ಮಹಿಳೆಯರ ಆರ್ಥಿಕ ಭದ್ರತೆ, ಸ್ವಾವಲಂಬಿ ಬದುಕು, ಅವರ ಸಬಲೀಕರಣದ ಉದ್ದೇಶದಿಂದ ಅವರಿಗೆ ವಾಹನ ಚಾಲನಾ ತರಬೇತಿ ನೀಡುವ ಮೂಲಕ ಕೊಪ್ಪಳ ಜಿಲ್ಲೆ ಒಂದು ಮಹತ್ವದ ಹೆಜ್ಜೆಯತ್ತ ಸಾಗಿದೆ.
ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಹಿಳೆಯರಿಗೆ ಚಾಲನಾ ಕ್ಷೇತ್ರದಲ್ಲಿ ಅವಕಾಶ ನೀಡುವ ಮೂಲಕ ಮಹತ್ತರವಾದ ಹೆಜ್ಜೆಯಿಟ್ಟಿದ್ದಾರೆ. ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಆರ್ಥಿಕ ಭದ್ರತೆ ಅತಿ ಮುಖ್ಯ ಎಂದು ಜಿಲ್ಲೆಯ 34 ಜಿಪಿಎಲ್ಎಫ್ ನ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ವಾಹನ ಚಾಲನೆಯ ತರಬೇತಿ ನೀಡಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಚಾಲನಾ ತರಬೇತಿ ಪಡೆದ ಮಹಿಳೆಯರಿಗೆ ಸ್ವಚ್ಛ ವಾಹಿನಿಗಳ ಚಾಲಕಿಯರಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
‘ತೊಟ್ಟಿಲನ್ನು ತೂಗುವ ಕೈ ಜಗವನ್ನೇ ಆಳಬಲ್ಲದು’ ಎನ್ನುವ ಮಾತು ಎಷ್ಟು ಸತ್ಯ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. ಈಗಾಗಲೇ ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣಬಹುದು. ಅಡುಗೆ ಮಾಡುವುದು, ಮಕ್ಕಳ ಹಾಗೂ ಹಿರಿಯರ ಪಾಲನೆಯಿಂದ ಹಿಡಿದು ಸ್ಟೇರಿಂಗ್ ಹಿಡಿದು ಆಟೋ-ಟಿಪ್ಪರ್ ಓಡಿಸುವುದರ ತನಕ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದು ತೋರಿಸಿದ್ದಾಳೆ ಮಹಿಳೆ. ಇದಕ್ಕೆ ಮಾದರಿಯಾಗಿ ಕುದರಿಮೋತಿ ಗ್ರಾಮ ಪಂಚಾಯತನ ಶಿಲ್ಪ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಲ್ಪಾ, ಕುದರಿಮೋತಿ ಗ್ರಾಮ ಪಂಚಾಯತಿಯ ಸ್ವಚ್ಛ ವಾಹಿನಿಯ ಸಾರಥಿ. ಇವರು ಓದಿದ್ದು ಪಿಯುಸಿ ತನಕ. ತಂದೆ ತಾಯಿ ಮತ್ತು 5 ಸಹೋದರ-ಸಹೋದರಿಯರ ಕುಟುಂಬ ಇವರದು. “ನಾನು ಈ ಕೆಲಸಕ್ಕೆ ಬರಲು ಮುಖ್ಯ ಕಾರಣ ನನ್ನ ಅಣ್ಣ. ನಾನು ವಾಹನ ಚಾಲಕಿ ತರಬೇತಿಗೆ ಹೋಗಲ್ಲ, ನಂಗೆ ಈ ಕೆಲಸ ಸಾಧ್ಯವಿಲ್ಲ ಎಂದು ಹಠ ಹಿಡಿದು ಕೂತಿದ್ದ ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ್ದು ನನ್ನ ಅಣ್ಣ ಹಾಗೂ ನಮ್ಮ ಎಮ್. ಬಿ.ಕೆ ಯವರು.” ಎನ್ನುತ್ತಾರೆ ಶಿಲ್ಪ.
ಎದುರಿಸಿದ ಸವಾಲುಗಳು: ಮೊದಲು ವಾಹನ ಚಾಲನೆ ಮಾಡುವಾಗ “ಅಯ್ಯೋ ಇವಳೇನು ಗಂಡಸರ ತರ ಗಾಡಿ ಓಡಿಸುತ್ತಾಳೆ. ಇವಳಿಗ್ಯಾಕೆ ಬೇಕು ಈ ಗಂಡು ಮಕ್ಕಳು ಮಾಡುವ ಕೆಲಸ” , “ಗಾಡಿ ಹಾಯಿಸಿದರೆ ಗೊತ್ತಾಗುತ್ತೆ”, ಹೀಗೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ನಾನು ಮನೆಗೆ ಬಂದು ನನ್ನ ಅಣ್ಣನ ಬಳಿ ಬಂದು ನಡೆದದ್ದನ್ನು ಹೇಳಿಕೊಳ್ಳುತ್ತಿದ್ದೆ. ಆಗ ಅಣ್ಣ ಸಮಾಧಾನದಿಂದ ಏನೂ ಆಗಲ್ಲ. ಈಗ ತೆಗಳುವವರು ನಾಳೆ ದಿನ ನಿನ್ನ ಬಗ್ಗೆ ಹೊಗಳಿಕೆ ವ್ಯಕ್ತ ಪಡಿಸುತ್ತಾರೆ. ಇಂಥ ಮಾತಿಗೆ ಕಿವಿಗೊಡಬೇಡ ಎಂದು ಸಮಾಧಾನ ಮಾಡುತ್ತಿದ್ದರು.
ನಾನು ಅಣ್ಣನ ಮಾತಿನಂತೆ ಪ್ರತಿ ದಿನ ಮನೆ ಮನೆಗಳಿಂದ ಕಸ ಸಂಗ್ರಹಣೆ ಮಾಡುತ್ತಲೇ ಬಂದೆ. ದಿನ ಕಳೆದಂತೆ ನಮ್ಮೂರಿನ ಜನ “ನೋಡು ನಮ್ಮೂರ ಹುಡುಗಿ ಕಸದ ಗಾಡಿ ಓಡಿಸುತ್ತಾಳೆ. ಭಾರಿ ಧೈರ್ಯವಂತೆ ಇದ್ದಾಳೆ” ಎಂದು ಮಾತಾಡಿಕೊಳ್ಳುತ್ತಾರೆ. ಈಗ ನನಗೂ ಖುಷಿಯಾಗುತ್ತೆ. ಎಲ್ಲರ ಸಹಕಾರದಿಂದ ಒಂದು ವಾಹನ ಚಲಾಯಿಸುವ ಧೃಢ ಮಹಿಳೆಯಾಗಿದ್ದೇನೆ. ನನ್ನ ಗೆಳತಿಯರು ಕೂಡ ಪೋನ್ ಮಾಡಿ ಖುಷಿ ವ್ಯಕ್ತಪಡಿಸುತ್ತಾರೆ.
ನಮ್ಮೂರಿನಲ್ಲಿ ಮೊದಲು ಸ್ವಚ್ಛತೆ ಇರಲಿಲ್ಲ. ಎಲ್ಲರೂ ರಸ್ತೆಯ ಮೇಲೆ ಕಸ ಹಾಕುವ ಮೂಲಕ ಗ್ರಾಮವನ್ನು ಕಸದ ಗೂಡಾಗಿ ಮಾಡಿದ್ದರು . ಈಗ ನೋಡ ಬನ್ನಿ ನಮ್ಮೂರಾಗ ಕಸ ಕಂಡುಬರುವುದಿಲ್ಲ. ನಾನು ಎಂದಾದರೂ ಊರಲ್ಲಿ ಕಸ ಸಂಗ್ರಹಿಸಲು ಹೋಗದಿದ್ದರೆ ನನಗೆ ಪೋನ್ ಮಾಡಿ “ಯಾಕಮ್ಮ ಶಿಲ್ಪ ಕಸದ ಗಾಡಿ ಈವತ್ತು ಬಂದಿಲ್ಲ” ಎಂದು ಕೇಳುತ್ತಾರೆ. ಇದನ್ನು ನೋಡಿದಾಗ ನನಗೂ ಖುಷಿಯಾಗತ್ತೆ.
“ಕಸದ ಗಾಡಿ ಗ್ರಾಮ ಪಂಚಾಯತಿಗೆ ಬಂದು ತುಂಬಾ ದಿನ ಆಗಿತ್ತು. ಚಾಲಕರು ಇಲ್ಲದೇ ಹಾಗೆ ನಿಂತಿತ್ತು. ನಮ್ಮೂರಿನ ಹುಡುಗಿ ಶಿಲ್ಪ ಸ್ವಚ್ಛ ವಾಹಿನಿಯ ಡ್ರೈವರ್ ಎಂದು ಗೊತ್ತಾದಾಗ ನಾವು ಈ ಹುಡುಗಿಗೆ ಆಗದ ಕೆಲದ ಏನಾದರೂ ತೊಂದರೆ ಆಗುತ್ತೆ ಅಂತ ಮಾತಾಡಿಕೊಳ್ಳುತ್ತಿದ್ದೆವು. ಆದರೆ ಶಿಲ್ಪ ಈಗ ಧೈರ್ಯವಾಗಿ ಗಾಡಿ ಓಡಿಸುವ ಮೂಲಕ ಪ್ರತಿ ಮನೆಯಿಂದ ಪ್ರತಿ ದಿನ ಕಸ ಸಂಗ್ರಹ ಮಾಡಿ ಗ್ರಾಮದ ಸ್ವಚ್ಛತೆಗೆ ಸಹಕಾರಿಯಾಗಿದ್ದಾಳೆ. ಇದು ನಮ್ಮೂರಿನ ಹೆಮ್ಮೆಯ ವಿಷಯ” ಎನ್ನುತ್ತಾರೆ ಗ್ರಾಮಸ್ಥರು.
“ಶಿಲ್ಪ ಅವರು ಸ್ವಚ್ಛ ವಾಹಿನಿಯ ಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಪ್ರತಿ ದಿನ ಪ್ರತಿ ಮನೆಯಿಂದ ಕಸ ಸಂಗ್ರಹ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಕೂಗಿ ಕರೆದು “ಕಸ ಕೊಡಿ” ಎಂದು ಹೇಳಿ ಅವರು ಬಂದು ಕಸ ಹಾಕುವವರೆಗೂ ಕಾದು ಕಸ ಸಂಗ್ರಹ ಮಾಡುತ್ತಾರೆ. ಹಸಿ ಕಸ, ಒಣ ಕಸ ಬೇರ್ಪಡಿಸಿ ನಮ್ಮ ವಾಹನಕ್ಕೆ ಒಣ ಕಸ ಕೊಡಿ ಎಂದು ಮಾಹಿತಿಯನ್ನು ಕೂಡ ನೀಡುತ್ತಾರೆ. ಎಷ್ಟು ಭಯದಿಂದ ವಾಹನ ಚಾಲನೆ ಪ್ರಾರಂಭಿಸಿದರೋ ಈಗ ಅಷ್ಟೇ ಖುಷಿಯಿಂದ, ತುಂಬಾ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಾರೆ” ಎಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಕುದರಿಮೋತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು:-
“ಮಹಿಳೆಯರಿಗೆ ಅವಕಾಶಗಳು ಸಿಗಬೇಕಾಗಿದೆ. ಅವರು ಯಾವ ಕ್ಷೇತ್ರದಲ್ಲಿ ಬೇಕಾದರೂ ಕಾರ್ಯನಿರ್ವಹಿಸಲು ಸಿದ್ದರಿದ್ದಾರೆ. ಮನೆಯನ್ನು ನಿಭಾಯಿಸುವ ಅವರು ಸ್ವಚ್ಛ ವಾಹಿನಿ ಕೂಡ ಓಡಿಸಬಲ್ಲರು ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ನಗರ ಪ್ರದೇಶಗಳಲ್ಲಿ ಇದು ಸಾಮಾನ್ಯ, ಆದರೆ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ವಾಹನವನ್ನು ಚಲಾಯಿಸುವುದು ಒಂದು ಸಾಧನೆಯೇ ಸರಿ. ಇದೇ ರೀತಿಯಾಗಿ ಪ್ರತಿಯೊಂದು ಗ್ರಾಮ ಪಂಚಾಯತಗಳಲ್ಲಿ ಕಸ ಸಂಗ್ರಹಣೆಯ ಹೊಣೆಯನ್ನ ಮಹಿಳೆಯರೇ ನಿಭಾಯಿಸಲಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ. ಫೌಜಿಯಾ ತರನುಮ್
ಒಟ್ಟಿನಲ್ಲಿ ಪುರುಷ ಪಾರುಪತ್ಯದ ಕೆಲಸಗಳಲ್ಲೂ ಈಗ ನಿಧಾನವಾಗಿ ಮಹಿಳೆಯರು ತಮ್ಮ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛ ವಾಹಿನಿ ಚಾಲಕಿಯಾಗಿ ತಮ್ಮ ಗ್ರಾಮದ ಸ್ವಚ್ಛತೆ ಕಾಪಡುವುದರ ಮೂಲಕ ಶಿಲ್ಪಾರವರು ಮಾದರಿಯಾಗಿದ್ದಾರೆ. ಇವರ ಹಾಗೆ ಇನ್ನೂ ಹೆಚ್ಚು ಮಹಿಳೆಯರು ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸೋಣ.
3,482 total views, 2 views today