Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನೀರು ಜೀವಾಮೃತ. ಸಕಲ ಜೀವರಾಶಿಗಳಿಗೂ ಇದು ಜೀವಾಧಾರ. ಆದರೆ ಇಂದು ನೀರಿನ ಸಂರಕ್ಷಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ನಿರ್ಲಕ್ಷ್ಯದ ಪರಿಣಾಮ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹೆಚ್ಚುತ್ತಿರುವ ಹವಾಮಾನ ಬದಲಾವಣೆ ಹಾಗೂ ಪರಿಸರನಾಶದ ಪರಿಣಾಮ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ತುಂಬಿ ತುಳುಕುತ್ತಿದ್ದ ಲಕ್ಷಾಂತರ ನೀರಿನ ಮೂಲಗಳು ಇಂದು ಬತ್ತಿಹೋಗಿವೆ.

ರಾಜ್ಯದ ಸುಮಾರು ಶೇ.70% ರಷ್ಟು ಭಾಗದಲ್ಲಿ ಸರಾಸರಿ 750 ಮಿ.ಮೀ.ಗಿಂತಲೂ ಕಡಿಮೆ ಮಳೆಯಾಗುತ್ತಿದೆ. ರಾಜ್ಯದ ಒಟ್ಟು ಕೃಷಿ ಭೂಮಿಯಲ್ಲಿ ಶೇ.60% ರಷ್ಟು ಮಳೆಯಾಶ್ರಿತ ಬೆಳೆಯನ್ನು ಬೆಳೆಯಲಾಗುತ್ತಿದೆ. ಇತ್ತೀಚಿಗೆ ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ಬಹಳಷ್ಟು ತಾಲೂಕುಗಳು ಬರಪೀಡಿತವಾಗಿವೆ. ಕರ್ನಾಟಕ ರಾಜ್ಯದಲ್ಲಿ 3472.5 ಟಿಎಂಸಿ ಸಾಮರ್ಥ್ಯದ ಏಳು ಪ್ರಮುಖ ನದಿ ಪಾತ್ರಗಳಿವೆ, ಆದರೆ ಇದರಲ್ಲಿ ಉಪಯೋಗಿಸಲು ಸಾಧ್ಯವಾಗುವುದು ಕೇವಲ ಶೇ.50% ಮಾತ್ರ.

ರಾಜ್ಯದ ಜಲಮೂಲಗಳು ಬತ್ತಿಹೋಗಲು ಮತ್ತು ನೀರಿಗಾಗಿ ಹಾಹಾಕಾರ ಉಂಟಾಗಲು ಮೂಲ ಕಾರಣ ನಾವೇ ಆಗಿದ್ದೇವೆ. ಈ ಎಲ್ಲಾ ಸಮಸ್ಯೆಗಳ ಪರಿಹಾರ ನಮ್ಮ ಕೈಯಲ್ಲಿದೆ ಎಂಬ ಅರಿವು ಸಾರ್ವಜನಿಕರಲ್ಲಿ ಮೂಡದಿರುವುದು ದುರದೃಷ್ಟಕರ. ರಾಜ್ಯದಲ್ಲಿ ಜಲಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸಿ ನಾಡನ್ನು ಜಲಸುಭದ್ರಗೊಳಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು 2019ನ್ನು ಜಲ ವರ್ಷವೆಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ನೀರಿನ ಸುಸ್ಥಿರತೆಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಜಲಾಮೃತ ಯೋಜನೆಯನ್ನು ಆಂದೋಲನವಾಗಿ ಪ್ರಾರಂಭಿಸಿದೆ.

ಜಲಾಮೃತ ಯೋಜನೆಯ ನಾಲ್ಕು ಮುಖ್ಯ ಆಧಾರಸ್ತಂಭಗಳು:

1. ಜಲ ಸಾಕ್ಷರತೆ: ಕರ್ನಾಟಕ ರಾಜ್ಯದಲ್ಲಿ ಸಿಹಿನೀರಿನ ತಾಣಗಳು ಇಳಿಕೆಯಾಗುತ್ತಿದ್ದು, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನೀರಿನ ಲಭ್ಯತೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಮಳೆಯ ತೀವ್ರ ಅಭಾವದಿಂದ ಜಲಮೂಲಗಳು ಬರಡಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿ ಜಲ ಸಂರಕ್ಷಣೆಯ ಕುರಿತಾಗಿ ಇರುವ ಅರಿವಿನ ಕೊರತೆ. ಈ ನಿಟ್ಟಿನಲ್ಲಿ ರಾಜ್ಯದುದ್ದಕ್ಕೂ ಜಲ ಸಾಕ್ಷರತೆ ಮೂಡಿಸಿ ನೀರಿನ ಪ್ರತಿ ಹನಿಯ ಮಹತ್ವ ಕುರಿತು ಜನರಿಗೆ ತಿಳಿಸುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ.

2. ಜಲ ಸಂರಕ್ಷಣೆ: ರಾಜ್ಯದಲ್ಲಿ 7 ಪ್ರಮುಖ ನದಿಗಳು, ಸುಮಾರು 37,000 ಕೆರೆಗಳು ಹಾಗೂ ಸಾವಿರಾರು ಕೊಳಗಳು, ಕುಂಟೆಗಳು ಇನ್ನಿತರ ನೀರಿನ ಮೂಲಗಳಿವೆ. ಆದರೆ ನಗರೀಕರಣ ಮತ್ತು ಕೈಗಾರಿಕೆಗಳ ಪರಿಣಾಮ ಜಲ ಸಂಪನ್ಮೂಲಗಳು ಮಲಿನವಾಗಿವೆ. ಇಂದಿನ ಅಗತ್ಯಕ್ಕೆ ಮಾತ್ರವಲ್ಲದೆ ಭವಿಷ್ಯವನ್ನೂ ಜಲ ಸಮೃದ್ಧಗೊಳಿಸುವ ಉದ್ದೇಶದಿಂದ ನಾಡಿನ ಮೂಲೆ ಮೂಲೆಯಲ್ಲೂ ನೀರಿನ ಮೂಲಗಳ ಪುನರುಜ್ಜೀವನ ಕಾರ್ಯಗಳು ಭರದಿಂದ ಸಾಗಿವೆ. ಈಗಾಗಲೇ ಇರುವ ನೀರಿನ ಮೂಲಗಳ ಪುನಶ್ಚೇತನ ಹಾಗೂ ಹೊಸ ಜಲಮೂಲಗಳ ಸೃಷ್ಟಿ ಕಾರ್ಯಗಳು ನಾಡಿನಾದ್ಯಂತ ನಡೆದಿವೆ.

3. ಜಲದ ಸಮರ್ಥ ಬಳಕೆ: ನೀರಿನ ಉಪಯೋಗ ಹಾಗೂ ದುರುಪಯೋಗದ ನಡುವಿನ ಗೆರೆ ಕ್ರಮೆಣ ಮಾಸಿಹೋಗಿದ್ದು, ನಾವು ನೀರಿನ ಬೆಲೆಯನ್ನು ಮರೆತಿದ್ದೇವೆ. ನೀರನ್ನು ಮಿತವಾಗಿ ಬಳಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಪ್ರತಿ ಮನೆಯಲ್ಲೂ ಮಳೆ ನೀರಿನ ಕೊಯ್ಲು ಮಾಡುವುದು, ಅಂತರ್ಜಲ ಮರುಪೂರಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾಡಿನಾದ್ಯಂತ ಜನತೆಯಲ್ಲಿ ಮಳೆನೀರಿನ ಸಂಗ್ರಹಣೆ, ಅಂತರ್ಜಲ ಮರುಪೂರಣ ಹಾಗೂ ನೀರಿನ ಮಿತಬಳಕೆಯ ಕುರಿತಾದ ಜಾಗೃತಿ ಮೂಡಿಸಲಾಗುತ್ತಿದೆ.

4.ಹಸಿರೀಕರಣ: ನೀರಿನ ಮೂಲಗಳ ಬತ್ತುವಿಕೆ, ಸಿಹಿನೀರಿನ ತಾಣಗಳ ಇಳಿಕೆ, ಹವಾಮಾನ ಬದಲಾವಣೆ, ಬರಪೀಡಿತವಾಗುತ್ತಿರುವ ನಾಡು, ಇದಕ್ಕೆ ಮುಖ್ಯ ಕಾರಣಗಳಲ್ಲೊಂದು ಅರಣ್ಯ ನಾಶ. ಹಸಿರಿಲ್ಲದೇ ಅಂತರ್ಜಲ ನಾಶವಾಗುತ್ತಿದೆ. ಈ ನೆಲೆಯಲ್ಲಿ ಸಮುದಾಯ ಆಧಾರಿತವಾದ ಜಾಗೃತಿಯ ಮೂಲಕ ನಾಡಿನಾದ್ಯಂತ ಗಿಡಗಳನ್ನು ನೆಡುವ ಆಂದೋಲನ ಪ್ರಾರಂಭವಾಗಿದೆ. ಸುಸ್ಥಿರ ಜಲ ಸಂರಕ್ಷಣೆಗಾಗಿ ಕರ್ನಾಟಕ ಈಗ ಮುನ್ನಡೆಯುತ್ತಿದೆ. ಇದರೊಂದಿಗೆ ಗ್ರಾಮೀಣ ಕರ್ನಾಟಕದಲ್ಲಿ ಕುಡಿಯುವ ನೀರಿನ ಶುದ್ಧತೆ ಕುರಿತಾದ ಜಾಗೃತಿ ಮೂಡಿಸಲು ಹಾಗೂ ಕುಡಿಯುವ ನೀರಿನ ಬೇಗೆ ತಪ್ಪಿಸಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

ಕುಡಿಯುವ ನೀರು ಅಶುದ್ಧವಾದಾಗ ಟೈಫಾಯಿಡ್, ಕಾಲರಾ, ರಕ್ತಹೀನತೆ, ಚರ್ಮರೋಗ, ಹಲ್ಲಿನ ಫ್ಲೂರೋಸಿಸ್, ಅತಿಸಾರ ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕರ್ನಾಟಕದ ನಿರಂತರ ಶುದ್ಧ ನೀರಿನ ಕನಸನ್ನು ನನಸು ಮಾಡುವ ಸಲುವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಹೆಜ್ಜೆ ಮುಂದಿಟ್ಟಿದೆ.

ಕರ್ನಾಟಕದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 474 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, 17,679 ಶುದ್ಧ ಕುಡಿಯುವ ನೀರಿನ ಘಟಕಗಳು ಸುಮಾರು 6,737 ಫಲಾನುಭವಿ ಜನವಸತಿಗಳ ಸುಮಾರು 2.20 ಕೋಟಿ  ಜನರ ದಾಹ ನೀಗಿಸುತ್ತಿವೆ.

ನಾಡಿನ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ರಾಜ್ಯದ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಒದಗಿಸಲು ರಾಜ್ಯ ಸರ್ಕಾರವು “ಮನೆ ಮನೆಗೆ ಗಂಗೆ ಯೋಜನೆ” ಯನ್ನು ಆರಂಭಿಸಿದೆ. ಇದರ ಅನುಸಾರ 2020-21ನೇ ಸಾಲಿನಲ್ಲಿ ರಾಜ್ಯದ 10 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಜಲ ಸಾಕ್ಷರತೆ, ಜಲ ಸಂರಕ್ಷಣೆ, ಜಲ ಮೂಲಗಳ ಪುನರುಜ್ಜೀವನ, ಶುದ್ಧ ಕುಡಿಯುವ ನೀರಿನ ಪೂರೈಕೆ ಮುಂತಾದ ಎಲ್ಲ ನೆಲೆಗಳಲ್ಲಿ ಸರ್ಕಾರವು ಕರ್ನಾಟಕವನ್ನು ಜಲ ಸಮೃದ್ಧವಾಗಿಸಲು ಮುಂದಾಗಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆಗಳಲ್ಲಿ ಸರಳವಾಗಿ ನೀರಿನ ಮಿತಬಳಕೆ ಮಾಡುವುದು, ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವುದು, ಮಳೆನೀರು ಇಂಗು ಗುಂಡಿಗಳ ಮೂಲಕ ಭೂಮಿಗಿಳಿದು ಅಂತರ್ಜಲ ಮರುಪೂರಣವಾಗುವಂತೆ ಮಾಡುವುದು, ಜಲಮೂಲಗಳನ್ನು ಕಲುಷಿತಗೊಳಿಸದಿರುವುದು, ಇತರರಲ್ಲಿ ಜಲ ಸಾಕ್ಷರತೆ ಮೂಡಿಸುವುದು ಮುಂತಾದುವುಗಳು ನಾವು ನೀವೆಲ್ಲರೂ ಮಾಡಬೇಕಾದ ಕರ್ತವ್ಯಗಳಾಗಿವೆ. ಬನ್ನಿ, ಸರ್ಕಾರದೊಂದಿಗೆ ಕೈಜೋಡಿಸೋಣ. ಜಲಸಮೃದ್ಧ ನಾಡನ್ನು ನಿರ್ಮಿಸೋಣ.

 6,970 total views,  2 views today

WhatsApp chat