Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಗರ್ಭಿಣಿ ಬಾಣಂತಿಯರಿಗೆ ಅನುಕೂಲ ತಂದ ನೀರಿನ ವ್ಯವಸ್ಥೆ

"ನಮ್ಮ ಅಂಗನವಾಡಿಯಲ್ಲಿ ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳು ಬರುತ್ತಾರೆ. ಗರ್ಭಿಣ-ಬಾಣಂತಿಯರೂ ಬರುತ್ತಾರೆ. ಮೊದಲೆಲ್ಲ ಶೌಚಾಲಯವಿಲ್ಲದೆ ಬಹಳ ತೊಂದರೆಯಾಗುತ್ತಿತ್ತು. ಮಕ್ಕಳನ್ನು ದೂರ ಬಯಲಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಜಲ ಜೀವನ್ ಮಿಷನ್ ಯೋಜನೆಯ 100 ದಿನಗಳ ಅಭಿಯಾನದಡಿ ಅಂಗನವಾಡಿಗಳಿಗೆ ನೀರು ಮತ್ತು ನೈರ್ಮಲ್ಯದ ವ್ಯವಸ್ಥೆ ಕಲ್ಪಿಸಿದ್ದು ಅಂಗನವಾಡಿಗೆ ಬರುವ ಗರ್ಭಿಣಿ ಬಾಣಂತಿಯರಿಗೆ ಬಹಳ ಅನುಕೂಲವಾಗಿದೆ ಎನ್ನುತ್ತಾರೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಶೋಭಾ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕುಡಿಯಲು, ಅಡುಗೆ ತಯಾರಿಸಲು ಮತ್ತು ಶೌಚಾಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ ಇರಲಿಲ್ಲ. ಖಾಸಗಿ ಟ್ಯಾಂಕರ್ ಮುಖಾಂತರ ನೀರಿನ ವ್ಯವಸ್ಥೆ ಮಾಡಬೇಕಿತ್ತು. ಇರುವ ನೀರನ್ನೇ ಬಳಸಿಕೊಂಡು ಅಡುಗೆಗೆ, ಶೌಚಾಲಯಕ್ಕೆ ಬಳಸುವ ಪರಿಸ್ಥಿತಿ ಒದಗಿತ್ತು. ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ, ಬಾಣಂತಿಯರಿಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಜಲ ಜೀವನ್ ಮಿಷನ್ ಯೋಜನೆಯ 100 ದಿನಗಳ ಅಭಿಯಾನದಡಿ ಈ ಕೇಂದ್ರಕ್ಕೆ ಸಮರ್ಪಕ ನೀರಿನ ವ್ಯವಸ್ಥೆ ಒದಗಿಸಿದ್ದು ಕೇಂದ್ರಕ್ಕೆ ಬರುವ ಎಲ್ಲ ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು ಮಕ್ಕಳಿಗೆ ಅನುಕೂಲವಾಗಿದೆ.

ಕಲಬುರಗಿಗೆ ಶುದ್ಧ ನೀರು ಒದಗಿಸಿದ ಶುದ್ಧ ಕುಡಿಯುವ ನೀರಿನ ಘಟಕ

ಕಲಬುರಗಿ ತಾಲೂಕಿನ ಹಸರಗುಂಡಗಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 530 ಕುಟುಂಬಗಳಿದ್ದು ಕುಡಿಯುವ ನೀರಿಗಾಗಿ ಕೊಳವೆ ಬಾವಿಯ ಮೇಲೆ ಅವಲಂಬಿತವಾಗಿವೆ. ಈ ಗ್ರಾಮದ ಕೊಳವೆಬಾವಿಯ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದುದರಿಂದ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದವು. ಇದನ್ನು ಮನಗಂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಯಿತು. ಗ್ರಾಮ ಪಂಚಾಯಿತಿ, ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯದ ಸಹಭಾಗಿತ್ವದಿಂದ ಘಟಕವನ್ನು ಸತತವಾಗಿ ನಿರ್ವಹಿಸುತ್ತಿದ್ದಾರೆ. ಘಟಕದಲ್ಲಿ ಇನ್ವರ್ಟರ್ ವಿದ್ಯುತ್ ಬ್ಯಾಕಪ್ ಅಳವಡಿಸಿದ್ದು ದಿನದ 24 ಘಂಟೆಯೂ ಶುದ್ಧ ಕುಡಿಯುವ ನೀರು ಜನರಿಗೆ ಲಭ್ಯವಿದೆ.

ವಿಜಯಪುರದ ವಿದ್ಯಾರ್ಥಿಗಳಿಗೆ ನೆರವಾದ ನೀರಿನ ವ್ಯವಸ್ಥೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ನೀರಿನ ವ್ಯವಸ್ಥೆಯ ಕೊರತೆಯಿತ್ತು. ದೂರದಿಂದ ನೀರನ್ನು ಹೊತ್ತು ತರುವುದು ಮಹಿಳೆಯರಿಗೆ ಬಹಳ ಶ್ರಮದಾಯಕವಾಗಿತ್ತು. ಜಲ ಜೀವನ ಮಿಷನ್ ಯೋಜನೆಯಡಿ ನಳನೀರು ಸರಬರಾಜು ನೀಡುವ ಅನುಷ್ಠಾನ ಪ್ರಕ್ರಿಯೆಯಲ್ಲಿ ಗ್ರಾಮದಲ್ಲಿ ಸಮುದಾಯದ ಸಕ್ರಿಯ ಸಹಭಾಗಿತ್ವಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವಿಶೇಷ ಗ್ರಾಮ ಸಭೆಗಳು, ಅಂತರ್ಜಲದ ಮಹತ್ವ ಕುರಿತಾದ ಜಾಥಾ. ಸ್ತ್ರೀ ಶಕ್ತಿ ಸಂಘಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು, ಗ್ರಾಮ ಕ್ರಿಯಾ ಯೋಜನೆ, ಹೀಗೆ ಹಲವಾರು ಹಂತಗಳಲ್ಲಿ ಜಾಗೃತಿ ಮೂಡಿಸಲಾಯಿತು. ಸರ್ಕಾರ ಮತ್ತು ಸಮುದಾಯ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಇಂದು ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮದ 72 ಮನೆಗಳಿಗೂ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗಿದೆ.

ಮನೆಯಲ್ಲಿ ಕಾರ್ಯಾತ್ಮಕ ನಳ ಸಂಪರ್ಕವಿರುವುದರಿಂದ ಮಹಿಳೆಯರಿಗೆ ದೂರದ ಸ್ಥಳಗಳಿಂದ ನೀರನ್ನು ಹೊತ್ತು ತರುವ ಶ್ರಮ ತಪ್ಪಿದೆ. ಮಕ್ಕಳು ನೀರಿಗಾಗಿ ಕಾಯುತ್ತಾ ಸಮಯ ಕಳೆಯುವ ಬದಲು ಓದಿಗಾಗಿ ಸಮಯ ವಿನಿಯೋಗಿಸಲು ಸಾಧ್ಯವಾಗಿದೆ.

ಗ್ರಾಮೀಣ ಕರ್ನಾಟಕ ಜಲ ಸಮೃದ್ಧ ಭವಿಷ್ಯವನ್ನು ನಿರ್ಮಿಸುತ್ತಿರುವುದಕ್ಕೆ ಈ ಮೇಲಿನ ಯಶೋಗಾಥೆಗಳು ಉದಾಹರಣೆಗಳಾಗಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಜಲ ಜೀವನ್ ಮಿಷನ್ ಒಂದಾಗಿದ್ದು ಪ್ರತಿ ಗ್ರಾಮೀಣ ಕುಟುಂಬಕ್ಕೆ ಕಾರ್ಯಾತ್ಮಕ ನಳ ಸಂಪರ್ಕ ನೀಡುವ ಉದ್ದೇಶವನ್ನು ಹೊಂದಿದೆ. ಪ್ರತಿಯೊಬ್ಬರಿಗೂ ಪ್ರತಿದಿನ 55 ಲೀ. ಶುದ್ಧ ನೀರು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.

ಪ್ರತಿ ಗ್ರಾಮದಲ್ಲಿನ ನೀರಿನ ಲಭ್ಯತೆಯ ಪ್ರಸ್ತುತ ಸ್ಥಿತಿಗತಿಗಳನ್ನು ಅಭ್ಯಸಿಸಿ, ಆಯಾ ಪ್ರದೇಶಕ್ಕೆ ಅನುಕೂಲವಾಗುವ ಮತ್ತು ಹೊಂದಿಕೊಳ್ಳುವ ಸುಸ್ಥಿರ ನೀರಿನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ನದಿಯ ನೀರನ್ನು ಶುದ್ಧೀಕರಿಸಿ ಪೈಪ್ ಲೈನ್ ಮೂಲಕ ಗ್ರಾಮಗಳಿಗೆ ನೀಡುವ ಬಹುಗ್ರಾಮ ಯೋಜನೆ, ಕೊಳವೆಬಾವಿಗಳ ನೀರನ್ನು ನೀರಿನ ತೊಂಬೆಗಳಿಗೆ ತುಂಬಿ ಅಲ್ಲಿಂದ ಪೈಪ್ ಲೈನ್ ಮೂಲಕ ಗ್ರಾಮಸ್ಥರಿಗೆ ಸರಬರಾಜು ಮಾಡುವ ಕಿರು ನೀರು ಸರಬರಾಜು ಯೋಜನೆಗಳು, ನೀರಿನಲ್ಲಿ ಭೌತಿಕ, ಜೈವಿಕ, ರಾಸಾಯನಿಕ ವಸ್ತುಗಳು ಬೆರೆತು ನೀರಿನ ಗುಣಮಟ್ಟದಲ್ಲಿ ಕೊರತೆಯಾದಲ್ಲಿ ಅಂತಹ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯ ಮೂಲಕ ಗ್ರಾಮದ ಪ್ರತಿ ಕುಟುಂಬಕ್ಕೂ ಶುದ್ಧ ನೀರು ದೊರೆಯುವುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ.

ಜಲ ಜೀವನ್ ಮಿಷನ್ ಯೋಜನೆಯ ಬೃಹತ್ ಯಶಸ್ಸಿಗಾಗಿ ಸಮುದಾಯವನ್ನೂ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದ್ದು ಅವರು ಅನುಷ್ಠಾನ ಮೊತ್ತದ 10% ಮೊತ್ತವನ್ನು ವಂತಿಗೆಯಾಗಿ ನೀಡಬಹುದು ಅಥವಾ ಅದಕ್ಕೆ ಸಮಾನವಾದ ಶ್ರಮದಾನ ನೀಡಬಹುದಾಗಿದೆ. ಈ ಯೋಜನೆಯಡಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಸ್ಥಳೀಯ ಕೌಶಲ್ಯ ಕರ್ಮಿಗಳು ತಮ್ಮ ಗ್ರಾಮದ ನೀರು ಸರಬರಾಜು ಯೋಜನೆಯ ಸುಸ್ಥಿರ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಸುಸ್ಥಿರ ನೀರಿನ ವ್ಯವಸ್ಥೆಯಲ್ಲಿ ಸಾರ್ವಜನಿಕರ ಪಾತ್ರ ಹೆಚ್ಚಿದೆ. ದಿನನಿತ್ಯದ ಜೀವನದಲ್ಲಿ ನೀರನ್ನು ಮಿತವಾಗಿ ಬಳಸುವುದು, ನೀರನ್ನು ಸಂರಕ್ಷಿಸುವುದು, ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವುದು, ಇಂಗುಗುಂಡಿ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸುವುದು ಮುಂತಾದ ಕ್ರಮಗಳನ್ನು ಅಳವಡಿಸಿಕೊಂಡು ಜಲ ಸಮೃದ್ಧತೆ ಸುಸ್ಥಿರವಾಗಿರುವಂತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.

 6,688 total views,  6 views today

WhatsApp chat