ಮೇ 2020
ಪ್ರತಿ ಹೆಣ್ಣಿನ ಬದುಕಿನ ಅವಿಭಾಜ್ಯ ಅಂಗ ಋತುಚಕ್ರ. ಅದು ಅತ್ಯಂತ ಸಹಜವಾದ ಒಂದು ದೈಹಿಕ ಪ್ರಕ್ರಿಯೆ. ಆದರೆ ಋತುಚಕ್ರವೆನ್ನುವುದು ಗ್ರಾಮೀಣ ಭಾಗದಲ್ಲಿ ಇಂದಿಗೂ ಒಂದು ಮೂಢನಂಬಿಕೆಯಾಗಿಯೇ ಉಳಿದಿದೆ. ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಮಾರ್ಗಸೂಚಿಗಳ ಅನುಸಾರ ಶೇ.೧೦೦ರಷ್ಟು ಹೆಣ್ಣುಮಕ್ಕಳು ಋತುಚಕ್ರದ ಪ್ರಕ್ರಿಯೆಯ ಕುರಿತಾಗಿ ಚರ್ಚಿಸುವುದಿಲ್ಲ. ಶೇ.೮೬ರಷ್ಟು ಹೆಣ್ಣು ಮಕ್ಕಳು ಇದಕ್ಕೆ ದೈಹಿಕವಾಗಿ ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ.
ಗ್ರಾಮೀಣ ಭಾಗದ ಹೆಣ್ಣುಮಕ್ಕಳಲ್ಲಿ ಋತುಚಕ್ರ ಎಂದರೆ ಏನು, ಹೇಗೆ, ಏಕೆ ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದ್ದರಿಂದ ಋತುಚಕ್ರದ ಸಮಯದಲ್ಲಿ ಅವರು ಮೂಡನಂಬಿಕೆಗಳಿಗೆ, ತಪ್ಪು ಕಲ್ಪನೆಗಳಿಗೆ ಬಲಿಯಾಗುತ್ತಾರೆ. ಶೇ.೪೪ ಹೆಣ್ಣು ಮಕ್ಕಳು ಕೆಲವೊಂದು ಕಟ್ಟುಪಾಡುಗಳಿಗೆ ಬಲಿಯಾಗಿ ಮುಜುಗರಕ್ಕೊಳಗಾಗುತ್ತಿದ್ದಾರೆ. ಕೇವಲ ಮಾನಸಿಕವಾಗಿಯಷ್ಟೇ ಅಲ್ಲ, ಋತುಚಕ್ರದ ಕುರಿತಾಗಿ ತಿಳುವಳಿಕೆ ಇಲ್ಲದಿರುವುದು ಹೆಣ್ಣುಮಕ್ಕಳ ಮೇಲೆ ದೈಹಿಕವಾಗಿ ಹಾಗೂ ಸಾಮಾಜಿಕವಾಗಿಯೂ ಸಹ ಪರಿಣಾಮ ಬೀರುತ್ತಿದೆ.
ಗ್ರಾಮೀಣ ಭಾರತದ ಶೇ.೬೦ರಷ್ಟು ಹೆಣ್ಣುಮಕ್ಕಳು ಋತುಚಕ್ರದ ಕಾರಣದಿಂದ ಶಾಲೆಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಇದು ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಶೇ. ೬ರಷ್ಟು ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್‌ಗಳ ಕುರಿತಾಗಿ ಯಾವ ಮಾಹಿತಿಯೂ ಇಲ್ಲ. ಶೇ.೮೭ ರಷ್ಟು ಮಹಿಳೆಯರು ಹಳೆಯ ಬಟ್ಟೆಯನ್ನೇ ಋತುಚಕ್ರದ ಸಮಯದಲ್ಲಿ ಬಳಸುತ್ತಾರೆ. ಸುಮಾರು ಶೇ. ೯೦ರಷ್ಟು ಹೆಣ್ಣುಮಕ್ಕಳಿಗೆ ಋತುಚಕ್ರದಲ್ಲಿ ಬಳಸುವ ಬಟ್ಟೆಯನ್ನು ಸ್ವಚ್ಛವಾಗಿ ಒಗೆದು ಒಣಗಿಸುವುದರ ಪ್ರಾಮುಖ್ಯತೆ ತಿಳಿದಿಲ್ಲ, ಈ ರೀತಿಯ ತಿಳುವಳಿಕೆಯ ಕೊರತೆಯಿಂದ ವೈಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ ಅನೇಕ ದುಷ್ಪರಿಣಾಮಗಳಾಗುತ್ತಿವೆ.
ಮುಂದುವರೆದು, ಋತುಚಕ್ರಕ್ಕೆ ಸಂಬಂಧಿಸಿದಂತೆ ಹಲವಷ್ಟು ಮೂಢನಂಬಿಕೆಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಪ್ರಚಲಿತದಲ್ಲಿವೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಮನೆಯಿಂದ ಹೊರಗಿರಬೇಕು, ಯಾರೊಂದಿಗೂ ಬೆರೆಯಬಾರದು, ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುವುದಿಲ್ಲ. ಉಪ್ಪಿನಕಾಯಿ ಜಾಡಿಯನ್ನು ಮುಟ್ಟಿದರೆ ಅದು ಕೆಡುತ್ತದೆ, ಯಾವುದೇ ಸ್ಥಳಗಳಿಗೂ ಭೇಟಿ ನೀಡಬಾರದು ಮುಂತಾದ ಹತ್ತು ಹಲವು ತಪ್ಪು ಕಲ್ಪನೆಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ.
- ಋತುಚಕ್ರ ಒಂದು ಸಾಧಾರಣ, ಸಹಜ ದೈಹಿಕ ಪ್ರಕ್ರಿಯೆ. ಅದರ ಕುರಿತಾಗಿ ಸಮಗ್ರ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಋತುಚಕ್ರದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಪಾಲಿಸದೇ, ಶೌಚಾಲಯದ ಸಮರ್ಪಕ ಬಳಕೆ ಮಾಡದಿದ್ದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಶುಚಿತ್ವ ಕಾಪಾಡಿಕೊಳ್ಳುವುದು, ನಿತ್ಯವೂ ಸ್ನಾನ ಮಾಡುವುದು, ಶೌಚಾಲಯವನ್ನು ಸಮರ್ಪಕವಾಗಿ ಬಳಸುವುದು, ಶೌಚಾಲಯದ ಬಳಕೆಯ ನಂತರ ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳುವುದು ಬಹಳ ಮುಖ್ಯ.
- ಆರೋಗ್ಯಕರ ಋತುಚಕ್ರ ನಿರ್ವಹಣೆಗೆ ಅತ್ಯಂತ ಮುಖ್ಯವಾದ ಇನ್ನೊಂದು ಅಂಶವೆಂದರೆ ಉತ್ತಮ ನೈರ್ಮಲ್ಯ ಉತ್ಪನ್ನಗಳ ಬಳಕೆ ಮತ್ತು ವಿಲೇವಾರಿ. ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಅವುಗಳ ಅನುಕೂಲ ಒಂದು ಕಡೆಯಾದರೆ, ಅದರಿಂದ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು. ಸ್ಯಾನಿಟರಿ ನ್ಯಾಪ್‌ಕಿನ್‌ಗಳಲ್ಲಿ ಪ್ಲಾಸ್ಟಿಕ್ ಅಂಶವಿರುವ ಕಾರಣ ಅವು ಪರಿಸರಕ್ಕೆ ಬಹಳ ಹಾನಿಯನ್ನು ಉಂಟು ಮಾಡುತ್ತವೆ. ಅದರ ಬಳಕೆಯಷ್ಟೇ ಮುಖ್ಯ ಅದನ್ನು ಬಳಸಿದ ನಂತರ ವಿಲೇವಾರಿ ಮಾಡುವುದು. ಅದರ ವಿಲೇವಾರಿಯ ಕುರಿತು ಅರಿವು ಇಲ್ಲದಿದ್ದಲ್ಲಿ ಅದರಿಂದ ಬಹಳ ಅಪಾಯಗಳಾಗುತ್ತವೆ.
- ಬಳಸಿದ ಪ್ಯಾಡ್‌ನ್ನು ಶೌಚಾಲಯದ ಗುಂಡಿಯಲ್ಲಿ ಹಾಕಿ ಫ್ಲಶ್ ಮಾಡುವುದರಿಂದ ಪೈಪ್‌ನಲ್ಲಿ ನೀರು ಸರಿಯಾಗಿ ಹರಿಯದೇ ಸಮಸ್ಯೆಗಳಾಗುತ್ತವೆ. ಎಲ್ಲೆಂದರಲ್ಲಿ ಎಸೆಯುವುದರಿಂದ ಪ್ರಾಣಿಗಳಿಗೆ ಅಪಾಯವಾಗಬಹುದು. ನೀರಿನ ಮೂಲಗಳ ಬಳಿ ಎಸೆದಲ್ಲಿ ನೀರು ಕಲುಷಿತವಾಗುತ್ತದೆ. ಸುಟ್ಟರೆ ಹಾನಿಕಾರಕ ಅನಿಲಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಗೃಹಬಳಕೆಯಲ್ಲಿ ಸಾಧಾರಣ ಸ್ಯಾನಿಟರಿ ಪ್ಯಾಡ್‌ಗಳನ್ನು ಕಾಗದದಲ್ಲಿ ಸುತ್ತಿ ಅದರ ಮೇಲೆ ಕೆಂಪು ಬಣ್ಣದಿಂದ ಗುರುತು ಮಾಡಿ ಪಂಚಾಯಿತಿಯ ಕಸ ಸಂಗ್ರಹಣಾ ವಾಹನಕ್ಕೆ ನೀಡಬೇಕು. ಇಂತಹ ತ್ಯಾಜ್ಯವನ್ನು ನಂತರ ಇನ್ಸಿನರೇಟರ್‌ಗಳಲ್ಲಿ ೮೦೦ C ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಭಸ್ಮೀಕರಣಗೊಳಿಸಲಾಗುತ್ತದೆ. ಸಂಸ್ಥೆಗಳಲ್ಲಿ ಇನ್ಸಿನರೇಟರ್‌ಗಳನ್ನು ಅಳವಡಿಸಿದ್ದರೆ ಅವುಗಳನ್ನು ಬಳಸಬೇಕು.
- ಬಟ್ಟೆಯ ಪ್ಯಾಡ್‌ಗಳು ಆರೋಗ್ಯದ ಹಾಗೂ ಮರುಬಳಕೆಯ ದೃಷ್ಟಿಯಿಂದ ಉತ್ತಮ. ಆದರೆ ಬಳಕೆಯ ನಂತರ ಅವುಗಳನ್ನು ಸ್ವಚ್ಛವಾಗಿ ಒಗೆದು ಬಿಸಿಲಿನಲ್ಲಿ ಒಣಗಿಸಿ ನಂತರ ಮರುಬಳಕೆ ಮಾಡಬೇಕು. ಇಲ್ಲವಾದಲ್ಲಿ ಅದರಲ್ಲಿ ಸೂಕ್ಷ್ಮಜೀವಿಗಳು ಉತ್ಪಾದನೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಪರಿಸರಕ್ಕೆ ಹಾನಿಯಾಗದ, ಮರುಬಳಸಬಹುದಾದಂತಹ ಇನ್ನೊಂದು ಆಯ್ಕೆಯೆಂದರೆ ಋತುಚಕ್ರದ ಕಪ್‌ಗಳು. ಅಧ್ಯಯನಗಳ ಪ್ರಕಾರ ಒಂದು ಕಪ್‌ನ್ನು ಸುಮಾರು ೫-೧೦ ವರ್ಷಗಳ ಕಾಲ ಬಳಸಬಹುದು. ಇದರಿಂದ ಪರಿಸರದಲ್ಲಿ ಋತುಚಕ್ರದ ತ್ಯಾಜ್ಯ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತದೆ.
ನಮ್ಮ ಆರೋಗ್ಯ ಮತ್ತು ನಮ್ಮ ಪರಿಸರ ಎರಡೂ ನಮ್ಮ ಜವಾಬ್ದಾರಿ. ಎರಡನ್ನೂ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಈ ನಿಟ್ಟಿನಲ್ಲಿ ಋತುಚಕ್ರದ ಕುರಿತಾಗಿ ಜಾಗೃತಿ ಮೂಡಿಸುವುದು ಪ್ರಸ್ತುತ ಅಗತ್ಯವಾಗಿದೆ.
7,331 total views, 1 views today