Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ. ಪ್ರತಿಯೊಬ್ಬರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಈ ಯೋಜನೆ ಕರ್ನಾಟಕದಲ್ಲೂ ಸಾಕಷ್ಟು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ನೀಗಿಸಿದೆ.

ಕರ್ನಾಟಕದಲ್ಲಿ 97.91 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ 34.78 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕದ ಮೂಲಕ ನೀರನ್ನು ಒದಗಿಸಲಾಗಿದೆ. 2021-22ನೇ ಸಾಲಿನಲ್ಲಿ 25.17 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಮನೆ ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ಈಗಾಗಲೇ ಕರ್ನಾಟಕದಲ್ಲಿ 492 ಬಹುಗ್ರಾಮ ಯೋಜನೆಗಳು ಪೂರ್ಣವಾಗಿವೆ. 80 ಯೋಜನೆಗಳು ಪ್ರಗತಿಯಲ್ಲಿವೆ. 120 ಯೋಜನೆಗಳಿಗೆ ಅನುಮೋದನೆಯನ್ನೂ ನೀಡಲಾಗಿದೆ. ಯೋಜನೆಯ ಯಶಸ್ಸಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಅದರ ಜೊತೆಗೆ ಜನರ ಸಹಕಾರ ಕೂಡ ಅತೀ ಮುಖ್ಯವಾಗುತ್ತದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನರ ಪಾತ್ರ ಅತ್ಯಂತ ಮುಖ್ಯವಾದದ್ದು. ಹಾಗಾಗಿ ಸಮುದಾಯ ವಂತಿಗೆ ರೂಪದಲ್ಲಿ ಈ ಯೋಜನೆಯಲ್ಲಿ ಜನರಿಗೂ ಪಾಲು ನೀಡಲಾಗಿದೆ.

ಅಂದ ಹಾಗೇ, ಸಮುದಾಯ ವಂತಿಗೆ ಎಂದರೆ, ಒಂದು ಗ್ರಾಮದೊಳಗಿನ ನೀರು ಸರಬರಾಜಿನ ಮೂಲಭೂತ ಸೌಕರ್ಯ ಕೈಗೊಳ್ಳಲು ಪ್ರತಿ ಗ್ರಾಮಗಳಿಂದ ವಂತಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಸಮುದಾಯ ವಂತಿಗೆ ಎಂದು ಕರೆಯಲಾಗುತ್ತದೆ. ಜಲ ಜೀವನ್ ಮಿಷನ್ ಯೋಜನೆಯಡಿ ಜನರಿಂದ ಸಮುದಾಯ ವಂತಿಗೆ ರೂಪದಲ್ಲಿ ಹಣವನ್ನು ಪಡೆಯಲಾಗುತ್ತದೆ. ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಶೇ.42.5 ಹಣ ನೀಡಿದರೆ, ರಾಜ್ಯ ಸರ್ಕಾರವೂ ಕೂಡ ಶೇ.42.5 ಹಣವನ್ನು ನೀಡುತ್ತದೆ. ಇನ್ನುಳಿದಂತೆ 15ನೇ ಹಣಕಾಸು ಆಯೋಗ ಶೇ.5 ಹಾಗೂ ಸಮುದಾಯ ವಂತಿಗೆ  ರೂಪದಲ್ಲಿ ಶೇ.10ರಷ್ಟು ಹಣವನ್ನು ಪ್ರತಿ ಗ್ರಾಮಗಳಿಂದ ಸಂಗ್ರಹಿಸಲಾಗುತ್ತದೆ. ಇನ್ನು ಸಂಸದರ ನಿಧಿ, ಶಾಸಕರ ನಿಧಿ, ದಾನಿಗಳು ಕೊಡುಗೆ ನೀಡಿದ್ರೆ ಅವರು ನೀಡಿದ ಮೊತ್ತದ ಆಧಾರದಲ್ಲಿ ಲೆಕ್ಕಾಚಾರ ಹಾಕಿ ಸಮುದಾಯ ವಂತಿಗೆಯನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಗುತ್ತದೆ. 50 ಶೇಕಡಾಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಇರುವ ಗ್ರಾಮಗಳು ಬಂಡವಾಳ ವೆಚ್ಚದ 5 ಶೇಕಡಾ ಪಾಲನ್ನು ನಗದು ರೂಪದಲ್ಲಿ ನೀಡಬೇಕು.

ಕರ್ನಾಟಕದಲ್ಲಿ 2023 ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಕರ್ನಾಟಕದಲ್ಲಿ ಯೋಜನೆಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸಮುದಾಯ ವಂತಿಗೆ ರೂಪದಲ್ಲಿ ಪ್ರತಿ ಗ್ರಾಮಗಳಲ್ಲೂ ಜನ ಯೋಜನೆಗೆ ಸಹಕರಿಸುತ್ತಿದ್ದಾರೆ. ಅದರಂತೆ ರಾಜ್ಯದಲ್ಲಿ ಪ್ರತಿ ಗ್ರಾಮಗಳಲ್ಲೂ ಗ್ರಾಮ ಪಂಚಾಯಿತಿಯ ಮೂಲಕ ಸಮುದಾಯ ವಂತಿಗೆ ಸಂಗ್ರಹಿಸಲಾಗುತ್ತಿದೆ.

ಸಮುದಾಯ ವಂತಿಗೆ ನೀಡಿದ ಕೂಡಲೇ ಜನರ ಕರ್ತವ್ಯ ಅಲ್ಲಿಗೆ ಮುಗಿಯುವುದಿಲ್ಲ. ಯೋಜನೆಯ ಯಶಸ್ವಿಗೆ ಸಮುದಾಯದ ಸಹಭಾಗಿತ್ವ ಕೂಡ ತುಂಬಾ ಮುಖ್ಯವಾಗಿದೆ. ಸಮುದಾಯ ಸರ್ಕಾರದೊಂದಿಗೆ ಕೈಜೋಡಿಸಿದಾಗಲೇ ಆ ಯೋಜನೆ ಯಶಸ್ಸನ್ನು ಪಡೆಯುವುದು. ಉದಾಹರಣೆಗೆ ಮನೆಯೊಂದಕ್ಕೆ ನಳದ ಸಂಪರ್ಕಕ್ಕೆ ಬಂದ ಕೂಡಲೇ ಮನೆಯವರು ನೀರು ಬಂತು ಇನ್ನು ನಮಗೇನು ಅಂತಾ ಸುಮ್ಮನೆ ಕೂರುವಂತಿಲ್ಲ. ಆ ನಳ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ, ನಳದಲ್ಲಿ ಬರುವ ನೀರು ಶುದ್ಧ ಹಾಗೂ ಸುರಕ್ಷಿತವಾಗಿದೆಯೇ, ಜೊತೆಗೆ ಜಲಸಂರಕ್ಷಣೆಗೆ ನಮ್ಮ ಮನೆಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಲ್ಲಾ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕು.

ಇದರ ಜೊತೆಗೆ ಅನುಷ್ಠಾನ ಬೆಂಬಲ ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕು. ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿಗೆ ಕ್ರಿಯಾ ಯೋಜನೆ ತಯಾರಿಸುವಾಗ ಅವರಿಗೆ ಗ್ರಾಮದಲ್ಲಿರುವ ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರ, ಮನೆಗಳು ಶೌಚಾಲಯಗಳು, ಸರ್ಕಾರಿ ಆಸ್ಪತ್ರೆ, ಗ್ರಾ.ಪಂ. ಕಟ್ಟಡ, ನೀರಿನ ಮೇಲ್ಮೈ ತೊಟ್ಟಿಯ ಬಗ್ಗೆ ಕ್ರಿಯಾ ಯೋಜನೆಯ ಅರ್ಜಿ ಭರ್ತಿ ಮಾಡಲು ಸಹಕರಿಸಬೇಕು. ಜೊತೆಗೆ ಗ್ರಾಮದಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಮುಖ್ಯವಾಗಿ ಮಹಿಳೆಯರು ಭಾಗಿಯಾಗಿ ಯೋಜನೆಯ ಬಗ್ಗೆ ತಿಳಿಯಲು ಹಾಗೂ ಚರ್ಚಿಸಲು ಅನುಕೂಲ ಮಾಡಿಕೊಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಜನ ಈ ಯೋಜನೆಯ ಬಗ್ಗೆ ತಾವು ಜಾಗೃತರಾಗೋದರ ಜೊತೆಗೆ ತಮ್ಮ ಸುತ್ತಮುತ್ತಲಿನವರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹೀಗೆ ಸಮುದಾಯವಂತಿಗೆ ಹಾಗೂ ಸಮುದಾಯ ಸಹಭಾಗಿತ್ವದ ಮೂಲಕ ಜನ ತಮ್ಮ ಕೊಡುಗೆಯನ್ನು ನೀಡಿದಾಗ ಯೋಜನೆ ಯಶಸ್ವಿಯಾಗುತ್ತದೆ.

 5,712 total views,  1 views today

WhatsApp chat