Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಇಷ್ಟು ದಿನಗಳ ಕಾಲ ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ತ್ಯಾಜ್ಯ ವಿಲೇವಾರಿ, ಇದೀಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾರ್ಯಪ್ರವೃತ್ತವಾಗಿದೆ. ಕರ್ನಾಟಕವು ಸ್ವಚ್ಛ, ಸ್ವಸ್ಥ, ಸುಂದರರಾಜ್ಯವಾಗಿ ನಿರ್ಮಾಣವಾಗಬೇಕಿದ್ದು ಈ ನಿಟ್ಟಿನಲ್ಲಿ 6017 ಗ್ರಾಮಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಕಗಳನ್ನು ನಿರ್ಮಿಸಲು ಇಲಾಖೆ ಮುಂದಾಗಿದೆ. ಈಗಾಗಲೇ 416 ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ.

Mane Manege Gange Scheme Karnataka

ಘನ ತ್ಯಾಜ್ಯ ವಿಂಗಡಣೆಯಲ್ಲಿ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು ಅತ್ಯಂತ ಪ್ರಮುಖವಾದ ಕ್ರಮವಾಗಿದೆ. ಘನ ತ್ಯಾಜ್ಯವನ್ನು ಜೈವಿಕ ವಿಘಟಿತತ್ಯಾಜ್ಯ ಮತ್ತು ಜೈವಿಕ ಅವಿಘಟಿತತ್ಯಾಜ್ಯವೆಂದು ವಿಂಗಡಿಸಲಾಗುತ್ತದೆ. ಜೈವಿಕ ವಿಘಟಿತ ತ್ಯಾಜ್ಯವೆಂದರೆ ಮಣ್ಣಿನಲ್ಲಿ ಕರಗುವಂತಹ ತ್ಯಾಜ್ಯ. ಇದನ್ನು ಹಸಿ ಕಸವೆಂದೂ ಕರೆಯಲಾಗುತ್ತದೆ. ಈ ತ್ಯಾಜ್ಯವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿದರೆ ಇದು ಸಂಪನ್ಮೂಲವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹಸಿ ತ್ಯಾಜ್ಯವನ್ನುಗೊಬ್ಬರವಾಗಿ, ಜಾನುವಾರುಗಳಿಗೆ ಮೇವಾಗಿ ಮತ್ತು ಶಾಖ, ವಿದ್ಯುತ್, ಇಂಧನ ಉತ್ಪಾದನೆಗೆ ಉಪಯೋಗಕ್ಕೆ ಬರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಸಿ ಕಸದ ಉತ್ಪಾದನೆ ಹೆಚ್ಚಿರುವುದರಿಂದ ಕಾಂಪೋಸ್ಟ್ ತಯಾರಿಕೆ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಕಾರ್ಯಸಾಧ್ಯವಾಗಿರುತ್ತದೆ. ಹಸಿ ಕಸವನ್ನು ವಿವಿಧ ಮಾದರಿಗಳಲ್ಲಿ ಕಾಂಪೋಸ್ಟ್ ಆಗಿ ತಯಾರಿಕೆ ಮಾಡಬಹುದಾಗಿದೆ.

ಹಸಿ ಕಸವನ್ನುಗೊಬ್ಬರವನ್ನಾಗಿಸುವ ಕೆಲ ಮಾದರಿಗಳೆಂದರೆ,

    • ವರ್ಮಿ ಕಾಂಪೋಸ್ಟಿಂಗ್
    • ನಡೆಪ್ ಕಾಂಪೋಸ್ಟಿಂಗ್
    • ಪೈಪ್ ಕಾಂಪೋಸ್ಟಿಂಗ್
    • ಗೋಬರ್ ಧನ್
    • ವಿಂಡ್‍ರೋ ಕಾಂಪೋಸ್ಟಿಂಗ್ ಸೇರಿದಂತೆ ಇನ್ನಿತರೆ ಮಾದರಿಗಳನ್ನು ಬಳಸಿಕೊಂಡು ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಬಹುದು.

ಸಾವಯವ ಕೃಷಿಗೆ ರಾಸಾಯನಿಕ ರಹಿತ ಗೊಬ್ಬರದ ಅಗತ್ಯತೆ ಹೆಚ್ಚು. ಹೀಗಾಗಿ ಕೃಷಿಗೆ ಪೂರಕವಾದ ಎರೆಹುಳು ಗೊಬ್ಬರವನ್ನು ಹಸಿ ಕಸದಿಂದ ತಯಾರಿಸ ಬಹುದಾಗಿದೆ. ಈ ಗೊಬ್ಬರ ತಯಾರಿಕೆಗೆ ಒಂದು ತೊಟ್ಟಿಯನ್ನು ನಿರ್ಮಿಸಿ, ಆ ತೊಟ್ಟಿಯಲ್ಲಿ ಕೆಳಗಿನ ಹಂತದಲ್ಲಿ ಮಣ್ಣನ್ನು ಹಾಕಿ ಅದರ ಮೇಲೆ ತೆಂಗಿನ ಗರಿ ಅಥವಾ ತೆಂಗಿನ ನಾರನ್ನು ಹಾಕಬೇಕು. ಬಳಿಕ ಅಡುಗೆ ಮನೆಯಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ಹಾಕಬೇಕು. ಹೀಗೆ ನಿರ್ಮಾಣವಾದ ಪದರದ ಮೇಲೆ ಸಗಣಿಅಥವ ಸಗಣಿ ನೀರನ್ನು ಹಾಕಿ ಅದರ ಮೇಲೆ ಮತ್ತೆ ಮಣ್ಣಿನ ಪದರವನ್ನು ನಿರ್ಮಿಸಬೇಕು, ಬಳಿಕ ಎರೆಹುಳುಗಳನ್ನು ಬಿಡಬೇಕು. ಎರೆಹುಳುಗಳು ಬಿಸಿಲಿಗೆ ಸಾಯದಂತೆ ನೋಡಿಕೊಳ್ಳಲು ಮೇಲ್ಭಾ ಗದಲ್ಲಿ ತೆಳುವಾಗಿ ಹಸಿರೆಲೆಗಳನ್ನು ಹಾಕಬೇಕು. ಹೀಗೆ ಮಾಡಿದರೆ ಇದು ಕೆಲ ತಿಂಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಗೊಬ್ಬರವಾಗಿ ಬದಲಾಗುತ್ತದೆ.

ಇದೇ ರೀತಿಯಲ್ಲಿ ಅತಿ ಕಡಿಮೆ ಜಾಗವನ್ನು ಬಳಸಿಕೊಂಡು ಪೈಪ್ ಕಾಂಪೋಸ್ಟಿಂಗ್ ಕೂಡ ತಯಾರಿಸಬಹುದು. ಮನೆಯ ಹಿತ್ತಲು ಅಥವಾ ಲಭ್ಯವಿರುವ ಸ್ಥಳದಲ್ಲಿ 6 ಇಂಚು ಅಗಲ 6 ಅಡಿ ಉದ್ದವಿರುವ ಪೈಪ್‍ವೊಂದನ್ನು 2 ಅಡಿಗಳಷ್ಟು ಆಳದ ಗುಂಡಿ ತೆಗೆದು ಭೂಮಿಯಲ್ಲಿ ಹೂಳಬೇಕು. ಈ ಪೈಪ್‍ನಲ್ಲಿ ಅಡುಗೆ ಮನೆ ತ್ಯಾಜ್ಯ ಅಂದರೆ ಹಸಿ ತ್ಯಾಜ್ಯವನ್ನು ಹಾಕಬೇಕು. ಬಳಿಕ ಮಣ್ಣನ್ನು ಹಾಕಿ ಅದರ ಮೇಲೆ ಸ್ವಲ್ಪ ಬೆಲ್ಲವನ್ನು, ಸಗಣಿಯನ್ನು ಹಾಕಿ ಇದನ್ನು ಕೆಲ ತಿಂಗಳುಗಳು ಹಾಗೆಯೇ ಬಿಟ್ಟರೆ ಇದು ಗೊಬ್ಬರವಾಗಿ ಪರಿವರ್ತನೆಯಾಗಿರುತ್ತದೆ. ಹೀಗೆ ತಯಾರಾದ ಗೊಬ್ಬರವನ್ನು ಕೈತೋಟ ಮತ್ತು ಕೃಷಿಗೆ ಬಳಸಿಕೊಳ್ಳಬಹುದು.

ಇನ್ನು ನಾಡೆಪ್‍ ಕಾಂಪೋಸ್ಟ್ ತಯಾರಿಕೆ ಬಗ್ಗೆ ಹೇಳುವುದಾದರೆ,  ಈ ಮಾದರಿಯನ್ನು ಮೊದಲು ಕಂಡುಹಿಡಿದದ್ದು ಮಹಾರಾಷ್ಟ್ರದ ಎನ್.ಡಿ.ಪಾಂಡರಿ ಪಾಂಡೆಯವರು. ಈ ಮಾದರಿಯಲ್ಲಿ ಮೊದಲಿಗೆ 2ರಿಂದ 3 ಅಡಿಯ ಗುಂಡಿಯನ್ನು ತೆಗೆಯಬೇಕು. ಬಳಿಕ ಇಟ್ಟಿಗೆ ಮತ್ತು ಮಣ್ಣಿನ ಲೇಪವನ್ನು ಬಳಸಿ 6 ಅಡಿ ಉದ್ದ 4 ಅಡಿ ಅಗಲವಿರುವ ತೊಟ್ಟಿಯನ್ನು ನಿರ್ಮಿಸಬೇಕು. ತೊಟ್ಟಿಯನ್ನು ನಿರ್ಮಿಸುವಾಗ ಒಂದು ಇಟ್ಟಿಗೆಗೂ ಮತ್ತೊಂದು ಇಟ್ಟಿಗೆಗೂ ಕಿಟಕಿಯ ರೂಪದಲ್ಲಿ ಜಾಗವನ್ನು ಬಿಡಬೇಕು. ಹೀಗೆ ನಿರ್ಮಿಸಿದ ತೊಟ್ಟಿಯಲ್ಲಿ ಹಸಿ ಎಲೆ ಮತ್ತು ಒಣ ಎಲೆಗಳನ್ನು ಹರಡಬೇಕು. ಬಳಿಕ ಇದರ ಮೇಲೆ ಸಗಣಿ ನೀರನ್ನು ಸಿಂಪಡಿಸಬೇಕು. ನಂತರ ಅದರ ಮೇಲೆ ಮಣ್ಣನ್ನು ಹಾಕಿ ಪದರವನ್ನು ನಿರ್ಮಿಸಬೇಕು. ಬಳಿಕ ಸಗಣಿ, ಹಸಿಕಸವನ್ನು ಹಾಕಬೇಕು ಇದರ ಮೇಲೆ ಹಸಿ ಅಥವಾ ಒಣ ಎಲೆಗಳನ್ನು ಹಾಕಿ ಈ ತೊಟ್ಟಿಗೆ ನೇರವಾಗಿ ಸೂರ್ಯನ ಕಿರಣ ಬೀಳದಂತೆ ತೆಂಗಿನ ಸೋಗೆ ಅಥವಾ ಹುಲ್ಲನ್ನು ಹಾಕಿ ಗುಡಿಸಲಿನ ರೀತಿಯಲ್ಲಿ ಮೇಲ್ಛಾವಣಿ ನಿರ್ಮಿಸಿ ಸುಮಾರು 40 ರಿಂದ 50 ದಿನಗಳ ವರೆಗೆ ಹಾಗೆಯೇ ಬಿಡಬೇಕು. ಹೀಗೆ 40 ರಿಂದ 50 ದಿನಗಳು ಕಳೆದ ಬಳಿಕ ಇದನ್ನು ನೋಡಿದರೆ ಕೃಷಿಗೆ ಯೋಗ್ಯವಾದ ಉತ್ಕೃಷ್ಟ ಸಾವಯವಗೊಬ್ಬರ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಲಭ್ಯವಿರುತ್ತದೆ.

ಹಸಿ ತ್ಯಾಜ್ಯದಿಂದ ಕೇವಲ ರಸಭರಿತ ಗೊಬ್ಬರವನ್ನಷ್ಟೇ ಅಲ್ಲದೆ ಅನಿಲವನ್ನು ಸಹ ತಯಾರಿಸಬಹುದಾಗಿದೆ. ಹಸಿ ತ್ಯಾಜ್ಯ ಮತ್ತು ಸಗಣಿಯಿಂದ ಅನಿಲವನ್ನು ಪಡೆಯಬಹುದಾಗಿದೆ. ಗೋಬರ್ ಗ್ಯಾಸ್ ಸ್ಥಾವರ ಅಥವಾ ಮಿಥೇನೇಷನ್ ಪ್ಲಾಂಟ್ ನಿರ್ಮಿಸಿ ಇದರಲ್ಲಿ ನಿಯಮಿತವಾಗಿ ಸಗಣಿ ಮತ್ತು ಹಸಿ ಕಸವನ್ನು ಹಾಕುವುದರಿಂದ ಅನಿಲವನ್ನು ಉತ್ಪಾದಿಸಬಹುದಾಗಿದೆ. ಹೀಗೆ ಉತ್ಪಾದನೆಯಾದ ಜೈವಿಕ ಅನಿಲವನ್ನು ಅಡುಗೆ ಮಾಡಲು, ವಿದ್ಯುತ್ ಮತ್ತು ಇಂಧನವಾಗಿಯೂ ಬಳಸಿಕೊಳ್ಳಬಹುದಾಗಿದೆ.

ಹೀಗೆ ವಿವಿಧ ಮಾದರಿಗಳಲ್ಲಿ ಹಸಿ ಕಸವನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ತ್ಯಾಜ್ಯವೆಂದು ಬಿಸಾಡುವ ಹಸಿ ಕಸ ಸಮರ್ಪಕ ರೀತಿಯಲ್ಲಿ ವೈಜ್ಞಾನಿಕವಾಗಿ ಬಳಸಿಕೊಂಡರೆ ಇದು ಸಂಪನ್ಮೂಲವಾಗಿ ಬದುಕನ್ನು ಹಸನಾಗಿಸಲಿದೆ.

 7,480 total views,  1 views today

WhatsApp chat