Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಚಿತ್ರಕಲಾ: ಏ! ವಂಶಿ ಬಾ ಇಲ್ಲಿ. ಈ ಕಸ ತಗೊಂಡೊಗಿ ಊರಾಚೆ ಎಸೆದು ಬಾ

ವಂಶಿ: ಅಮ್ಮಾ ನನಿಗೆ ನಾಚಿಕೆ ಆಗ್ತದೆ. ಕಸದ ಕವರ್ ಹಿಡ್ಕೊಂಡು ಹೋಗುವಾಗ, ಎಲ್ಲಾ ನನ್ನನ್ನೇ ನೋಡ್ತಾ ಇದ್ದಾರೆ ಅನ್ನಿಸ್ತದೆ. ನಾನು ಇನ್ಮುಂದೆ ಈ ಕಸ ಬಿಸಾಡ್ಲಿಕ್ಕೆ ಹೋಗೋದಿಲ್ಲಮ್ಮ.

ಚಿತ್ರಕಲಾ: ಹಾಗೆ ಹೇಳ್ಬಾರ್ದು ಮಗ. ನಿಂಗೆ ಸಂಜೆ ಚಾಕ್ಲೇಟ್ ತೆಗ್ದು ಕೊಡ್ತೇನೆ. ಈಗ ಕಸ ತಗೊಂಡೋಗಿ ಊರಾಚೆ ಎಸೆದು ಬಾ

ವಂಶಿ: ಆಯ್ತಮ್ಮಾ… ಎಂದು ಕಸದ ಪ್ಲಾಸ್ಟಿಕ್ ಹಿಡಿದು ಸೈಕಲ್ ಹತ್ತಿ ಹೊರಡುತ್ತಾನೆ.

ಅಷ್ಟರಲ್ಲಾಗಲೇ ಅಮ್ಮಾ.. ಅಮ್ಮಾ.. ಎನ್ನುವ ಶಬ್ದ ಕೇಳಿ ಬರುವುದು. ತಕ್ಷಣ ಮನೆಯ ಒಳಗಿಂದ ಆಚೆ ಬಂದ ಚಿತ್ರಕಲಾ, ಯಾರೋ ತನ್ನ ಮಗನನ್ನು ಕಸದ ಕವರ್ ಸಮೇತ ಹಿಡಿದು ತಂದಿರುವುದನ್ನು ಗಮನಿಸಿ, ಕೋಪದಿಂದ ಅವನನ್ನು ಯಾಕೆ ಹೀಗೆ ಹಿಡ್ಕೊಂಡಿದ್ದೀರಿ ಬಿಡಿ ಎಂದು ಸಿಟ್ಟಿನಿಂದ ಗದರುವಳು. ಆಗ ಮಾತನ್ನು ಆರಂಭಿಸಿದ ಸ್ವಚ್ಛಾಗ್ರಹಿ ಶಂಭು.

ಶಂಭು: ಇವನು ಕಸವನ್ನು ಊರಾಚೆ ಬಿಸಾಡಲಿಕ್ಕೆ ಬಂದಿದ್ದ, ಅದಕ್ಕೆ ಇವನನ್ನು ಹಿಡಿದು ಕರ್ಕೊಂಡು ಬಂದೆ ಎನ್ನುವನು.

ಚಿತ್ರಕಲಾ: ಅವನನ್ನು ಕಳುಹಿಸಿದ್ದು ನಾನೇ, ಕಸವನ್ನು ಬಿಸಾಡದೇ ಇನ್ನು ಮನೆಯಲ್ಲಿಯೇ ಇಟ್ಟುಕೊಳ್ಳಲಿಕ್ಕೆ ಆಗ್ತದಾ? ಎಂದು ಗೊಣಗುತ್ತಾಳೆ.

ಶಂಭು: ಅಕ್ಕಾ.. ಹೀಗೆ ಕಸವನ್ನು ಎಲ್ಲಂದರಲ್ಲಿ ಬಿಸಾಡಬಾರದು ಎಂಬುದು ತಮಗೆ ಗೊತ್ತಿಲ್ವಾ? ನಮ್ಮ ಗ್ರಾಮ ಪಂಚಾಯಿತಿಯ ಎಲ್ಲಾ ಮನೆಯವರೂ ಒಣ ಕಸವನ್ನು ಪಂಚಾಯಿತಿ ಗಾಡಿಗೇ ನೀಡಬೇಕು. ಈಗಾಗಲೇ ನಿಮಗೆ ಪಂಚಾಯಿತಿ ವತಿಯಿಂದ ಒಣ ಕಸ ಸಂಗ್ರಹಕ್ಕೆ ಒಂದು ಚೀಲವನ್ನೂ ಕೊಟ್ಟಿರಬೇಕಲ್ಲಾ? ಎನ್ನುವನು.

ಚಿತ್ರಕಲಾ: ಕೊಟ್ಟಿದ್ರು. ಅದು ಎಲ್ಲಿ ಬಿದ್ದುಕೊಂಡು ಉಂಟೋ...

ಶಂಭು: ನೀವೇ ಹೀಗೆ ಹೇಳಿದ್ರೆ ಹೇಗೆ ಅಕ್ಕ.. ಮನೆ ಮಾತ್ರ ಸ್ವಚ್ಛ ಇದ್ರೆ ಆಯಿತು ಅಂದ್ರೆ ಹೇಗೆ? ನಮ್ಮ ಸುತ್ತಮುತ್ತಲ ಪರಿಸರನೂ ಸ್ವಚ್ಛ ಇರಬೇಕಲ್ವಾ? ಇನ್ಮೇಲೆ ಹೀಗೆಲ್ಲಾ ಮಾಡಬೇಡಿ ಪಂಚಾಯಿತಿಯಿಂದ ಬರುವ ವಾಹನಕ್ಕೆ ನಿಮ್ಮ ಮನೆಯ ಒಣ ತ್ಯಾಜ್ಯವನ್ನೆಲ್ಲಾ ಕೊಡಿ. ನಾವು ಅದನ್ನೆಲ್ಲಾ ಸಂಸ್ಕರಣೆ ಮಾಡಿ ಪರಿಸರ ಹಾಳಾಗದ ಹಾಗೇ ತಡೆಯುತ್ತೇವೆ. ಇಲ್ಲದಿದ್ದರೆ ಈ ಪ್ಲಾಸ್ಟಿಕ್ ಅನ್ನು ಹಸುಗಳು ತಿನ್ನುತ್ತವೆ. ಇಲ್ಲಾಂದ್ರೆ ಇದೆಲ್ಲಾ ಹೋಗಿ ಸಮುದ್ರ ಸೇರೋದ್ರಿಂದ ಜಲಚರಗಳೂ ಸಾಯುತ್ತವೆ.

ಚಿತ್ರಕಲಾ: ಆಯ್ತು ಬಿಡಿ ಅಣ್ಣ. ಇನ್ಮುಂದೆ ಕಸವನ್ನು ಪಂಚಾಯಿತಿ ಗಾಡಿಗೇ ಕೊಡ್ತೇನೆ.

ಇದು ಕೇವಲ ಒಂದು ಉದಾಹರಣೆಯಷ್ಟೇ. ಇಂತಹ ಅದೆಷ್ಟೋ ಚಿತ್ರಕಲಂದಿರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಇಂತಹವರ ನಡವಳಿಕೆಯನ್ನು ಬದಲಾಯಿಸುವ ಸವಾಲನ್ನು ಮೆಟ್ಟಿ ನಿಂತಿರುವ ಉಡುಪಿ ಜಿಲ್ಲೆ ಸ್ವಚ್ಛ, ಸುಂದರ ಜಿಲ್ಲೆಯತ್ತ ದಾಪುಗಾಲು ಇಟ್ಟಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿಯಲ್ಲಿ ಮುಂಚೂಣಿಯಲ್ಲಿರುವ ಉಡುಪಿ, ಸಾರ್ವಜನಿಕರ, ಜನಪ್ರತಿನಿಧಿಗಳ, ಯುವ ಸಂಘಟನೆಗಳ ಸಹಕಾರದೊಂದಿಗೆ ತ್ಯಾಜ್ಯವೆಂಬ ಹೊರೆಯನ್ನು, ಸಂಪನ್ಮೂಲವಾಗಿ ಮಾಡಿಕೊಂಡಿದೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಬಹುಭಾಗ ಅರಣ್ಯ ಪ್ರದೇಶದಿಂದಲೇ ಕೂಡಿರುವ ಬ್ರಹ್ಮಾವರ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯಿತಿ. ಸುಮಾರು 5200 ಜನಸಂಖ್ಯೆಯನ್ನೊಳಗೊಂಡಿರುವ ಈ ಗ್ರಾಮ ಪಂಚಾಯಿತಿ ಕಾಡೂರು ಮತ್ತು ನಡೂರು ಎಂಬ ಎರಡು ಗ್ರಾಮಗಳನ್ನು ಒಳಗೊಂಡಿದೆ.

2018 ರಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಈ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕವನ್ನು ಸ್ಥಾಪಿಸಲಾಗಿದ್ದು, ಜಾಗದ ಅಭಾವವಿದ್ದರಿಂದ ಹಳೆಯ ಕಟ್ಟಡವೊಂದರಲ್ಲಿ ಒಣ ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸವನ್ನು ಆರಂಭಿಸಲಾಯಿತು. ಆರಂಭದಲ್ಲಿ ಕೇವಲ 600 ಮನೆಗಳಿಗೆ ಒಣ ತ್ಯಾಜ್ಯ ಸಂಗ್ರಹಣಾ ಚೀಲಗಳನ್ನು ನೀಡಲಾಯಿತು. ಬಳಿಕ ಗ್ರಾಮದ ಎಲ್ಲಾ ಮನೆಗಳು, ವಾಣಿಜ್ಯ ಕಟ್ಟಡಗಳಿಗೂ ಒಣ ತ್ಯಾಜ್ಯ ಸಂಗ್ರಹಿಸುವ ಚೀಲಗಳನ್ನು ನೀಡಿ, ಎಲ್ಲರಿಂದಲೂ ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸವನ್ನು ಆರಂಭಿಸಲಾಯಿತು. ಹೀಗೆ ಮನೆಗಳಿಂದ, ವಾಣಿಜ್ಯ ಕಟ್ಟಡಗಳಿಂದ ಸಂಗ್ರಹಿಸಲಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಮಾರಾಟ ಮಾಡುವ ಮೂಲಕ ಈ ಗ್ರಾಮ ಪಂಚಾಯಿತಿ ಆದಾಯದ ಮೂಲವನ್ನು ಕಂಡುಕೊಂಡಿದೆ.

ಪ್ರಸ್ತುತ ಈ ಸ್ವಚ್ಛ ಸಂಕೀರ್ಣದಲ್ಲಿ ಮೂವರು ಸ್ವಚ್ಛಾಗ್ರಹಿಗಳು ಕಾರ್ಯ ನಿರ್ವಹಿಸುತ್ತಿದ್ದು, ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಗೆಗಾಗಿ ಇಲಾಖೆಯು ಹೊರತಂದಿರುವ ನೈರ್ಮಲ್ಯ ನೀತಿ, ಕಾರ್ಯತಂತ್ರ ಮತ್ತು ಉಪವಿಧಿಗಳನ್ನು ಈ ಪಂಚಾಯಿತಿಯಲ್ಲಿ ಅನುಷ್ಠಾನ ಮಾಡಲಾಗಿದೆ. ಉಪವಿಧಿಗಳನುಸಾರ ಎಲ್ಲಾ ಮನೆಗಳಿಂದ ಮಾಸಿಕ 30 ರೂಪಾಯಿಯನ್ನು ವಾಣಿಜ್ಯ ಅಂಗಡಿಗಳಿಂದ ಮಾಸಿಕ 50 ರೂಪಾಯಿಗಳನ್ನು ಹಾಗೂ ವಿಶೇಷ ಕಾರ್ಯಕ್ರಮಗಳಿಂದ 100 ರೂಪಾಯಿಗಳಂತೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಇದಿಷ್ಟೇ ಅಲ್ಲದೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗ್ರಾಮವಾರು ವಾಟ್ಸಾಫ್ ಗ್ರೂಪ್‌ಗಳನ್ನು ರಚಿಸಲಾಗಿದ್ದು ತ್ಯಾಜ್ಯ ಸಂಗ್ರಹಣೆಯ, ವಿಲೇವಾರಿ, ಮಾರಾಟ, ಖರ್ಚು, ಆದಾಯದ ವಿವರಗಳನ್ನು ಈ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಿಗೆ ಪಂಚಾಯಿತಿಯ ಮೇಲಿನ ವಿಶ್ವಾಸ ಹೆಚ್ಚಾಗಿದೆಯಂತೆ.

ಲಾಕ್‌ಡೌನ್ ಸಂದರ್ಭದಲ್ಲಿಯೂ ತಪ್ಪದೇ ಎಲ್ಲಾ ಮನೆಗಳಿಂದಲೂ ತ್ಯಾಜ್ಯ ಸಂಗ್ರಹಣೆ ಮಾಡಲಾಗಿದ್ದು, ಪ್ಲಾಸ್ಟಿಕ್ ನಿಷೇಧ ಮತ್ತು ಹಸಿರು ಶಿಷ್ಟಾಚಾರವನ್ನು ಪರಿಣಾಮಕಾರಿಯಾಗಿ ಈ ಗ್ರಾಮ ಪಂಚಾಯಿತಿ ಅಳವಡಿಸಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

 5,252 total views,  1 views today

WhatsApp chat