Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಭಾರತವೆಂಬ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ಒಂದು ಪ್ರಮುಖ ಸಮಸ್ಯೆ. ಭಾರತದಲ್ಲಿ 1.50 ಲಕ್ಷ ಮೆಟ್ರಿಕ್ ಟನ್ ಘನ ತ್ಯಾಜ್ಯ ಪ್ರತಿ ದಿನ ಉತ್ಪತ್ತಿಯಾಗುತ್ತದೆ. ಅದರಲ್ಲಿ 20 ಶೇಕಡಾದಷ್ಟು ತ್ಯಾಜ್ಯ ಮಾತ್ರ ಮರುಬಳಕೆಯಾಗುತ್ತದೆ. ಉಳಿದವು ವಿಲೇವಾರಿಯಾಗದೇ ಎಲ್ಲೆಂದರಲ್ಲಿ ಹರಡಿರುತ್ತವೆ. ಅದರಲ್ಲೂ ಇಡೀ ವಿಶ್ವಕ್ಕೇ ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಪ್ಲಾಸ್ಟಿಕ್ ತ್ಯಾಜ್ಯ. ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸುವುದು ಭಾರತ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳಿಗೂ ಒಂದು ದೊಡ್ಡ ತಲೆನೋವಾಗಿದೆ.

ಭಾರತದಲ್ಲಿ ಒಂದು ದಿನಕ್ಕೆ ಸುಮಾರು 25,940 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ 60 ಶೇಕಡಾದಷ್ಟು ಪ್ಲಾಸ್ಟಿಕ್ ತ್ಯಾಜ್ಯವಷ್ಟೇ ಮರುಬಳಕೆಯಾಗುತ್ತದೆ. ಉಳಿದವು ಸಮುದ್ರ ಹಾಗೂ ಭೂಮಿ ಸೇರುತ್ತವೆ. ಆದರೆ ಭೂಮಿಗೆ ಭಾರವಾಗಿರುವ ಇದೇ ತ್ಯಾಜ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆದಾಯ ಕೂಡ ಗಳಿಸಬಹುದು. ಆ ಮೂಲಕ ಪರಿಸರ ಸಂರಕ್ಷಣೆಯನ್ನೂ ಮಾಡಬಹುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಭೂಮಿಯಿಂದ ಕಿತ್ತೆಸೆಯಲು ವಿಶ್ವದಾದ್ಯಂತ ಬೇರೆ ಬೇರೆ ಪ್ರಯತ್ನಗಳು ನಡೆಯುತ್ತಲೇ ಇವೆ.

ಅಂತಹ ಒಂದು ಪ್ರಯತ್ನವನ್ನು ನವದೆಹಲಿಯ ದ್ವಾರಕಾದ ನಜಫಗಡ್ ಜೋನ್ ನಲ್ಲಿ ಡೈಮಂಡ್ ಸ್ವೀಟ್ಸ್ ಎಂಬ ಬೇಕರಿಯೊಂದು ಮಾಡುತ್ತಿದೆ. ಅಲ್ಲಿ ಗಾರ್ಬೇಜ್ ಕೆಫೆ (Garbage café) ಎಂಬ ಹೆಸರಿನ ಕೆಫೆಯನ್ನು ಆರಂಭಿಸಲಾಗಿದೆ. ಇಲ್ಲಿ ಜನರು ಪ್ಲಾಸ್ಟಿಕ್ ಕಸ ನೀಡಿ ಊಟ ಮಾಡಬಹುದು. ಈ ಕೆಫೆಯಲ್ಲಿ ಜನರು ಪ್ಲಾಸ್ಟಿಕ್ ಕಸ ನೀಡಿ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಅಥವಾ ಸಿಹಿ ತಿನಿಸು ತಿನ್ನಬಹುದು. ಆ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರದಿಂದ ದೂರವಿರಿಸುವುದಕ್ಕೆ ಈ ಕೆಫೆ ಶ್ರಮಿಸುತ್ತಿದೆ.

ಕರ್ನಾಟಕದಲ್ಲೂ ತ್ಯಾಜ್ಯವನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಬೇರೆ ಬೇರೆ ವಿನೂತನ ಪ್ರಯತ್ನಗಳನ್ನು ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತೂಲೂಕಿನ ವಾಡಿ ಎಂಬಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ ತ್ಯಾಜ್ಯಗಳ ಮರುಬಳಕೆ ಘಟಕ ಸ್ಥಾಪಿಸಿ ಪರಿಸರ ಸ್ನೇಹಿಯಾಗಿ ರಾಜ್ಯದ ಗಮನ ಸೆಳೆದಿದೆ. ಬೆಂಗಳೂರು, ಮೈಸೂರು, ರಾಯಚೂರು, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಒಟ್ಟು 25 ಕಾರ್ಖಾನೆಗಳಿಂದ ಬರುವ ಘನ ತ್ಯಾಜ್ಯಗಳನ್ನು ಸಿಮೆಂಟ್ ಉತ್ಪಾದನೆಯಲ್ಲಿ ಬಳಸಿಕೊಳ್ಳುತ್ತಿದೆ. ಟೂಥ್ ಪೇಸ್ಟ್, ಸಾಬೂನು, ಚಾಕಲೇಟ್, ಕಾಫಿಪುಡಿ, ಹಾರ್ಲಿಕ್ಸ್, ಚಹಾಪುಡಿ, ಬಿಸ್ಕತ್, ಮಕ್ಕಳ ಆಟಿಕೆ ಜೊತೆಗೆ ಕೃಷಿ ತ್ಯಾಜ್ಯ, ನಗರಗಳ ಘನ ತ್ಯಾಜ್ಯವನ್ನು ಸುಟ್ಟು ಕರಕಲು ಮಾಡಿ ಉಳಿದ ಬೂದಿಯನ್ನು ಸಿಮೆಂಟ್ ನಲ್ಲಿ ಮಿಶ್ರಣ ಮಾಡಿ ಮರುಬಳಕೆ ಮಾಡಲಾಗುತ್ತಿದೆ.

ನ್ಯಾಪ್ ಕಿನ್ ಗಳ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ಇಂದು ಬಹು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಮರುಬಳಕೆ ಮಾಡಲಾಗದ ನ್ಯಾಪ್ ಕಿನ್ ಗಳನ್ನು ಹೆಚ್ಚಿನ ಹೆಣ್ಮಕ್ಕಳು ಬಳಸುತ್ತಿರುವುದರಿಂದ ಯಥೇಚ್ಛವಾಗಿ ಅವು ಭೂಮಿ ಸೇರುತ್ತಿದೆ. ಅನೇಕ ಹೆಣ್ಣುಮಕ್ಕಳಿಗೆ ಋತುಚಕ್ರದ ಸಂದರ್ಭದಲ್ಲಿ ತಾವು ಬಳಸುವ ನ್ಯಾಪ್ ಕಿನ್ ಗಳನ್ನು ವಿಲೇವಾರಿ ಮಾಡುವುದು ಕಷ್ಟವಾಗಿ ಅವರು ಅದರಿಂದಲೇ ಶುಚಿತ್ವ ಕಾಪಾಡಿಕೊಳ್ಳಲಾಗದೇ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಣ್ಮಕ್ಕಳ ಇಂತಹ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಶಾಲೆಗಳಲ್ಲಿ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಮಕ್ಕಳಿರುವ ಕಡೆಗಳಲ್ಲಿ ಭಸ್ಮೀಕರಣ ಯಂತ್ರವನ್ನು (Incinerator) ಅಳವಡಿಸುತ್ತಿದೆ.

ಹಸಿ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ಅದರಿಂದಲೂ ಹತ್ತಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮುಖ್ಯವಾಗಿ ಆರ್ಥಿಕ ಸದೃಢತೆಯನ್ನು ಸಾಧಿಸಬಹುದು. ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವಿನ ಹಣ್ಣಿನ ಸೀಸನ್ ನಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಅದು ಬೇರೆ ಬೇರೆ ಕಾರಣಗಳಿಂದ ವ್ಯರ್ಥವಾಗಿ ಹೋಗುತ್ತದೆ ಎನ್ನುವುದನ್ನು ನಾವು ನೋಡಿದ್ದೇವೆ. ನಾವೆಲ್ಲಾ ಮಾವಿನ ಹಣ್ಣು ಕೊಳೆತಾಗ ಅದನ್ನು ಬಿಸಾಡುತ್ತೇವೆ. ಆದರೆ ಇದೇ ಮಾವಿನ ಹಣ್ಣಿನಿಂದ ಡಚ್ ಮೂಲದ ಕಂಪನಿಯೊಂದು ಸಸ್ಯಮೂಲದ ಚರ್ಮವನ್ನು ಉತ್ಪಾದಿಸುತ್ತದೆ. ಬೇರೆ ದೇಶಗಳಿಂದ ಬಳಕೆಗೆ ಯೋಗ್ಯವಲ್ಲದ ಮಾವಿನ ಹಣ್ಣುಗಳನ್ನು ಖರೀದಿಸಿ ಅದರಿಂದ ಸಸ್ಯಮೂಲದ ಚರ್ಮವನ್ನು ಉತ್ಪಾದಿಸುತ್ತಾರೆ. 2015 ರಲ್ಲಿ ಆರಂಭವಾದ ಈ ಕಂಪನಿ ತ್ಯಾಜ್ಯದ ಮೂಲಕವೇ ಲಾಭಗಳಿಸುತ್ತಿದೆ.

ತ್ಯಾಜ್ಯಗಳ ಮರುಬಳಕೆಗೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಅದರಲ್ಲಿ ಹಸಿ ತ್ಯಾಜ್ಯಗಳ ಸಮರ್ಪಕ ಮರುಬಳಕೆಗಾಗಿ ಕೇಂದ್ರ ಜಲಶಕ್ತಿ ಮಿಷನ್ 2018 ರಲ್ಲಿ ಗೋಬರ್ಧನ್ ಯೋಜನೆಯನ್ನು ಪರಿಚಯಿಸಿದೆ. ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಶ್ರಮಿಸುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಡಿ ಆಹಾರ ತ್ಯಾಜ್ಯ, ಪ್ರಾಣಿಜನ್ಯ ತ್ಯಾಜ್ಯ, ಸಸ್ಯ ಜನ್ಯ ತ್ಯಾಜ್ಯಗಳನ್ನು ಬಳಸಿಕೊಂಡು ಅದರಿಂದ ಬಯೋಗ್ಯಾಸ್ ತಯಾರಿಸಲಾಗುತ್ತದೆ. ಮನೆ ಹಾಗೂ ಸಮುದಾಯ ಈ ಎರಡೂ ಹಂತದಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಹೈನುಗಾರಿಕೆಯನ್ನು ಆಧರಿಸಿ ಜೀವನ ನಡೆಸುತ್ತಿರುವ ಅದೆಷ್ಟೋ ಕುಟುಂಬಗಳು ಗೋಬರ್ ಗ್ಯಾಸ್ ಮೂಲಕ ತ್ಯಾಜ್ಯಗಳನ್ನು ಮರುಬಳಕೆ ಮಾಡಿಕೊಂಡು ಆರ್ಥಿಕವಾಗಿಯೂ ಸದೃಢತೆ ಸಾಧಿಸಿವೆ.

ಪಂಜಾಬ್ ನ ಲೂಧಿಯಾನದಲ್ಲಿ ಸೆಗಣಿಯನ್ನು ಬಳಸಿ ಬಯೋ ಗ್ಯಾಸ್ ಉತ್ಪಾದಿಸುವ ದೇಶದ ಅತೀ ದೊಡ್ಡ ಬಯೋ ಗ್ಯಾಸ್ ಪ್ಲಾಂಟ್ ಇದೆ. ಇಲ್ಲಿ ಪ್ರತಿ ದಿನ ಸುಮಾರು 13 ರಿಂದ 14 ಸಾವಿರ ಯೂನಿಟ್ಸ್ ವಿದ್ಯುತ್ ನ್ನು ಉತ್ಪಾದನೆ ಮಾಡಲಾಗುತ್ತಿದೆ. ಅಂದಾಜು 47 ಟನ್ ನಷ್ಟು ಪ್ರತಿದಿನ ಗೊಬ್ಬರ ದೊರಕುತ್ತದೆ. ಇದನ್ನು ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಇಲ್ಲಿ ಸಗಣಿಯಿಂದಲೇ ಆದಾಯಗಳಿಸಲಾಗುತ್ತಿದೆ.

ರಾಜ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕೂಡ ಬೇರೆ ಬೇರೆ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಶ್ರಮಿಸುತ್ತಿದೆ. ಮುಂದೆಯೂ ಅನೇಕ ಕಾರ್ಯಕ್ರಮ, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಆ ಮೂಲಕ ರಾಜ್ಯದಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಸ್ವಸ್ಥ ಪರಿಸರ ನಿರ್ಮಿಸಲು ಹಾಗೂ ಆರ್ಥಿಕ ಸದೃಢತೆ ಸಾಧಿಸಲು ಪ್ರಯತ್ನಿಸುತ್ತಿದೆ.

 5,725 total views,  1 views today

WhatsApp chat