ಹಾಸನ ಜಿಲ್ಲೆಯು 267 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದೆ. ಗ್ರಾಮಾಂತರ ಪ್ರದೇಶವೇ ಹೆಚ್ಚಾಗಿರುವ ಈ ಜಿಲ್ಲೆಯಲ್ಲಿ ದಿನೇ-ದಿನೇ ಜನಸಂಖ್ಯೆ ಅಧಿಕವಾಗುತ್ತಾ ಹೋಗುತ್ತಿದೆ. ಈ ಪರಿಸ್ಥಿತಿಯಲ್ಲಿ ಶುದ್ಧ ನೀರು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ. ಇಂತಹ ಸವಾಲಿನ ಕೆಲಸವನ್ನು ಸಮಯಕ್ಕೆ ತಕ್ಕಂತೆ ನಿಭಾಯಿಸಿಕೊಂಡು ಹೋಗಲು ಅನೇಕರು ಶ್ರಮಿಸುತ್ತಿದ್ದಾರೆ. ಅಲ್ಲದೆ, ಹಲವಾರು ಸಂಘ ಸಂಸ್ಥೆಗಳು ಸಹಾ ಸರ್ಕಾರದ ವಿವಿಧ ಯೋಜನೆಗಳೊಂದಿಗೆ ಕೈ ಜೋಡಿಸಿ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿವೆ.
ಜಿಲ್ಲೆಗೆ ಅನೇಕ ರಾಜವಂಶಗಳು ಆಳಿದಂತಹ ಐತಿಹಾಸಿಕ ಹಿನ್ನಲೆ ಇದೆ. ಹಾಗಾಗಿ ಪ್ರಾಚೀನ ಕಾಲದ ಪುಣ್ಯ ಕ್ಷೇತ್ರಗಳು, ಕೆರೆ-ಕಟ್ಟೆ, ಕಲ್ಯಾಣಿಗಳು, ಅನೇಕ ಪ್ರವಾಸಿ ಸ್ಥಳಗಳು ಜಿಲ್ಲೆಯಾದ್ಯಂತ ಅಧಿಕ ಸಂಖ್ಯೆಯಲ್ಲಿವೆ. ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಜಿಲ್ಲೆಗೆ ಪ್ರತಿದಿನ ಭೇಟಿ ನೀಡುತ್ತಾರೆ. ಹಾಗಾಗಿ ಪ್ರವಾಸಿಗರ ಸಂಖ್ಯೆಯೂ ಬಹಳ ಅಧಿಕವಾಗಿದೆ. ಹಾಸನ ಜಿಲ್ಲಾಡಳಿತವು ಜಿಲ್ಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಅದರ ಮೂಲಕ ಜಿಲ್ಲೆಯ ಪ್ರಾಚೀನತೆಯನ್ನು ಉಳಿಸಿಕೊಂಡು ಹೋಗಲು ಹಗಲಿರುಳು ಶ್ರಮಿಸುತ್ತಿದೆ.
ಹೀಗಿರುವಾಗ ಜಿಲ್ಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಜನಸ್ನೇಹಿ ಯೋಜನೆಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಸ್ವಚ್ಛತಾ ಕಾರ್ಯ, ಶ್ರಮದಾನವನ್ನು ಮಾಡತೊಡಗಿದ್ದಾರೆ. ಪರಿಣಾಮ ಪುಣ್ಯ ಕ್ಷೇತ್ರಗಳು ಸೇರಿದಂತೆ ಮುಖ್ಯವಾಗಿ ನೀರಿನ ಮೂಲವಾದ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವ ಜೊತೆಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸಗಳೂ ಭರದಿಂದ ಸಾಗಿವೆ.
ಹಾಸನದ ಹಸಿರು ಪ್ರತಿಷ್ಠಾನ ಮತ್ತು ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರನ್ನು ಸ್ವಚ್ಛತಾ ಕಾರ್ಯದಲ್ಲಿ ಭಾಗಿಗಳನ್ನಾಗಿ ಮಾಡಿಕೊಳ್ಳುವ ಮೂಲಕ ಹಾಸನ ಜಿಲ್ಲೆಯಲ್ಲಿರುವ ಅನೇಕ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುತ್ತಿವೆ. ಜಿಲ್ಲೆಯಲ್ಲಿರುವ ಸೋಮನಹಳ್ಳಿ ಕಲ್ಯಾಣಿ, ಸಂತೆಕೊಪ್ಪಲು ಕಲ್ಯಾಣಿ ಸೇರಿದಂತೆ 30 ಕ್ಕೂ ಹೆಚ್ಚಿನ ಕಲ್ಯಾಣಿಗಳಲ್ಲಿ ಅಡಕವಾಗಿದ್ದ ಗಿಡ ಗಂಟಿಗಳು ಮತ್ತು ವಿವಿಧ ಬಗೆಯ ಅಪಾಯಕಾರಿ ತ್ಯಾಜ್ಯಗಳನ್ನು ಹೊರತೆಗೆದು, ಅಲ್ಲಿದ್ದ ಕಲ್ಯಾಣಿಗಳು ಸ್ವಚ್ಛತೆ, ಸಮೃದ್ಧತೆಯಿಂದ ಸುಂದರವಾಗಿ ಕಂಗೊಳಿಸಿ ಬಳಕೆಗೆ ಉಪಯುಕ್ತವಾಗುವಂತೆ ಮಾಡಲಾಗಿದೆ.
ಅಲ್ಲದೆ, ಕೆಲವು ಕಲ್ಯಾಣಿಗಳಲ್ಲಿ ಶುಚಿಗೊಳಿಸಿದ ಕೂಡಲೇ ನೀರು ಬಂದಿದ್ದು ಸ್ಥಳೀಯರ ಸಂತೋಷಕ್ಕೆ ಕಾರಣವಾಗಿದೆ. ಇನ್ನು ಕೆಲ ಕಲ್ಯಾಣಿಗಳಲ್ಲಿ ಒಂದು ವಾರದ ಅವಧಿಯೊಳಗಾಗಿ ನೀರು ತುಂಬಿಕೊಂಡಿದ್ದು, ಉಳಿದ ಕಲ್ಯಾಣಿಗಳಲ್ಲಿ ಮಳೆಗಾಲದಲ್ಲಿ ನೀರು ತುಂಬುವ ನಿರೀಕ್ಷೆಯಿದೆ.
ಒಟ್ಟಾರೆಯಾಗಿ, ಜಿಲ್ಲೆಯಲ್ಲಿನ ಜಲಮೂಲಗಳನ್ನು ಸ್ವಚ್ಛಗೊಳಿಸಿರುವುದು ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದೆ.
ಜಿಲ್ಲೆಯಲ್ಲಿ ಇನ್ನೂ ಅನೇಕ ಕಲ್ಯಾಣಿಗಳು ವ್ಯವಸ್ಥಿತವಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಸಂಶಯವಿದೆ. ಆದಷ್ಟು ಬೇಗ ಅಂತಹ ಕಲ್ಯಾಣಿಗಳನ್ನು ಗುರುತಿಸಿ ಉಪಯೋಗಕ್ಕೆ ಬರುವಂತೆ ಮಾಡುವ ಉದ್ದೇಶವನ್ನು ವಿವಿಧ ಸಂಘ ಸಂಸ್ಥೆಗಳು ಹೊಂದಿವೆ. ಯುವ ಸಂಘಟನೆಗಳ ಈ ಕಾರ್ಯ ಜಿಲ್ಲೆಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದು, ಅವಶೇಷಗಳಡಿ ಹುದುಗಿಹೋಗಿರುವ ಅದೆಷ್ಟೋ ಕಲ್ಯಾಣಿಗಳಿಗೆ ಇಂತಹ ಕೆಲಸಗಳಿಂದ ಮರುಜೀವ ಬಂದಂತಾಗಿದೆ.
6,908 total views, 5 views today