ಅಭಿವೃದ್ಧಿಯ ಜೊತೆಜೊತೆಗೇ ಬೆಳೆದುಬಂದು ಅವನತಿಗೂ ಕಾರಣವಾಗುತ್ತಿರುವ ವಸ್ತು ಪ್ಲಾಸ್ಟಿಕ್. ಇಂದು ನಾವು ನೋಡುವ ಬಹಳಷ್ಟು ವಸ್ತುಗಳು ಪ್ಲಾಸ್ಟಿಕ್‌ನಿಂದಲೇ ತಯಾರಾಗಿವೆ. ನಾವು ಉತ್ಪಾದಿಸುವ ಪ್ಲಾಸ್ಟಿಕ್‌ನಲ್ಲಿ ಹೆಚ್ಚಿನ ಮಟ್ಟದ ಪ್ಲಾಸ್ಟಿಕ್ ವಸ್ತುವನ್ನು ಒಂದು ಬಾರಿ ಬಳಸಿ ಎಸೆಯಲಾಗುತ್ತದೆ.
ಅಧ್ಯಯನಗಳ ಪ್ರಕಾರ ಉತ್ಪಾದನೆಯಾದ ೯ ಬಿಲಿಯನ್ ಟನ್‌ನಷ್ಟು ಪ್ಲಾಸ್ಟಿಕ್‌ನಲ್ಲಿ ಕೇವಲ ೯% ಮಾತ್ರ ಮರುಬಳಕೆಯಾಗುತ್ತಿದೆ. ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಭೂಭರ್ತಿ ಅಥವಾ ತ್ಯಾಜ್ಯ ಸಂಗ್ರಹಣೆಯಾಗಿ ಪರಿಸರದಲ್ಲಿಯೇ ಉಳಿದುಹೋಗುತ್ತವೆ. ಇದೇ ರೀತಿಯ ಬಳಕೆ ಹಾಗೂ ತ್ಯಾಜ್ಯ ನಿರ್ವಹಣೆ ಮುಂದುವರೆದರೆ, ೨೦೫೦ರ ವೇಳೆಗೆ ಪರಿಸರದಲ್ಲಿ ಹಾಗೂ ಭೂಭರ್ತಿಯಲ್ಲಿ ಸುಮಾರು ೧೨ ಬಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವಿರುತ್ತದೆ.
ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯವು ಕೊಳೆಯುವುದಿಲ್ಲ. ಬದಲಾಗಿ ಅವು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲ್ಪಡುವ ಅತಿ ಸಣ್ಣ ಚೂರುಗಳಾಗಿ ಉಳಿಯುತ್ತವೆ. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಚೀಲಗಳು, ವಸ್ತುಗಳು sಸಾವಿರಾರು ವರ್ಷಗಳಾದರೂ ಭೂಮಿಯಲ್ಲಿ ಕೊಳೆಯದೇ ಉಳಿದುಬಿಡುತ್ತವೆ. ಈ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಹೆಚ್ಚಿನವೆಂದರೆ ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಹಾರದ ಪ್ಯಾಕೇಜುಗಳು, ಸ್ಟ್ರಾಗಳು, ಮುಂತಾದ ವಸ್ತುಗಳು. ಇಂತಹಾ ಪ್ಲಾಸ್ಟಿಕ್ ತ್ಯಾಜ್ಯ ಹಲವಾರು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ನೀರು ಹರಿಯುವ ದಾರಿಯನ್ನು ಮುಚ್ಚಿ ಅದರಿಂದ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಬಹುದು. ನೀರಿನಲ್ಲಿ ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಜಲಚರಗಳು ಆಹಾರವೆಂದು ಸೇವಿಸಿ ಪ್ರಾಣಹಾನಿಗೊಳಗಾಗುವ ಸಾಧ್ಯತೆಯಿರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವುದರಿಂದ ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಈ ಎಲ್ಲ ಸಮಸ್ಯೆಗಳ ಪರಿಹಾರ ನಮ್ಮ ಕೈಯಲ್ಲಿಯೇ ಇದೆ. ಏಕಬಳಕೆ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವುದು ಇದರ ಮೊದಲ ಹೆಜ್ಜೆ. ಇದರೊಂದಿಗೆ ಸಮರ್ಪಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಹಸಿ ತ್ಯಾಜ್ಯದೊಂದಿಗೆ ಒಣ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯದೇ ಸಮರ್ಪಕವಾಗಿ ವಿಂಗಡಿಸುವುದು ಮುಖ್ಯ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಈ ನಿಟ್ಟಿನಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಘನ ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಿ, ಅದನ್ನು ಮರುಬಳಕೆ ಮಾಡಲಾಗುತ್ತದೆ. ಯಂತ್ರಗಳ ಸಹಾಯದಿಂದ ಅದರಲ್ಲಿರುವ ಧೂಳನ್ನು ತೆಗೆದು ಅದನ್ನು ಸಂಕುಚಿತಗೊಳಿಸಲಾಗುತ್ತದೆ. ನಂತರ ಅಂತಹಾ ತ್ಯಾಜ್ಯಗಳನ್ನು ಮರುಬಳಕೆ ಮಾಡಲಾಗುತ್ತದೆ. ಮೆಟಿರಿಯಲ್ ರಿಕವರಿ ಘಟಕಗಳಲ್ಲಿ ಅವುಗಳಿಂದ ಮೂಲ ವಸ್ತುಗಳನ್ನು ಪುನಸಂಪಾದಿಸಲಾಗುತ್ತದೆ.
ಹಲವಾರು ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪನ್ಮೂಲವಾಗಿಸಿದ್ದಾರೆ. ರಾಣೆಬೆನ್ನೂರಿನಲ್ಲಿ ತ್ಯಾಜ್ಯದಿಂದ ಉದ್ಯಾನವನವನ್ನೇ ನಿರ್ಮಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಹುಲಗಿಯ ಬಹುಗ್ರಾಮ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ರಸ್ತೆ ನಿರ್ಮಾಣ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಶೌಚಾಲಯದ ಗೋಡೆಗಳನ್ನು ನಿರ್ಮಿಸಲಾಯಿತು. ಇವೆಲ್ಲಾ ಪ್ಲಾಸ್ಟಿಕ್ ಮರುಬಳಕೆಯ ಕುರಿತಾಗಿ ನಮ್ಮ ಮುಂದಿರುವ ಕೆಲವು ಉದಾಹರಣೆಗಳು.
ಆದರೆ ಇದು ಕೇವಲ ಸರ್ಕಾರದ ಕೆಲಸವಲ್ಲ. ಇದರಲ್ಲಿ ಸಮುದಾಯದ ಪಾತ್ರ ಹಾಗೂ ಜವಾಬ್ದಾರಿ ಹೆಚ್ಚಿದೆ. ಪ್ಲಾಸ್ಟಿಕ್‌ನ ಮರುಬಳಕೆ ಹೇಗೆ ಮುಖ್ಯವೋ, ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ಅದಕ್ಕಿಂದ ಮುಖ್ಯ. ನಾಗರಿಕರಾಗಿ ನಾವು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು. ಏಕಬಳಕೆ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುವುದು ನಮ್ಮ ಜವಾಬ್ದಾರಿ. ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕೊಳ್ಳುವುದರ ಬದಲು ಬಾಟಲಿಯಲ್ಲಿ ನೀರನ್ನು ತೆಗೆದುಕೊಂಡು ಹೋಗುವುದು, ಸ್ಟ್ರಾ ಬಳಸದಿರುವುದು, ದಿನಸಿ, ತರಕಾರಿಗಳನ್ನು ಕೊಳ್ಳುವಾಗ ಅಂಗಡಿಯವರ ಬಳಿ ಪ್ಲಾಸ್ಟಿಕ್ ಕವರ್ ಅನ್ನು ಕೇಳದಿರುವುದು. ಬಟ್ಟೆಯ ಚೀಲಗಳನ್ನು ಬಳಸುವುದು. ಬಳಸಿ ಎಸೆಯುವಂತಹ ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚಗಳನ್ನು ಬಳಸುವುದನ್ನು ನಿಲ್ಲಿಸುವುದು ಇಂತಹಾ ಹಲವಾರು ಸಣ್ಣ ಸಣ್ಣ ನಿರ್ಧಾರಗಳು ಬೃಹತ್ ಬದಲಾವಣೆಗೆ ನಾಂದಿಯಾಗಬಲ್ಲದು.
ನಮ್ಮ ಭವಿಷ್ಯದ, ಆರೋಗ್ಯದ ಜವಾಬ್ದಾರಿ ನಮ್ಮೆಲ್ಲರದೂ ಆಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗೋಣ. ಸ್ವಚ್ಛ ಆರೋಗ್ಯಕರ ಪರಿಸರ ನಿರ್ಮಿಸೋಣ.
7,677 total views, 1 views today