ಹಾಲಭಾವಿ. ಇದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುಟ್ಟ ಗ್ರಾಮ. ಪಂಚಾಯತ್ ಕೇಂದ್ರದಿಂದ ಇದು 2 ಕಿ.ಮೀ. ದೂರದಲ್ಲಿದೆ. ತಾಲೂಕಿನಿಂದ 5 ಕಿ.ಮೀ. ದೂರದಲ್ಲಿದೆ. ಗ್ರಾಮದಲ್ಲಿ 105 ರಿಂದ 120 ಕುಟುಂಬಗಳಿದ್ದು, ಇವರೆಲ್ಲಾ ವ್ಯವಸಾಯ ಹಾಗೂ ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಆರಂಭದಲ್ಲಿ ಈ ಗ್ರಾಮದಲ್ಲಿ 8 ರಿಂದ 10 ಕುಟುಂಬಗಳಷ್ಟೇ ಮನೆಗಳಿಗೆ ನಳ ಸಂಪರ್ಕವನ್ನು ಹೊಂದಿದ್ದವು. ಉಳಿದ ಕುಟುಂಬಗಳು ನೀರಿಗಾಗಿ ಪ್ರತಿ ದಿನ ಪರದಾಡಬೇಕಾಗಿತ್ತು. ಊರಲ್ಲಿದ್ದ ಮೂರು ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದವು, ಉಳಿದ ಕುಟುಂಬಗಳು. ಅವುಗಳ ಮುಂದೆ ಗಂಟೆಗಟ್ಟಲೇ ನೀರಿಗಾಗಿ ಸಾಲು ನಿಲ್ಲಬೇಕಾಗಿತ್ತು. ದಿನದ ಅರ್ಧ ಸಮಯ ಅಲ್ಲೇ ಕಳೆದು ಹೋಗುತ್ತಿತ್ತು. ಬೇರೆ ಕೆಲಸಗಳನ್ನು ಮಾಡುವುದಕ್ಕೆ ತೊಂದರೆಯಾಗುತ್ತಿತ್ತು. ಹೆಣ್ಣು ಮಕ್ಕಳಂತೂ ನೀರಿಗಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರು. ಅದರಲ್ಲೂ ಕೊಳವೆ ಬಾವಿಗಳು ಕೈ ಕೊಟ್ಟರಂತೂ ಅವರ ಪಾಡು ದೇವರಿಗೇ ಪ್ರೀತಿ ಅನ್ನೋ ಹಾಗಾಗುತ್ತಿತ್ತು.
ಹೀಗಿರುವಾಗಲೇ ಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸಿತು. 2021-22ನೇ ಸಾಲಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಪ್ರತಿ ಮನೆಗಳಿಗೂ ನಳ ಸಂಪರ್ಕ ದೊರೆಯಿತು. ಪ್ರತಿ ಮನೆ ಬಾಗಿಲಿಗೆ ಗಂಗೆ ಕಾಲಿಟ್ಟಳು. ಗ್ರಾಮ ಪಂಚಾಯತಿಯಿಂದ ಗ್ರಾಮ ಸಭೆ, ಸಮುದಾಯ ಸಭೆ ಏರ್ಪಡಿಸುವ ಮೂಲಕ ಜಲ ಜೀವನ ಮಿಷನ್, ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಬಗ್ಗೆ,ಜಿಲ್ಲಾ ಸಮಾಲೋಚಕರು ಹಾಗೇ ಬೆಂಬಲಿತ ಸಂಸ್ಥೆಯ ಸಿಬ್ಬಂದಿ ಜನರಿಗೆ ಮಾಹಿತಿ ನೀಡಿದರು. ನೀರಿನ ಮಿತ ಬಳಕೆ, ನೀರಿನ ಮರು ಬಳಕೆ, ಸಮುದಾಯ ವಂತಿಗೆ ಇವುಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಇವಿಷ್ಟೇ ಅಲ್ಲದೇ ಗ್ರಾಮ ಪಂಚಾಯತಿಯ ಕರವಸೂಲಿಗಾರ, ನೀರಗಂಟಿ ಮನೆ-ಮನೆಗೆಭೇಟಿ ಮಾಡಿ ನಳ ಸಂಪರ್ಕದ ಸ್ಥಳ ಗುರುತಿಸುವಿಕೆ ಮತ್ತುಆ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಇದೀಗ ಯೋಜನೆಯ ಉದ್ದೇಶದಂತೆ ಊರಲ್ಲಿರುವ ಮತ್ತು ವಲಸೆ ಹೊಗಿರುವ ಎಲ್ಲಾ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ ಕಾರ್ಯಾತ್ಮಕ ನಳ ಸಂಪರ್ಕ ಮಾಡಿರುವುದರಿಂದ ಪ್ರತಿ ಮನೆಯಲ್ಲಿಯೂ ದಿನದ 24 ಗಂಟೆಯು ನೀರು ಸರಬರಾಜು ಆಗುತ್ತಿದ್ದು ಇದರಿಂದ ಗ್ರಾಮಸ್ಥರು ತುಂಬಾ ಅನುಕೂಲವಾಗಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಗ್ರಾಮದ ಮಹಿಳೆ ಶ್ರೀಮತಿ ರೇಣುಕಾ ಅವರು, “ಈ ಹಿಂದೆ ನೀರು ತರುವುದಕ್ಕಾಗಿಯೇ ಒಬ್ಬರು ಮನೆಯಲ್ಲಿಯೇ ಇರಬೇಕಾಗಿತ್ತು, ಬೆಳಗ್ಗೆ, ಸಂಜೆ, ರಾತ್ರಿ ಹೊತ್ತಲ್ಲಿಯೂ ದೂರದಿಂದ ನೀರು ತರುತ್ತಿದ್ದೆವು. ಅಲ್ಲಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ನೀರು ತರಬೇಕಾದ್ದರಿಂದ ಮನೆಯಲ್ಲಿ ಸರಿಯಾದ ಸಮಯಕ್ಕೆ ಅಡುಗೆ ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಮನೆಯವರಿಗೆಲ್ಲಾ ನೀರು ತರುವುದೇ ಬಹುದೊಡ್ಡ ಕೆಲಸವಾಗಿತ್ತು. ಆದರೆ ಮನೆ ಮನೆಗೆ ನಳ ಸಂಪರ್ಕ ಇರುವುದರಿಂದ ಎಲ್ಲರೂ ನೆಮ್ಮದಿಯಿಂದ ಇದ್ದಾರೆ. ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವಾಗಲೂ ನಾವು ಜಲ ಜೀವನ್ ಮಿಷನ್ ಯೋಜನೆಯನ್ನು ಸ್ಮರಿಸಿ, ಧನ್ಯವಾದ ಹೇಳುತ್ತಿರುತ್ತೇವೆ” ಎಂದಿದ್ದಾರೆ.
ಯೋಜನೆಯ ಬಗ್ಗೆ ಮಾತನಾಡಿರುವ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಅವರು“ಕೇವಲ 3ಕೊಳವೆಬಾವಿಗಳಿಗೆ ಇಡೀ ಊರು ಅಂದ್ರೆ 105-120 ಕುಟುಂಬಗಳು ಬೋರವೆಲ್ ಅವಲಂಬಿತರಾಗಿದ್ದರಿಂದ ನೀರು ಸಮರ್ಪಕವಾಗಿ ಸಿಗುತ್ತಿರಲಿಲ್ಲ. ನೀರು ತರುವುದರಲ್ಲೇ ಹೆಚ್ಚು ಸಮಯ ಕಳೆದು ಹೋಗುತ್ತಿದ್ದರಿಂದ ಇತರೆ ಕೆಲಸಗಳಿಗೆ ಭಾರೀ ತೊಂದರೆಯಾಗುತ್ತಿತ್ತು.ಈಗ ಯಾವುದೇ ಸಮಸ್ಯೆಯಿಲ್ಲ.” ಎಂದಿದ್ದಾರೆ.
ಮನೆ ಮನೆಗೆ ನಳ ಸಂಪರ್ಕದಿಂದಾಗಿ ಗ್ರಾಮದ ನೀರುಗಂಟಿ ಕೂಡ ಖುಷಿಯಾಗಿದ್ದಾರೆ. ಪದೇ ಪದೇ ಬೋರ್ ವೆಲ್ ರಿಪೇರಿ ಮಾಡುವುದು, ನೀರಿನ ಸಮಸ್ಯೆಯ ದೂರುಗಳು ಕಮ್ಮಿಯಾಗಿವೆ. ಹುಮ್ಮಸ್ಸಿನಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ. ಒಟ್ಟಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೆ ನಳ ಸಂಪರ್ಕ ದೊರೆತಿರುವುದರಿಂದ ಗ್ರಾಮದ ಎಲ್ಲಾ ಕುಟುಂಬಗಳಿಗೆ ನೀರಿನ ಚಿಂತೆಯಿಂದ ಮುಕ್ತಿ ಸಿಕ್ಕಿದೆ ಎಂದರೆ ತಪ್ಪಾಗಲ್ಲ.
4,609 total views, 2 views today