ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಹಲವಾರು ಪ್ರಾಕೃತಿಕ ಸಂಪನ್ಮೂಲಗಳ ತವರೂರು. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಆಗಿದೆ. ನಗರೀಕರಣ, ಕೈಗಾರೀಕರಣ ಮುಂತಾದ ಕಾರಣಗಳಿಂದ ಕೆರೆ, ಕಟ್ಟೆ, ಕಿರು ಜಲಮೂಲಗಳು ನಶಿಸಿ ಹೋಗುತ್ತಿವೆ. ಇದನ್ನು ಮನಗಂಡ ಜಿಲ್ಲಾ ಪಂಚಾಯತ್ ಚಾಮರಾಜನಗರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಜೆ.ಜೆ.ಎಮ್ ಮತ್ತು ಎಸ್.ಬಿ.ಎಮ್(ಜಿ) ಯೋಜನೆಯ ಐ.ಇ.ಸಿ ಹಾಗೂ ಹೆಚ್.ಆರ್.ಡಿ ಕಾರ್ಯಕ್ರಮಗಳಡಿಯಲ್ಲಿ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿಯ ಕೂಮಾರನಪುರದ ಪುರಾತನ ಗವಿರಂಗಯ್ಯನ ಕಟ್ಟೆಯನ್ನು ಪುನಶ್ಚೇತನ ಮಾಡಿದೆ.
ವಡಗೆರೆ ಮತ್ತು ಕೂಮಾರನಪುರದ ರಸ್ತೆಯ ಮಧ್ಯಭಾಗದಲ್ಲಿರುವ ಈ ಕಟ್ಟೆಗೆ ಸುಮಾರು 90 ವರ್ಷದ ಇತಿಹಾಸವಿದೆ. ಸುಮಾರು 1.16 ಗುಂಟೆ ವಿಸ್ತೀರ್ಣ ಜಾಗದಲ್ಲಿರುವ ಕಟ್ಟೆಯು ಮಡಿವಾಳರು ಬಟ್ಟೆಗಳನ್ನು ಮಡಿ ಮಾಡಲು, ದನಕರುಗಳಿಗೆ ನೀರುಣಿಸಲು ಬಳಕೆಯಾಗುತ್ತಿತ್ತು. ಕಾಲ್ನಡಿಗೆಯಲ್ಲಿ ಹೋಗುವ ದಾರಿಹೋಕರಿಗೆ ವಿಶ್ರಾಂತಿ ತಾಣವು ಕೂಡ ಆಗಿತ್ತು. ವಡಗೆರೆ ಗ್ರಾಮಸ್ಥರು ಈ ಕಟ್ಟೆಯ ಹತ್ತಿರ ಊರಿನ ವಿಶೇಷ ಸಂದರ್ಭದಲ್ಲಿ ಅನ್ನ ಸಂತರ್ಪಣೆ ಮಾಡುತ್ತಿದ್ದರು.
ಹಿಂದಿನ ಪರಿಸ್ಥಿತಿ :
ಕಾಲಾನಂತರ ಬಳಕೆಯಿಲ್ಲದೆ ಸುಮಾರು 15 ವರ್ಷಗಳಿಂದ ಹಾಳುಬಿದ್ದಿತ್ತು. ಸುತ್ತಮುತ್ತ ಗಿಡಗಂಟೆಗಳು ಬೆಳೆದು ದಾರಿ ಹೋಕರಿಗೆ ಇಲ್ಲಿ ಕಟ್ಟೆ ಇದೆ ಎಂಬುದು ತಿಳಿಯುತ್ತಿರಲಿಲ್ಲ. ಜಾನುವಾರುಗಳಿಗೂ ನೀರು ಉಣಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಟ್ಟೆ ಸುತ್ತಲೂ ತ್ಯಾಜ್ಯವನ್ನು ಬಿಸಾಡುತ್ತಿದ್ದರಿಂದ ಕಟ್ಟೆಯಲ್ಲಿದ್ದ ಅಲ್ಪ ನೀರು ಸಹ ಮಾಲಿನ್ಯಗೊಂಡಿತ್ತು.
ಗ್ರಾಮ ಪಂಚಾಯಿತಿಯವರು ಜೆ.ಜೆ.ಎಂ ಯೋಜನೆಯಡಿ ಕೆರೆಯನ್ನು ಪುನಶ್ಚೇತನ ಮಾಡಬೇಕೆಂದು ಯಳಂದೂರು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿ ಅನುಮತಿ ಪಡೆದು ನಂತರ ಗುಂಬಳ್ಳಿ ಗ್ರಾಮ ಪಂಚಾಯಿತಿಯ ಮೂಲಕ ಪುನಶ್ಚೇತನ ಕಾರ್ಯ ಆರಂಭಿಸಿದರು.
ಈಗಿನ ಪರಿಸ್ಥಿತಿ :
ಮೊದಲು ಕಟ್ಟೆಯ ಸುತ್ತಲೂ ಇರುವ ಗಿಡಗಂಟೆಗಳು, ಜಲಸಸ್ಯಗಳು ಹಾಗೂ ಮುಳ್ಳಿನ ಗಿಡಗಳನ್ನು ತೆಗೆಯಲಾಯಿತು. ಕಟ್ಟೆಯ ಸುತ್ತಲೂ ಜನರು ನಡೆದಾಡಲು ಅನುಕೂಲವಾಗುವಂತೆ ಕಪ್ಪು ಮಣ್ಣು ಇರುವ ಕಡೆ ಗಾವೇಲ್ ಮಣ್ಣು ಹರಡುವ ಮೂಲಕ ನೆಲ ಸಮತಟ್ಟು ಮಾಡಿ ಗ್ರಾಮಸ್ಥರಿಗೆ, ದಾರಿಹೋಕರಿಗೆ ನಡೆದಾಡಲು ಅನುಕೂಲ ಮಾಡಲಾಯಿತು. ದನಕರುಗಳಿಗೆ ನೀರುಣಿಸಲು ಅನುಕೂಲವಾಗುವಂತೆ ಕಟ್ಟೆ ನೀರನ್ನು ಸ್ವಚ್ಛ ಮಾಡಿ ಕಟ್ಟೆಯನ್ನು ಪುನಶ್ಚೇತನಗೊಳಿಸಲಾಯಿತು.
ಗ್ರಾಮಸ್ಥರ ಅಭಿಪ್ರಾಯ:
ದಾರಿಹೋಕರಿಗೆ ಈ ಕಟ್ಟೆಯು ಇರುವುದೇ ಕಾಣುತ್ತಿರಲಿಲ್ಲ. ಸುತ್ತಲೂ ಗಿಡಗಂಟಿಗಳು ಬೆಳೆದು ಹತ್ತಿರ ಹೋಗಿ ನೋಡಿದರೂ ಕಟ್ಟೆ ಕಾಣುತ್ತಿರಲಿಲ್ಲ. ಈ ಕಟ್ಟೆ ಇದೆ ಎಂಬ ಬಗ್ಗೆ ನಮ್ಮೂರಿನ ಕೆಲವರಿಗ ಗೊತ್ತೆ ಇರಲಿಲ್ಲ. ಆದರೆ ಜಲ ಜೀವನ್ ಮಿಷನ್ ಯೋಜನೆ ವತಿಯಿಂದ ಕಟ್ಟೆ ಪುನಶ್ಚೇತನ ಮಾಡಿರುವುದು ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆಯಾದರೆ ಕೆರೆಯು ಭರ್ತಿಯಾಗಿ ಸುತ್ತಮುತ್ತಲಿನ ಅಂತರ್ಜಲ ಮಟ್ಟವೂ ಸಹ ಹೆಚ್ಚಳವಾಗುತ್ತದೆ ಎಂದು ಗ್ರಾಮದ ಹಿರಿಯರು ತಮ್ಮ ಅನಿಸಿಕೆ ಹಂಚಿಕೊಂಡರು.
ನೀರು ಜೀವಾಮೃತ. ನೀರು ಸಕಲ ಜೀವಕ್ಕೂ ಮೂಲ. ನೀರನ್ನು ಎಚ್ಚರಿಕೆಯಿಂದ ಬಳಸೋಣ. ಜಲಮೂಲಗಳನ್ನು ಸಂರಕ್ಷಿಸೋಣ.
2,628 total views, 2 views today