ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಸೂಚಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೂ ಸಹ ನಿರಂತರವಾಗಿ ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಉನ್ನತ ಮಟ್ಟದಲ್ಲಿ ಈ ಬಗ್ಗೆ ನಿರಂತರವಾಗಿ ನಿಗಾವಣೆ ಇಡಲಾಗುತ್ತಿದೆ. ಈ ಮಹತ್ತರ ಕಾರ್ಯದಲ್ಲಿ ರಾಜ್ಯ ಸರ್ಕಾರದ ಇತರೆ ಇಲಾಖೆಗಳಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯೂ ಸಹ ತನ್ನ ಕೈಜೋಡಿಸಿದೆ.
ನಿರಂತರವಾಗಿ ವೈಯಕ್ತಿಕ ಸ್ವಚ್ಛತೆ ಹಾಗೂ ಸಾಮಾಜಿಕ/ದೈಹಿಕ ಅಂತರ ಕಾಪಾಡಿಕೊಳ್ಳುವಂತಹ ಅಂಶಗಳಿಗೆ ಮೊದಲ ಆದ್ಯತೆ ನೀಡುವುದರ ಮೂಲಕ ಈ ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ಸಮುದಾಯದಲ್ಲಿ ಹರಡುವಿಕೆಯನ್ನೂ ಸಹ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ವೈದ್ಯಕೀಯ ಪರಿಣಿತರು ಹಾಗೂ ಸಂಶೋಧಕರ ಅಭಿಪ್ರಾಯವಾಗಿದೆ. ಹಾಗಾಗಿ ಸ್ಥಳೀಯ ಸಮುದಾಯಗಳು ಮತ್ತು ಸಂಘ-ಸಂಸ್ಥೆಗಳಲ್ಲಿ ಈ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.
ನಮ್ಮ ರಾಜ್ಯದಲ್ಲಿ ಗ್ರಾಮೀಣ ವಲಯವು ಹೆಚ್ಚಾಗಿರುವುದರಿಂದ ವಿಶೇಷವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ವೈರಸ್ ಹರಡುವಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಅದರ ನಿಯಂತ್ರಣ ಮಾಡುವುದು ಅತಿ ಮುಖ್ಯಕಾರ್ಯವಾಗಿದೆ. ಈಗಾಗಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಈ ವೈರಸ್ ಹರಡುವಿಕೆಯ ಬಗ್ಗೆ ವಿವಿಧ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ನಂತರ ಇದರ ನಿಯಂತ್ರಣ ಹಾಗೂ ಇದರ ಸ್ಥಿತಿ-ಗತಿಗಳ ಮೇಲೆ ನಿಗಾವಣೆ ಇಡುವ ಕಾರ್ಯವನ್ನು ಪ್ರತಿಯೊಂದು ಜಿಲ್ಲೆಯಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ 6021 ಗ್ರಾಮ ಪಂಚಾಯಿತಿಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಗ್ರಾಮೀಣ ಕಾರ್ಯಪಡೆಗಳನ್ನು ರಚಿಸಿ, ಅವರುಗಳಿಗೆ ಅವಶ್ಯಕವಾದ ಎಲ್ಲ ಪ್ರಾಥಮಿಕ ತರಬೇತಿಗಳನ್ನು ಸಹ ನೀಡಲಾಗಿದೆ. ಇವರು ರಾಜ್ಯದಲ್ಲಿ ಸುರಕ್ಷತೆ ಹಾಗೂ ಸ್ಪಂದಿಸುವಿಕೆಗೆ ಸಂಬಂಧಿಸಿದಂತೆ ಮೊದಲ ಸಾಲಿನಲ್ಲಿ ನಿಲ್ಲುವ ಸೇನಾನಿಗಳಾಗಿ ಕಾರ್ಯನಿರ್ವಹಿಸಲು ಶಕ್ತರಾಗಿದ್ದಾರೆ. ಈ ವಿಶೇಷ ಗ್ರಾಮೀಣ ಕಾರ್ಯಪಡೆಗಳು ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಆಯಾ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಲೆಕ್ಕಿಗ, ಗ್ರಾಮದ ಬೀಟ್ ಪೊಲೀಸ್, ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನೊಂದಾಯಿಸಲ್ಪಟ್ಟ ಸ್ಥಳೀಯ ವೈದ್ಯರುಗಳನ್ನು ಒಳಗೊಂಡಂತೆ ಈ ಕಾರ್ಯಪಡೆಯನ್ನು ರಚಿಸಲಾಗಿದೆ. ಸದರಿ ಕಾರ್ಯಪಡೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಕಾರ್ಯದರ್ಶಿಯಾಗಿರುತ್ತಾರೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಪಡೆಗಳು ಈಗಾಗಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ ಈ ಕಾರ್ಯಪಡೆಗಳ ಕೆಲಸಗಳನ್ನು ರಾಜ್ಯಮಟ್ಟದಲ್ಲಿ ಇಲಾಖೆಯು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.
ಈ ಕರೋನಾ ವೈರಸ್ ಹರಡುವಿಕೆಯ ವೇಗವನ್ನು ಗರಿಷ್ಠ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಗ್ಗಿಸುವ ದೃಷ್ಟಿಯಿಂದ ಪ್ರಸ್ತುತ ರಾಜ್ಯದ ಎಲ್ಲಾ ಗ್ರಾಮಗಳಲ್ಲಿಯೂ ಕಾರ್ಯಪಡೆಗಳನ್ನು ರಚಿಸಿ ಕಾರ್ಯೋನ್ಮುಖಗೊಳಿಸಲಾಗಿದೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಪರಿಪೂರ್ಣವಾದ ಕ್ಷಮತೆಯನ್ನು ಹೊಂದಿದೆ. ಆನ್‌ಲೈನ್ ಮೂಲಕವು ಸಹ ಈ ಪಡೆಗಳಿಗೆ ಸಮುದಾಯ ಹಾಗೂ ಜನರಲ್ಲಿ ಅರಿವು ಮೂಡಿಸಲು ಅಗತ್ಯ ತರಬೇತಿಗಳನ್ನು ನೀಡಲಾಗಿದೆ.
ಈ ಗ್ರಾಮೀಣ ಕಾರ್ಯಪಡೆಗಳು ನಿರ್ವಹಿಸುವ ಜವಾಬ್ದಾರಿಗಳು:-
- ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯು ಹೊರಡಿಸಲಾದ ಪ್ರತಿ ಕಾರ್ಯಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸುವುದು.
- ಗ್ರಾಮಗಳ ಕೆಲ ಆಯಕಟ್ಟಿನ ಸ್ಥಳಗಳಾದ ಬಾವಿಕಟ್ಟೆ, ಕೆರೆ, ಹೊಂಡ, ನದಿ ಮುಂತಾದ ಸ್ಥಳಗಳಲ್ಲಿ ಹೆಚ್ಚಿನ ಜನ ಸಂದಣಿ ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು.
- ಗ್ರಾಮಗಳಲ್ಲಿ ಯಾವುದಾದರೂ ಸಭೆ ಸಮಾರಂಭಗಳಿದ್ದಲ್ಲಿ ಜನರ ಮಧ್ಯೆ ಪರಸ್ಪರ ಮೂರು ಅಡಿಗಳಷ್ಟು(1 ಮೀಟರ್) ಅಂತರವಿರುವುದನ್ನು ಖಾತರಿಪಡಿಸಿಕೊಳ್ಳುವುದು.
- ಗ್ರಾಮಗಳೊಳಗೆ ಯಾವುದೇ ರೀತಿಯ ಸುಳ್ಳು ಸುದ್ದಿಗಳು ಹರಡದಂತೆ ನೋಡಿಕೊಳ್ಳುವುದು.
- 65 ವರ್ಷ ಮೇಲ್ಪಟ್ಟ ಹಿರಿಯರ ಆರೋಗ್ಯದೆಡೆ ಸರಿಯಾದ ಗಮನ ನೀಡುವುದು. ಈ ಬಗ್ಗೆ ಕುಟುಂಬಸ್ಥರಿಗೆ ಸೂಕ್ತ ಮಾಹಿತಿ ನೀಡುವುದು.
- ನರೇಗಾ ದಿನಗೂಲಿ ನೌಕರರಲ್ಲಿ ವೈರಸ್ ಹರಡುವುಕೆಯ ಬಗ್ಗೆ ತಿಳಿ ಹೇಳಿ ಅವರಲ್ಲಿ ಅರಿವು ಮೂಡಿಸಿ ನರೇಗಾ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನ ಮಾಡುವುದು
- ತುರ್ತು ಪರಿಸ್ಥಿತಿಗಳಲ್ಲಿ ಗರ್ಭಿಣಿಯರ, ಬಾಣಂತಿಯರ ಹಾಗೂ ಮಕ್ಕಳ ಆರೋಗ್ಯಕ್ಕೆ ಸಂಬAಧಿಸಿದAತೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಸೌಲಭ್ಯ ಒದಗಿಸಲು ಸಹಕರಿಸುವುದು.
- ಹೊರಗಿನಿಂದ ಗ್ರಾಮಕ್ಕೆ ಬರುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೊಳಪಡಿಸಿ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸುವುದು.
- ನಿತ್ಯ ಆರೋಗ್ಯ ಇಲಾಖೆ ಹಾಗೂ ಗ್ರಾಮದ ವ್ಯಾಪ್ತಿಯಲ್ಲಿರುವ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿಯನ್ನು ಒಪ್ಪಿಸುವುದು.
- ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸ್ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.
- ಈ ಕಾರ್ಯಪಡೆಯು 14 ನೇ ಹಣಕಾಸು ಆಯೊಗದ ಹಣವನ್ನು ಮಾಸ್ಕುಗಳು, ಸ್ಯಾನಿಟೈಸರ್‌ಗಳು, ಸಾಬೂನು ಹಾಗೂ ಅವಶ್ಯಕವಾದ ರಾಸಾಯನಿಕಗಳನ್ನು ಕೊಳ್ಳಲು ಬಳಸಲು ಅವಕಾಶವಿದೆ. ಶಾಲಾ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ತಲುಪುವಂತೆ ಪಡಿತರ ವಸ್ತುಗಳನ್ನು ಮನೆ ಮನೆಗಳಿಗೆ ನೇರವಾಗಿ ತಲುಪಿಸುವುದು.
ಈ ಮೇಲಿನ ಕ್ರಮಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದ್ದು ರಾಜ್ಯದಲ್ಲಿ ಇತರೆ ಜಿಲ್ಲೆಗಳು ನಮೂದಿಸಿರುವಂತೆ ಇಲ್ಲಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳು ಕಂಡು ಬಂದಿರುವುದನ್ನು ಕಾಣಬಹುದಾಗಿದೆ. ಆಯ್ಕೆಗೊಂಡ ಎಲ್ಲ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಎಲ್ಲ ಅಧಿಕಾರಿಗಳ ಸಹಕಾರ ಹಾಗೂ ಸಹಯೋಗದೊಂದಿಗೆ ಎಲ್ಲ ಗ್ರಾಮ ಪಂಚಾಯಿತಿಗಳು ಸ್ಥಳೀಯವಾಗಿ ಸುಸ್ಥಿರ, ಆರೋಗ್ಯಕರ ಪರಿಸ್ಥಿತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಭೂತಪೂರ್ವವಾದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದರೆ ತಪ್ಪಾಗಲಾರದು.
7,653 total views, 3 views today