Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

"ನನ್ನ ಹೆಸರು ಬಸಪ್ಪ ನನಗೆ ೮೫ ವರ್ಷ ವಯಸ್ಸಾಗಿದೆ. ನನ್ನ ಪತ್ನಿ ರತ್ನಮ್ಮ ಹೆಸರಿನಂತೆ ರತ್ನದಂತವಳು. ನನ್ನೆಲ್ಲಾ ಕಷ್ಟ ಸುಖಗಳಲ್ಲಿ ಹೆಗಲು ಕೊಟ್ಟು ಜೊತೆಗಿರುವವಳು. ನಾವು ಬಡವರಾದ್ರೂ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದೇವೆ. ನಮಗೆ ನಾಲ್ಕು ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು ಇನ್ನಿಬ್ಬರು ಹೆಣ್ಣುಮಕ್ಕಳು. ಎಲ್ಲರದ್ದೂ ಮದುವೆಯಾಗಿದೆ. ಇಳಿ ವಯಸ್ಸಿನಲ್ಲಿ ಮಕ್ಕಳಿಗೆ, ಸೊಸೆಯಂದಿರಿಗೆ ಇರಿಸು ಮುರುಸಾಗಬಾರದೆಂದು ನಾವಿಬ್ಬರೂ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದೇವೆ. ನಮಗಿರೋದು ಅಂಗೈಯಗಲ ಜಾಗ. ಇದರಲ್ಲೇ ಒಂದು ಪುಟ್ಟ ಮಣ್ಣಿನ ಸೂರು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಇರೋ ಇಷ್ಟು ಚಿಕ್ಕ ಜಾಗದಲ್ಲೇ ಅಡುಗೆ ಮಾಡಿ, ಊಟ ಮಾಡ್ತೀವಿ, ಇಲ್ಲೇ ಮಲಗ್ತೀವಿ. ಜೊತೆಗೆ ಕೊನೆ ಕಾಲಕ್ಕೆ ಬೇಕಾಗುತ್ತೆ ಅಂತ 4 ಕುರಿ ಸಾಕಿದೀವಿ ಅವುಗಳೂ ನಮ್ಮ ಜೊತೆಗೇ ವಾಸ ಮಾಡುತ್ವೆ. ಪ್ರತಿದಿನ ನಾನು ನನ್ನ ಮಡದಿ ಶೌಚಕ್ಕಾಗಿ ಬಯಲಿಗೇ ಹೋಗ್ತೀವಿ. ನಾನೇನೋ ಪರವಾಗಿಲ್ಲ, ನನ್ನ ಹೆಂಡತಿ ಶೌಚಕ್ಕೋಗಬೇಕಾದ್ರೆ ಪ್ರತಿದಿನ ಪ್ರತಿ ಸರಿ ತುಂಬಾ ಕಷ್ಟಗಳನ್ನು ಎದುರಿಸ್ತಾಳೆ. ಬೆಳಕಾಗೋ ಮುನ್ನ ಬಯಲಿಗೆ ಹೋಗಿ ಬರ್ಬೇಕು, ಹಿಂಗೆ ಒಂದೆರಡುಸಲ ಶೌಚಕ್ಕೆ ಹೋಗಿ ಬರ್ತಾ ಬಿದ್ದು ಬಂದಿದ್ಲು. ಇದೂ ಸಾಲ್ದು ಅಂತ ಅಕ್ಕ ಪಕ್ಕದ ಜಮೀನಿನವರು ನಮ್ಮ ಹೊಲನೆಲ್ಲಾ ಹಾಳು ಮಾಡ್ತೀರಿ, ಕೆಡಿಸ್ತೀರಿ ಅಂತ ನಮ್ಮಿಬ್ಬರ ಮೇಲೆ ಹಲ್ಲೆನೂ ನಡೆಸಿದ್ರು. ಅದಲ್ದೆ, ಇಳಿ ವಯಸ್ಸು ಬೇರೆ, ಆಗಾಗ ಅನಾರೋಗ್ಯದಿಂದ ನರಳ್ತಾ ಇದ್ಲು. ಅವಳ ಕಷ್ಟಾನ ಹತ್ತಿರದಿಂದ ನೋಡಿದ ನನ್ನ ಮನಸ್ಸು ಕೊರುಗ್ತಾ ಇತ್ತು. ಅವಳ ಕಷ್ಟ ನೋಡಕ್ಕಾಗದೆ ಶೌಚಾಲಯ ಕಟ್ಟಿಸೇ ಬಿಡೋಣಾ ಅಂತ ಅಂದುಕೊಂಡ್ರು ಜಾಗ ಇಲ್ದಿದ್ದಕ್ಕೆ ಸುಮ್ಮನಾಗಿಬಿಟ್ಟಿದ್ದೆ.

ಹಿಂಗಿರುವಾಗ ನಮ್ಮೂರಿಗೆ ಸ್ವಚ್ಛ ಭಾರತ್ ಮಿಷನ್‌ನಿನೋರು ಗುಂಪಾಗಿ ಬಂದ್ರು. ನಾನು ನನ್ನ ಕಥೆಯೆಲ್ಲಾನೂ ಹೇಳ್ದೆ. ಆಗ ಅವರು ನಗರ ಪ್ರದೇಶಗಳಲ್ಲಿ ಪುಟ್ಟ ಪುಟ್ಟ ಮನೆಗಳಲ್ಲಿ ಶೌಚಾಲಯಗಳನ್ನು ಹೇಗೆಲ್ಲಾ ಕಟ್ಟಿಕೊಂಡಿರ್ತಾರೆ ಅನ್ನೋದನ್ನ ವಿವರಿಸಿದ್ರು. ಇದಾದಮೇಲೆ ನನಗೂ ಮನೆಯಲ್ಲಿಯೇ ಶೌಚಾಲಯ ಕಟ್ಟಿಸಬಹುದೆನ್ನಿಸಿತು. ಆಗ ನಾನು ಮನೆಯಲ್ಲಿಯೇ ಒಂದು ಚಿಕ್ಕ ಕೋಣೆಯನ್ನು ನಿರ್ಮಿಸಿದೆ. ಆದ್ರೆ ಶೌಚಾಲಯಕ್ಕೆ ಗುಂಡಿಯನ್ನ ತೆಗೆಯಬೇಕಲ್ಲಾ? ಮನೆಯ ಮುಂದಿನ ಸರ್ಕಾರಿ ಜಾಗದಲ್ಲಿ ಗುಂಡಿಯನ್ನು ತೆಗೆಯ ಹೋದದ್ದಕ್ಕೆ ಅಕ್ಕ ಪಕ್ಕದ ಮನೆಯವರೆಲ್ಲಾ ಜಗಳಕ್ಕೆ ಬಂದ್ರು. ಇಲ್ಲಿ ಶೌಚಾಲಯದ ಗುಂಡಿ ತೆಗೆದ್ರೆ ರಸ್ತೆ ಹಾಳಾಗುತ್ತೆ ಹಾಗೇ ಹೀಗೆ ಅಂತೆಲ್ಲಾ ಅಂದ್ರು. ಬಳಿಕ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಸಹಾಯದಿಂದ ಮನೆಯೊಳಗೇ ವೈಜ್ಞಾನಿಕವಾಗಿ ಶೌಚಾಲಯದ ಗುಂಡಿಯನ್ನು ತೆಗೆದು ಅದನ್ನು ಸರಿಯಾದ ರೀತಿಯಲ್ಲಿ ಮುಚ್ಚಿದೆ. ಇದೀಗ ನನ್ನ ಪತ್ನಿ ಹಾಗೂ ನಾನು ಇಬ್ಬರೂ ಶೌಚಕ್ಕಾಗಿ ಬಯಲಿಗೆ ಹೋಗುವುದಿಲ್ಲ. ಬಯಲಿಗೆ ಹೋಗುವುದರಿಂದ ಎದುರಾಗುತ್ತಿದ್ದ ಎಲ್ಲಾ ಸಮಸ್ಯೆಗಳು ಇದೀಗ ದೂರಾಗಿದ್ದು, ನಾವಿಬ್ಬರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ.”

- ಬಸಪ್ಪ, ಗ್ರಾಮಸ್ಥರು, ಬಾಣೂರು ಗ್ರಾಮ

ಕಡೂರು ತಾಲೂಕು, ಚಿಕ್ಕಮಗಳೂರು ಜಿಲ್ಲೆ

Jal Jeevan Mission Karnataka

ಈ ಘಟನೆ ನಡೆದಿರೋದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರು ಗ್ರಾಮದ ಎಸ್.ಸಿ ಕಾಲೋನಿಯಲ್ಲಿ. ಸುಮಾರು 313 ಕುಟುಂಬಗಳಿರುವ ಈ ಗ್ರಾಮದಲ್ಲಿ 1165 ಜನಸಂಖ್ಯೆ ಇದೆ. ಈ ಗ್ರಾಮದ ಬಹುತೇಕರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದರು. ಇವರಿಗೆ ಶೌಚಾಲಯ ಕಟ್ಟಿಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದರೂ ಇವರಲ್ಲಿದ್ದ ಮೂಢನಂಬಿಕೆಗಳು ಮನೆಗಳಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಸತತ ಪ್ರಯತ್ನದ ಹೊರತಾಗಿಯೂ ಈ ಗ್ರಾಮದ ಗ್ರಾಮಸ್ಥರು ಮಾತ್ರ ಬಯಲಿನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲೇ ಬೇಕೆಂದು ಪಣ ತೊಟ್ಟ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು “ಬಯಲು ಮಲಮುಕ್ತ ಮಲೆನಾಡ ತಂಡ”ಎಂಬ ಉತ್ಸಾಹಿ ಯುವಕರ ತಂಡವೊಂದನ್ನು ರಚಿಸಿದರು. ಈ ತಂಡದ ಸದಸ್ಯರು ಈ ಗ್ರಾಮದ ಜನರು ಶೌಚಾಲಯ ಕಟ್ಟಿಸಿಕೊಳ್ಳುವವರೆಗೂ ಪ್ರತಿ ದಿನ ಪ್ರತಿ ಮನೆಗೆ ಭೇಟಿ ನೀಡಿ ಇಲ್ಲಿನ ಜನರನ್ನು ಮನವೊಲಿಸಲಾರಂಭಿಸಿದರು. ಅಲ್ಲಲ್ಲಿ ಗುಂಪು ಸಭೆಗಳನ್ನು ನಡೆಸುವುದು, ಗ್ರಾಮ ಸಭೆಗಳನ್ನು ಆಯೋಜಿಸುವುದು ಸೇರಿದಂತೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಬಗ್ಗೆಯೂ ವಿವರಿಸಲಾಗಿ ಕ್ರಮೇಣ ಈ ಗ್ರಾಮದ ಜನರು ಒಬ್ಬೊಬ್ಬರಾಗಿಯೇ ಶೌಚಾಲಯ ನಿರ್ಮಿಸಿಕೊಳ್ಳಲಾರಂಭಿಸಿದರು. 2018 ನವೆಂಬರ್ 19 ರೊಳಗಾಗಿ ಈ ಗ್ರಾಮವೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಘೋಷಿಸಲ್ಪಟ್ಟಿತ್ತು.

Jal Jeevan Mission Karnataka

Rural Drinking Water and Sanitation Department

Jal Jeevan Mission Karnataka

 7,124 total views,  1 views today

WhatsApp chat