ಬಂಟ್ವಾಳ, ಮುಲ್ಕಿ, ಮಂಗಳೂರು ಮತ್ತು ಮೂಡುಬಿದಿರೆ ತಾಲ್ಲೂಕುಗಳ 51 ಗ್ರಾಮ ಪಂಚಾಯಿತಿಗಳ ಒಟ್ಟು 99 ಗ್ರಾಮಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮಂಗಳೂರು ತಾಲ್ಲೂಕಿನ ತಂಕ ಎಡಪದವು ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ರಿಂಡೇಲ್ ಎಂಬಲ್ಲಿ ಸ್ಥಾಪನೆಯಾಗಿರುವ, ರಾಜ್ಯದ ಎರಡನೇ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸಮಗ್ರ ಘನ ತ್ಯಾಜ್ಯ ಘಟಕ ತನ್ನ ಕಾರ್ಯನಿರ್ವಹಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.
10 ಟನ್ ಸಾಮರ್ಥ್ಯದ ಘಟಕ
ಗ್ರಾಮೀಣ ಪ್ರದೇಶಗಳ ಕಸದ ಸಮಸ್ಯೆಗೆ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು ಆರು ಎಕರೆ ಜಾಗದಲ್ಲಿ, ಕೇಂದ್ರ ಮತ್ತು ರಾಜ್ಯ ಸರಕಾರದ ಒಟ್ಟು 3 ಕೋಟಿ 73 ಲಕ್ಷ ರೂಪಾಯಿ ವೆಚ್ಚದಲ್ಲಿ ಘಟಕ ಸ್ಥಾಪನೆಯಾಗಿದೆ. ದಿನವೊಂದಕ್ಕೆ 10 ಟನ್ ಘನ ತ್ಯಾಜ್ಯ ನಿರ್ವಹಣಾ ಸಾಮರ್ಥ್ಯವನ್ನು ಘಟಕ ಹೊಂದಿದ್ದು, ಪ್ರಾಯೋಗಿಕವಾಗಿ ಈಗ 3 ಟನ್ ತ್ಯಾಜ್ಯವನ್ನು ನಿರ್ವಹಿಸಲಾಗುತ್ತಿದೆ.
ಖಾಸಗಿ ಸಂಸ್ಥೆಯು ಘಟಕದ ನಿರ್ವಹಣಾ ಹೊಣೆ ಹೊತ್ತಿದ್ದು, ಸದ್ಯ 15 ಮಹಿಳೆಯರು ಮತ್ತು ಮೂವರು ಪುರುಷರು ಸೇರಿದಂತೆ ಒಟ್ಟು 18 ಕಾರ್ಮಿಕರು ಇಲ್ಲಿಗೆ ಬರುವ ಪ್ಲಾಸ್ಟಿಕ್, ಫೈಬರ್, ಪೇಪರ್ ಮತ್ತು ಇನ್ನಿತರ ತ್ಯಾಜ್ಯವನ್ನು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡುತ್ತಿದ್ದು, ಈ ರೀತಿ ವಿಂಗಡಿಸಲ್ಪಟ್ಟ ತ್ಯಾಜ್ಯವನ್ನು ಇಲ್ಲಿಂದ ರಿಸೈಕ್ಲಿಂಗ್ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ರಾಜ್ಯದ ಬಳ್ಳಾರಿ, ರಾಮನಗರ ಮತ್ತು ಉಡುಪಿಯಲ್ಲಿ ಇಂತಹದೇ ಘಟಕಗಳು ಸ್ಥಾಪನೆಯಾಗಿವೆ.
ಪ್ರಾರಂಭದಲ್ಲಿ ಘಟಕ ಸ್ಥಾಪನೆಗೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿತ್ತು. ಘಟಕದಿಂದ ವಾಸನೆ ಬರಲಿದೆ ಅಲ್ಲದೇ ತ್ಯಾಜ್ಯವನ್ನು ಸುಡುತ್ತಾರೆ ಹಾಗೂ ಘಟಕದಿಂದ ಅಂತರ್ಜಲದ ನೀರು ಕಲುಷಿತಗೊಳ್ಳಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆದರೆ ಘಟಕದಿಂದ ಇಂತಹ ಯಾವುದೇ ಸಮಸ್ಯೆ ಉಂಟಾಗಿಲ್ಲ.
"ಈ ಘಟಕ ಸ್ಥಾಪನೆಯಿಂದ, ಮಹಾತ್ಮ ಗಾಂಧಿಜಿ ಅವರ ಸ್ವಚ್ಛ ಭಾರತದ ಸಂಕಲ್ಪ ನಿಜ ಮಾಡಲು ಹೆಜ್ಜೆ ಇಟ್ಟಂತಾಗಿದೆ. ಎಡಪದವು ಗ್ರಾಮ ಪಂಚಾಯಿತಿಯಲ್ಲಿ ಘಟಕ ಸ್ಥಾಪನೆಗೆ ಕೊಡುಗೆ ನೀಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದ" ಎಂದು ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
"ಕಳೆದ ಒಂದು ತಿಂಗಳಿಂದ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಪ್ರಾರಂಭಿಕವಾಗಿ ಈಗ 13 ಟನ್ ತ್ಯಾಜ್ಯವನ್ನು ನಿರ್ವಹಿಸಲಾಗುತ್ತಿದೆ. ಸದ್ಯ 18 ಜನ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ 10 ಟನ್‌ನಷ್ಟು ಸಂಪೂರ್ಣ ಸಾಮರ್ಥ್ಯ ದಲ್ಲಿ ಘಟಕ ಕಾರ್ಯ ನಿರ್ವಹಿಸಲಿದೆ" ಎನ್ನುತ್ತಾರೆ ಘಟಕದ ಮೇಲ್ವಿಚಾರಕರು.
ಭೂಮಿಯ ಮೇಲಿನ ಸಂಪನ್ಮೂಲಗಳು ಪರಿಮಿತವಾಗಿವೆ. ಅವುಗಳನ್ನು ಎಚ್ಚರಿಕೆಯಿಂದ ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ತ್ಯಾಜ್ಯವನ್ನು ಸಂಸ್ಕರಿಸಿ ಸಂಪನ್ಮೂಲವಾಗಿಸೋಣ. ಸಂಪನ್ಮೂಲಗಳನ್ನು ಮರುಬಳಕೆ ಮಾಡೋಣ
1,920 total views, 1 views today