ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಪುರ ಗ್ರಾಮವು ಅರೆಮಲೆನಾಡು ಪ್ರದೇಶದಲ್ಲಿದೆ. ವರ್ಷದ ಮೂರು ತಿಂಗಳು ಮಳೆಗಾಲದಲ್ಲಿ ಎಡೆಬಿಡದೆ ಮಳೆ ಸುರಿಯುತ್ತದೆ. ಬೇಸಿಗೆಯಲ್ಲಿ ಉರಿ ಬಿಸಿಲಿನಿಂದ ಕೂಡಿರುವ ಈ ಗ್ರಾಮದಲ್ಲಿ ಒಟ್ಟು 380 ಜನಸಂಖ್ಯೆ ಇದ್ದು 120 ಕುಟುಂಬಗಳಿವೆ. ಈ ಗ್ರಾಮವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಿಂದ 17.ಕಿ.ಮೀ ದೂರದಲ್ಲಿದೆ. ಈ ಗ್ರಾಮಕ್ಕೆ ರಸ್ತೆ ಸಾರಿಗೆ ಸೌಲಭ್ಯ ಇದೆ.
ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಮೊದಲು ಇಲ್ಲಿನ ಜನರು ಕುಡಿಯುವ ನೀರಿಗಾಗಿ ಬಹಳ ಕಷ್ಟಪಡುತ್ತಿದ್ದರು. ದಿನ ಬಳಕೆಯ ನೀರನ್ನು ಕೆರೆಗಳಿಂದ ಮತ್ತು ತೆರೆದ ಬಾವಿಗಳಿಂದ ತರುತ್ತಿದ್ದರು. ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಯಿಂದ ನೀರು ತರಲು ಕ಼ಷ್ಟವಾಗುತಿತ್ತು. ಇನ್ನು ಬೇಸಿಗೆಯಲ್ಲಿ ತೆರೆದ ಬಾವಿಗಳು ಬತ್ತಿಹೋಗುತ್ತಿದ್ದವು. ಜಾನುವಾರುಗಳಿಗೆ ನೀರು ಒದಗಿಸುವುದು ಸಹ ಕಷ್ಟಕರವಾಗಿತ್ತು. ದೂರದ ಕೆರೆ ಕಟ್ಟೆಗಳ ಮೇಲೆ ಅವಲಂಬಿತರಾಗಿದ್ದರು. ಕುಡಿಯುವ ಮತ್ತು ದಿನ ಬಳಕೆ ನೀರಿಗಾಗಿ ಬಹಳ ದೂರ ಕ್ರಮಿಸಬೇಕಿತ್ತು.
“ಊರಿನ ಜಮೀನ್ದಾರರ ಜಮೀನಿನಲ್ಲಿ ಇರುವ ಬೋರ್ ನಲ್ಲಿ ನೀರು ಕೇಳಿಕೊಂಡು ತರಬೇಕಿತ್ತು. ಕೆಲವು ಸಂದರ್ಭದಲ್ಲಿ ಅವರು ನೀರು ಕೊಡದಿದ್ದಾಗ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗುತಿತ್ತು. ದೂರದ ಖಾಸಗಿ ಬೋರ್‌ವೆಲ್‌ಗಳ ಮೇಲೆ ಅವಲಂಬಿತರಾಗಿದ್ದೆವು. ಕೆಲವೊಂದು ಸಲ ಕುಡಿಯುವ ನೀರಿಗಾಗಿ ಜಮೀನು ಮಾಲೀಕರಿಂದ ಬೈಗುಳ ಕೇಳಿದ್ದು ಸಹಾ ಇದೆ” ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
“ನಂತರದ ದಿನಗಳಲ್ಲಿ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ 15 ರಿಂದ 20 ಮನೆಗಳಿಗೆ ಬೀದಿ ನಲ್ಲಿಗಳನ್ನು ಹಾಕಲಾಯಿತು, ಆದರೆ ದಿನದ 24 ಗಂಟೆ ನೀರು ಬರುತ್ತಿರಲಿಲ್ಲ. ನೀರು ಬಿಟ್ಟ ಸಂದರ್ಭದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು ಸರದಿ ಸಾಲಿನಲ್ಲಿ ನಿಂತು ನೀರು ಶೇಖರಣೆ ಮಾಡಬೇಕಿತ್ತು” ಎಂದು ಸುಶೀಲಬಾಯಿ ಮಂಜುನಾಥ್ ಕಷ್ಟದ ದಿನಗಳನ್ನು ನೆನೆಯುತ್ತಾರೆ.
ಸುಶೀಲಬಾಯಿ ಮಂಜುನಾಥ್ ಅವರ ಮನೆಯಲ್ಲಿ ಮೂರು ಮಕ್ಕಳೊಂದಿಗೆ ಒಟ್ಟು 5 ಜನ ವಾಸವಿದ್ದಾರೆ. ಒಂದು ದಿನಕ್ಕೆ ಸುಮಾರು 12 ರಿಂದ 15 ಕೊಡ ನೀರು ಬೇಕಾಗಿರುತ್ತದೆ. ಚಿಕ್ಕ ಮಗು ಇರುವುದರಿಂದ ನೀರು ಸಂಗ್ರಹಣೆ ತುಂಬಾ ಕಷ್ಟದ ಕೆಲಸವಾಗಿತ್ತು. ಉಳಿದ ಮಕ್ಕಳನ್ನು ಶಾಲೆಗೆ ಸರಿಯಾದ ಸಮಯಕ್ಕೆ ಕಳುಹಿಸುವುದು ಸಹ ಕಷ್ಟಕರವಾಗಿತ್ತು. ಇನ್ನುಳಿದಂತೆ ತೋಟದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಡುಗೆ ಮಾಡಲು ಅವರಿಗೆ ತೊಂದರೆಯಾಗುತ್ತಿತ್ತು.
“ಪ್ರಸ್ತುತ ಜಲ ಜೀವನ್ ಮಿಷನ್ ಯೋಜನೆ ಜಾರಿಯಾದ ಮೇಲೆ ಮನೆಗೆ ನೇರವಾಗಿ ಕಾರ್ಯಾತ್ಮಕ ನಳ ಸಂಪರ್ಕ ಸಿಕ್ಕಿದೆ. ದಿನಕ್ಕೆ ಪ್ರತಿಯೊಬ್ಬರಿಗೆ 55 ಲೀಟರ್ ಶುದ್ದ ಕುಡಿಯುವ ನೀರಿನ ಸೌಲಭ್ಯ ತಲುಪಿದೆ. ಈ ಯೋಜನೆಯ ಬಗ್ಗೆ ಸ್ವಯಂ ಸೇವಾ ಸಂಸ್ಥೆಯವರು ಗ್ರಾಮ ಸಭೆಯಲ್ಲಿ ನೀಡಿದ ಮಾಹಿತಿಯನ್ನು ಪಡೆದಿರುತ್ತೇನೆ ಹಾಗೂ ಈ ಯೋಜನೆಯಲ್ಲಿ ನಮ್ಮ ಕುಟುಂಬವು ಸಹ ಭಾಗವಹಿಸಿ ಶೇ.10% ವಂತಿಕೆಯನ್ನು ಗ್ರಾಮ ಪಂಚಾಯಿತಿಗೆ ಕಟ್ಟಿ ಯೋಜನೆಯಲ್ಲಿ ಪಾಲುದಾರರಾಗಿರುತ್ತೇವೆ. ಇನ್ನು ಮುಂದೆ ನೀರನ್ನು ಪೋಲು ಮಾಡದಂತೆ ಎಚ್ಚರವಹಿಸಿ ವಾರ್ಷಿಕ ನೀರಿನ ಕರವನ್ನು ಕಟ್ಟಲು ಬದ್ದಳಾಗಿರುತ್ತೇನೆ ಹಾಗೂ ಅಕ್ಕಪಕ್ಕದ ಮನೆಯವರಿಗೂ ನೀರನ್ನು ಪೋಲು ಮಾಡದಂತೆ ಮತ್ತು ನೀರಿನ ಕರವನ್ನು ಕಟ್ಟುವಂತೆ ಅರಿವು ಮೂಡಿಸುತ್ತೇನೆ” ಎಂದು ಸುಶೀಲಬಾಯ್ ಮಂಜುನಾಥರವರು ಸಂತಸದಿಂದ ಮಾತನಾಡುತ್ತಾರೆ.
ಒಟ್ಟಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಿಂದ ಊರಿನವರ ನೀರಿಗಾಗಿನ ಅಲೆದಾಟ ತಪ್ಪಿದೆ. ಇದರಿಂದ ಗ್ರಾಮದ ಮಹಿಳೆಯರ ಕಷ್ಟಗಳು ಕಡಿಮೆಯಾಗಿ ಸಂತಸ ಹೆಚ್ಚಿದೆ. ಜಲ ಜೀವನ್ ಮಿಷನ್ ಯೋಜನೆಯು ಗ್ರಾಮಸ್ಥರ ನೆಮ್ಮದಿಗೆ ಕಾರಣವಾಗಿದೆ.
3,016 total views, 2 views today