ನೀರು ಅತ್ಯಮೂಲ್ಯವಾದ ಸಂಪತ್ತು. ಇತ್ತೀಚಿನ ದಿನಗಳಲ್ಲಿ ನೀರಿನ ಅತಿಯಾದ ಬಳಕೆ, ಅರಣ್ಯ ನಾಶದಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಎಲ್ಲೆಡೆ ನೀರಿನ ಅಭಾವ ಹೆಚ್ಚಾಗಿದೆ. ಹನಿ ನೀರೂ ಸಹ ಜೀವರಕ್ಷಕವಾಗಿದ್ದು, ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ನೀರಿನ ಪ್ರತಿ ಹನಿಯನ್ನೂ ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರತಿಯೊಬ್ಬರ ಬದುಕಿನಲ್ಲೂ ನೀರು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ದಿನೇ ದಿನೇ ನೀರಿನ ಅಭಾವ ಹೆಚ್ಚಾಗುತ್ತಿರುವುದರಿಂದ ಬುದ್ಧಿಜೀವಿಯಾಗಿರುವ ಮಾನವ ಲಭ್ಯವಿರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸುವ ಜೊತೆಗೆ ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕಿದೆ. ಸಾಂಪ್ರದಾಯಿಕ ನೀರಿನ ಮೂಲಗಳಾದ ಕೆರೆ, ಬಾವಿ, ಕುಂಟೆ, ಕಲ್ಯಾಣಿ, ಚೆಕ್‍ಡ್ಯಾಮ್‍ಗಳೂ ಸೇರಿದಂತೆ ಇತರೆ ನೀರಿನ ಸಂಗ್ರಹಾಗಾರಗಳಲ್ಲಿ ಕಾಲ ಕಾಲಕ್ಕೆ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಮಳೆನೀರು ಸಂಗ್ರಹವಾಗುವಂತೆ ಕ್ರಮ ಕೈಗೊಳ್ಳುವ ಜೊತೆಗೆಅಗತ್ಯವಿರುವ ಕಡೆಗಳಲ್ಲೆಲ್ಲಾ `ಮಳೆ ನೀರಿನ ಕೊಯ್ಲು' ಅಳವಡಿಸುವ ಮೂಲಕ ಪೋಲಾಗುವ ಸಾವಿರಾರು ಲೀಟರ್ ಮಳೆ ನೀರನ್ನು ಸಂರಕ್ಷಿಸಿ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನು ಮನಗಂಡಿರುವ ಕೋಲಾರ ಜಿಲ್ಲಾಡಳಿತವು ನೀರಿನ ಸಂರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳೆಂದರೆ:
ಕಲ್ಯಾಣಿಗಳ ಪುನಶ್ಚೇತನ:
ಜಿಲ್ಲೆಯಾದ್ಯಂತ ಇರುವ ಕಲ್ಯಾಣಿಗಳನ್ನು ಗುರುತಿಸಿ, ಅಳಿವಿನಂಚಿನಲ್ಲಿರುವ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಸಲುವಾಗಿಯೇ ಸ್ವಚ್ಛ ಶನಿವಾರದ ಆಚರಣೆಯನ್ನು ಮಾಡಲಾಗುತ್ತಿದೆ. ಪ್ರತಿ ಶನಿವಾರದಂದು ಆಸಕ್ತ ಯುವ ಸಮುದಾಯವನ್ನು ಒಗ್ಗೂಡಿಸಿ, ಶ್ರಮದಾನ ಚಟುವಟಿಕೆಗಳ ಮೂಲಕ ಕಲ್ಯಾಣಿಗಳನ್ನು ಶುಚಿಗೊಳಿಸಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ಚೆಕ್‍ಡ್ಯಾಮ್‍ಗಳ ನಿರ್ಮಾಣ:
ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗುವ ಕಾರಣದಿಂದಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚೆಕ್‍ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಬಿದ್ದ ಮಳೆ ನೀರೆಲ್ಲವೂ ಚೆಕ್‍ಡ್ಯಾಮ್‍ಗಳಲ್ಲಿಯೇ ಸಂಗ್ರಹವಾಗುವುದರಿಂದ ಜಾನುವಾರುಗಳಿಗೂ ಕುಡಿಯಲು ನೀರೊದಗಿಸುವ ಜೊತೆಗೆ ಅಂತರ್ಜಲದ ಪ್ರಮಾಣವನ್ನೂ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಇದಿಷ್ಟೇ ಅಲ್ಲದೆ ಚೆಕ್‍ಡ್ಯಾಮ್‍ಗಳ ನಿರ್ಮಾಣದಿಂದ ಇಳಿಜಾರು ಪ್ರದೇಶದ ಕಡೆಗೆ ಹರಿಯುತ್ತಿದ್ದ ಮಳೆ ನೀರನ್ನು ತಡೆದು, ಮಣ್ಣಿನ ಸವಕಳಿಯನ್ನೂ ತಡೆಗಟ್ಟಿದಂತಾಗಿದೆ.
ಮಳೆ ನೀರಿನ ಕೊಯ್ಲು ಅಳವಡಿಕೆ:
ಜಲ ಜೀವನ್ ಮಿಷನ್ ಯೋಜನೆಯಡಿ 100 ದಿನಗಳ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯಾದ್ಯಂತ ನಳ ಸಂಪರ್ಕವಿಲ್ಲದ ಶಾಲೆ, ಆಶ್ರಮ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ, ನಳ ಸಂಪರ್ಕವನ್ನು ಕಲ್ಪಿಸಿಕೊಡಲಾಗುತ್ತಿದೆ. ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಾದರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಛಾವಣಿಗಳಿಗೆ ಮಳೆ ನೀರಿನ ಕೊಯ್ಲು ಅಳವಡಿಸಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಛಾವಣಿ ಮೇಲೆ ಬೀಳುವ ನೀರನ್ನು ಶಾಲೆಯ ಆವರಣದಲ್ಲಿಯೇ ಸಂಗ್ರಹಿಸಿ ಕೈತೋಟ ಹಾಗೂ ಮಕ್ಕಳಿಗೆ ಕೈ ತೊಳೆಯಲು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ನೀರಿನ ಸಂರಕ್ಷಣಾ ಪದ್ಧತಿಯ ಬಗ್ಗೆ ಹೇಳಿಕೊಡಲು ಅನುಕೂಲವಾಗಿದೆ ಎನ್ನುತ್ತಾರೆ ಆ ಶಾಲೆಗಳ ಶಿಕ್ಷಕರು.
6,671 total views, 1 views today