Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಕುಟುಂಬದೊಳಗೆ ಕೊನೆಯಿಲ್ಲದಷ್ಟು ಕರ್ತವ್ಯಗಳನ್ನು ನಿರ್ವಹಿಸುವ ಮಹಿಳೆಯರು ತಮ್ಮ ಸಾಮರ್ಥ್ಯ ಅಷ್ಟಕ್ಕೇ ಸೀಮಿತವಲ್ಲ ಎಂಬುದನ್ನು ಕಾಲ ಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಪರಕೀಯರ ದಾಳಿಯ ಸಂದರ್ಭದಲ್ಲಿ ಸ್ವತಃ ಖಡ್ಗ ಹಿಡಿದು ಹೋರಾಡಿದ ವೀರ ವನಿತೆಯರು ಇತಿಹಾಸದ ಪುಟ ಸೇರಿದ್ದಾರೆ. ಮಹಿಳೆಯರು ಮೃದು, ಮಧುರ, ಹೆಣ್ಣು ಅಬಲೆ, ಕೋಮಲೆ. ಮಹಿಳೆ ಏನಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮನೆಗೆ ಸೀಮಿತ ಎಂದು ಅಪೇಕ್ಷಿಸಲ್ಪಟ್ಟಿದ್ದರೂ ಸಹ ಮಹಿಳೆಯ ಆಂತರ್ಯದ ಸಂಕಲ್ಪ ಶಕ್ತಿ ದೃಢವಾಗಿರುತ್ತದೆ. ಮಹಿಳೆ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ, ಸಹೋದರಿಯಾಗಿ ಅಷ್ಟೇ ಯಾಕೆ ಸಹೋದ್ಯೋಗಿಯಾಗಿಯೂ ಎಲ್ಲಾ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಸಾಮರ್ಥ್ಯಉಳ್ಳವಳಾಗಿದ್ದಾಳೆ. ಇತ್ತೀಚಿನ ದಿನಗಳಲ್ಲಂತೂ ತಳಮಟ್ಟದ ಉದ್ಯೋಗದಿಂದ ಹಿಡಿದು ದೇಶದ ಅತ್ಯುನ್ನತ ಸ್ಥಾನ ರಾಷ್ಟ್ರಪತಿ ಸ್ಥಾನವನ್ನೂ ಅಲಂಕರಿಸುವ ಮೂಲಕ ಎಲ್ಲಾ ಜವಾಬ್ದಾರಿಗಳನ್ನು ಪುರುಷನಿಗೆ ಸರಿಸಮನಾಗಿ ನಿಭಾಯಿಸಬಲ್ಲೆ ಎಂಬುದನ್ನು ಆಗಿಂದಾಗ್ಗೆ ಸಾಬೀತು ಪಡಿಸುತ್ತಲೇ ಇದ್ದಾಳೆ. ಇದಿಷ್ಟೇ ಯಾಕೆ ಪ್ರತಿದಿನ ನಮ್ಮ ಮನೆಗಳಲ್ಲಿಯೇ ತಂದೆಯ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ನಮ್ಮ ತಾಯಂದಿರೇ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.

ನಾವೀಗ ಹೇಳಹೊರಟಿರೋದು ಸಹ ಸಾಮಾನ್ಯರಂತಿರುವ ಅಸಾಮಾನ್ಯ ಮಹಿಳೆಯೊಬ್ಬರ ಬಗ್ಗೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ, ಚಿಕ್ಕಕುರವತ್ತಿ ಗ್ರಾಮ ಪಂಚಾಯಿತಿ ವ್ಯಾಪಿಗೆ ಸೇರಿದ ಚೌಡಯ್ಯದಾಸನಪುರದಲ್ಲಿ ಮಹಿಳೆಯೊಬ್ಬರು ನೀರುಗಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕೆಯ ಹೆಸರು ಪುಷ್ಪಾವತಿ ಸೋಮಪ್ಪ ಹೊನ್ನತ್ತಿ ಅಂತ. 2000ನೇ ಇಸವಿಯಲ್ಲಿ ಈಕೆಯ ಪತಿ ಸೋಮಪ್ಪ ಹೊನ್ನತ್ತಿ ನೀರುಗಂಟಿ ಕೆಲಸಕ್ಕೆ ಸೇರಿದ್ರು. ಬಳಿಕ 2007ರಲ್ಲಿ ತಮ್ಮದೇ ಗ್ರಾಮದ ಪುಷ್ಪಾವತಿ ಎಂಬಾಕೆಯನ್ನು ವರಿಸಿದ್ರು. ಮದುವೆಯಾದ ಮೂರು ವರ್ಷಗಳ ಬಳಿಕ ಗ್ರಾಮದಲ್ಲಿನ ಬೀದಿ ದೀಪವನ್ನು ಸರಿಪಡಿಸಲು ಹೋದ ಸೋಮಪ್ಪ ಲೈಟ್ ಕಂಬದಿಂದ ಬಿದ್ದ ಕಾರಣ ಸಂಪೂರ್ಣ ಸ್ವಾಧೀನ ಕಳೆದುಕೊಂಡರು. ಅಷ್ಟರಲ್ಲಾಗಲೇ ಈ ದಂಪತಿಗೆ 10 ತಿಂಗಳ ಗಂಡುಮಗುವಿದ್ದ ಕಾರಣ, ಕುಟುಂಬದ ಆಧಾರಸ್ತಂಭವಾಗಿದ್ದ ಸೋಮಪ್ಪನಿಗೆ ಹೀಗಾಗಿದ್ದು ಇಡೀ ಕುಟುಂಬವನ್ನು ಕತ್ತಲಿಗೆ ದೂಡಿದಂತಾಗಿತ್ತು.

ಆದರೂ ಧೃತಿಗೆಡದ ಪುಷ್ಪಾವತಿ ತನ್ನ ಗಂಡನನ್ನು ಆರೈಕೆ ಮಾಡಿ ಉಳಿಸಿಕೊಂಡರು. ಜೀವವೇನೋ ಉಳಿಯಿತು ಆದರೂ ತನ್ನ ಪತಿ ಮೊದಲಿನಂತಾಗಲಿಲ್ಲ ಎಂಬ ಕೊರಗು ಆಕೆಯನ್ನು ಕಾಡತೊಡಗಿತು. ಇದರ ಮಧ್ಯೆಯೇ ಮನೆಯ ಆರ್ಥಿಕ ಪರಿಸ್ಥಿತಿಯೂ ತೀರಾ ಹದಗೆಡಲಾರಂಭಿಸಿತು. ಇಷ್ಟರಲ್ಲಾಗಲೇ ಗ್ರಾಮ ಪಂಚಾಯಿತಿಯವರು ನೀರುಗಂಟಿ ಕೆಲಸಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬಂದಿದ್ದರು. ಈ ವಿಷಯವನ್ನು ತಿಳಿದ ಪುಷ್ಪಾವತಿ ಗ್ರಾಮ ಪಂಚಾಯಿತಿಗೆ ಹೋಗಿ ನೀರುಗಂಟಿ ಕೆಲಸವನ್ನು ತನ್ನ ಗಂಡನಿಗೇ ನೀಡುವಂತೆ ಮನವಿ ಮಾಡಿಕೊಂಡ ಪರಿಣಾಮ, ನೀರುಗಂಟಿ ಕೆಲಸ ಇವರಿಗೇ ಉಳಿಯಿತು. ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ತನ್ನ ಗಂಡನನ್ನು ವೀಲ್‌ಚೇರ್‌ನಲ್ಲಿ ಕೂರಿಸಿಕೊಂಡು ಈಕೆಯೂ ನೀರುಗಂಟಿ ಕೆಲಸ ಆರಂಭಿಸಿದರು. ಈಕೆಯ ಬಾವ(ಗಂಡನ ಅಣ್ಣ) ಪಕ್ಕದ ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದರಿಂದ ಅವರ ಸಹಾಯ ಪಡೆದು ಪುಷ್ಪಾವತಿ ತಮ್ಮ ಗ್ರಾಮದಲ್ಲಿನ ನೀರುಗಂಟಿ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲಾರಂಭಿಸಿದರು. ಹೀಗೆ ಕುಂಟುತ್ತಾ ಜೀವನ ನಡೆಯುತ್ತಿರುವಾಗಲೇ 2019ರಲ್ಲಿ ಪುಷ್ಪಾವತಿ ಗಂಡ ಸೋಮಪ್ಪ ಕೊನೆಯುಸಿರೆಳೆದರು. ಅಷ್ಟರಲ್ಲಾಗಲೇ ನೀರುಗಂಟಿ ಕೆಲಸವನ್ನು ಕರಗತ ಮಾಡಿಕೊಂಡಿದ್ದ ಪುಷ್ಟ ಗ್ರಾಮ ಪಂಚಾಯಿತಿಯವರ ಬಳಿ ಮನವಿ ಮಾಡಿ ನೀರುಗಂಟಿ ಕೆಲಸವನ್ನು ತನಗೇ ಕೊಡುವಂತೆ ಮನವಿ ಮಾಡಿಕೊಂಡ ಪರಿಣಾಮ ನೀರುಗಂಟಿ ಕೆಲಸವನ್ನು ಈಕೆಗೇ ನೀಡಲಾಯಿತು. ಕಳೆದ ಆರೇಳು ವರ್ಷಗಳಿಂದ ಬೇಗ ಎದ್ದು ಗ್ರಾಮದ ಓಣಿಗಳಿಗೆ ನಿಗದಿತ ಅವಧಿಗಳಲ್ಲಿ ನೀರನ್ನು ಬಿಡುವ ಜೊತೆಗೆ ಗ್ರಾಮದಲ್ಲಿರುವ Over Head Tank ಗೆ ಕೂಡ ಕರೆಂಟ್ ಇದ್ದ ಸಮಯವನ್ನು ನೋಡಿಕೊಂಡು ನೀರು ತುಂಬಿಸುತ್ತಾರೆ. ನೀರು ಸರಬರಾಜಿನ ಜೊತೆಗೆ ಗ್ರಾಮ ಪಂಚಾಯಿತಿಯಿಂದ ಆಗಿಂದಾಗ್ಗೆ ವಹಿಸಲಾಗುವ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ಮಾಡಿಕೊಂಡು ಬರುತ್ತಿರುವ ಪುಷ್ಪಾವತಿ “ಇದೇನು ನನಗೆ ಕಷ್ಟದ ಕೆಲಸ ಅಲ್ಲ. ನನ್ನ ಗಂಡನಿದ್ದಾಗ ಅವರ ಜೊತೆ 11 ವರ್ಷ ಇದೇ ಕೆಲಸ ಮಾಡಿದ್ದೇನೆ. ನಾನು ಈ ಕೆಲಸದಲ್ಲಿದ್ದುಕೊಂಡು ಸಾಕಷ್ಟು ಕಲಿತಿದ್ದೇನೆ ಎನ್ನುತ್ತಾರೆ”.

ಇದೀಗ ದೇಶಾದ್ಯಂತ ಜಲ ಜೀವನ್ ಮಿಷನ್ ಯೋಜನೆ ಜಾರಿಯಲ್ಲಿದ್ದು ಈ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುವ ಕೌಶಲ್ಯ ತರಬೇತಿಯಲ್ಲೂ ಭಾಗಿಯಾಗಿರುವ ಪುಷ್ಪಾವತಿ ನೀರಿನ ಗುಣಮಟ್ಟದ ಪರೀಕ್ಷೆ ಸೇರಿದಂತೆ ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸುವುದು. ಸಮುದಾಯ ವಂತಿಗೆ ಸಂಗ್ರಹಿಸುವಲ್ಲಿ ಸಹಕರಿಸುವುದು ಹೀಗೆ ಹಲವು ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇವರಿಗೆ ನಮ್ಮದೊಂದು ಸಲಾಂ.

 4,858 total views,  2 views today

WhatsApp chat