Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

19ನೇ ನವೆಂಬರ್ 2018 ರಂದು ಇಡೀ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಘೋಷಿಸಲಾಯಿತು. ಮುಂದುವರೆದು ಇಡೀ ದೇಶವನ್ನು 2ನೇ ಅಕ್ಟೋಬರ್ 2019 ರಂದು ಬಯಲು ಬಹಿರ್ದೆಸೆ ಮುಕ್ತ ದೇಶ ಎಂದು ಘೋಷಿಸಲಾಯಿತು. ಹೀಗೆ ನಿಗದಿತ ದಿನಗಳಂದು ರಾಜ್ಯ ಮತ್ತು ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಮತ್ತು ದೇಶ ಎಂದು ಘೋಷಿಸಬೇಕಾದರೆ ಅದರ ಹಿಂದನ ಪರಿಶ್ರಮ ಬಹಳಷ್ಟಿರುತ್ತದೆ. ಕೆಲವು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಇಂತಹ ಘೋಷಣೆಗಳನ್ನು ದಾಖಲೀಕರಿಸಬೇಕಾಗಿರುತ್ತದೆ. ರಾಜ್ಯವನ್ನೂ ಸಹ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಘೋಷಿಸಿದಾಕ್ಷಣ ರಾಜ್ಯದಲ್ಲಿ ವಾಸವಾಗಿರುವ ಪ್ರತಿಯೊಬ್ಬರೂ ಶೌಚಕ್ಕಾಗಿ ಪ್ರತಿ ಬಾರಿಯೂ ಶೌಚಾಲಯವನ್ನೇ ಬಳಸುತ್ತಿದ್ದಾರೆಂದಲ್ಲ. ಜನರ ಮನಸ್ಥಿತಿ ಹಾಗೂ ಅವರುಗಳ ನಡವಳಿಕೆಯಲ್ಲಿ ಬದಲಾವಣೆ ತರುವುದು ಇಂದಿಗೂ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ದೇಶಾದ್ಯಂತ ಸ್ವಚ್ಛ ಭಾರತ್ ಮಿಷನ್(ಗ್ರಾ)ಯೋಜನೆಯ ಹಂತ-2 ಜಾರಿಯಲ್ಲಿದ್ದು,ಗ್ರಾಮೀಣ ಭಾರತವನ್ನು ಸಂಪೂರ್ಣ ಶುಚಿಯಾಗಿಡುವ ಕೆಲಸ ಜಾಲ್ತಿಯಲ್ಲಿದೆ. ರಾಜ್ಯದಲ್ಲಿ ಬಯಲು ಬಹಿರ್ದೆಸೆಯಿಂದ, ಬಯಲು ಬಹಿರ್ದೆಸೆ ಮುಕ್ತದ ಕಡೆಗೆ ಸಾಗಿಬಂದ ಹಾದಿ ಹೇಗಿತ್ತು ಎಂಬುದರ ಉದಾಹರಣೆಯೊಂದನ್ನು ನೋಡಿಕೊಂಡು ಬರೋಣ ಬನ್ನಿ.

ಕರ್ನಾಟಕದ ಪೂರ್ವಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯು ಗಣಿ ನಾಡು ಎಂದೇ ಪ್ರಖ್ಯಾತಿ ಪಡೆದಿದೆ. ಜಿಲ್ಲಾ ಕೇಂದ್ರದಿಂದ ಕೇವಲ 5 ಕಿ.ಮೀ ದೂರದಲ್ಲಿ ಸಂಗನಕಲ್ಲು ಎಂಬ ಗ್ರಾಮ ಪಂಚಾಯಿತಿ ಇದೆ. ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಿವಾಸಿಗಳು ಇಂದಿಗೂ ಮೂಢನಂಬಿಕೆಗಳಿ0ದ ಹೊರಬಂದಿಲ್ಲ. ಅದರಲ್ಲೂ ಪರಿಷಿಷ್ಠ ಜಾತಿ ಮತ್ತು ಪಂಗಡಗಳ ಜನರು ವಾಸವಿರುವ ಕಾಲೋನಿಗಳ ಸ್ಥಿತಿಯಂತೂ ಹೇಳತೀರದಾಗಿತ್ತು. ಶೌಚಕ್ಕಾಗಿ ಮನೆಯಲ್ಲಿನ ಎಲ್ಲರೂ ಬಯಲನ್ನೇ ಅವಲಂಬಿಸಿದ್ದರು. ಋತುಮತಿಯಾದ ಹೆಣ್ಣುಮಕ್ಕಳು, ಬಾಣಂತಿಯರು ಮತ್ತು ವಯಸ್ಸಾದವರೂ ಸಹ ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದರು. ಇದರಿಂದಾಗಿ ಗ್ರಾಮದಲ್ಲಿ ಆಗಾಗ ಖಾಯಿಲೆ ಬೀಳುವವರ ಸಂಖ್ಯೆ ಗಣನೀಯವಾಗಿತ್ತು. ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಎಲ್ಲರೂ ಶೌಚಾಲಯ ಕಟ್ಟಿಸಿಕೊಳ್ಳಲೇಬೇಕು ಎಂಬ ಆದೇಶ ಹೊರಬಿದ್ದ ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸುವ ಮೂಲಕ ಗ್ರಾಮದ ನಿವಾಸಿಗಳ ಮನವೊಲಿಸಿ ಶೌಚಾಲಯ ಕಟ್ಟಿಕೊಳ್ಳುವಂತೆ ಪ್ರೇರೇಪಿಸಲಾಯಿತು. ಜೊತೆಗೆ ಶೌಚಾಲಯ ಕಟ್ಟಿಕೊಳ್ಳುವವರಿಗೆ ಪ್ರೋತ್ಸಾಹಧನ ನೀಡಲಿರುವುದಾಗಿ ತಿಳಿಸಿದಾಗ ಗ್ರಾಮದ ಬಹುತೇಕರು ಶೌಚಾಲಯವನ್ನು ಕಟ್ಟಿಸಿಕೊಂಡು ಬಳಸಲು ಮುಂದಾದರು. ಆದರೆ ಸಂಗನಕಲ್ಲು ಗ್ರಾಮದ ಅಂಬೇಡ್ಕರ್ ಕಾಲೋನಿಯ ನಿವಾಸಿ ಪ್ರಭಾಕರ್ ಮನೆಯವರು ಮನೆಯ ಹತ್ತಿರದಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಒಪ್ಪದೇ ಶೌಚಕ್ಕೆ ಬಯಲನ್ನೇ ಉಪಯೋಗಿಸುತ್ತಿದ್ದರು. ಆಗಷ್ಟೇ ಪ್ರಭಾಕರ್ ಪತ್ನಿ ಸುಜಾತ ಬಸುರಿಯಾದ್ದರಿಂದ ಈಕೆಗೆ ಬಯಲಿಗೆ ಹೋಗುವುದು ಮುಜುಗರ ಮತ್ತು ಕಷ್ಟಕರವಾದ ಸಂಗತಿಯಾಗಿತ್ತು. ಹೊತ್ತುಟ್ಟುವ ಮುನ್ನ 1.5 ಕಿ.ಮೀ ನಡೆದು ಹೋಗಿ ಶೌಚ ಮಾಡಿ ಬರಬೇಕಿತ್ತು. ಸುಜಾತ ತುಂಬು ಗರ್ಭಿಣಿಯಾದ್ದರಿಂದ ಇವರ ಜೊತೆಗೆ ಪ್ರಭಾಕರ್ ತಾಯಿ ಅಥವಾ ಪಕ್ಕದ ಮನೆಯ ಹೆಂಗಸರುಗಳು ಹೋಗಬೇಕಾಗುತ್ತಿತ್ತು. ಇದರಿಂದಾಗಿ ಸುಜಾತ ಹಲವು ಬಾರಿ ತನ್ನ ಪತಿಯ ಹತ್ತಿರ ಮನೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸುವಂತೆ ಮನವಿ ಮಾಡಿದ್ದರೂ ಮನೆಯರ‍್ಯಾರು ಒಪ್ಪಿರಲಿಲ್ಲ.

ಇದಾದ ಬಳಿಕ ಇವರ ಮನೆಯಲ್ಲಿ ಶೌಚಾಲಯ ಬಳಸದೇ ಇದ್ದದ್ದನ್ನು ಗಮನಿಸಿದ ಪಂಚಾಯಿತಿ ಅಧಿಕಾರಿಗಳು ಇವರ ಮನೆಗೆ ಭೇಟಿ ನೀಡಿ ಮನವೊಲಿಕೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪಂಚಾಯಿತಿಯವರ ಹಲವು ಪ್ರಯತ್ನಗಳು ವಿಫಲವಾದ ಬಳಿಕ ಪಂಚಾಯಿತಿ ಅಧಿಕಾರಿಗಳು ಕಾರ್ಯನಿರ್ವಾಹಕ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿ ಅವರನ್ನು ಸ್ಥಳಪರಿಶೀಲನೆಗೆ ಬರಹೇಳಿದಾಗ, E.O ಸ್ಥಳಕ್ಕೆ ಭೇಟಿ ನೀಡಿ ಶೌಚಾಲಯವನ್ನು ಕಟ್ಟಿಸಿಕೊಳ್ಳದಿದ್ದರೆ ಪಂಚಾಯಿತಿವತಿಯಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ರದ್ದು ಮಾಡುವುದಾಗಿ ಹೇಳಿದ್ರು. ಇದರಿಂದ ವಿಚಲಿತರಾದ ಪ್ರಭಾಕರ್ ತಮ್ಮ ಮನೆಯ ಮುಂಭಾಗದಲ್ಲೇ ಖಾಲಿ ಇದ್ದ ಜಾಗದಲ್ಲಿ ಶೌಚಾಲಯ ನಿರ್ಮಿಸಲು ಅಂದೇ ಮನಸ್ಸು ಮಾಡಿದ್ರು. ಮನೆಯವರೆಲ್ಲರ ಪರಿಶ್ರಮದಿಂದ ಒಂದು ವಾರದಲ್ಲಿ ಮನೆಯ ಮುಂಭಾಗದಲ್ಲಿ ಶೌಚಾಲಯ ನಿರ್ಮಾಣವಾಯ್ತು. ಇದರಿಂದ ಸಂತಸಗೊಂಡ ಸುಜಾತ ಹೀಗೆನ್ನುತ್ತಾರೆ, “ಮೊದಲು ಶೌಚಕ್ಕಾಗಿ ಗ್ರಾಮದ ಹೊರವಲಯಕ್ಕೆ ನಡೆದೇ ಹೋಗಬೇಕಿತ್ತು. ಹಗಲಲ್ಲಿ ಶೌಚಕ್ಕೆ ಕೂರುವಾಗ ಜನರು ಓಡಾಡುತ್ತಿದ್ದದ್ದು ನಮ್ಮನ್ನು ತಲೆ ತಗ್ಗಿಸುವಂತೆ ಮಾಡುತ್ತಿತ್ತು. ರಾತ್ರಿ ವೇಳೆಯಲ್ಲಿ ಶೌಚಕ್ಕೆ ಹೋಗಬೇಕಾದರೆ ನಾಯಿ, ಹಂದಿ ಹಾವುಗಳ ಭಯವಾಗುತ್ತಿತ್ತು. ಆದರೆ ಈಗ ನಮ್ಮ ಮನೆಯಲ್ಲಿ ಶೌಚಾಲಯ ಇರೋದ್ರಿಂದ ನನಗೆ ತುಂಬಾ ಆರಾಮಿದೆ. ಮತ್ತು ನನಗೆ ತ್ರಿವಳಿ ಮಕ್ಕಳು ಕೂಡ ಜನಿಸಿದ್ದು, ಶೌಚಾಲಯದಿಂದಾಗಿ ಬಾಣಂತನವೂ ಸರಾಗವಾಗಿ ನಡೀತಿದೆ. ಇದಕ್ಕೆ ಅನುವುಮಾಡಿಕೊಟ್ಟ ಪಂಚಾಯಿತಿಯವರಿಗೆ ಧನ್ಯವಾದಗಳು ಎನ್ನುತ್ತಾರೆ.”

ಇದೊಂದು ಉದಾಹರಣೆಯಷ್ಟೇ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡುವಾಗ ಇಂತಹ ಸಾವಿರಾರು ಸವಾಲುಗಳನ್ನು ನಮ್ಮ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಎದುರಿಸಿದ್ದಾರೆ. ಬೆಳಕಿಗೆ ಬಾರದ ಹತ್ತು ಹಲವು ಸವಾಲುಗಳು ಮನೆಮಾತಾಗಿವೆ. ಹೌದು, ಇಂತಹ ಬೃಹತ್ ಮೈಲುಗಲ್ಲೊಂದನ್ನು ಸಾಧಿಸಬೇಕಾದ್ರೆ ಕಾಣದ ಕೈಗಳ ಪರಿಶ್ರಮ ಸಾಕಷ್ಟಿರುತ್ತದೆ. ಇಡೀ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ ಇಲಾಖೆಯೊಂದಿಗೆ ಹೀಗೇ ಮುಂದುವರೆದು ಇಡೀ ರಾಜ್ಯವನ್ನು 2024ರೊಳಗೆ ODF Plus ರಾಜ್ಯವನ್ನಾಗಿಸಲು ಸಹಕರಿಸಿ.

 4,779 total views,  6 views today

WhatsApp chat