Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC)

ಗ್ರಾಮೀಣ ಸಮುದಾಯದಲ್ಲಿ ನೈರ್ಮಲ್ಯ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಿಗೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಮತ್ತು ಜಲ ಜೀವನ ಅಭಿಯಾನ (JJM) ಯೋಜನೆಗಳಡಿ ಆಧ್ಯತೆಯನ್ನು ನೀಡಲಾಗಿದೆ.  ಈ ಯೋಜನೆ ಕುರಿತು ಜನರಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು ಒದಗಿಸಲು ಪತ್ರಿಕೆ, ರೇಡಿಯೋ, ಟಿವಿ ಚಾನೆಲ್‌ಗಳು, ಗೋಡೆ ಬರಹ, ನಾಟಕ, ಘೋಷಣೆ, ಜಾಥಾ, ಕಿರು ಪ್ರದರ್ಶನ, ಕರಪತ್ರ, ಭಿತ್ತಿ ಪತ್ರ, ಜಾಹಿರಾತು ಫಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಲ್ಲಿ ಒಳಗೊಂಡಿರುತ್ತವೆ.

ಸರ್ಕಾರೇತರ ಸಂಸ್ಥೆಗಳು ಈ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇವುಗಳ ಮೂಲಕ ಜನರಿಗೆ ನೈರ್ಮಲ್ಯ ಮಾಹಿತಿ, ಶಿಕ್ಷಣವನ್ನು ನೀಡುವ ಕಾರ್ಯವು ನಡೆಯುತ್ತಿದೆ. ಇದಲ್ಲದೆ, ಮನೆ ಮನೆ ಭೇಟಿ, ವ್ಯಕ್ತಿಗತ ಚರ್ಚೆ, ಗುಂಪು ಚರ್ಚೆ, ಒಳಾಂಗಣ ಆಟಗಳು, ಹೊರಾಂಗಣ ಕ್ರೀಡೆಗಳು, ಸಭೆಗಳು, ಹಾಡು, ರಸ ಪ್ರಶ್ನೆ, ಘೋಷಣೆ, ಪಾದಯಾತ್ರೆ, ಶ್ರಮದಾನ, ಜಾಥ ಕಾರ್ಯಕ್ರಮಗಳು, ಮ್ಯಾರಾಥಾನ್, ಗ್ರಾಮ ಮುಖ್ಯಸ್ಥರ ನೇತೃತ್ವ, ಧಾರ್ಮಿಕ ಮುಖಂಡರ ಉಪನ್ಯಾಸ ಇಂತಹ ಹಲವಾರು ಜಾಗೃತಿಗೆ ಪೂರಕ ಸಂವಹನ ಕಾರ್ಯಕ್ರಮಗಳ ಮುಖಾಂತರ ಐ.ಇ.ಸಿ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಈ ಯೋಜನೆಯ ಅನುಷ್ಠಾನದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಸಮುದಾಯ ಬಾನುಲಿ ಸೇವೆಗಳು

ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಬಾನುಲಿ ಕೇಂದ್ರಗಳ ಮಹತ್ವವನ್ನರಿತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 8 ಸಮುದಾಯ ಬಾನುಲಿ ಕೇಂದ್ರಗಳನ್ನು ಎಂಪ್ಯಾನಲ್ ಮಾಡಿಕೊಂಡಿದೆ. ಅವುಗಳೆಂದರೆ:

  • ಕಲಬುರಗಿಯ ಅಂತರವಾಣಿ ಸಮುದಾಯ ರೇಡಿಯೋ
  • ಬೆಳಗಾವಿ ಜಿಲ್ಲೆಯ ವೇಣುಧ್ವನಿ
  • ಮಣಿಪಾಲದ ರೇಡಿಯೋ ಮಣಿಪಾಲ
  • ಮಂಗಳೂರಿನ ರೇಡಿಯೋ ಸಾರಂಗ್
  • ತುಮಕೂರಿನ ರೇಡಿಯೋ ಸಿದ್ಧಾರ್ಥ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರಥಿ ಝಲಕ್
  • ಸರಗೂರಿನ ಜನಧ್ವನಿ
  • ಕೋಲಾರ ಜಿಲ್ಲೆಯ ನಮ್ಮ ಧ್ವನಿ
  • ಬೆಳಗಾವಿಯ ಹುಕ್ಕೇರಿ ತಾಲೂಕಿನ ನಮ್ಮೂರ ಬಾನುಲಿ
  • ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಮುದಾಯ ಬಾನುಲಿ ಕೇಂದ್ರ.

ಗ್ರಾಮೀಣ ಕರ್ನಾಟಕದ ನೀರು ಮತ್ತು ನೈರ್ಮಲ್ಯ ಸ್ಥಿತಿಯನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದ ಭಾಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯ್ದ ಸಮುದಾಯ ಬಾನುಲಿ ಕೇಂದ್ರಗಳಲ್ಲಿ ನೀರು - ನೈರ್ಮಲ್ಯ ಕುರಿತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಎಲ್ಲ ಸಮುದಾಯ ಬಾನುಲಿ ಕೇಂದ್ರಗಳು ಪ್ರಸ್ತುತ ಅಂದಾಜು 1500 ಗ್ರಾಮಗಳಿಗೆ ಮಾಹಿತಿ ಬಿತ್ತರಿಸುತ್ತಿವೆ.

ಗೋಡೆ ಬರಹ:

ಗ್ರಾಮೀಣ ಜನರಿಗೆ ಶೌಚಾಲಯ ಬಳಕೆ, ಅದರ ಉಪಯೋಗಗಳು ಹಾಗೂ ಬಯಲು ಬಹಿರ್ದೆಸೆಯಿಂದಾಗುವ ದುಷ್ಪರಿಣಾಮಗಳು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಶುದ್ಧ, ಸುರಕ್ಷಿತ ಕುಡಿಯುವ ನೀರಿನ ಸಮರ್ಪಕ ಬಳಕೆ ಕುರಿತು ಅರಿವು ಮೂಡಿಸಲು ಇದು ಬಹಳ ಪರಿಣಾಮಕಾರಿಯಾದ ಮಾಧ್ಯಮವಾಗಿದೆ.

ಭಿತ್ತಿಚಿತ್ರ (ಪೋಸ್ಟರ್):

ಶೌಚಾಲಯ ಬಳಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಋತುಚಕ್ರ ತ್ಯಾಜ್ಯ ನಿರ್ವಹಣೆ, ಉತ್ತಮ ನೈರ್ಮಲ್ಯ ಅಭ್ಯಾಸಗಳು ಸೇರಿದಂತೆ ನೀರು ಮತ್ತು ನೈರ್ಮಲ್ಯ ಕುರಿತ ಮಾಹಿತಿಯನ್ನೊಳಗೊಂಡ ಪೋಸ್ಟರ್‌ಗಳು ಜನರಿಗೆ ವಿಚಾರಗಳನ್ನು ಅರ್ಥೈಸುವಲ್ಲಿ ಯಶಸ್ವಿಯಾಗಿವೆ.

ಜಾಹೀರಾತು ಫಲಕ ಅಳವಡಿಕೆ (ಹೋರ್ಡಿಂಗ್ಸ್):

ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವರ್ಗದ ಜನರಲ್ಲಿ ನೀರು ಮತ್ತು ನೈರ್ಮಲ್ಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಹೊರಾಂಗಣ ಮಾಧ್ಯಮವು ಪರಿಣಾಮಕಾರಿಯಾಗಿದೆ. ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಇದು ಗಮನಾರ್ಹ ಪಾತ್ರ ವಹಿಸುತ್ತದೆ.

ಗ್ರಾಮೀಣ ಸಹಭಾಗಿತ್ವ ಮೌಲ್ಯಮಾಪನ (PRA)

ಗ್ರಾಮೀಣ ಸಮುದಾಯಕ್ಕಾಗಿ, ಗ್ರಾಮೀಣ ಸಮುದಾಯದಿಂದ ಮತ್ತು ಗ್ರಾಮೀಣ ಸಮುದಾಯದೊಂದಿಗೆ ಅಭಿವೃದ್ಧಿ ಯೋಜನೆಯ ನಿರ್ಧಾರ ಮತ್ತು ಯೋಜನೆಯ ಅನುಷ್ಠಾನಕ್ಕಾಗಿ ಸ್ಥಳೀಯ ಸಮುದಾಯ ಪಾಲ್ಗೊಳ್ಳುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಇದಾಗಿದೆ.

ಸಾಮಾಜಿಕ ಮಾಧ್ಯಮ:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಗ್ರಾಮೀಣ ಸಮುದಾಯ / ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ವೆಬ್‌ಸೈಟ್ ಅನ್ನು ಇಲಾಖೆ ಒಳಗೊಂಡಿದೆ. ಹಾಗೂ ಪ್ರತಿದಿನ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯನ್ನೊಳಗೊಂಡ ಕ್ರಿಯೇಟೀವ್ಸ್ ಗಳನ್ನು ಸೃಜಿಸಿ ಪೋಸ್ಟ್ ಮಾಡಲಾಗುತ್ತಿದ್ದು, ಪ್ರಸ್ತುತ ಫೇಸ್‌ಬುಕ್‌ನಲ್ಲಿ 78,000ಕ್ಕೂ ಹೆಚ್ಚು ಜನ ಹಿಂಬಾಲಕರು, ಟ್ವಿಟರ್ ನಲ್ಲಿ 8,000ಕ್ಕೂ ಹೆಚ್ಚು ಹಿಂಬಾಲಕರು, ಇನ್‌ಸ್ಟಾಗ್ರಾಂ ನಲ್ಲಿ 3,000 ಕ್ಕೂ ಹೆಚ್ಚು ಹಿಂಬಾಲಕರು, ಯುಟ್ಯೂಬ್‌ನಲ್ಲಿ 9,000ಕ್ಕೂ ಹೆಚ್ಚು ಹಿಂಬಾಲಕರನ್ನು ಇಲಾಖೆ ಹೊಂದಿದೆ. ಗ್ರಾಮೀಣ ಜನರನ್ನು ಬಹು ಬೇಗನೆ ತಲುಪುವಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಹೆಚ್ಚಿದ್ದು, ಇದನ್ನು ಮನಗಂಡಿರುವ ಇಲಾಖೆಯು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಗುಂಪು ಸಭೆ, ವಸ್ತು ಪ್ರದರ್ಶನ, Audio Video Publicity, ವ್ಯಕ್ತಿಗತ ಸಂವಹನ, ಕರಪತ್ರಗಳು,  ವಿಶೇಷ ಆಂದೋಲನಗಳು, ಬೀದಿ ನಾಟಕ ಸೇರಿದಂತೆ ಇತರೆ IEC ಚಟುವಟಿಕೆಗಳನ್ನು ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾಲ ಕಾಲಕ್ಕೆ ಹಮ್ಮಿಕೊಳ್ಳುತ್ತಿರುತ್ತದೆ.

ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಗಳು (HRD)

ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) (SBMG) ಮತ್ತು ಜಲ ಜೀವನ ಅಭಿಯಾನ (JJM) ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿಯಲ್ಲಿರುವ ಅಧಿಕಾರಿ ಮತ್ತು ಅಧಿಕಾರೇತರ ಸಿಬ್ಬಂದಿಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎನ್‌ವೈಕೆಎಸ್ ಸ್ವಯಂಸೇವಕರು, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳಿಗೆ, ಸ್ವಚ್ಛಾಗ್ರಹಿಗಳು, ಭಾರತ್ ನಿರ್ಮಾಣ ಸ್ವಯಂಸೇವಕರು, ಗ್ರಾಮೀಣ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ. ತರಬೇತಿ ಪಡೆದವರು ವಿವಿಧ ಐ.ಇ.ಸಿ ಸಾಮಗ್ರಿಗಳನ್ನು ಬಳಸಿಕೊಂಡು ಜನರ ನಡೆತೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ.

 7,199 total views,  2 views today

WhatsApp chat