ಹಳ್ಳಿಗಳು ಅಂದ್ರೆ ಕೆಲವರಿಗೆ ಅದೇನೋ ಅಸಡ್ಡೆ, ನಿರ್ಲಕ್ಷ್ಯ. ಅವುಗಳು ಎಲ್ಲಾ ಮೂಲ ಸೌಕರ್ಯಗಳಿಂದ ದೂರವಿರುತ್ತವೆ ಎಂಬುವುದು ಹಲವರ ಕಲ್ಪನೆ. ಆದರೆ ಹಳ್ಳಿಗಳು ಹೀಗೂ ಇರಬಹುದು ಎಂಬುವುದನ್ನು ನಿರೂಪಿಸಿದೆ ಭಾರತದ ಈ ಗ್ರಾಮ. ಅಂದ್ಹಾಗೆ ಏಷ್ಯಾದಲ್ಲೇ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಳ್ಳಿ ಇರುವುದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ. ಈ ಸುಂದರ ಗ್ರಾಮದ ಹೆಸರು ಮೌಲಿನಾಂಗ್. ಇದನ್ನು'ದೇವರ ಸ್ವಂತ ಉದ್ಯಾನ' ಎಂದೂ ಕರೆಯಲಾಗುತ್ತದೆ.
ತನ್ನ ಪ್ರಕೃತಿ ಸೌಂದರ್ಯದಿಂದಲೇ ಗಮನ ಸೆಳೆಯುವ ಮೌಲಿನಾಂಗ್ ಸುಮಾರು 100 ವರ್ಷ ಹಳೆಯದಾದ ಗ್ರಾಮ. ಈ ಗ್ರಾಮ 2003ರಲ್ಲಿ ಏಷ್ಯಾದ ಸ್ವಚ್ಛ ಗ್ರಾಮ ಹಾಗೂ 2005ರಲ್ಲಿ ಭಾರತದ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 95 ಮನೆಗಳಿರುವ ಈ ಗ್ರಾಮದಲ್ಲಿ ಖಾಸಿ ಹಾಗೂ ಗಾರೋ ಬುಡಕಟ್ಟು ಜನಾಂಗಕ್ಕೆ ಸೇರಿದ ಜನ ವಾಸಿಸುತ್ತಾರೆ. ಇಲ್ಲಿರುವ ಪ್ರತಿಯೊಬ್ಬರು ಸ್ವಚ್ಛತೆಯ ಸಿಪಾಯಿಗಳೇ. ಹೀಗಾಗಿಯೇ ಈ ಗ್ರಾಮ ಏಷ್ಯಾದಲ್ಲೇ ಗಮನ ಸೆಳೆಯೋದಕ್ಕೆ ಸಾಧ್ಯವಾಯಿತು.
ಇಲ್ಲಿನ ಪ್ರಮುಖ ವಿಶೇಷತೆ ಎಂದರೆ ಇಲ್ಲಿ ಇಡೀ ಗ್ರಾಮದ ಸ್ವಚ್ಛತೆಯನ್ನು ಗ್ರಾಮದ ನಿವಾಸಿಗಳೇ ನೋಡಿಕೊಳ್ಳುತ್ತಾರೆ. ಸಾಮೂಹಿಕವಾಗಿ ಗ್ರಾಮದ ಸ್ವಚ್ಛತೆ ಕಾಪಾಡಲು ಕೆಲಸ ಮಾಡುತ್ತಾರೆ. ಗ್ರಾಮಕ್ಕೆ ಎಂಟ್ರಿ ಕೊಡುತ್ತಲೇ ಸ್ವಾಗತ ಕೋರುವ ರಸ್ತೆಗಳು ಸ್ವಚ್ಛತೆಯ ಪಾಠವನ್ನು ಸಾರಿ ಸಾರಿ ಹೇಳುತ್ತವೆ. ಅತ್ಯಂತ ಪುಟ್ಟ ಗ್ರಾಮವಾದ ಮೌಲಿನಾಂಗ್ ನ್ನು ಕಣ್ತುಂಬಿಕೊಳ್ಳೋದೇ ಕಣ್ಣಿಗೊಂದು ಹಬ್ಬ. ಇಲ್ಲಿಗೆ ಕಾಲಿಡುತ್ತಲೇ ಯಾವುದೋ ವಿದೇಶಕ್ಕೆ ಹೋದ ಅನುಭವವಾಗುತ್ತೆ.
ಅಂದ್ಹಾಗೆ ಮೌಲಿನಾಂಗ್ ಗ್ರಾಮಕ್ಕೆ ಯಾರೋ ಬಂದು ಸ್ವಚ್ಛತೆಯ ಪಾಠ ಮಾಡಿಲ್ಲ. ಬದಲಾಗಿ ಇಲ್ಲಿನ ಗ್ರಾಮಸ್ಥರೇ ಸ್ವಚ್ಛತೆಯ ಶಪಥ ಮಾಡಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಲ್ಲಿ ಎಲ್ಲರೂ ಸ್ಚಚ್ಛತೆಗಾಗಿ ತಮ್ಮದೇ ಆದಂತಹ ಕೊಡುಗೆ ನೀಡುತ್ತಾರೆ. ಪ್ರತಿದಿನ ಬೆಳಗಾಗುತ್ತಿದ್ದಂತೆ ಗ್ರಾಮದಲ್ಲಿರುವ ಪ್ರತಿ ಸಕುಟುಂಬದ ಸದಸ್ಯರು ತಮ್ಮ ಮನೆ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ.ಮಕ್ಕಳಂತೂ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಸ್ವಚ್ಛತಾ ಕಾರ್ಯ ಮುಗಿಸಿದ ಬಳಿಕವೇ ಶಾಲೆಗಳತ್ತ ಮುಖ ಮಾಡುತ್ತಾರೆ.ನಮ್ಮಲ್ಲಿ ಮನೆ ಮುಂದೆ ಕಸ ಇದ್ದರೆ ಅದನ್ನು ಮೆಲ್ಲಗೆ ಗುಡಿಸಿ ಬೇರೆಯವರ ಮನೆ ಮುಂದೆ ಹಾಕುವವರೇ ಹೆಚ್ಚು. ಆದರೆ ಇಲ್ಲಿ ಹಾಗಲ್ಲ. ಸ್ಚಚ್ಛತೆಯ ಉಸ್ತುವಾರಿ ನೋಡಿಕೊಳ್ಳಲ್ಲೆಂದೇ ಇಲ್ಲೊಂದು ತಂಡವಿದೆ. ಪ್ರತಿದಿನ ಈ ತಂಡ ಗ್ರಾಮದಾದ್ಯಂತ ಸಂಚರಿಸಿ ಗ್ರಾಮ ನೈರ್ಮಲ್ಯದ ಕಡೆ ಗಮನ ಕೊಡುತ್ತದೆ.ಮೆಚ್ಚುವ ವಿಚಾರ ಅಂದ್ರೆ ಈ ಗ್ರಾಮಕ್ಕೆ ಪ್ಲಾಸ್ಟಿಕ್ ಗೆ ಎಂಟ್ರಿ ಇಲ್ಲ. ಗ್ರಾಮದಲ್ಲಿ ಅಲ್ಲಲ್ಲಿ ಬಿದಿರಿನ ಕಸದ ಬುಟ್ಟಿಗಳನ್ನು ಇಟ್ಟಿದ್ದಾರೆ. ಏನೇ ಕಸವಿದ್ರೂ ಕೂಡ ಅದಕ್ಕೇ ಹಾಕುತ್ತಾರೆ.
ಮೌಲಿನಾಂಗ್ ನ ರಸ್ತೆಗಳನ್ನು ನೋಡೋದೇ ಏನೋ ಒಂಥರಾ ಖುಷಿ. ಸುಂದರವಾದ ರಸ್ತೆಗಳಿಗೆ ಕಿರೀಟವಿಟ್ಟಂತಿವೆ ರಸ್ತೆಯ ಬದಿಗಳಲ್ಲಿರುವ ಹೂವಿನ ಗಿಡಗಳು. ಇಲ್ಲಿ ಹೆಚ್ಚಾಗಿ ಸೌರಶಕ್ತಿಯನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನೈಸರ್ಗಿಕವಾಗಿ ಸಿಗುವಂತಹ ಶಕ್ತಿಗಳನ್ನೇ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಇಲ್ಲಿನ ಜನ. ನಾವೆಲ್ಲಾ ಮನೆ ನಿರ್ಮಾಣ ಮಾಡಿದ ಬಳಿಕ ಶೌಚಾಲಯ ನಿರ್ಮಾಣ ಮಾಡುತ್ತೇವೆ. ಆದರೆ ಮೌಲಿನಾಂಗ್ ನಲ್ಲಿ ಹಾಗಲ್ಲ. ಇಲ್ಲಿ ಮನೆಕಟ್ಟುವ ಮೊದಲು ಶೌಚಾಲಯ ನಿರ್ಮಾಣ ಮಾಡುತ್ತಾರೆ. ಇದರಿಂದ ಇಲ್ಲಿನ ಜನ ಸ್ವಚ್ಛತೆಗೆ ಎಷ್ಟೊಂದು ಪ್ರಾಶಸ್ತ್ಯ ಕೊಡುತ್ತಾರೆ ಎಂಬುವುದು ಗೊತ್ತಾಗುತ್ತದೆ.
ಏಷ್ಯಾದಲ್ಲೇ ಗಮನ ಸೆಳೆದಿರುವ ಈ ಗ್ರಾಮವನ್ನು ನೋಡುವುದಕ್ಕೆ ಬೇರೆ ಬೇರೆ ದೇಶಗಳಿಂದ ಪ್ರವಾಸಿರು ಇಲ್ಲಿಗೆ ಬರುತ್ತಾರೆ. ಬಂದವರು ಗ್ರಾಮವನ್ನು ಎಲ್ಲಿ ಹಾಳುಗೆಡವುತ್ತಾರೆ ಅನ್ನೋ ಕಾರಣಕ್ಕೆ ಪ್ರವಾಸಿಗರು ಈ ಗ್ರಾಮಕ್ಕೆ ಎಂಟ್ರಿ ಕೊಡುತ್ತಲೇ ಅವರಿಂದ ದೇಣಿಗೆಯನ್ನು ಸಂಗ್ರಹಿಸುತ್ತಾರೆ. ಈ ದೇಣಿಗೆಯನ್ನು ಗ್ರಾಮದ ಅಭಿವೃದ್ಧಿಗಾಗಿ ಬಳಸುತ್ತಾರೆ. ಇನ್ನು ಇಲ್ಲಿ ಪ್ರತಿದಿನ ಸಂಗ್ರಹಿಸಿದ ಕಸವನ್ನ ಇಲ್ಲಿನ ಜನ ಎಲ್ಲೋ ತೆಗೆದುಕೊಂಡು ಹೋಗಿ ಸುರಿದು ಹಾಗೇ ಸುಮ್ಮನೆ ಕೂರುವುದಿಲ್ಲ. ಹಸಿ ಕಸ, ಒಣ ಕಸ ಅಂತಾ ಬೇರ್ಪಡಿಸಿ ಅದರಿಂದ ಸಾವಯವಗೊಬ್ಬರ ತಯಾರಿಸ್ತಾರೆ.ಅದೇ ಗೊಬ್ಬರವನ್ನು ತಮ್ಮ ಕೃಷಿ ಚಟುವಟಿಕೆಗಾಗಿ ಬಳಸುತ್ತಾರೆ.
ಈ ಯೋಜನೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಹೇಳುವ ಪ್ರಕಾರ, ‘ನೀರಿನ ಅಭಾವದಿಂದಾಗಿ ಮಲಮೂತ್ರ ವಿಸರ್ಜನೆಗೂ ಸಮಸ್ಯೆಯಾಗುತ್ತಿತ್ತು. ನನ್ನ ಪರಿಸ್ಥಿತಿಯೇ ಇನ್ನು ಮಹಿಳಾ ಸಿಬ್ಬಂದಿಗಳ ಪಾಡೇನು ಎಂಬುದನ್ನು ಅರ್ಥಮಾಡಿಕೊಂಡು ಮೊದಲು ಈ ಪಂಚಾಯಿತಿ ಕಟ್ಟಡಕ್ಕೆ ಮಳೆ ನೀರಿನ ಕೊಯ್ಲು ವಿಧಾನವನ್ನು ಅಳವಡಿಸಿ ವರ್ಷಪೂರ್ತಿ ನೀರು ಲಭ್ಯವಾಗುವಂತೆ ಮಾಡಿದೆ. ಇದೀಗ ಪಂಚಾಯಿತಿ ಸಿಬ್ಬಂದಿ ಯಾವುದೇ ಸಮಸ್ಯೆಗಳಿಲ್ಲದೆ ಶೌಚಾಲಯವನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ ಎಲ್ಲರಿಗೂ ಅನುಕೂಲವಾಗಿದೆ ಎನ್ನುತ್ತಾರೆ ಬಸವರಾಜ್.
ಪ್ರಧಾನಿ ನರೇಂದ್ರ ಮೋದಿ ಅವರು ಈ ಗ್ರಾಮದ ಗ್ರಾಮದ ಸೌಂದರ್ಯ ನೋಡಿ ಮರುಳಾಗಿ ಹೋಗಿದ್ದರು. ಈ ಗ್ರಾಮದ ಸ್ವಚ್ಛತೆಯ ಕುರಿತು ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಈ ಗ್ರಾಮವು ಸ್ವಚ್ಛ ಭಾರತ ಅಭಿಯಾನಕ್ಕೆ ಮೌಲಿನಾಂಗ್ ಮಾದರಿಯಾಗಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ನಿಜಕ್ಕೂ ಮೌಲಿನಾಂಗ್ ನ ಸ್ವಚ್ಛತೆಯನ್ನು ನೋಡಿದರೆ ಎಂತಹವರಿಗಾದರೂ ಸಂತೋಷವಾಗದೇ ಇರದು. ಗ್ರಾಮಸ್ಥರೆಲ್ಲಾ ಸ್ವಚ್ಛತೆಯ ಶಪಥ ಮಾಡಿ, ಜೊತೆಯಾಗಿ ಕೆಲಸ ಮಾಡಿದರೆ ಎಂತಹ ಬದಲಾವಣೆ ತರಬಹುದು ಎನ್ನುವುದಕ್ಕೆ ಮೌಲಿನೌಂಗ್ ಗಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ಗ್ರಾಮ ಸ್ವಚ್ಛತೆಯ ವಿಚಾರದಲ್ಲಿ ನಮಗೆಲ್ಲಾ ಮಾದರಿಯಾಗಲಿ. ಮೌಲಿನಾಂಗ್ ನಂತೆ ನಮ್ಮ ಗ್ರಾಮಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಾವೆಲ್ಲಾ ಜೊತೆಯಾಗಿ ಕೆಲಸ ಮಾಡೋಣ..
4,951 total views, 1 views today