ಸ್ವಚ್ಛ ಪರಿಸರ ಆರೋಗ್ಯಕರ ಬದುಕಿಗೆ ಬುನಾದಿ. ಅನೈರ್ಮಲ್ಯವು ಹಲವು ರೋಗಗಳಿಗೆ ದಾರಿ ಮಾಡಿಕೊಡಬಲ್ಲದು. ಇತ್ತೀಚಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಹರಡುತ್ತಿರುವ ಕೊರೋನಾ ವೈರಾಣುವನ್ನು ತಡೆಯುವ ಪ್ರಯತ್ನಗಳಲ್ಲಿ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖ ಮುಖ್ಯ ಪಾತ್ರ ವಹಿಸುತ್ತಿವೆ.
ಗ್ರಾಮೀಣ ಕರ್ನಾಟಕದಲ್ಲಿ ಸುಸ್ಥಿರ ನೈರ್ಮಲ್ಯ ಸಾಧಿಸುವಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯ ಪಾತ್ರ ಮಹತ್ವಪೂರ್ಣ. ಕೋವಿಡ್ ೧೯ ಸಾಂಕ್ರಾಮಿಕವಾಗುತ್ತಿರುವ ಈ ಹಿನ್ನೆಲೆಯಲ್ಲಿ ನಾಡಿನಲ್ಲಿ ಸೋಂಕು ಹರಡದಿರಲು ಸ್ವಚ್ಛತೆ ಹಾಗೂ ನೈರ್ಮಲ್ಯ ಅತ್ಯವಶ್ಯಕ. ಸೋಂಕು ತಡೆಯಲು ನಾಡಿನುದ್ದಕ್ಕೂ ಸ್ವಚ್ಛತೆ ಕಾಪಾಡಿಕೊಳ್ಳಲು ಸರ್ಕಾರ ಕರೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಮುಖ ಅಂಶಗಳೆoದರೆ:
ಶೌಚಾಲಯದ ಸುಸ್ಥಿರ ಬಳಕೆ:
ಬಯಲು ಬಹಿರ್ದೆಸೆ ಆರೋಗ್ಯ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ಬಹಳ ಅಪಾಯಕಾರಿ. ಯಾವುದೇ ರೀತಿಯ ವೈರಾಣುಗಳು ಹರಡದಿರಲು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಶೌಚಾಲಯವನ್ನು ಸರಿಯಾಗಿ ಬಳಸುವುದು, ಸ್ವಚ್ಛವಾಗಿರಿಸಿಕೊಳ್ಳುವುದು ಅಗತ್ಯ. ಸಮುದಾಯ ಮತ್ತು ಸಾಂಸ್ಥಿಕ ಶೌಚಾಲಯಗಳು ವೈಯಕ್ತಿಕ ಶೌಚಾಲಯಗಳಷ್ಟೇ ಮುಖ್ಯ. ಸಮುದಾಯ ಶೌಚಾಲಯಗಳನ್ನು ಹೆಚ್ಚಿನ ಜನರು ಬಳಸುವ ಕಾರಣ ಅದನ್ನು ಶುಚಿಯಾಗಿರಿಸಿಕೊಳ್ಳುವುದು, ಆವರಣಗಳನ್ನು ಸ್ವಚ್ಛಗೊಳಿಸುವುದು, ಸಮುದಾಯ ಶೌಚಾಲಯಗಳ ಸಮೀಪದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕ.
ಕೈಗಳ ಸ್ವಚ್ಛತೆ
ಕೊರೋನಾ ವೈರಾಣುವಿನ ಹರಡುವಿಕೆಯನ್ನು ತಡೆಯುವಲ್ಲಿ ಕೈಗಳ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಈ ಕುರಿತಾಗಿ ಮೊದಲಿನಿಂದಲೂ ಜನಜಾಗೃತಿಯನ್ನು ಮೂಡಿಸುತ್ತಲೇ ಬಂದಿದೆ. ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸಾಬೂನು ಹಾಗೂ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳುವುದು, ಊಟದ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಹೊರಗೆ ಹೋಗಿ ಬಂದ ನಂತರ ಹಾಗೂ ಇತರರು ಬಳಸುವ ವಸ್ತುಗಳನ್ನು ಮುಟ್ಟಿದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ನಮ್ಮನ್ನು ಸುರಕ್ಷಿತವಾಗಿರಿಸಬಲ್ಲದು.
ತ್ಯಾಜ್ಯ ನಿರ್ವಹಣೆ
ಸಮರ್ಪಕ ತ್ಯಾಜ್ಯ ನಿರ್ವಹಣೆಯು ಆರೋಗ್ಯಕರ ಪರಿಸರಕ್ಕೆ ದಾರಿ ಮಾಡಿಕೊಡುತ್ತದೆ. ಕಸವನ್ನು ಮೂಲದಲ್ಲಿಯೇ ಹಸಿ –ಒಣ ಎಂದು ವಿಂಗಡಿಸುವುದು, ಹಸಿ ಕಸವನ್ನು ಗೊಬ್ಬರವಾಗಿಸುವುದು, ಒಣ ಕಸವನ್ನು ಪಂಚಾಯಿತಿಯ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ನೀಡುವುದು ಸುರಕ್ಷಿತ ಕಸ ವಿಲೇವಾರಿಯ ಪ್ರಮುಖ ಹಂತ. ಕೊರೋನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಮಿಕರು ಹಾಗೂ ನಾಗರಿಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ. ಕಸವನ್ನು ನೀಡುವಾಗ ಅಥವಾ ಸಂಗ್ರಹಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಕಸವನ್ನು ಸಂಗ್ರಹಿಸುವವರು ಮುಖಗವಸು ಹಾಗೂ ಕೈಗವಸುಗಳನ್ನು ಧರಿಸಿರಬೇಕು. ಕ್ವಾರಂಟೈನ್ ಆಗಿರುವ ಮನೆಗಳಿಂದ ಕಸ ಸಂಗ್ರಹಿಸುವಾಗ ಹೆಚ್ಚಿನ ಎಚ್ಚರ ವಹಿಸಿ ಅದಕ್ಕೆ ಸಂಬoಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕ್ವಾರಂಟೈನ್‌ನಲ್ಲಿರುವ ಮನೆಗಳ ನಾಗರಿಕರು ಕಸವನ್ನು ಪ್ರತ್ಯೇಕವಾಗಿರಿಸಿ ನೀಡಬೇಕು, ಹಾಗೂ ಕಸ ನೀಡುವಾಗ ಮುಖಗವಸು ಧರಿಸಿ, ಕನಿಷ್ಟ ಒಂದು ಮೀ. ಅಂತರ ಕಾಯ್ದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಾ ಸುರಕ್ಷತೆ ಕಾಯ್ದುಕೊಳ್ಳಬೇಕು.
ಈ ಎಲ್ಲ ಅಂಶಗಳೊಂದಿಗೆ ನಮ್ಮ ಪರಿಸರದ ಸ್ವಚ್ಛತೆ ಕಾಪಾಡುವುದು, ಎಲ್ಲೆಂದರಲ್ಲಿ ಉಗುಳದಿರುವುದು, ಕಸವನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಕಸದ ರಾಶಿಗೆ ಬೆಂಕಿ ಹಚ್ಚಿ ವಾಯು ಮಾಲಿನ್ಯಕ್ಕೆ ಕಾರಣವಾಗದಿರುವುದು, ನಮ್ಮ ಮನೆ, ಮನೆಯ ಆವರಣವನ್ನು ಶುಚಿಯಾಗಿಟ್ಟುಕೊಳ್ಳುವುದು ಅಗತ್ಯ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಎಲ್ಲ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ತೀವ್ರತರವಾಗಿ ಕೈಗೆತ್ತಿಕೊಂಡಿದೆ. ಬೀದಿಗಳನ್ನು, ಚರಂಡಿಗಳನ್ನು, ಸಾರ್ವಜನಿಕ ಸ್ಥಳಗಳು, ಶಾಲೆ, ಅಂಗನವಾಡಿಗಳ ಆವರಣಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಸ್ವಚ್ಛತಾ ಚಟುವಟಿಕೆಗಳು ರಾಜ್ಯದಾದ್ಯಂತ ನಡೆಯುತ್ತಿವೆ.
ಈ ನಿಟ್ಟಿನಲ್ಲಿ ಸರ್ಕಾರವು ಸ್ವಚ್ಛತೆ, ವೈಯಕ್ತಿಕ / ಸಮುದಾಯ ಶೌಚಾಲಯಗಳ ನಿರ್ಮಾಣ/ ನಿರ್ವಹಣೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮುಂತಾದ ಕಾರ್ಯಗಳಲ್ಲಿ ತೊಡಗಿರುವ ಸ್ವಚ್ಛತಾ ಕಾರ್ಮಿಕರಿಗೆ ಹೆಚ್ಚಿನ ಸುರಕ್ಷತೆ ತೆಗೆದುಕೊಳ್ಳುವಂತೆ ಸೂಚಿಸಿದೆ. ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
- ಎಲ್ಲ ಸಮಯದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು
- ಕೆಲಸದ ಸ್ಥಳದಲ್ಲಿ ವೈಯಕ್ತಿಕ ಸುರಕ್ಷತಾ ಪರಿಕರಗಳನ್ನು ಧರಿಸಿರುವುದು
- ಕೆಲಸ ಪ್ರಾರಂಭಿಸುವ ಮೊದಲು ಕೆಲಸದ ಸ್ಥಳವನ್ನು ಬ್ಲೀಚಿಂಗ್ ಪೌಡರ್ ಇತ್ಯಾದಿಗಳನ್ನು ಬಳಸಿ ಸೋಂಕು ಮುಕ್ತಗೊಳಿಸುವುದು
- ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು. ಆಹಾರ ಅಥವಾ ನೀರು ಸೇವಿಸುವ ಮೊದಲು, ಶೌಚಾಯದ ಬಳಕೆಯ ನಂತರ, ವೈಯಕ್ತಿಕ ಸುರಕ್ಷತಾ ಪರಿಕರಗಳನ್ನು ತೆಗೆದ ನಂತರ
- ಕೆಲಸದ ಸಮಯದಲ್ಲಿ ಬಳಸುವ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು
- ಕೆಲಸದ ಸಮಯದಲ್ಲಿ ಬಳಸಿದ ಬಟ್ಟೆಯನ್ನು ೧% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸುವುದು.
ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತಾಗಿ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳ ಮೂಲಕ ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಉದ್ಯೋಗಿಗಳು/ಕಾರ್ಮಿಕರಿಗಾಗಿ ಪಂಚಸೂತ್ರಗಳ ಕುರಿತಾಗಿ ಗಮನ ನೀಡಲು ಕರೆ ನೀಡಿದೆ. ಕೊರೋನಾದಿಂದ ದೂರವಿರಲು ಪಾಲಿಸಬೇಕಾದ ಪಂಚಸೂತ್ರಗಳೆಂದರೆ:
- ಮನೆಯಿಂದ ಹೊರಹೋಗುವಾಗ ಮತ್ತು ಕೆಲಸಕ್ಕೆ ಹೋಗುವ ಸಮಯದಲ್ಲಿ ಮೂಗು ಮತ್ತು ಬಾಯಿಯನ್ನು ಶುಭ್ರವಾದ ಬಟ್ಟೆಯಿಂದ ಅಥವಾ ಮಾಸ್ಕ್ ನಿಂದ ಸಂಪೂರ್ಣವಾಗಿ ಮುಚ್ಚಿಕೊಳ್ಳಿ
- ಕೆಲಸದ ಸ್ಥಳದಲ್ಲಿ ಕನಿಷ್ಟ ಒಂದು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಿ
- ಕನಿಷ್ಟ ೨೦ ಸೆಕೆಂಡುಗಳ ಕಾಲ ಸಾಬೂನಿನಿಂದ ಆಗಾಗ ಕೈತೊಳೆಯುತ್ತಿರಿ, ಅನವಶ್ಯಕವಾಗಿ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ
- ಬಿಸಿ ನೀರನ್ನು ಕುಡಿಯುತ್ತಿರಿ, ಪೌಷ್ಠಿಕ ಆಹಾರಗಳನ್ನು ಸೇವಿಸಿ
- ಜ್ವರ, ನೆಗಡಿ, ಕೆಮ್ಮು, ಅತಿಸಾರ, ಉಸಿರಾಟದ ತೊಂದರೆ ಕಂಡುಬoದಲ್ಲಿ ವೈದ್ಯರನ್ನು / ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ.
ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಬನ್ನಿ ಸಾಮಾಜಿಕ ಅಂತರ, ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದರ ಮೂಲಕ ನಮ್ಮ ಒಗ್ಗಟ್ಟನ್ನು ತೋರೋಣ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ಸರ್ಕಾರದ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಸುರಕ್ಷಿತವಾಗಿರೋಣ.
7,250 total views, 1 views today