Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಕಡಲ ತೀರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಉಡುಪಿ ಜಿಲ್ಲೆ ಮತ್ತು ದಕ್ಷಿಣಕ್ಕೆ ಕೇರಳ ರಾಜ್ಯವನ್ನು ಹೊಂದಿದೆ. ವ್ಯಾಪಾರ ವಹಿವಾಟುಗಳ ಕೇಂದ್ರಸ್ಥಾನವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ. ಇದಿಷ್ಟೇ ಅಲ್ಲ ಪ್ರವಾಸೋದ್ಯಮ, ಧಾರ್ಮಿಕ ಪೂಜಾ ಕೇಂದ್ರಗಳಿಗೂ ಹೆಸರುವಾಸಿಯಾಗಿದೆ. ಮಂಗಳೂರು ಎಂದಾಕ್ಷಣ ತಕ್ಷಣಕ್ಕೆ ಎಲ್ಲರಿಗೂ ನೆನಪಿಗೆ ಬರುವುದು ಮಂಗಳೂರು ಕಡಲತೀರ.

ಮಂಗಳೂರು ತಾಲ್ಲೂಕಿನ ಪಡುಪಣಂಬೂರು ಗ್ರಾಮ ಪಂಚಾಯಿತಿಯು, ಬೆಳ್ಳಾಯರ, ಪಡುಪಣಂಬೂರು, ೧೦ನೇ ತೋಕೂರು ಎಂಬ ಮೂರು ಗ್ರಾಮಗಳನ್ನು ಹೊಂದಿದ್ದು, ಈ ಪ್ರದೇಶದಲ್ಲಿ ಸರಾಸರಿಗಿಂತಲೂ ಹೆಚ್ಚು ಮಳೆಯಾದರೂ ಸಹ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಿಲ್ಲ. ಇದಕ್ಕೆಲ್ಲ ಕಾರಣ ಮಳೆಯ ನೀರು ನೇರವಾಗಿ ಹರಿದು ಸಮುದ್ರಕ್ಕೆ ಸೇರುತ್ತಿರುವುದು.

ದಕ್ಷಿಣ ಕನ್ನಡ ಜಿಲ್ಲೆಯು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಇಲ್ಲಿನ ಬಹುತೇಕ ಕೃಷಿಕರು ಮಳೆ ನೀರನ್ನೇ ಆಶ್ರಯಿಸಿದ್ದಾರೆ. ಕೃಷಿ ಮತ್ತು ಗೃಹ ಬಳಕೆಗೆ ಬೇಕಾಗುವಷ್ಟು ನೀರನ್ನು ಪ್ರಕೃತಿ ನೀಡುತ್ತಾ ಬಂದಿದ್ದರೂ ಸಹ ಫೆಬ್ರವರಿ ಮತ್ತು ಮಾರ್ಚ ತಿಂಗಳಿನಲ್ಲಿ ಪೆಡಂಬೂರು ಗ್ರಾಮ ಪಂಚಾಯಿತಿ ಸೇರಿದಂತೆ ಇತರೆ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಹೆಚ್ಚಿನದಾಗಿ ಅನುಭವಿಸುತ್ತಿವೆ. ಈ ಮೊದಲು ನಿಸರ್ಗದತ್ತವಾಗಿ ವರ್ಷಪೂರ್ತಿ ತುಂಬಿ ಹರಿಯುತ್ತ್ತಿದ್ದ ನದಿ, ಕೆರೆ ಮತ್ತು ತೊರೆಗಳನ್ನು ಆಶ್ರಯಿಸಿ ಈ ಭಾಗದ ಜನರು ವರ್ಷದಲ್ಲಿ ಮೂರು ಬತ್ತದ ಬೆಳೆಯನ್ನು ಬೆಳೆಯುತ್ತಿದ್ದರು. ಕ್ರಮೇಣವಾಗಿ ಕೆರೆ ತೊರೆಗಳೆಲ್ಲ ನಾಶವಾದ ಬಳಿಕ ಹೆಚ್ಚಿನವರು ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದಾರೆ. ಬೇಸಿಗೆ ಬಂತೆಂದರೆ ಸಾಕು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿ ಪ್ರತಿಯೊಂದು ಮನೆಗೂ ನೀರು ಸರಬರಾಜು ಮಾಡಬೇಕಾದ ಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿಹೋಗಿತ್ತು.

ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಮುಂದಾಗಿರುವ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆರೆ, ತೊರೆಗಳು ಸೇರಿದಂತೆ ಇತರೆ ಜಲಮೂಲಗಳ ಪುನಶ್ಚೇತನಕ್ಕೆ ಮುಂದಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಹರಿಯುವ ಎಲ್ಲಾ ಜಲಮೂಲಗಳನ್ನು ಸಂರಕ್ಷಿಸುವ ಜೊತೆಗೆ ಹೂಳೆತ್ತಿಸುವ ಕೆಲಸಕ್ಕೆ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸುವವರ ಸಂಖ್ಯೆ ಅತೀ ವಿರಳವಾಗಿರುವುದರಿಂದ ಸ್ಥಳೀಯ ಸಂಘ ಸಂಸ್ಥೆಗಳನ್ನು ಈ ಕೆಲಸಕ್ಕಾಗಿ ಉತ್ತೇಜಿಸಲಾಗುತ್ತಿದೆ. ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್, ವಿನಾಯಕ ಮಿತ್ರ ಮಂಡಳಿ, ಪಕ್ಷಿಕೆರೆ ಸೇರಿದಂತೆ ಇತರೆ ಯುವ ಸಂಘಟನೆಗಳ ಮೂಲಕ ಜಲಮೂಲಗಳ ರಕ್ಷಣೆಗೆ ಗ್ರಾಮ ಪಂಚಾಯತಿ ಪಣ ತೊಟ್ಟಿತು. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಈ ಕೆಳಗಿನಂತಿವೆ.

ತೊರೆಗಳ ಹೂಳೆತ್ತುವ ಕಾರ್ಯ

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲೆಂದೇ ನಿರ್ಮಿಸಿರುವ ತೊರೆಗಳು ಹೂಳು ತುಂಬಿಕೊಂಡು ಕೃತಕ ನೆರೆ ಉಂಟು ಮಾಡುತ್ತಿದ್ದವು. ಮಳೆಗಾಲದಲ್ಲಿ ಕೃಷಿ ಗದ್ದೆಗಳು ಮುಳುಗಡೆಯಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲು ಮುಂದಾದ ಗ್ರಾಮ ಪಂಚಾಯತಿ ಸಂಘ ಸಂಸ್ಥೆಗಳ ಯುವಕರನ್ನು ಸೇರಿಸಿಕೊಂಡು ಹೂಳೆತ್ತುವ ಕೆಲಸಕ್ಕೆ ಮುಂದಾಯಿತು. ಇದರಿಂದಾಗಿ ತೊರೆಗಳ ಮೂಲಕ ನೀರು ಸರಾಗವಾಗಿ ಹರಿದು ಕೆರೆಯನ್ನು ಸೇರಲಾರಂಭಿಸಿದ್ದಲ್ಲದೆ, ಅಂತರ್ಜಲ ಹೆಚ್ಚಳಕ್ಕೂ ಸಹಕಾರಿಯಾಯಿತು.

ಕಿಂಡಿ ಅಣೆಕಟ್ಟುಗಳ ನಿರ್ಮಾಣ

ತೊರೆಗಳ ಹೂಳೆತ್ತುವ ಕೆಲಸ ಪೂರ್ಣಗೊಂಡ ನಂತರ ಹೆಚ್ಚಿನ ನೀರನ್ನು ಶೇಖರಿಸಿಡಲು ಚಿಂತಿಸಿದ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಯಿತು. ಈ ಜವಾಬ್ದಾರಿಯನ್ನು ವಿವಿಧ ಸಂಘ ಸಂಸ್ಥೆಗಳಿಗೆ ವಹಿಸಲಾಯಿತು. ಸದ್ಯ ಈ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನಿಂದ ಸುತ್ತಮುತ್ತಲಿನ ರೈತರು ಎರಡನೇ ಬೆಳೆಯನ್ನು ಬೆಳೆಯುತ್ತಿದ್ದು, ಹರಿದು ಸಮುದ್ರದ ಪಾಲಾಗುತ್ತಿದ್ದ ನೀರು ಇದೀಗ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.

ಕೊಳವೆ ಬಾವಿಗಳ ಬದಲಾಗಿ ತೆರೆದ ಬಾವಿಗಳ ನಿರ್ಮಾಣಕ್ಕೆ ಆದ್ಯತೆ

ಬೇಸಿಗೆ ಸಮಯದಲ್ಲಿ ಕೊಳವೆ ಬಾವಿ ಕೊರೆಸಿಕೊಳ್ಳಲು ಅನುಮತಿಗಾಗಿ ಗ್ರಾಮ ಪಂಚಾಯಿತಿಗೆ ಬರುವ ಜನರಿಗೆ ನರೇಗಾ ಯೋಜನೆಯಡಿ ಇರುವ ಸೌಲಭ್ಯಗಳನ್ನು ತಿಳಿಸಿ ತೆರೆದ ಬಾವಿಗಳನ್ನು ನಿರ್ಮಿಸುವಂತೆ ಮನವೊಲಿಸುವ ಕೆಲಸ ಆರಂಭಿಸಲಾಯಿತು. ಪರಿಣಾಮ ಕಳೆದ ಮೂರು ವರ್ಷದಲ್ಲಿ160 ತೆರೆದ ಬಾವಿಗಳನ್ನು ನಿರ್ಮಿಸಲಾಗಿದ್ದು, ಕೊಳವೆ ಬಾವಿಗಳ ಅವಲಂಬನೆಯನ್ನು ತಗ್ಗಿಸಲಾಗಿದೆ. ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವು ಹೆಚ್ಚಾಗಿದೆ.

ಕೆರೆಗಳ ಅಭಿವೃದ್ಧಿ

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೆಳ್ಳಾಯರು ಗ್ರಾಮದ ಜಲಕದ ಕೆರೆ ಮತ್ತು ತಾವರೆ ಕೆರೆಗಳನ್ನು ಹೂಳೆತ್ತುವ ಮೂಲಕ ನೀರಿನ ಶೇಖರಣೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗುವ ಜೊತೆಗೆ ಕೆರೆಯ ಸುತ್ತಮುತ್ತ ಜಮೀನನ್ನು ಹೊಂದಿರುವ ರೈತರು ನೀರಿನ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.

ಮಳೆ ನೀರಿನ ಕೊಯ್ಲು ಅಳವಡಿಸಲು ಪ್ರೋತ್ಸಾಹಧನ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳೂ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಈ ತಂತ್ರಜ್ಞಾನ ಅಳವಡಿಕೆಗೆ ಪ್ರತಿ ಮನೆಗೂ ರೂ.2,000 ಗಳಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಮಳೆ ನೀರಿನ ಕೊಯ್ಲು ಜೊತೆಗೆ ಮೇಲ್ಛಾವಣಿ ನೀರಿನ ಸಂಗ್ರಹ ಮತ್ತು ಇಂಗು ಗುಂಡಿ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಂದೋಲನ ಆರಂಭಿಸಿರುವ ಗ್ರಾಮ ಪಂಚಾಯಿತಿ ಪ್ರತಿ ಮನೆಗೂ ಭೇಟಿ ನೀಡಿ ನೀರಿನ ಮಹತ್ವ ಕುರಿತು ಅರಿವು ಮೂಡಿಸಲಾರಂಭಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಕೆಲಸ ಕಾರ್ಯಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಬತ್ತಿಹೋಗಿದ್ದ ಕೆರೆ, ತೊರೆಗಳೆಲ್ಲ ಸಮೃದ್ಧವಾಗಿದ್ದು ಸರಾಗವಾಗಿ ಹರಿದು ಸಮುದ್ರ ಸೇರುತ್ತಿದ್ದ ಸಿಹಿ ನೀರು ಇದೀಗ ಗ್ರಾಮದ ಜನರ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಕ್ಕೆ ಬರುತ್ತಿದೆ. ಗ್ರಾಮ ಪಂಚಾಯಿತಿಯ ಈ ಕೆಲಸಗಳಿಂದಾಗಿ ಸ್ಥಳೀಯ ಜನರು ಜಲಸಾಕ್ಷರತೆ ಪಡೆದಿದ್ದು ಕುಡಿಯುವ ನೀರಿನ ಸ್ವಾವಲಂಬನೆ ಸಾಧಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

 6,946 total views,  6 views today

WhatsApp chat