Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

Rural Drinking Water and Sanitation Department, Karnataka

“ ಚಿಕ್ಕ ವಯಸ್ಸಿನಿಂದಲೂ ಪರಿಸರದ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದ ನಾನು, ತುಂಬಾ ಇಷ್ಟಪಟ್ಟು ಓದಿ, ಭಾರತ ಅರಣ್ಯ ಸೇವೆಗೆ ಸೇರಿಕೊಂಡೆ. ಅದು ನನ್ನ ಕೆಲಸದ ಮೊದಲನೆಯ ದಿನ ಪರಿಸರದ ಜೊತೆಗೆ ಬೆರೆತು ಸೇವೆಯನ್ನು ಸಲ್ಲಿಸಲು ಅದೆಲ್ಲಿಲ್ಲದ ಉತ್ಸಾಹ. ಆ ಉತ್ಸಾಹ‌ ಕತ್ತಲಾದರೂ ಮುಗಿಯಲಿಲ್ಲ. ಏಕೆಂದರೆ ಅದು ನನ್ನ ಮೇಲಧಿಕಾರಿಗಳು ಹೇಳಿದ ಒಂದು ಆಮೆಯ ಲೋಕದ ಕಥೆ. ಅದನ್ನು ಪುಸ್ತಕಗಳಲ್ಲಿ ಓದಿದ್ದ ನಾನು ಅದನ್ನು ಕಣ್ಣಾರೆ ನೋಡಬೇಕೆಂಬ ಹಂಬಲ.

ಭಾರತದ ಪೂರ್ವ ಕರಾವಳಿಯ ಒಂದು ಸುಂದರ ರಾಜ್ಯವಾದ ಒಡಿಸ್ಸಾದಲ್ಲಿ ನನ್ನ ಕೆಲಸ. ಒಂದು ಜೀವ ವೈವಿಧ್ಯದ ಪ್ರತೀಕವಾದ ಆಮೆಯ ಬೃಹತ್ ಲೋಕವೊಂದು ಸೃಷ್ಟಿಯಾಗುವ ದಿನವನ್ನು ಸವಿಯಲು ಆ ಪ್ರಕೃತಿದೇವಿಯೇ ನನ್ನನ್ನು ಈ ಸೇವೆಗೆ ಇದೇ ರಾಜ್ಯದಲ್ಲಿ ಸೇರಿಕೊಳ್ಳಲು ಆಶೀರ್ವದಿಸಿದ್ದಾಳೆನೋ ಎಂದೆನಿಸಿಬಿಟ್ಟಿತು. ಸೂರ್ಯಾಸ್ತದ ನಂತರ ಮುಂದೆ ನಮ್ಮ ಪಯಣ ಗರಿಮಾತಾ ಸಮುದ್ರತೀರದ ಹತ್ತಿರ ಸಾಗಿತು. ಅಷ್ಟರಲ್ಲಿ ನನ್ನ ಸಹೋದ್ಯೋಗಿ ಸರ್, ಅಲ್ಲಿ ನೋಡಿ ಆಮೆಯ ಗುಂಪು ಸಮುದ್ರ ತೀರದ ಕಡೆಗೆ ದೊಡ್ಡ ಸೈನ್ಯದ ಹಾಗೆ ಬರುತ್ತಿದೆ. ಅದು ತೀರಕ್ಕೆ ಬಂದು ಗೂಡು ಕಟ್ಟಿಕೊಂಡುತನ್ನ ಮೊಟ್ಟೆಗಳನ್ನು ಉಸುಕಿನಲ್ಲಿ ಬಚ್ಚಿಟ್ಟು ಹೋಗುತ್ತವೆ. ಜಗತ್ತಿನ ಶೇ. 50ರಷ್ಟು ಆಮೆಗಳು ಭಾರತದಲ್ಲಿ ಕಂಡುಬರುತ್ತವೆ. ಅದರಲ್ಲಿ ಶೇ. 90ರಷ್ಟು ಆಮೆಗಳು ಇಂದು ಈ ತೀರಕ್ಕೆತನ್ನ ಸ್ವಾಭಾವಿಕ ಕ್ರಿಯೆಯನ್ನು ಮಾಡಲು ಬರುತ್ತವೆ. ಇವುಗಳನ್ನು ಆಲೀವ್‍ ರೆಡ್ಲಿ ಸೀ ಟಾರ್ಟೈಸ್‍ಎಂದುಕರೆಯುತ್ತಾರೆ. ಇವುಗಳನ್ನು ಬೇಟೆಯಾಡಲು ಬರುವ ಮಾನವ ರಾಕ್ಷಸರಿಂದ ಕಾಯುವುದು ನಮ್ಮ ಇಂದಿನ ಕೆಲಸವೆಂದು ಹೇಳಿದರು. ಯಾವುದೇ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದ ನಾನು ಈ ಕೆಲಸವನ್ನೂ ಕೂಡ ರಾತ್ರಿಯಿಡೀ ಶ್ರದ್ಧೆಯಿಂದ ನಿರ್ವಹಿಸಿದೆ.

ಮರುದಿನ ಸೂರ್ಯ ಉದಯಿಸಿದಾಗ ಎಲ್ಲ ಆಮೆಗಳು ಸಮುದ್ರಕ್ಕೆ ವಾಪಸಾಗಿದ್ದವು. ಆದರೆ ಒಂದು ಆಮೆ ಮಾತ್ರ ಸಮುದ್ರ ಅಪ್ಪಳಿಸುವ ತೆರೆಗಳಿಂದ ದೂರ ಸರಿದು ಕುಳಿತಿತ್ತು. ಅದನ್ನು ಕಂಡ ನಮ್ಮ ಗುಂಪು ಅದರತ್ತ ತೆರಳಿದಾಗ ಅದು ಸುಮಾರು 80 ರಿಂದ 100 ರಷ್ಟು ವಯಸ್ಸಾದ ಆಮೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು. ತನ್ನ ಬಾಹ್ಯದೇಹದಿಂದ ಕತ್ತನ್ನು ಹೊರಚಾಚಿ ನನಗೆ ಏನೋ ಹೇಳಲು ಅದು ಬಯಸುತ್ತಿದ್ದನ್ನು ಅರಿತ ನಾನು ಅದನ್ನು ನನ್ನ ತೊಡೆಯ ಮೆಲೆ ಮಲಗಿಸಿಕೊಂಡೆ. ಆದರೆ ನನಗೆ ಆ ಮೂಕ ಪ್ರಾಣಿಯ ಭಾಷೆ ಅರ್ಥವಾಗದೇ ಹೋಯಿತು. ಅದುಅಷ್ಟರಲ್ಲೇ ಪ್ರಾಣ ಬಿಟ್ಟಿತ್ತು ಮೊದಲನೆಯ ದಿನದ ನನ್ನಉತ್ಸಾಹಕ್ಕೆ ಭಾರಿ ಆಘಾತವನ್ನುಂಟು ಮಾಡಿ ನನ್ನ ಕೈಯಲ್ಲಿ ಪ್ರಾಣಪಕ್ಷಿಯನ್ನು ಬಿಟ್ಟುಹೋದ ಆ ಜೀವಕ್ಕೆ ನ್ಯಾಯ ಒದಗಿಸಲು ಮುಂದಾದೆ.

ಒಂದು ವಾರದಲ್ಲಿ ನನಗೆ ಆಘಾತಕಾರಿಯಾದ ವರದಿಯೊಂದು ಆಮೆಯ ಪೋಸ್ಟಮಾರ್ಟಂ ರಿಪೋರ್ಟಿನಿಂದ ತಿಳಿಯಿತು. ಅದು ಸಮುದ್ರದಲ್ಲಿ ಈಜಾಡುತ್ತಿರುವಾಗ ಒಂದು ಪ್ಲಾಸ್ಟಿಕ್‍ನ್ನು ಜೆಲ್ಲಿ ಫಿಶ್‍ ಎಂದುಕೊಂಡು ಸೇವಿಸಿದೆ. ಈ ದುರ್ಘಟನೆಗೆ ಕಾರಣವೇನೆಂದು ತಿಳಿದಾಗ ಆ ಜೀವದ ಕೊನೆಯ ಕ್ಷಣವನ್ನು ಅದು ನನ್ನೊಂದಿಗೆ ತೋರಿಕೊಳ್ಳುತ್ತಿರುವ ಕಷ್ಟವನ್ನು ಅರ್ಥ ಮಾಡಿಕೊಳ್ಳದ ಪಾಪಿ ನಾನೆಂದು ಕೊರಗಿದೆ.

ಪ್ರತಿಯೊಂದು ಜೀವಿಗೆ ಈ ಭೂಮಿಯ ಮೇಲೆ ಬದುಕಲು ಹಕ್ಕಿದೆ, ಕೊಲ್ಲುವ ಹಕ್ಕಿಲ್ಲ. ನ್ಯಾಯಾಲಯಕ್ಕೆ ಹೋಗಿ ನಾನು ಯಾರ ಮೇಲೆ ದೂರುಕೊಡಲಿ? ಇಂತಹ ಸ್ಥಿತಿ ಇದೊಂದೇ ಪ್ರಾಣಿಯದ್ದಲ್ಲ ಎಷ್ಟೋ ಜೀವ ರಾಶಿಗಳದ್ದು, ಹಾಗಾಗಿ ಪರಿಸರದ ಸ್ವಚ್ಛತೆ ಬಹಳ ಮುಖ್ಯ, ಸ್ವಚ್ಛತೆಯನ್ನು ಕಾಪಾಡಲು ಕಸದ ವಿಲೇವಾರಿಯು ಅಷ್ಟೇ ಮುಖ್ಯ.”

- ಗೂಗಲ್‍ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ತಮ್ಮಅನುಭವದ ಮಾತು.

ದಯವಿಟ್ಟು ತಿಳಿಯಿರಿ ನಿಮ್ಮ ಮನೆಯಿಂದ ಹಸಿ ಕಸ, ಒಣ ಕಸ ಸಾಮಾನ್ಯವಾಗಿ ಉತ್ಪತ್ತಿಯಾಗುತ್ತದೆ. ಹಸಿಕಸವೆಂದರೆ ಕೊಳೆಯುವ ಅಥವಾ ಮಣ್ಣಿನಲ್ಲಿ ಕರಗುವಂತಹ ತ್ಯಾಜ್ಯ. ಉದಾಹರಣೆಗೆ ಹಣ್ಣು, ತರಕಾರಿ ಸಿಪ್ಪೆ, ಹಾಗೂ ಕೆಟ್ಟ ಆಹಾರ ಪದಾರ್ಥಗಳು ಒಣ ಕಸವೆಂದರೆ ಮಣ್ಣಿನಲ್ಲಿ ಕರಗದಿರುವಂತಹ ತ್ಯಾಜ್ಯ. ಉದಾಹರಣೆಗೆ ಪ್ಲಾಸ್ಟಿಕ್, ಗಾಜಿನ ಚೂರುಗಳು ಇತ್ಯಾದಿ.

ನಮ್ಮ ಗ್ರಾಮಗಳ ಸ್ವಚ್ಛತೆಗಾಗಿ ಭಾರತ ಸರ್ಕಾರವು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಹಂತ ಎರಡರಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗಿದೆ. ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಹಸಿ ಕಸವನ್ನು ಮನೆಗಳ ಹಂತದಲ್ಲಿಯೇ ಗೊಬ್ಬರವಾಗಿಸಬೇಕು ಮತ್ತು ಒಣ ಕಸವನ್ನು ಪಂಚಾಯತಿಯ ವಾಹನಕ್ಕೆ ನೀಡುವ ಮೂಲಕ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಪ್ರತಿಯೊಬ್ಬರು ಸ್ವಚ್ಛ ಪರಿಸರದ ಅನುಭವ ಪಡೆಯಬೇಕಾದರೆ ತಮ್ಮ ಸುತ್ತಮುತ್ತಲಿನ ಜೀವ ಸಂಕುಲವನ್ನು ಕಾಪಾಡಿಕೊಳ್ಳಬೇಕು.

ಇದನ್ನೇ ಮನದಟ್ಟು ಮಾಡಿಕೊಂಡು ಹಾವೇರಿ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳು ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿದ್ದು, ತ್ಯಾಜ್ಯ ಸಂಗ್ರಹಿಸಲು ಮುಂದಾಗಿವೆ. ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವ ಕುರಿತು ಐ.ಇ.ಸಿ ಚಟುವಟಿಕೆಗಳ ಮೂಲಕ ಪ್ರತಿ ಮನೆಗೂ ತೆರಳಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯಗಳಲ್ಲಿ ಹಸಿ ಕಸವನ್ನು ಮನೆಯ ಹಂತದಲ್ಲಿಯೇ ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ತಿಳಿ ಹೇಳಲಾಗುತ್ತಿದೆ. ಒಣ ಕಸವನ್ನು ತಮ್ಮ ಮನೆ ಬಾಗಿಲಿಗೆ ಬರುವ ಪಂಚಾಯತಿಯ ವಾಹನಕ್ಕೆ ನೀಡುವಂತೆ ಮಾಹಿತಿ ನೀಡಲಾಗುತ್ತಿದೆ.

ಪಂಚಾಯತಿ ಗಾಡಿಗಳಲ್ಲಿ ಹೀಗೆ ಸಂಗ್ರಹಿಸಿಕೊಂಡು ಬಂದ ಕಸವನ್ನು ವಿವಿಧ ಮಾದರಿಗಳಲ್ಲಿ ಬೇರ್ಪಡಿಸಿ ಅವುಗಳನ್ನು ಮರುಬಳಕೆ ಮಾಡುವ ಮೂಲಕ ಪಂಚಾಯತಿಗಳು ಆದಾಯದ ಮೂಲಗಳನ್ನು ಕಂಡುಕೊಂಡಿವೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್‍ ಅನ್ನು ಹೇಗೆಲ್ಲ ಕ್ರಿಯಾಶೀಲವಾಗಿ ಉಪಯೋಗ ಮಾಡಿಕೊಳ್ಳಬಹುದು ಎನ್ನುವುದಕ್ಕೆ ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿಯ ಉದ್ಯಾನವನ ಸಾಕ್ಷಿಯಾಗಿದೆ. ನದಿಯ ನೀರು ಗಂಗೆಯಷ್ಟೇ ಶ್ರೇಷ್ಠ ಹಾಗಾಗಿಯೇ ನಮ್ಮ ಜಿಲ್ಲೆಯಲ್ಲಿ ಹರಿಯುವ ತುಂಗೆಗೆ ಪ್ಲಾಸ್ಟಿಕ್‍ನಿಂದ ಮುಕ್ತಗೊಳಿಸಲು ಕೋಡಿಯಾಲ ಪಂಚಾಯಿತಿಯ “ನಮಾಮಿ ತುಂಗೆ” ಯೋಜನೆಯೇ ಸಾಕ್ಷಿ.

ಎಲ್ಲರೂ ಒಣ ಕಸದ ನಿರ್ವಹಣೆಯ ಬಗ್ಗೆ ಕಾಳಜಿಯಲ್ಲಿದ್ದಾಗ ಹಸಿ ಕಸವೂ ಅಷ್ಟೇ ಶ್ರೇಷ್ಠವಾದ ಸಂಪನ್ಮೂಲವೆಂದು ತೋರಿಸಿ, ಪ್ರತಿ ಮನೆಗೂ ಪೈಪ್‍ ಕಾಂಪೋಸ್ಟ್ ಮಾಡಿ, ‘ಹಿತ್ತಲ ಹೊನ್ನು’ ತಯಾರಿಸಲು ಮಾದರಿಯಾದ ಹೋತನಹಳ್ಳಿಯ ಪಂಚಾಯಿತಿ ದೇಶದ ಜನರ ಮನಮುಟ್ಟಿದೆ. ಹೀಗೆ ನಾನಾ ವಿಶೇಷ ಚಟುವಟಿಕೆಗಳಿಂದ ಅನೇಕ ಪಂಚಾಯಿತಿಗಳು ತ್ಯಾಜ್ಯ ನಿರ್ವಹಣೆಗೆ ಮುಂದಾಗಿವೆ.

ಮನೆಗೊಂದು ಮರ ಊರಿಗೊಂದು ವನ ಎಂಬ ಗಾದೆಯಿಂದ ನಾವು ಎಷ್ಟೋ ಮರಗಳನ್ನು ಬೆಳೆಸಲು ಮುಂದೆ ಬಂದಿದ್ದೇವೆ. ಊರಿನ ಸ್ವಚ್ಛಾಗ್ರಹಿಗಳು ದೇಶಕ್ಕೆ ಸ್ವಚ್ಛತೆಯ ಪ್ರೇರಕರಂತೆ ಕೆಲಸ ಮಾಡುತ್ತಿದ್ದಾರೆ. ಮೂಲದಲ್ಲಿಯೇ ತ್ಯಾಜ್ಯವನ್ನು ಬೇರ್ಪಡಿಸಿ, ಅವರಿಗೆ ಸಹಾಯ ಮಾಡೋಣ. ಪ್ರೇಕ್ಷಣೀಯ ಸ್ಥಳಗಳಿಗೆ, ಸಮುದ್ರದ ದಂಡೆಗಳಿಗೆ ಹೋದಾಗ ಬಳಸಿದ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ನಿಗದಿತ ಪ್ರದೇಶದಲ್ಲಿಯೇ ಹಾಕೋಣ. ಏಕೆಂದರೆ, ಮೇಲೆ ವಿವರಿಸಿದ ಹೃದಯ ವಿದ್ರಾವಕ ಘಟನೆ ನಮ್ಮ ಅಥವಾ ನಮ್ಮ ಮಕ್ಕಳ ಜೀವನದಲ್ಲಿ ಮರುಕಳಿಸದಂತೆ ಕಾಳಜಿ ವಹಿಸಬೇಕಿದೆ. ಈ ಕಾಳಜಿ ಕೇವಲ ಕಾಳಜಿಯಾಗಿರದೆ ನಮ್ಮ ನಿಮ್ಮೆಲ್ಲರ ಜೀವನದ ಮಹದುದ್ದೇಶವಾಗಿರಲಿ ಎಂಬುದೇ ನಮ್ಮ ಆಶಯ.

 7,182 total views,  1 views today

WhatsApp chat