ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಿರಂಗೂರು ಗ್ರಾಮ ಪಂಚಾಯಿತಿಯು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ನಾಡಿನ ಜೀವನದಿ ಕಾವೇರಿ ನದಿಯ ತಟದಲ್ಲಿರುವ ಕಿರಂಗೂರು ಗ್ರಾಮ ಪಂಚಾಯಿತಿಯು 7,653 ಜನಸಂಖ್ಯೆಯನ್ನು ಹೊಂದುವ ಮೂಲಕ ‘ಬಿ’ ವರ್ಗದ ಗ್ರಾಮ ಪಂಚಾಯಿತಿಯಾಗಿ ಹೊರಹೊಮ್ಮಿದೆ. ಸದಾ ಹಸಿರಿನಿಂದ ಕಂಗೊಳಿಸುವ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಬರೀ ಕಬ್ಬಿನ ಗದ್ದೆ, ಭತ್ತದ ಗದ್ದೆಗಳೇ ಕಾಣಸಿಗುತ್ತವೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೂ ಕೆರೆ, ಕಟ್ಟೆ, ಕೊಳಗಳಿಲ್ಲ ಎಂದುಕೊಂಡಿದ್ದವರಿಗೆ, ಅಚ್ಚರಿಯೆಂಬಂತೆ ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಯಾಣಿ ಇರುವುದು ಗಮನಕ್ಕೆ ಬಂದಿದೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ವಿಶ್ವ ವಿಖ್ಯಾತ ‘ಮೈಸೂರು ದಸರಾ' ಈ ಹಿಂದೆ ವಿಜಯನಗರ ಸಾಮ್ರಾಜ್ಯದ ಕೇಂದ್ರ ಸ್ಥಾನವಾದ ಹಂಪಿಯಲ್ಲಿ ನಡೆಯುತ್ತಿತ್ತು. ರಕ್ಕಸತಂಗಡಿ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನವಾದ ಕಾರಣ ‘ಹಂಪಿ ದಸರ' ಇಲ್ಲವಾಯಿತು. ಇದೇ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಮೈಸೂರಿನ ಅರಸರು ಶ್ರೀರಂಗಪಟ್ಟಣದಲ್ಲಿ ದಸರಾವನ್ನು ಆರಂಭಿಸಿದರು.
ಶ್ರೀರಂಗಪಟ್ಟಣದ ಈ ದಸರಾ ಆಚರಣೆ ಆರಂಭವಾದದ್ದು, ಇದೇ ಕಿರಂಗೂರಿನ ಬನ್ನೀಮಂಟಪದ ಬಳಿ ಇರುವ ಕಲ್ಯಾಣಿಯಿಂದಲೇ ಎಂಬುದು ವಿಶೇಷ. ಹಲವು ವರ್ಷಗಳಿಂದ ಈ ದಸರಾ ಆಚರಣೆಯನ್ನು ತಡೆಹಿಡಿಯಲಾಗಿತ್ತಾದರೂ, ಕಳೆದ ವರ್ಷ ಕೊರೋನಾ ಕಾರಣದಿಂದ ಸರಳವಾಗಿ ಆಚರಿಸುವ ಮೂಲಕ ಶ್ರೀರಂಗಪಟ್ಟಣದ ದಸರೆಗೆ ಮತ್ತೆ ಚಾಲನೆ ನೀಡಲಾಗಿದೆ. ಕಾಲದ ಹೊಡೆತಕ್ಕೆ ಸಿಲುಕಿ ನಶಿಸಿಹೋಗಿದ್ದ ಸುಮಾರು 400 ವರ್ಷಗಳಷ್ಟು ಪುರಾತನವಾದ ಈ ಕಲ್ಯಾಣಿಯು ಇದೀಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರ ಆಸಕ್ತಿಯಿಂದಾಗಿ ಮರುಜೀವ ಪಡೆದುಕೊಂಡಿದೆ.
ಮರಗಿಡಗಳ ಬೇರುಗಳು ಕಲ್ಯಾಣಿಯ ಒಳಹೊಕ್ಕಿದ್ದರಿಂದ ಕಲ್ಯಾಣಿ ಸಂಪೂರ್ಣ ಹಾಳಾಗುವ ಜೊತೆಗೆ ಇಲ್ಲೊಂದು ಕಲ್ಯಾಣಿ ಇದೆಯೆಂಬ ಗುರುತೂ ಇಲ್ಲದಂತಾಗಿತ್ತು. ಈ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದರಿಂದ ಕಲ್ಯಾಣಿಯ ಪುನರುಜ್ಜೀವನಕ್ಕೆ ಅಡ್ಡಿಯಾಗಿತ್ತು. ಈ ಐತಿಹಾಸಿಕ ಸ್ಥಳದಲ್ಲಿ ಅತ್ಯಂತ ಪುರಾತನ ಕಲ್ಯಾಣಿ ಇರುವ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದು ಆಸಕ್ತಿ ತೋರಿ ಖಾಸಗಿಯವರ ಸುಪರ್ದಿಯಲ್ಲಿದ್ದ ಈ ಕಲ್ಯಾಣಿಯನ್ನು ಮತ್ತೆ ಸರ್ಕಾರದ ಸುಪರ್ದಿಗೆ ಪಡೆದು, ಮೂಲ ರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ದಸರಾ ಆಚರಣೆಗೂ ಮುನ್ನವೇ ನರೇಗಾ ಯೋಜನೆಯಡಿ ಈ ಕಲ್ಯಾಣಿಯ ಜೀರ್ಣೋದ್ಧಾರ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಕಾಮಗಾರಿಯನ್ನು ಪೂರ್ಣಗೊಳಿಸಿ, ಈ ಕಲ್ಯಾಣಿಯಿಂದಲೇ ನೀರನ್ನು ತೆಗೆದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ನಂತರ ದಸರಾ ಆಚರಣೆಗೆ ಚಾಲನೆ ನೀಡಿದ್ದು ವಿಶೇಷ. ಇಷ್ಟು ದಿನಗಳು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಒಂದೂ ಕೆರೆ, ಕಟ್ಟೆ, ಕಲ್ಯಾಣಿಗಳಿಲ್ಲವೆಂದು ಹೇಳುತ್ತಿದ್ದ ಗ್ರಾಮಸ್ಥರೆಲ್ಲರೂ ಇದೀಗ ಈ ಕಲ್ಯಾಣಿ ಇರುವ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಶುದ್ಧವಾದ ನೀರನ್ನು ಕುಡಿಯುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಹತ್ತು ಹಲವು ನೀರಿನ ಮೂಲಗಳು ನಮ್ಮಲ್ಲಿದ್ದು, ಅವುಗಳನ್ನು ಗುರುತಿಸಿ ಉಳಿಸುವ ಕೆಲಸವಾಗಬೇಕಿದೆ.
6,841 total views, 2 views today