Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು, ಮಾನವನ ಜೀವನಕ್ಕೆ ಅತ್ಯಂತ ಅವಶ್ಯಕವಾಗಿರುತ್ತದೆ. ಭಾರತದಲ್ಲಿ 60 ಕೋಟಿ ಜನರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ನೀತಿ ಆಯೋಗ ತನ್ನ 2018ರ ಜೂನ್ ವರದಿಯಲ್ಲಿ ತಿಳಿಸಿದೆ. ದೇಶದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಕುಟುಂಬಗಳು ತಾವು ವಾಸಿಸುವ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಹೊಂದಿರುವುದಿಲ್ಲ.

ಸುಮಾರು 70% ರಷ್ಟು ನೀರು ಕಲುಷಿತಗೊಂಡಿರುವುದರಿಂದ, ನೀರಿನ ಗುಣಮಟ್ಟದ ಸೂಚ್ಯಂಕದಲ್ಲಿ 122 ದೇಶಗಳಲ್ಲಿ ಭಾರತವು 120 ನೇ ಸ್ಥಾನದಲ್ಲಿದೆ. ಶುದ್ಧ ನೀರಿಗೆ ಅಶುದ್ಧ ನೀರಿನ ಸೇರ್ಪಡೆಯಿಂದಾಗಿ ನೀರಿನಿಂದ ಹರಡುವ ರೋಗಗಳಾದ ಟೈಫಾಯಿಡ್, ಕಾಲರಾ, ಭೇದಿ ಇತ್ಯಾದಿಗಳಿಂದ ಪ್ರತಿ ವರ್ಷ ಸುಮಾರು 2 ಲಕ್ಷ  ಜನರು ಸಾಯುತ್ತಿದ್ದಾರೆ ಎಂದು ನೀತಿ ಆಯೋಗ ಆಘಾತಕಾರಿ ವರದಿ ನೀಡಿದೆ, ಈ ವರದಿಯ ಎಲ್ಲಾ ಕಾರಣಗಳಿಂದ ಭಾರತ ಸರ್ಕಾರವು ಶುದ್ಧ ಮತ್ತು ಸುರಕ್ಷಿತ ನೀರು ಸರಬರಾಜು ಮಾಡಲು 2019ರ ಆಗಸ್ಟ್ 15ರಂದು ಜಲಜೀವನ್ ಮಿಷನ್ ಅನ್ನು ರಚಿಸಿ, 2024ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಒದಗಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಉದ್ದೇಶಿಸಿದೆ.

ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಗುಣಮಟ್ಟದ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜಲ ಶಕ್ತಿ ಸಚಿವಾಲಯವು ಮಾರ್ಚ್ 2021 ರಲ್ಲಿ ನೀರಿನ ಜೊತೆಗೆ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು, ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮದ ಬಗ್ಗೆ ನಿಗಾ ವಹಿಸಲು ನೀರಿನ ಗುಣಮಟ್ಟ ನಿರ್ವಹಣಾ ಮಾಹಿತಿ ವ್ಯವಸ್ಥೆ (WQMIS) ಎಂಬ ವೆಬ್ ಪೋರ್ಟಲ್, ಈ ಬಗ್ಗೆ ಸಮಗ್ರವಾದ ಮಾಹಿತಿ ನೀಡುತ್ತಿದೆ.

ನಮ್ಮ ರಾಜ್ಯದಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಲುವಾಗಿ ಎರಡು ಹಂತದಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರಂತೆ ಒಟ್ಟು 16 ನಿಯತಾಂಕಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ.

ನೀರಿನ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಕಣ್ಗಾವಲು ವ್ಯವಸ್ಥೆ (WQMS):

ಕರ್ನಾಟಕದಲ್ಲಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಕೆ ಮಾಡುವ ಮುಖ್ಯ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಂಡು ನಂತರ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಇಲಾಖೆ ಗ್ರಾಮೀಣ ಪ್ರದೇಶದ ಎಲ್ಲಾ ಕುಡಿಯುವ ನೀರಿನ ಮೂಲಗಳಾದ ಕೆರೆ, ಕೊಳವೆ ಬಾವಿ, ತೆರೆದ ಬಾವಿ, ನದಿ, ಶುದ್ಧ ಕುಡಿಯುವ ನೀರಿನ ಘಟಕಗಳು, ಯಾದೃಚ್ಛಿಕ ಕಾರ್ಯಾತ್ಮಕ ಗೃಹ ನಳಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ಅದರಲ್ಲಿರುವ 16 ನಿಯತಾಂಕಗಳ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಪ್ರತಿ ವರ್ಷ ಸುಮಾರು 1,20,000 ಜಲ ಮೂಲಗಳ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸುತ್ತದೆ. ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಸರಬರಾಜಾಗುವ ನೀರಿನ ಮೂಲಗಳ ಮಾದರಿಯನ್ನು ನಿಖರವಾಗಿ ಸಂಗ್ರಹಿಸುವ ಸಲುವಾಗಿ ಟೈಮ್ ಸ್ಟ್ಯಾಂಪ್, ಹಾಗೂ ಜಿಯೋ ಸ್ಟ್ಯಾಂಪ್ ಅಪ್ಲಿಕೇಷನ್ ಅನ್ನು ಕೂಡ ಅಳವಡಿಸಲಾಗಿರುತ್ತದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸುವಿಕೆ:

ಗ್ರಾಮ ಪಂಚಾಯತಿ ಹಂತದಲ್ಲಿ ಫೀಲ್ಡ್ ಟೆಸ್ಟಿಂಗ್ ಕಿಟ್ (FTK) ಹಾಗೂ ಬ್ಯಾಕ್ಟೀರಿಯೋಲಾಜಿಕಲ್ ವಯಲ್ಸ್ ಗಳ ಸಹಾಯದಿಂದ ಸಂಭಾವ್ಯ ನೀರಿನ ಗುಣಮಟ್ಟ ಪರೀಕ್ಷೆ(Presumptive Water Quality Testing)ಯನ್ನು ನಡೆಸಲಾಗುತ್ತದೆ. ಮುಂಗಾರು ಪೂರ್ವ ಹಾಗೂ ನಂತರ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ನೀರಿನಲ್ಲಿರುವ ಮೂಲಭೂತ ರಾಸಾಯನಿಕ ನಿಯತಾಂಕಗಳಾದ ಪಿ.ಹೆಚ್, ಕ್ಲೋರೈಡ್, ನೀರಿನ ಒಟ್ಟು ಗಡಸುತನ, ಕಬ್ಬಿಣ, ನೈಟ್ರೇಟ್, ಫ್ಲೋರೈಡ್, ಹಾಗೂ ಇತರೆ ಕರಗಿದ ಘನ ವಸ್ತುಗಳನ್ನು ಪರೀಕ್ಷಿಸಲು FTK ಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು FTK ಮತ್ತು ಬ್ಯಾಕ್ಟೀರಿಯೋಲಾಜಿಕಲ್ ವಯಲ್ಸ್ ಗಳ ಸಹಾಯದಿಂದ ನೀರಿನ ನೈರ್ಮಲ್ಯ ಸಮೀಕ್ಷೆ ಹಾಗೂ ನೀರಿನ ಗುಣಮಟ್ಟದ ಸಂಭಾವ್ಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳೀಯ ಸಮುದಾಯದ 5 ಮಹಿಳೆಯರನ್ನು ಗುರುತಿಸಿ (ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಸದಸ್ಯರು, ಶಿಕ್ಷಕರು) ತರಬೇತಿ ನೀಡಲಾಗುತ್ತದೆ.

ಕರ್ನಾಟಕದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಯೋಗಾಲಯಗಳು:

ಕರ್ನಾಟಕದಲ್ಲಿ ಜಿಲ್ಲಾ/ವಿಭಾಗ ಮಟ್ಟದಲ್ಲಿ 31 ನೀರಿನ ಗುಣಮಟ್ಟ ಪರೀಕ್ಷೆಯ ಪ್ರಯೋಗಾಲಯಗಳಿವೆ. ಉಪ ವಿಭಾಗ ಮಟ್ಟದಲ್ಲಿ 46 ಪ್ರಯೋಗಾಲಯಗಳಿದ್ದು, ಇವುಗಳಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರಯೋಗಾಲಯಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆಗಾಗಿ ಪ್ರಯೋಗಾಲಯಗಳನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಸಿ.ಇ.ಓ ನೇತೃತ್ವದಲ್ಲಿ ನೀರಿನ ಗುಣಮಟ್ಟ ವ್ಯವಸ್ಥಾಪಕರು, ಕಾರ್ಯಪಾಲಕ ಅಭಿಯಂತರರು ನೀರಿನ ಗುಣಮಟ್ಟದ ಬಗ್ಗೆ ಪರಿವೀಕ್ಷಣೆ ಮಾಡುತ್ತಾರೆ. ರಾಜ್ಯ ಮಟ್ಟದಲ್ಲಿ ಆಯುಕ್ತರು, ಮುಖ್ಯ ಅಭಿಯಂತರರ ನೇತೃತ್ವದಲ್ಲಿರುವ ರಾಜ್ಯ ತಾಂತ್ರಿಕ ಸಮಾಲೋಚಕರು ಮತ್ತು WQMS ತಂಡ ನಿರಂತರವಾಗಿ ವಿಡಿಯೋ ಕಾನ್ಫರೆನ್ಸ್, ಕ್ಷೇತ್ರ ಭೇಟಿ, ಹಾಗೂ ದಾಖಲೆಗಳ ಪರಿಶೋಧನೆಗಳ ಮೂಲಕ ಪ್ರಯೋಗಾಲಯಗಳ ಮೇಲೆ ಕಣ್ಗಾವಲು ನಡೆಸಲಾಗುತ್ತದೆ.

ಕುಡಿಯಲು ಯೋಗ್ಯವಲ್ಲದ ನೀರನ್ನು ಕುಡಿಯುವುದರಿಂದ ಎದುರಾಗುವ ತೊಂದರೆಗಳು:

ಜಲಮೂಲಗಳಿಂದ ಲಭ್ಯವಾಗುವ ನೀರನ್ನು ನಾವು ಕುಡಿಯಲು ಬಳಸುವ ಮುನ್ನ ಅದರ ಗುಣಮಟ್ಟದ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ನೀರಿನಲ್ಲಿ ಕೆಲವೊಂದು ರಾಸಾಯನಿಕ ನಿಯತಾಂಕಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಬೇರೆ ಬೇರೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೂ ಇತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿದ್ದರೆ ದಂತ ಫ್ಲೂರೋಸಿಸ್, ಮೊಣಕಾಲು ನೋವು, ಹಾಗೇ ಅರ್ಸೆನಿಕ್ ಪ್ರಮಾಣ ಹೆಚ್ಚಾಗಿದ್ದರೆ ಚರ್ಮದ ಕಾಯಿಲೆಗಳು, ಮತ್ತು ಬ್ಯಾಕ್ಟೀರಿಯಾಗಳಿಂದ ವಾಂತಿ, ಡಯೇರಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ನಿಯತಾಂಕಗಳು ಅಗತ್ಯಕ್ಕಿಂತ ಹೆಚ್ಚಾಗಿದ್ದರೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

NABL ಮಾನ್ಯತೆ ಮತ್ತು ಕರ್ನಾಟಕದ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಯೋಗಾಲಯಗಳು:

ಭಾರತ ಸರ್ಕಾರದ ಜಲಜೀವನ್ ಮಿಷನ್ ಮಾರ್ಗಸೂಚಿ ಪ್ರಕಾರ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪ್ರಯೋಗಾಲಯಗಳಿಗೆ ನ್ಯಾಷನಲ್ ಅಕ್ರಿಡಿಟೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬ್ರೇಷನ್ ಲ್ಯಾಬೋರೇಟರಿಸ್ (NABL) ಮಾನ್ಯತೆ ಪಡೆಯಬೇಕಾಗಿರುತ್ತದೆ. ರಾಜ್ಯದಲ್ಲಿ NABLನ ಮಾನ್ಯತೆಯನ್ನು ತೀವ್ರಗತಿಯಲ್ಲಿ ಕಾರ್ಯಗತಗೊಳಿಸಲು ಪ್ರಯೋಗಾಲಯಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಮೂಲಭೂತವಾಗಿ ಅಗತ್ಯವಿರುವ ರಾಸಾಯನಿಕಗಳು, ಗಾಜಿನ ಪರಿಕರಗಳು, ಮತ್ತು ಇತರೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಯೋಗಾಲಯಕ್ಕೆ ನುರಿತ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಕಾರ್ಯಪಾಲಕ ಅಭಿಯಂತರರು ಮತ್ತು ಪ್ರಯೋಗಾಲಯದ ಮೇಲ್ವಿಚಾರಕರಿಗೆ ನೀರಿನ ಗುಣಮಟ್ಟದ ಕಾಪಾಡುವಿಕೆ ಹಾಗೂ ನಿಗಾವಹಿಸುವಿಕೆಯ ಕುರಿತಾಗಿ ತರಬೇತಿ ನೀಡಲಾಗಿದೆ. ನೀರಿನ ಗುಣಮಟ್ಟ ವ್ಯವಸ್ಥಾಪಕರುಗಳಿಗೆ ISO 17025:2017 ಗಳ ಮಾರ್ಗಸೂಚಿಗಳ ಪ್ರಕಾರ ಕುರಿತಾಗಿ ತರಬೇತಿಯನ್ನು ನೀಡಲಾಗುತ್ತದೆ. ನೇಮಕಾತಿಯಾದ ಬಳಿಕವೂ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಗುಣಮಟ್ಟದ ಪರೀಕ್ಷಿಸುವ ಪ್ರಯೋಗಾಲಯ ಈಗಾಗಲೇ NABL ಮಾನ್ಯತೆಯನ್ನು ಪಡೆದುಕೊಂಡಿದೆ. ಆ ಮೂಲಕ NABL ಮಾನ್ಯತೆಯನ್ನು ಪಡೆದುಕೊಂಡ ರಾಜ್ಯದ ಮೊದಲ ನೀರಿನ ಗುಣಮಟ್ಟದ ಪರೀಕ್ಷಿಸುವ ಪ್ರಯೋಗಾಲಯ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಯೋಗಾಲಯಗಳಲ್ಲಿ NABL ನಿಂದ ಯಶಸ್ವಿಯಾಗಿ ಪರಿಶೋಧನೆ ನಡೆದಿದ್ದು, NABL ಮಾನ್ಯತೆಗಾಗಿ ಪರಿಶೋಧಕರಿಂದ ಶಿಫಾರಸು ಮಾಡಲಾಗಿದೆ. ಇನ್ನುಳಿದಂತೆ ಬೆಳಗಾವಿ, ಮಂಡ್ಯ, ರಾಮನಗರ, ಕಲಬುರ್ಗಿ, ಮೈಸೂರು, ವಿಜಯಪುರ, ಧಾರವಾಡ ಜಿಲ್ಲೆಯ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಯೋಗಾಲಯಗಳು NABL ಮಾನ್ಯತೆಗಾಗಿ ಅರ್ಜಿಯನ್ನು ಸಲ್ಲಿಸಿವೆ.

ಪ್ರಯೋಗಗಳ ಮೇಲೆ ಯಾವ ರೀತಿ ಗ್ರಾ.ಕು.ನೀ.ನೈ ಇಲಾಖೆ ನಿಗಾವಹಿಸುತ್ತದೆ?

ರಾಜ್ಯದಲ್ಲಿ 31 ಜಿಲ್ಲಾ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಹಾಗೂ 46 ತಾಲೂಕು ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳ ಕಾರ್ಯ ನಿರ್ವಹಣೆಯ ಬಗ್ಗೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ನಿಗಾವಹಿಸುತ್ತದೆ. ಅದರಂತೆ ಲ್ಯಾಬ್ ಗಳಿಗೆ ಭೇಟಿ ನೀಡಿ ಅಲ್ಲಿ ನುರಿತ ಸಿಬ್ಬಂದಿಗಳಿದ್ದಾರಾ, ಪ್ರಯೋಗಾಲಯಕ್ಕೆ ಬೇಕಾಗಿರುವ ಎಲ್ಲಾ ಸಲಕರಣೆಗಳು, ರಾಸಾಯನಿಕ ವಸ್ತುಗಳು, ಕಟ್ಟಡ, ದಾಖಲೆಗಳು ಹೀಗೆ ಎಲ್ಲವನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅಲ್ಲದೇ ಬೇರೆ ಪ್ರಯೋಗಾಲಯಗಳ ಜೊತೆ ಸರ್ಕಾರದ ಪ್ರಯೋಗಾಲಯಗಳನ್ನು ಹೋಲಿಕೆ ಮಾಡಿ ಅಲ್ಲಿ ಏನಾದರೂ ವಿಶೇಷ ಸೌಲಭ್ಯಗಳನ್ನು ಕಂಡು ಬಂದರೆ ಅದನ್ನು ಪ್ರಯೋಗಾಲಯಗಳಲ್ಲಿ ಅಳವಡಿಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ.

ಪ್ರಯೋಗಾಲಯಗಳಲ್ಲಿ ಸಾರ್ವಜನಿಕರಿಗೆ ನೀರಿನ ಗುಣಮಟ್ಟ ಪರೀಕ್ಷೆಗೆ ಅವಕಾಶ:

ಇಲಾಖೆಯಡಿಯಲ್ಲಿ ಸರಬರಾಜಾಗುವ ನೀರಿನ ಮೂಲಗಳ ಪರೀಕ್ಷೆಗಳನ್ನು ಕೈಗೊಳ್ಳುವುದಲ್ಲದೇ ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಇತರೆ ನೀರಿನ ಮಾದರಿಗಳನ್ನು ಕೂಡ ಪ್ರಯೋಗಾಲಯಗಳಲ್ಲಿ ಗುಣಮಟ್ಟದ ಪರೀಕ್ಷೆಗೆ ಒಳಪಡಿಸುವ ಅವಕಾಶವಿದ್ದು, ನೀರಿನಲ್ಲಿರುವ ಪಿ.ಹೆಚ್, ರುಚಿ, ವಾಸನೆ, ಬಗ್ಗಡುತನ, ಒಟ್ಟು ಕರಗಿರುವ ವಸ್ತುಗಳು (ಟಿ.ಡಿ.ಎಸ್), ನೈಟ್ರೇಟ್, ಫ್ಲೋರೈಡ್, ಕ್ಲೋರೈಡ್, ಕ್ಷಾರೀಯತೆ, ಕ್ಯಾಲ್ಸಿಯಂ, ಒಟ್ಟು ಗಡಸುತನ, ಕಬ್ಬಿಣ, ಸಲ್ಫೇಟ್, ಅರ್ಸೆನಿಕ್, ಒಟ್ಟು ಕೋಲಿಫಾರ್ಮ್, ಇ.ಕೋಲಿ ನಿಯತಾಂಕಗಳ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಎಲ್ಲಾ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು 1150 ರೂಪಾಯಿಗಳನ್ನು ಇಲಾಖೆ ನಿಗದಿಪಡಿಸಿದೆ.

ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಜನರಿಗೆ ಜಾಗೃತಿ ಕಾರ್ಯಕ್ರಮ:

ಗ್ರಾಮೀಣ ಭಾಗದ ಜನರಿಗೆ ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾದದ್ದು. ಹಾಗಾಗಿ ಈ ನಿಟ್ಟಿನಲ್ಲಿ ಇಲಾಖೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಮಾಡುತ್ತಿದೆ. ಅದರಂತೆ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ನೆರವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳನ್ನು ವಿಡಿಯೋ ಡಾಕ್ಯುಮೆಂಟರಿಗಳನ್ನು ತಯಾರಿಸಲಾಗಿರುತ್ತದೆ. ಅದರ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಅಲ್ಲದೇ ರಾಜ್ಯದಾದ್ಯಂತ ಅನುಷ್ಠಾನ ನೆರವು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳ ತರಬೇತಿಗಾಗಿ 33 ಅನುಷ್ಠಾನ ನೆರವು ಸಂಸ್ಥೆಗಳ (ISAs) ಜೊತೆ ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಗಿರುತ್ತದೆ. ಇಷ್ಟೇ ಅಲ್ಲದೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಸದಸ್ಯರು, ಶಿಕ್ಷಕರು ಹಾಗೂ ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಸಮಿತಿಯಲ್ಲಿರುವ ಎಲ್ಲರಿಗೂ ತರಬೇತಿಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 26,000 ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಸಮಿತಿಯನ್ನು ರಚಿಸಲಾಗಿದ್ದು, ಅದರಂತೆ 10,922 ಮಹಿಳೆಯರು ತರಬೇತಿ ಪಡೆದಿದ್ದಾರೆ. ಇದರ ಜೊತೆಗೆ ಗೋಡೆಬರಹ, ಭಿತ್ತಿಚಿತ್ರ, ಸಮುದಾಯ ರೇಡಿಯೋ ಸೇವೆಗಳು, ದ್ರಶ್ಯ-ಶ್ರಾವ್ಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ರೀತಿ ಪ್ರತಿ ಹಳ್ಳಿಗಳಲ್ಲೂ ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಗಮನ ಹರಿಸುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ.

 6,704 total views,  3 views today

WhatsApp chat