ಇತಿಹಾಸದ ಗತವೈಭವದಲ್ಲಿ ನೈರ್ಮಲ್ಯತೆಯ ಬಿಂಬವಾಗಿದ್ದ ಭಾರತ, ಇಂದು ಪ್ರತಿ ಹಳ್ಳಿಯಲ್ಲಿಯೂ ತ್ಯಾಜ್ಯ ವಿಲೇವಾರಿಯ ಸವಾಲನ್ನು ಎದುರಿಸುತ್ತಿದೆ. ತ್ಯಾಜ್ಯದಲ್ಲಿ ಎರಡು ವಿಧ. ಒಂದು ಘನ ತ್ಯಾಜ್ಯ ಮತ್ತೊಂದು ದ್ರವ ತ್ಯಾಜ್ಯ. ರಾಜ್ಯದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯ ಹೊಣೆ ಹೊತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈಗಾಗಲೇ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ. ರಾಜ್ಯದ 3849 ಗ್ರಾಮಗಳಿಂದ ಒಣ ತ್ಯಾಜ್ಯವನ್ನು ಸಂಗ್ರಹಿಸಲಾಗಿತ್ತಿದ್ದು, 1803 ಸ್ವಚ್ಛ ಸಂಕೀರ್ಣ (ಘನ ತ್ಯಾಜ್ಯ ವಿಲೇವಾರಿ ಘಟಕ) ಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಘನ ತ್ಯಾಜ್ಯ ನಿರ್ವಹಣೆಗಷ್ಟೇ ಅಲ್ಲದೆ ದ್ರವ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿಯೂ ಮಹತ್ತರ ಹೆಜ್ಜೆ ಇಟ್ಟಿರುವ ಇಲಾಖೆ ರಾಜ್ಯದ ಆಯ್ದ 16 ಸ್ಥಳಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಯ ಪ್ರಾಯೋಗಿಕ ಯೋಜನೆಗಳನ್ನು ಸಿದ್ಧಪಡಿಸಿದೆ.
ಸಮರ್ಪಕ ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು, ಇಲ್ಲೊಂದು ಪುಟ್ಟ ಶಾಲೆ ಈ ನಿಟ್ಟಿನಲ್ಲಿ ಮಾದರಿ ಕಾರ್ಯ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪಿಗೆ ಸೇರಿದ ‘ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಯಲ್ಲಿ 22 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಈ ಶಾಲೆಯಲ್ಲಿ ನೈರ್ಮಲ್ಯ ಮತ್ತು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇಲ್ಲಿ ಉತ್ಪಾದನೆಯಾದ ಬೂದು ನೀರಿನ ನಿರ್ವಹಣೆಯನ್ನು ಖುದ್ದು ಈ ಶಾಲೆಯ ವಿದ್ಯಾರ್ಥಿಗಳೇ ಮಾಡುತ್ತಾ ಬಂದಿರುವುದು ವಿಶೇಷ. ಶಾಲೆಯಲ್ಲಿ ಮಕ್ಕಳಿಗೆ ಕೈತೊಳೆಯುವ ಉದ್ದೇಶದಿಂದ 5 ಹ್ಯಾಂಡ್ ವಾಷ್ ಬೇಸಿನ್‌ಗಳನ್ನು ಅಳವಡಿಸಲಾಗಿದೆ. ಅಕ್ಷರ ದಾಸೋಹ ಕೊಠಡಿಯಲ್ಲಿ ಪಾತ್ರೆ ತೊಳೆಯುವ ಉದ್ದೇಶಕ್ಕಾಗಿ ಒಂದು ನಲ್ಲಿಯನ್ನು ಅಳವಡಿಸಲಾಗಿದ್ದು, ಮಕ್ಕಳು ಕೈ ತೊಳೆದ ನೀರು ಮತ್ತು ಪಾತ್ರೆ ತೊಳೆದ ನೀರು ಎಲ್ಲಿಯೂ ಶೇಖರಣೆಯಾಗದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಈ ಶಾಲೆಯಲ್ಲಿ ಉತ್ಪತ್ತಿಯಾಗುವ ದ್ರವ ತ್ಯಾಜದ ನಿರ್ವಹಣೆಗಾಗಿ ಇಲ್ಲಿ ಅಳವಡಿಸಿರುವ ಹ್ಯಾಂಡ್ ವಾಷ್ ಬೇಸಿನ್ ಹಾಗೂ ಅಡುಗೆ ಮನೆಯ ನಲ್ಲಿಯ ನೀರು ಹರಿಯಲು 2.5 ಇಂಚಿನ ಪೈಪ್ ಅನ್ನು ಅಳವಡಿಸಲಾಗಿದೆ. ಈ ಪೈಪ್ ಮೂಲಕ ಹರಿಯುವ ತ್ಯಾಜ್ಯ ನೀರು ಶಾಲೆಯ ಕೈ ತೋಟವನ್ನು ಸೇರುತ್ತದೆ. ಈ ಪೈಪ್‌ಗಳು ಜನರ ಓಡಾಟ ಮತ್ತು ವಾಹನಗಳ ಓಡಾಟದಿಂದ ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪೈಪ್ ಅನ್ನು ನೆಲದಲ್ಲಿ ಹೂಳಲಾಗಿದೆ. ಶಾಲೆಯಿಂದ 40 ಮೀಟರ್ ದೂರದವರೆಗೂ ಈ ಪೈಪ್ ಅನ್ನು ಅಳವಡಿಸಲಾಗಿದ್ದು, ಕೊನೆಯಲ್ಲಿ ಎಂಡ್ ಕ್ಯಾಪ್ ನಿಂದ ಮುಚ್ಚಲಾಗಿದೆ. ಎಂಡ್ ಕ್ಯಾಪ್‌ಗೂ ಮುನ್ನ ಪೈಪಿನ ಎಡ ಮತ್ತು ಬಲ ಭಾಗಗಳಲ್ಲಿ ಒಂದೊಂದು ರಂಧ್ರವನ್ನು ಮಾಡುವ ಮೂಲಕ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ. ಈ ರಂಧ್ರಗಳಿಗೆ ಹನಿ ನೀರಾವರಿಯ ಪೈಪ್‌ಗಳನ್ನು ಜೋಡಿಸಲಾಗಿದ್ದು, ಶಾಲೆಯ ಆವರಣದಲ್ಲಿ ಸಾಮಾಜಿಕ ಅರಣ್ಯ ಯೋಜನೆಯಡಿ ನೆಡಲಾಗಿರುವ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರನ್ನು ಹಾಯಿಸಲಾಗುತ್ತಿದೆ. ಈ ಶಾಲೆಯ ಮತ್ತೊಂದು ವಿಶೇಷ ಅಂದರೆ ಇಲ್ಲಿ ನೆಡಲಾಗಿರುವ ಗಿಡಗಳ ಆರೈಕೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೇ ನೀಡಲಾಗಿದೆ.
ರಜಾ ದಿನಗಳಲ್ಲಿ ಶಾಲೆಯ ಹೊರಭಾಗದಲ್ಲಿ ಅಳವಡಿಸಿರುವ ನಲ್ಲಿಯನ್ನು ಯಾರೇ ಸ್ಥಳೀಯರು ಬಳಕೆ ಮಾಡಿದರೂ ಶಾಲೆಯ ಎಡಭಾಗದಲ್ಲಿರುವ ಪುನರ್ಬಳಕೆ ಪೈಪಿನ ಮೂಲಕ ಗಿಡಗಳಿಗೆ ನೀರು ಪೂರೈಕೆಯಾಗುತ್ತದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಇದೇ ಊರಿನವರಾಗಿದ್ದು, ರಜಾ ದಿನಗಳಲ್ಲಿಯೂ ಪೋಷಕರ ಸಹಾಯದಿಂದ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದಿರುವುದು ಇಲ್ಲಿನ ಮತ್ತೊಂದು ವಿಶೇಷ.
ಇಲ್ಲಿನ ಮುಖ್ಯ ಶಿಕ್ಷಕರಾದ ನಟರಾಜ್ ಎಂ.ಎಸ್ ರವರು ಹೇಳುವ ಪ್ರಕಾರ, ‘ಸಮರ್ಪಕವಾದ ದ್ರವ ತ್ಯಾಜ್ಯವನ್ನು ಮೂಲದಲ್ಲಿಯೇ ನಿರ್ವಹಿಸುತ್ತಿರುವುದರಿಂದ ನಮ್ಮ ಶಾಲೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದೆ. ಹಾಗೂ ಮಕ್ಕಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವುದರಿಂದ ಅವರಿಗೂ ಇದೊಂದು ಅಧ್ಯಯನವಾಗಿರುವುದರಿಂದ ತಮ್ಮ ತಮ್ಮ ಮನೆಗಳಲ್ಲಿನ ತ್ಯಾಜ್ಯ ನೀರನ್ನು ಮನೆಯ ಹಂತದಲ್ಲಿಯೇ ನಿರ್ವಹಿಸುವ ಬಗ್ಗೆ ಮಕ್ಕಳು ಜಾಗೃತರಾಗಿದ್ದಾರೆ. ನೈರ್ಮಲ್ಯದ ಪ್ರಾಯೋಗಿಕ ಪಾಠ ಕಲಿತಂತಾಗುತ್ತಿದೆ ಎನ್ನುತ್ತಿದ್ದಾರೆ’
ಇಲ್ಲಿನ ಶಿಕ್ಷಕರ ಇಚ್ಛಾ ಶಕ್ತಿಯಿಂದ ಈ ಪುಟ್ಟ ಶಾಲೆ ನೀರಿನ ಮರುಬಳಕೆಯ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿ ಹೊರಹೊಮ್ಮಿದೆ.
6,120 total views, 1 views today