“ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ”

“ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮಧ್ಯದಲ್ಲಿ ಅಡಕೆ ತೆಂಗುಗಳ ಮಡಿಲು, ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ, ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ” ಹೀಗೆಂದು ತಾನು ಹುಟ್ಟಿದ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯನ್ನು ವರ್ಣಿಸಿರುವುದು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಚುಟುಕು ಬ್ರಹ್ಮನೆಂದೇ ಕರೆಯಲ್ಪಡುವ ದಿನಕರ ದೇಸಾಯಿ ಯವರು.
ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದಳೂ ಗುರುತಿಸಲ್ಪಟ್ಟಿದೆ. ಪಶ್ಚಿಮ ಘಟ್ಟಗಳ ಸಹ್ಯಾದ್ರಿಯ ಹಚ್ಚ ಹಸಿರಿನ ಕಾನನಗಳ ನಡುವಿರುವ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಸ್ವರ್ಗ ಎಂದೇ ಕರೆಯಲ್ಪಡುವ ಭಾನ್ಕುಳಿ ಮಠವಿದೆ. ಈ ಗೋಶಾಲೆಯಲ್ಲಿ 650ಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಲಾಗಿದ್ದು, ಇಲ್ಲಿ ಗೋವುಗಳು ಸ್ವಚ್ಛಂದವಾಗಿ ವಿಹರಿಸಲು ವ್ಯವಸ್ಥೆ ಮಾಡಲಾಗಿದೆ. ಗೋವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರತಿದಿನ ಈ ಗೋಶಾಲೆಯಲ್ಲಿ 3000 ದಿಂದ 5000 ಕೆ.ಜಿ ಗೂ ಹೆಚ್ಚು ಸಗಣಿ ಸಂಗ್ರಹಿಸಲ್ಪಡುತ್ತಿದ್ದದ್ದನ್ನು ಮನಗಂಡು 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ, ಈ ಗೋಶಾಲೆಯಲ್ಲಿ ಪ್ರತ್ಯೇಕವಾಗಿ 40 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಗೋಬರ್‌ಧನ್ ಘಟಕವನ್ನು ನಿರ್ಮಿಸಲಾಯಿತು. ಈ ಘಟಕ ನಿರ್ಮಾಣಕ್ಕೆ ಒಟ್ಟು 14 ಲಕ್ಷಗಳನ್ನು ಖರ್ಚು ಮಾಡಲಾಗಿದ್ದು, ಇದರಲ್ಲಿ 7.14 ಲಕ್ಷಗಳನ್ನು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಭರಿಸಿದರೆ ಇನ್ನುಳಿದ ಮೊತ್ತವನ್ನು ಮಠವೇ ಭರಿಸಿದೆ. ಇದೀಗ ಗೋಶಾಲೆಯಲ್ಲಿ ಸಂಗ್ರಹವಾಗುವ ಸಗಣಿಯಲ್ಲಿ ಪ್ರತಿ ದಿನ 500 ರಿಂದ 600ಕೆ.ಜಿಗಳಷ್ಟು ಸಗಣಿಯನ್ನು ಗೋಬರ್‌ಧನ್ ಘಟಕಕ್ಕೆಂದೇ ಬಳಸಿಕೊಂಡು, ಪ್ರತಿದಿನ 22 ರಿಂದ 50 ಕೆ.ಜಿಗಳಷ್ಟು ಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದ್ದು, ಈ ಘಟಕದಿಂದ ಉತ್ಪಾದನೆಯಾದ ಗ್ಯಾಸ್‌ಅನ್ನು ಅನ್ನದಾಸೋಹಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಅನ್ನದಾಸೋಹಕ್ಕೆಂದೇ ಎಲ್.ಪಿ.ಜಿ ಸಿಲಿಂಡರ್‌ಗೆ ಪ್ರತಿ ವರ್ಷ 2.5 ರಿಂದ 3 ಲಕ್ಷಗಳನ್ನು ಖರ್ಚು ಮಾಡಲಾಗುತ್ತಿತ್ತು. ಇದೀಗ ಈ ಹಣ ಸಂಪೂರ್ಣ ಉಳಿತಾಯವಾಗುತ್ತಿದ್ದು, ಘಟಕದಿಂದ ಹೊರಬರುವ ಸಗಣಿಯಿಂದ ಸಾವಯವ ಗೊಬ್ಬರವನ್ನೂ ತಯಾರು ಮಾಡಲಾಗುತ್ತಿದೆ.

ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾನುವಾರುಗಳ ಸಗಣಿ, ಹಸಿ ಕಸದಂತಹ ಜೈವಿಕ ತ್ಯಾಜ್ಯ ಹೆಚ್ಚು ಉತ್ಪಾದನೆಯಾಗುವ ಪ್ರದೇಶಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50-50 ಹಣಕಾಸಿನ ನೆರವಿನ ಅನುಪಾತದಲ್ಲಿ ಗೋಬರ್‌ಧನ್ ಘಟಕಗಳ ಸ್ಥಾಪನೆಗೆ ಅನುವು ಮಾಡಿ ಕೊಟ್ಟಿದೆ. ಇದರ ಸದುಪಯೋಗ ಪಡೆದುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಮತ್ತೊಂದು ಮಠವೆಂದರೆ ಯಲ್ಲಾಪುರದ ಸಮೀಪದಲ್ಲಿರುವ ಸೋಂದಾ ವಾದಿರಾಜ ಮಠ. ರೂ.14.5 ಲಕ್ಷ ವೆಚ್ಚದಲ್ಲಿ 40 ಕ್ಯೂಬಿಕ್ ಮೀಟರ್ ಗಾತ್ರದ ಗೋಬರ್‌ಧನ್ ಘಟಕವನ್ನು ಈ ವಾದಿರಾಜ ಮಠದಲ್ಲಿ ಸ್ಥಾಪಿಸುವ ಮೂಲಕ ನವೀಕರಿಸಬಹುದಾದ ಇಂಧನದ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಹಸಿ ತ್ಯಾಜ್ಯದಿಂದ ಕೇವಲ ಗೊಬ್ಬರವನ್ನಷ್ಟೇ ಅಲ್ಲದೆ ಅನಿಲವನ್ನು ಕೂಡ ಉತ್ಪಾದನೆ ಮಾಡಬಹುದಾಗಿದ್ದು, ಇದರಿಂದ ಉತ್ಪತ್ತಿಯಾಗುವ ಅನಿಲವನ್ನು ಅಡುಗೆ ಮಾಡಲು ಹಾಗೂ ವಿದ್ಯುತ್ ಆಗಿಯೂ ಕೂಡ ಬಳಕೆ ಮಾಡಿಕೊಳ್ಳಬಹುದಾಗಿದೆ. ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಅಥವಾ ಸಮುದಾಯ ಮಟ್ಟದಲ್ಲಿ ಗೋಬರ್‌ಧನ್ ಘಟಕಗಳನ್ನು ನಿರ್ಮಾಣ ಮಾಡಬಹುದಾಗಿದ್ದು, ಈ ಸಂಬಂಧ ನಿರ್ಧಾರವನ್ನು ಆಯಾ ಜಿಲ್ಲಾ ಪಂಚಾಯಿತಿಗಳೇ ತೆಗೆದುಕೊಳ್ಳಬಹುದಾಗಿದೆ. ಜಿಲ್ಲೆಗಳಿಂದ ಬಂದಂತಹ ಪ್ರಸ್ತಾವನೆಯನ್ನು ರಾಜ್ಯ ಕಚೇರಿಯಲ್ಲಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿನ ಈ ಮಠಗಳಲ್ಲಿ ನಿರ್ಮಿಸಲಾಗಿರುವ ಗೋಬರ್‌ಧನ್ ಘಟಕಗಳ ಸದುಪಯೋಗವಾಗುತ್ತಿದ್ದು, ಎಲ್.ಪಿ.ಜಿ ಗ್ಯಾಸ್ ಮೇಲಿನ ಅವಲಂಬನೆ ಸಂಪೂರ್ಣವಾಗಿ ಇಲ್ಲವಾಗಿದೆ. ಪಿಪಿಪಿ (Public Private Partnership) ಮಾಡೆಲ್‌ನಲ್ಲಿ ಜಿಲ್ಲೆಯಲ್ಲಿ ಮಾಡಲಾಗಿರುವ ಈ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

6,461 total views, 4 views today