ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರಲಿಲ್ಲ, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರಕಲಿಲ್ಲ ಅಂತ ಮನನೊಂದು ಆತ್ಮಹತ್ಯೆಗೆ ಶರಣಾಗುವ ಅದೆಷ್ಟೋ ಮಂದಿಯನ್ನು ನಾವು ನೀವೆಲ್ಲರೂ ಸಾಮಾನ್ಯವಾಗಿ ನೋಡಿರುತ್ತೇವೆ, ಕೇಳಿರುತ್ತೇವೆ. ಅಂತೆಯೇ ಇದಕ್ಕೆ ತದ್ವಿರುದ್ಧ ಎಂಬಂತೆ ಪದವಿ, ಸ್ನಾತಕೋತ್ತರ ಪದವಿ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿ ತಾವು ಪಡೆದ ಉದ್ಯೋಗದಲ್ಲಿ ತೃಪ್ತಿ ಸಿಗದೆ ಉದ್ಯೋಗ ತೊರೆದು ವ್ಯವಸಾಯಕ್ಕೆ ಮರಳಿ ಇತರರಿಗೂ ಮಾದರಿಯಾಗಿರುವ ಅದೆಷ್ಟೋ ಯುವ ಮಾದರಿ ರೈತರುಗಳ ಕತೆಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇವೆ ಕೇಳಿದ್ದೇವೆ.
ಅರೆ ಇದನ್ನೆಲ್ಲ ಈಗ ಯಾಕೆ ಹೇಳುತ್ತಿದ್ದಾರೆ ಅಂತೀರಾ? ನಾವೀಗ ಹೇಳಹೊರಟಿರುವುದು ಕೋಲಾರ ಜಿಲ್ಲೆಯ ಉತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಉತ್ತನೂರು ಗ್ರಾಮದ ನಿವಾಸಿ ನಾರಾಯಣಸ್ವಾಮಿ.ಎನ್ ರವರ ಬಗ್ಗೆ. ಇವರು ಪಧವೀದರರಾಗಿದ್ದು, ಪ್ರಸ್ತುತ ಸ್ವಚ್ಛಾಗ್ರಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪದವಿ ಜೊತೆಗೆ ವೃತ್ತಿಪರ ಕೋರ್ಸ್ ಆದ ಬಿ.ಎಡ್ ಅನ್ನು ಪೂರ್ಣಗೊಳಿಸಿರುವ ಇವರು ವಿದ್ಯಾಭ್ಯಾಸ ಮುಗಿದ ಬಳಿಕ ಆರು ವರ್ಷಗಳ ಕಾಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಕೆಲಸ ಕಳೆದುಕೊಂಡ ಇವರು ಅನ್ಯ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ತಮ್ಮದೇ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀನಿವಾಸ್ ರವರು ಇವರನ್ನು ಕರೆದು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಪ್ರೇರಕನಾಗಿ ಕೆಲಸ ಮಾಡುವಂತೆ ಮನವೊಲಿಸಿದ್ದಾರೆ. ಅವರ ಮಾತುಗಳಿಂದ ಪ್ರೇರಿತರಾದ ನಾರಾಯಣಸ್ವಾಮಿ ಅಂದಿನಿಂದಲೇ ಕೆಲಸ ಆರಂಭಿಸಿ ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಪ್ರತಿಯೊಂದು ಮನೆಗೂ ತೆರಳಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾರಂಬಿಸಿದರು. ಜೊತೆಗೆ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ ನೆರವಾಗುವ ಬಗ್ಗೆಯೂ ತಿಳಿಸಿ ಹೇಳಲಾರಂಬಿಸಿದರು.
1620 ಕುಟುಂಬಗಳಿರುವ ಈ ಗ್ರಾಮ ಪಂಚಾಯಿತಿಯಲ್ಲಿ ಇವರು ಕೆಲಸಕ್ಕೆ ಸೇರುವ ಮೊದಲು ಕೇವಲ 855 ಮನೆಗಳು ಶೌಚಾಲಯಗಳನ್ನು ಹೊಂದಿದ್ದವು. ಇನ್ನುಳಿದ 765 ಮನೆಗಳ ಸದಸ್ಯರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದರು. ತಮ್ಮ ಗ್ರಾಮ ಪಂಚಾಯಿತಿಯನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿಸುವ ಪಣ ತೊಟ್ಟ ನಾರಾಯಣಸ್ವಾಮಿ 2016-17ನೇ ಸಾಲಿನಲ್ಲಿ ತಮ್ಮ ಗ್ರಾಮ ಪಂಚಾಯಿತಿಯ ಪ್ರತಿಯೊಂದು ಕುಟುಂಬವೂ ಕಡ್ಡಾಯವಾಗಿ ಶೌಚಾಲಯವನ್ನು ಹೊಂದಲೇಬೇಕು ಎಂಬ ಅಭಿಯಾನವನ್ನು ಹಮ್ಮಿಕೊಂಡು ಶೌಚಾಲಯವಿಲ್ಲದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಆ ಕುಟುಂಬದ ಸದಸ್ಯರನ್ನು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸಲಾರಂಭಿಸಿದರು.
ಶೌಚಾಲಯ ಕಟ್ಟಿಸಿಕೊಳ್ಳದ ಕುಟುಂಬಗಳ ಹಿಂದೆ ಬಿದ್ದ ನಾರಾಯಣಸ್ವಾಮಿ ಶೌಚಾಲಯ ನಿರ್ಮಿಸಿಕೊಳ್ಳುವವರೆಗೂ ಪ್ರತಿದಿನ ಮನೆಮನೆಗೆ ಭೇಟಿ ನೀಡಲಾರಂಬಿಸಿದರು. ಜೊತೆಗೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡುವ ಬಗ್ಗೆಯೂ ಮಾಹಿತಿ ನೀಡುವ ಮೂಲಕ ತಮ್ಮ ಗ್ರಾಮ ಪಂಚಾಯಿತಿಯ ಎಲ್ಲಾ ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಿದರು.
2018-19 ನೇ ಸಾಲಿನ ಅಕ್ಟೋಬರ್ 02ರಂದು ಉತ್ತನೂರು ಗ್ರಾಮ ಪಂಚಾಯಿತಿಯನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿತು. ಈ ವೇಳೆಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ನಾರಾಯಣಸ್ವಾಮಿ ಜಿಲ್ಲಾಡಳಿತದ ಸಂದೇಶವನ್ನು ಕೈಯಲ್ಲಿಡಿದು ಗ್ರಾಮ ಪಂಚಾಯಿತಿ ಪಿ.ಡಿ.ಒ ಮತ್ತು ಸದಸ್ಯರ ನಿರ್ದೇಶನದ ಮೇರೆಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳುವ ಆಂದೋಲನ ಆರಂಭಿಸಿದರು. ಇವರ ಈ ಪರಿಶ್ರಮದಿಂದ ಅಕ್ಟೋಬರ್ 02, 2017 ರಂದು ಉತ್ತನೂರು ಗ್ರಾಮ ಪಂಚಾಯತಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲ್ಪಟ್ಟಿತು. ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟ ಮೊದಲ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಉತ್ತನೂರು ಗ್ರಾಮ ಪಂಚಾಯಿತಿ ಪಾತ್ರವಾಯಿತು.
ಇದಿಷ್ಟೇ ಅಲ್ಲದೆ 2017ರಲ್ಲಿ ಗಾಂಧಿಗ್ರಾಮ ಪುರಸ್ಕಾರವನ್ನು ಈ ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಮೊದಲ ಘನತ್ಯಾಜ್ಯ ನಿರ್ವಹಣಾ ಘಟಕವೂ ಇದೇ ಗ್ರಾಮ ಪಂಚಾಯಿತಿಯಲ್ಲಿ ಆರಂಭವಾಗಿದ್ದು, ಇಷ್ಟು ದಿನ ಸ್ವಚ್ಛತಾ ಪ್ರೇರಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಾರಾಯಣಪ್ಪ ಪ್ರಸ್ತುತ ಈ ಘಟಕದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲಾರಂಭಿಸಿದ್ದಾರೆ.
ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ನಾರಾಯಣಸ್ವಾಮಿಯವರೇ ಸ್ಪೂರ್ತಿಯಾಗಿದ್ದಾರೆ.
7,229 total views, 1 views today