ್ತಾರೆ.
"ಸಂಜೀವಿನಿ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಒದಗಿಸುವಾಗ ಅಶಕ್ತ ಮಹಿಳೆಯರು, ವಿಧವೆಯರು, ವಿಮುಕ್ತ ದೇವದಾಸಿಯರು ಸೇರಿ ಅಸಹಾಯಕರನ್ನು ಮೊದಲು ಆದ್ಯತೆಯಾಗಿ ಪರಿಗಣಿಸುತ್ತೇವೆ. ಅಡಿವೆಮ್ಮ ಅವರು ಹೆಚ್ಚಿನ ಆಸಕ್ತಿಯಿಂದ ಡ್ರೈವಿಂಗ್ ಕಲಿತು, ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದಾರೆ" ಎಂದು ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರ್ಷ ವ್ಯಕ್ತಪಡಿಸುತ್ತಾರೆ.
2,464 total views, 1 views today