
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡುವುದು ಬಹು ದೊಡ್ಡ ಸವಾಲುಗಳಲ್ಲಿ ಒಂದು. ಆದರೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ಸಮರ್ಪಕವಾದ ತ್ಯಾಜ್ಯ ನಿರ್ವಹಣೆಯ ಮೂಲಕ ಇಂದು ಮಾದರಿ ಗ್ರಾಮ ಪಂಚಾಯಿತಿಯಾಗಿ ಗುರುತಿಸಿಕೊಂಡಿದೆ.
ಸಮರ್ಪಕವಾದ ತ್ಯಾಜ್ಯ ನಿರ್ವಹಣೆಯ ಮೂಲಕ ಗುರುತಿಸಿಕೊಂಡಿರುವ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ಕೇಂದ್ರದ ಗ್ರಾಮೀಣಾಭಿವೃದ್ದಿ ಮಂತ್ರಾಲಯ ನೀಡುವ2019-20ನೇ ಸಾಲಿನ ದೀನ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿರುವುದು ಕರ್ನಾಟಕಕ್ಕೇ ಹೆಮ್ಮೆ ವಿಚಾರ. ಕರ್ಣಕುಪ್ಪೆ ಗ್ರಾಮ ಪಂಚಾಯಿತಿ 5,315 ಜನಸಂಖ್ಯೆ ಹೊಂದಿದ್ದು, ಒಟ್ಟು 1185 ಕುಟುಂಬಗಳಿವೆ. 4 ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ಣಕುಪ್ಪೆ, ವದ್ಲಿಮನುಗನಹಳ್ಳಿ, ಕಣಗಾಲು, ಹುನಗನಹಳ್ಳಿ,ಹೆಮ್ಮಿಗೆ, ಹೆಮ್ಮಿಗೆ ಹಾಡಿ., ಹೆಮ್ಮಿಗೆ ಕಾಲೋನಿ, ದೇವರಾಜ ಕಾಲೋನಿ,ಹರೀನಹಳ್ಳಿ, ಕಲ್ಕಡ ಗ್ರಾಮಗಳುಬರುತ್ತವೆ.
ಇಂಗುಗುಂಡಿ ನಿರ್ಮಾಣದಲ್ಲಿ ದಾಖಲೆ ಬರೆದ ಕರ್ಣಕುಪ್ಪೆ ಗ್ರಾ.ಪಂ.
ಕರ್ಣಕುಪ್ಪೆ ಗ್ರಾ.ಪಂ.ಯಲ್ಲಿ ಬರೋಬ್ಬರಿ 620 ಇಂಗುಗುಂಡಿಗಳನ್ನು ನಿರ್ಮಿಸಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲೇ ಅತೀ ಹೆಚ್ಚು ಇಂಗುಗುಂಡಿ ಹೊಂದಿರುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಯ ಜೊತೆಗೆ ಸ್ವಚ್ಛ ಪರಿಸರ ಹೊಂದಿರುವ ಗ್ರಾಮ ಪಂಚಾಯತ್ ಎಂಬ ಹಿರಿಮೆಗೂ ಪಾತ್ರವಾಗಿದೆ.

ವಿಕೇಂದ್ರೀಕರಣದ ಮೂಲಕ ಘನ ತ್ಯಾಜ್ಯ ನಿರ್ವಹಣೆ
ಕರ್ಣಕುಪ್ಪೆ ಗ್ರಾಮ ಪಂಚಾಯಿತಿನಲ್ಲಿ ಸ್ವಚ್ಛಭಾರತ್ ಮಿಷನ್(ಗ್ರಾಮೀಣ) ಯೋಜನೆ, ಐಟಿಸಿ ಕಂಪನಿ, ಔಟ್ ರೀಚ್ ಸಂಸ್ಥೆಯ ಸಹಯೋಗದೊಂದಿಗೆ ಮನೆ, ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇನ್ನು ಆಯಾ ಗ್ರಾಮಗಳಲ್ಲಿ ತ್ಯಾಜ್ಯ ಶೇಖರಣೆ-ವಿಂಗಡಣೆ ಮಾಡುವ ಮೂಲಕ ಸ್ವಚ್ಛತೆ ಕಾಪಾಡಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ ಸಮಿತಿಯನ್ನು ರಚನೆ ಮಾಡಿ ಸಮಿತಿಯ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯ ಮಾಡಲಾಗುತ್ತಿದೆ. ಕಣಗಾಲಿನಲ್ಲಿ 1.16 ಎಕರೆ ಪ್ರದೇಶದಲ್ಲಿ ದೊಡ್ಡ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಿನೂತನ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಹರಿನಹಳ್ಳಿ,ಕಣಗಾಲು ಮತ್ತು ಹೆಮ್ಮಿಗೆ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ತೆಗೆದುಕೊಂಡು ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿ ಒಣ ಕಸ ಸಂಗ್ರಹಣೆ ಮಾಡುತ್ತಿದ್ದಾರೆ.

ದ್ರವತ್ಯಾಜ್ಯ ಮುಕ್ತ ಗ್ರಾಮ
ಹರೀನಹಳ್ಳಿಯ 148 ಹಾಗೂ ಕಣಗಾಲಿನ ಅಕ್ಕಿಮಾಳ ಗ್ರಾಮದ ಎಲ್ಲಾ 70 ಕುಟುಂಬಗಳೂಇಂಗುಗುಂಡಿ ನಿರ್ಮಿಸಿಕೊಳ್ಳುವುದರ ಜೊತೆಗೆ, ಮನೆಸುತ್ತಮುತ್ತ ಕೈತೋಟವನ್ನು ನಿರ್ಮಿಸಿಕೊಂಡು ಸಮರ್ಪಕವಾಗಿ ದ್ರವ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿವೆ. ಇದರಿಂದ ದ್ರವ ತ್ಯಾಜ್ಯ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದೆ.
ಮಾದರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಅಂದ್ಹಾಗೆ ಈ ಗ್ರಾಮ ಪಂಚಾಯತಿ ಇಷ್ಟೊಂದು ಗಮನ ಸೆಳೆಯುವುದಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ಇತರೆ ಅಧಿಕಾರಿಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಅದರಲ್ಲೂ ಈ ಗ್ರಾಮ ಪಂಚಾಯಿತಿಯ ಪಿ.ಡಿ.ಓ ರಾಮಣ್ಣ ಅವರ ಪಾತ್ರ ಮಹತ್ವದ್ದು. ಇವರ ಕರ್ತವ್ಯ ಪ್ರಜ್ಞೆ ಇಷ್ಟೆಲ್ಲಾ ಬದಲಾವಣೆಗೆ ಕಾರಣ ಅಂದರೆ ಅತಿಶಯೋಕ್ತಿಯಲ್ಲ. ಅವರು ಈ ಹಿಂದೆ ಬಿಳಿಗೆರೆ ಗ್ರಾ.ಪಂ.ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕೇವಲ 15 ದಿನಗಳಲ್ಲಿ 196 ಶೌಚಾಲಯಗಳನ್ನು ನಿರ್ಮಿಸಿ ಒಮ್ಮೆಲೇ ಉದ್ಘಾಟಿಸಿ ನಿರ್ಮಲ ಗ್ರಾಮ ಪಂಚಾಯಿತಿ ಪುರಸ್ಕಾರಕ್ಕೆ ಭಾಜನರಾಗಿದ್ದರು, ಉಳಿದ ನೇರಳಕುಪ್ಪೆ, ಹನಗೋಡು, ಉಯಿಗೊಂಡನಹಳ್ಳಿ, ಕಟ್ಟೇಮಳಲವಾಡಿ ಗ್ರಾ.ಪಂ.ಗಳಲ್ಲೂ ಉತ್ತಮ ಸಾಧನೆಗೈದಿದ್ದು, ಕರ್ಣಕುಪ್ಪೆ ಗ್ರಾ.ಪಂ. ಕೂಡ ಇದೇ ರೀತಿ ಮಾದರಿ ಗ್ರಾ.ಪಂಚಾಯತ್ ಆಗುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸರ್ಕಾರದ ಯೋಜನೆ ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಸಹಕಾರದ ಜೊತೆಗೆ ಜನರು ಕೂಡ ಅದೇ ನಿಟ್ಟಿನಲ್ಲಿ ಕೈಜೋಡಿಸಿದರೆ ಬದಲಾವಣೆ ಸಾಧ್ಯ ಎನ್ನುವುದಕ್ಕೆ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ಉತ್ತಮ ಉದಾಹರಣೆ.

4,679 total views, 4 views today