Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಇವರು ಓದಿದ್ದು ಎಂಜಿನಿಯರಿಂಗ್. ಆದರೆ ಮಾಡುತ್ತಿರುವ ವೃತ್ತಿ ಮಾತ್ರ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಕೆಲಸ. ಅರೆ ಇದೇನಪ್ಪಾ ತಮ್ಮ ಮಕ್ಕಳು ಚೆನ್ನಾಗಿ ಓದಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಎಂಜಿನಿಯರ್ ಗಳಾಗಲಿ ಅಂತ ಪೋಷಕರು ತಮ್ಮ ಮಕ್ಕಳಿಗೆ ಎಂಜಿನಿಯರಿಂಗ್ ಪದವಿ ಕೊಡಿಸದರೆ, ಇವರೇನು ತಮ್ಮ ವೃತ್ತಿಯನ್ನೇ ಮರೆತು ಗೊಬ್ಬರ ತಯಾರಿಕೆಯಲ್ಲಿ ನಿರತರಾಗಿದ್ದಾರೆ ಅಂತೀರಾ...ಹೌದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ನಿವಾಸಿಗಳಾದ ಸಫ್ವಾನ್ ಮತ್ತು ಮಾಝಿಯಾ 2015 ರಲ್ಲಿ ಬ್ಯಾರೀಸ್ ಎಂಜಿನಿಯರಿಂಗ್ ಕಾಲೇಜ್ ಇನೋಳಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡರು. ಅಂತೆಯೇ ಬಿ.ಸಿ ರೋಡ್ ನಿವಾಸಿ ಶಾಫಿ ಅದೇ ಕಾಲೇಜಿನಲ್ಲಿ 2015 ರಲ್ಲಿ ಸಿವಿಲ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡರು. ಈ ಮೂವರು ಬಾಲ್ಯ ಸ್ನೇಹಿತರಾದ್ದರಿಂದ ಎಲ್ಲರೂ ಒಟ್ಟಿಗೆ ಸೇರಿ ಪದವಿ ನಂತರ ಜಿಲ್ಲೆಯ ಪಚ್ಚನಾಡಿಯ ಮಂದಾರದಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಂಸ್ಥೆಯನ್ನು ಆರಂಭಿಸಿದರು. ಪರಸ್ಪರ ಸಹಕಾರದಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಚ್ಚನಾಡಿಯಲ್ಲಿ ನಡೆದ ಅಗ್ನಿ ದುರಂತ ಇವರನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿತು.

ಏಪ್ರಿಲ್ 4, 2021 ರಂದು ಪಚ್ಚನಾಡಿಯಲ್ಲಿದ್ದ ಒಣ ತ್ಯಾಜ್ಯ ಮರುಬಳಕೆ ಘಟಕಕ್ಕೆ ಬೆಂಕಿ ಹೊತ್ತಿಕೊಂಡ ಕಾರಣ ಅಗ್ನಿಯ ಕೆನ್ನಾಲೆಗೆ ಸಿಕ್ಕ ಸುತ್ತಮುತ್ತಲಿನ ಅದೆಷ್ಟೋ ಸಂಸ್ಥೆಗಳು ಹೊತ್ತಿ ಹುರಿದು ಭಸ್ಮವಾದವು. ತ್ಯಾಜ್ಯ ಘಟಕ ಅಗ್ನಿಗಾಹುತಿಯಾದ್ದರ ಪರಿಣಾಮವನ್ನು ತೀರಾ ಹತ್ತಿರದಿಂದ ಗಮನಿಸುತ್ತಿದ್ದ ಈ ಮೂವರಿಗೆ ಅಂದೇ ಮನಃ ಪರಿವರ್ತನೆಯಾಗಿ ಅಂದೇ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಬಗ್ಗೆ ಏನಾದರು ಮಾಡಬೇಕೆಂದು ಪಣ ತೊಟ್ಟರು. ಅಂದೇ ತಮ್ಮ ವೃತ್ತಿಗೆ ಗುಡ್‌ ಬೈ ಹೇಳಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಹಸಿ ಹಾಗೂ ಒಣ ತ್ಯಾಜ್ಯ ನಿರ್ವಹಣೆಯ ಪಣ ತೊಟ್ಟು, ಈ ಸಂಬಂಧ ವಿಷಯ ತಜ್ಞರೊಟ್ಟಿಗೆ ಚರ್ಚಿಸಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ಮಾಹಿತಿ ಪಡೆದು, ಇದೀಗ ಉಳ್ಳಾಲ ನಗರ ಸಭೆಯ ಸಹಾಯ ಪಡೆದು, ಈ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಲಾರಂಭಿಸಿದ್ದಾರೆ. ಇಲ್ಲಿ ತಯಾರಾದ ಗೊಬ್ಬರವನ್ನು ನಗರಸಭೆಯ ಆವರಣದಲ್ಲಿರುವ ಕೈತೋಟಕ್ಕೆ ಬಳಸಿ ಅಂದವಾದ ಉದ್ಯಾನವನ ನಿರ್ಮಿಸಿದ್ದಾರೆ. ಜೊತೆಗೆ ಈ ಗೊಬ್ಬರವನ್ನು ಬಳಸಲು ಆಸಕ್ತಿ ತೋರುವ ರೈತರುಗಳಿಗೂ ಉಚಿತವಾಗಿ ಗೊಬ್ಬರವನ್ನು ನೀಡಲಾರಂಭಿಸಿದ್ದಾರೆ.

ಮುಂದುವರೆದು ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮಾಡಿದ ಈ ಪ್ರಯೋಗ ಯಶಸ್ವಿಯಾಗಿದ್ದು, ಪ್ರಸ್ತುತ ಈ ಯೋಜನೆಯನ್ನು ಗ್ರಾಮ ಪಂಚಾಯಿತಿಗಳ ಹಂತಕ್ಕೂ ವಿಸ್ತರಿಸಿ ಕಸದಿಂದ ರಸ ತಯಾರು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಈ ಉತ್ಸಾಹಿ ಯುವಕರು. ಈ ಸಂಬಂಧ ಸೋಮೇಶ್ವರ ಪುರಸಭೆಯ ವಾರ್ಡೋಂದರಲ್ಲಿ ಈಗಾಗಲೇ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ನಿರ್ವಹಣೆ ಮಾಡಲು ಆರಂಭಿಸಿರುವ ಇವರು, ಹಸಿ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಿ ಪುರಸಭೆ ಆವರಣದಲ್ಲಿರುವ ಕೈತೋಟ ಮತ್ತು ತರಕಾರಿ ತೋಟಕ್ಕೆ ಗೊಬ್ಬರವನ್ನು ಪೂರೈಸುತ್ತಿದ್ದಾರೆ. ಇದರ ಜೊತೆಯಲ್ಲಿಯೇ ಎಲ್ಲೆಂದರಲ್ಲಿ ಬಿಸಾಡಲ್ಪಡುವ, ವಿಲೇವಾರಿಯಾಗದ ತ್ಯಾಜ್ಯ ನಿರ್ವಹಣೆಗೂ ಒತ್ತು ನೀಡಿರುವ ಇವರು ಸಿಮೆಂಟ್ ಫ್ಯಾಕ್ಟರಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ವಿದ್ಯಾವಂತರು ಈ ರೀತಿಯಾದ ನಿರ್ಣಯಗಳನ್ನು ತೆಗೆದುಕೊಂಡು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರವನ್ನು ಕಂಡುಕೊಂಡರೆ ನಮ್ಮ ಸುತ್ತಮುತ್ತಲಿನ ಪರಿಸರ ಸಮೃದ್ಧವಾಗಿರುವುದಷ್ಟೇ ಅಲ್ಲದೆ ಪ್ರಕೃತಿ ವಿಕೋಪಗಳಂತಹ ದುರಂತಗಳನ್ನು ತಡೆಗಟ್ಟಬಹುದಾಗಿದೆ. ಇಂತಹ ಹತ್ತು ಹಲವು ಪದವೀಧರರು ಪ್ರತೀ ಗ್ರಾಮದಲ್ಲಿಯೂ ಹುಟ್ಟಿಕೊಳ್ಳಲಿ ಎಂಬುದೇ ನಮ್ಮ ಆಶಯ.

 5,506 total views,  3 views today

WhatsApp chat