ಮಂಕಿ-ಎ, ಹಳೇಮಠ - ಸತತ ಪರಿಶ್ರಮ… ಕೆಲಸದಲ್ಲಿ ಶ್ರದ್ಧೆ ಭಕ್ತಿ… ಜನರಿಗೆ ಉಪಕಾರ ಮಾಡಬೇಕೆಂಬ ಮಹದಾಸೆ…. ಸರಕಾರದ ಹಣ ಪೋಲಾಗದಂತೆ ಎಚ್ಚರ…. ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ಹಂಬಲ ಇವಿಷ್ಟೂ ಶಾಸಕಾಂಗ ಮತ್ತು ಕಾರ್ಯಾಂಗ ಕೆಲಸ ನಿರ್ವಹಿಸುವವರಿಗೆ ಇದ್ದರೆ ಎಂಥ ಕಠಿಣ ಸ್ಥಿತಿಯಲ್ಲಿಯೂ ನಾವು ಸಾಧನೆ ಮಾಡಬಹುದು ಎಂಬುದಕ್ಕೆ ಇಲ್ಲೊಂದು ಗ್ರಾಮ ಪಂಚಾಯಿತಿ ನಮ್ಮ ಮುಂದೆ ನಿದರ್ಶನವಾಗಿದೆ. ಹಾಗಿದ್ದರೆ ಅದು ಯಾವ ಗ್ರಾಮ ಪಂಚಾಯತ್ ಅಂತೀರಾ..? ಈ ಕಥೆಯನ್ನು ಒಮ್ಮೆ ನೋಡಿ.
ಕೂಸು ಹುಟ್ಟಿ ಈಗಷ್ಟೇ ಐದು ವರ್ಷ ಕಳೆದಿದೆ. ಆದರೆ ಸಾಧನೆ ಮಾತ್ರ ಯಾರು ಮಾಡದೇ ಇರುವಂತದ್ದು. ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ-ಎ, ಹಳೇಮಠ ಗ್ರಾಮ ಪಂಚಾಯಿತಿ. ಈ ಪಂಚಾಯಿತಿ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು ಸೌಲಭ್ಯ, ಬೀದಿ ದೀಪ, ಕ್ರೀಡಾಂಗಣ, ಸಮರ್ಪಕ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿ ಪ್ರಶಂಸೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ತನ್ನ ಬಳಕೆಗೆ ಬೇಕಾದ ವಿದ್ಯುತ್ ಅನ್ನು ಸೋಲಾರ್ ರೋಪ್ ಟಾಪ್ ಮೂಲಕ ಪಡೆಯುವ ಮೂಲಕ ಸ್ವಾವಲಂಬಿಯಾಗಿದೆ.
ಒಂದು ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಎರಡನೇ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಮಂಕಿ ಗ್ರಾಮ ಪಂಚಾಯತ್ ಪಾತ್ರವಾಗಿತ್ತು. ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಆಗಿದ್ದ ಮಂಕಿ ಗ್ರಾಮ ಪಂಚಾಯಿತಿಯನ್ನು 2015ರಲ್ಲಿ ನಾಲ್ಕು ಪಂಚಾಯಿತಿಗಳಾಗಿ (ಮಂಕಿ-ಎ, ಹಳೇಮಠ, ಗುಳದಕೇರಿ, ಅನಂತವಾಡಿ ಮತ್ತು ಚಿತ್ತಾರ) ವಿಭಜಿಸಲು ಸರಕಾರ ಆದೇಶಿಸಿತು. 2015ರಲ್ಲಿ ಅಸ್ತಿತ್ವಕ್ಕೆ ಬಂದ ಮಂಕಿ-ಎ, ಹಳೇಮಠ ಗ್ರಾಮ ಪಂಚಾಯತ್ ಒಂದು ಚಿಕ್ಕ ಅಂಗಡಿ ಮಳಿಗೆಯ ಕಟ್ಟಡದಲ್ಲಿ ಪ್ರಾರಂಭವಾಗಿತ್ತು. ಈಗ ಐದು ವರ್ಷದಲ್ಲಿ ಸ್ವಂತ ಕಟ್ಟಡ ಹೊಂದುವ ಜೊತೆಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಭೇಷ್ ಎನಿಸಿಕೊಂಡಿದೆ.
ಹದಿನೆಂಟು ಸದಸ್ಯರನ್ನು ಹೊಂದಿರುವ ಮಂಕಿ-ಎ, ಹಳೇಮಠ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಇಂದು ಜಿಲ್ಲೆಯಲ್ಲಿ ಉತ್ತಮ ಗ್ರಾಮ ಪಂಚಾಯಿತಿಯಾಗಿ ಹೊರಹೊಮ್ಮಿದೆ. ಕೇವಲ 5 ವರ್ಷಗಳಲ್ಲಿ ಕೆಲವು ಉತ್ತಮ ಕೆಲಸ ಮಾಡುವುದರೊಂದಿಗೆ ಮಾದರಿ ಗ್ರಾಮ ಪಂಚಾಯಿತಿ ಆಗಿ ರೂಪಗೊಂಡಿದೆ. ಪ್ರಥಮ ಬಾರಿಗೆ ಶೌಚಾಲಯ ನಿರ್ಮಾಣದಲ್ಲಿ ಸಾಧಿಸಿದ ಪ್ರಗತಿಗಾಗಿ ಪ್ರಶಸ್ತಿಗೆ ಭಾಜನವಾಗಿದೆ. ಸಮರ್ಪಕವಾಗಿ ಘನ ತ್ಯಾಜ್ಯ ವಿಲೇವಾರಿಯನ್ನು ಅನುಷ್ಠಾನ ಮಾಡಿರುವ ಕಾರಣ ಎರಡು ಹಾಗೂ ಮೂರನೇ ಅವಧಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ದೊರಕಿದೆ. ಉತ್ತಮ ಆಡಳಿತ, ನಿಗದಿತ ಅವಧಿಯಲ್ಲಿ ಸಭೆಗಳು, ಸಾರ್ವಜನಿಕರಿಗೆ ಉತ್ತಮ ಸೇವೆ, ಉತ್ತಮವಾದ ಕೆಲಸಗಳು ಸೇರಿದಂತೆ ಪಂಚತಂತ್ರ ತಂತ್ರಾಂಶದಲ್ಲಿ ಶೇಕಡಾ ನೂರರಷ್ಟು ದಾಖಲಾತಿ. ಹೀಗೆ ಗ್ರಾಮ ಪಂಚಾಯಿತಿಯ ಎಲ್ಲಾ ಸಾಧನೆಯನ್ನು ಪರಿಗಣಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡುವ ಗಾಂಧಿ ಗ್ರಾಮ ಪುರಸ್ಕಾರವನ್ನು ರಾಜ್ಯ ಸರಕಾರದಿಂದ 2017-18, 2018-2019 ಮತ್ತು 2019-2020ರ ಸಾಲಿಗೆ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಮತ್ತೆ ತನ್ನ ಮುಡಿಗೆ ಏರಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಇನ್ನು ರೂ.10 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ, 40 ಲಕ್ಷದ ವೆಚ್ಚದ ಹೊಸ ಗ್ರಾಮ ಪಂಚಾಯಿತಿ ಕಟ್ಟಡ, ಗ್ರಾಮ ಪಂಚಾಯಿತಿಯಿಂದಲೇ ಪ್ರಾರಂಭಿಸಿದ ಗ್ರಂಥಾಲಯ, ಪ್ರತಿ ವಾರ್ಡಿನಲ್ಲಿಯೂ ಉತ್ತಮ ಗುಣ ಮಟ್ಟದ ರಸ್ತೆ ಚರಂಡಿ ನಿರ್ಮಿಸಲಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಳೇಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಚರಂಡಿಗಳಲ್ಲಿ ಎಸೆಯುವ ಕುರಿತು ದೂರುಗಳು ಬರುತ್ತಿದ್ದವು. ಇದನ್ನು ಪರಿಗಣಿಸಿದ ಗ್ರಾಮ ಪಂಚಾಯಿತಿ ಆಡಳಿತ ಘನ ತ್ಯಾಜ್ಯ ಘಟಕಕ್ಕೆ ಸ್ಥಳವನ್ನು ಗುರುತಿಸಿತು. ಗ್ರಾಮ ಪಂಚಾಯಿತಿ ಗುರುತಿಸಿದ ಜಾಗ ಆರಂಭದಲ್ಲಿ ಸಮಸ್ಯೆ ಇತ್ತು. ಬಳಿಕ ಇದನ್ನು ಸರಿಯಾಗಿ ಅನುಷ್ಠಾನ ಮಾಡಲೇಬೇಕೆಂದು ಪಣ ತೊಟ್ಟ ಗ್ರಾಮದ ಆಡಳಿತ ಮಂಡಳಿ ಊರಿನ ಮಧ್ಯದಲ್ಲಿ ಹಾಗೂ ಪಂಚಾಯಿತಿ ಪಕ್ಕದಲ್ಲೇ ಇರುವ ಅತ್ಯಂತ ಚಿಕ್ಕ ಜಾಗವನ್ನು ಆಯ್ಕೆ ಮಾಡಿತು. ಬಳಿಕ ಪ್ರತಿನಿತ್ಯ ಗ್ರಾಮದಲ್ಲಿ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಘಟಕದಲ್ಲಿ ವಿಗಂಡಣಾ ಪ್ರಕ್ರಿಯೆ ಆರಂಭಿಸಿತು. ಇಂದು ಈ ಘನ ತ್ಯಾಜ್ಯ ವಿಲೇವಾರಿ ಘಟಕ ಜಿಲ್ಲೆಯಲ್ಲಿಯೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಉತ್ತಮವಾದ ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಶಾಲೆಗಳಲ್ಲಿ ಉದ್ಯಾನವನ, ಆಟದ ಮೈದಾನ ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಉತ್ತಮ ಕುಡಿಯುವ ನೀರಿನ ಪೂರೈಕೆ, ಸೋಲಾರ್ ಅಳವಡಿಸಿರುವುದು, ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿರುವುದರ ಜೊತೆಗೆ, ಸ್ಮಶಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಐದು ವರ್ಷಗಳಲ್ಲಿ ಜನಪ್ರತಿನಿಧಿಗಳ ಸಹಕಾರ, ದಾನಿಗಳ ನೆರವಿನಿಂದ ಉತ್ತಮವಾದ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದೆ.
ಈ ಸತತ ಸಾಧನೆ ಮಾಡಿರುವುದಕ್ಕೆ ಕಾರಣರಾದವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಮುಕ್ರಿ ಹಾಗೂ ನಿಕಟಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು. ಇವರಿಗೆ ಹಿರಿಯ ಅಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿದೆ. ಗ್ರಾಮ ಪಂಚಾಯಿತಿ ಆಡಳಿತಕ್ಕೆ ಗ್ರಾಮದ ಪ್ರತಿಯೊಬ್ಬ ಸಾರ್ವಜನಿಕರು ಬೆಂಬಲ ನೀಡುತ್ತಿರುವುದರಿಂದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಿದೆ. ಪಂಚಾಯಿತಿ ಕಟ್ಟಡವನ್ನು ಸಹ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವ ಉದ್ದೇಶದೊಂದಿಗೆ ನಿರ್ಮಿಸಲಾಗಿದೆ. ಬಿಲ್ ಕಲೆಕ್ಟರ್, ವಾಟರ್ ಮನ್ ಸೇರಿದಂತೆ ಪ್ರತಿಯೊಬ್ಬ ನೌಕರರು ಇಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದರಿಂದ ಸರಕಾರದ ಪ್ರತಿಯೊಂದು ಯೋಜನೆಯೂ ಇಲ್ಲಿ ಅನುಷ್ಠಾನಗೊಳ್ಳುತ್ತಿದೆ.
" ಒಟ್ಟಿನಲ್ಲಿ ಕಡಿಮೆ ಅವಧಿಯಲ್ಲಿ ಹಿರಿಯ ಸಾಧನೆ ಮಾಡಿರುವ ಮಂಕಿ-ಎ ಹಳೇಮಠ ಗ್ರಾಮ ಪಂಚಾಯಿತಿ ಇನ್ನಷ್ಟು ಪ್ರಶಸ್ತಿಗಳಿಗೆ ಭಾಜನವಾಗಲಿ ಅನ್ನುವುದು ನಮ್ಮ ಆಶಯ "
ವರದಿ:
ಮಂಜುನಾಥ. ಎಸ್. ನಾಯ್ಕ
ಮಾಹಿತಿ ಶಿಕ್ಷಣ ಸಂವಹನ, ಸಮಾಲೋಚಕರು,
ಜಿಲ್ಲಾ ಪಂಚಾಯತ್, ಉತ್ತರಕನ್ನಡ, ಕಾರವಾರ.
7,201 total views, 1 views today