ಶಿಕ್ಷಕರ ಸೇವಾ ಮನೋಭಾವ, ಗ್ರಾಮಸ್ಥರ ಸಹಕಾರ, ಮಕ್ಕಳಲ್ಲಿ ಕಲಿಯುವ ಹುಮ್ಮಸ್ಸು ಇಷ್ಟಿದ್ದರೆ ಸಾಕು ಯಾವುದೇ ಸರ್ಕಾರಿ ಶಾಲೆಯನ್ನೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಅಭಿವೃದ್ಧಿಪಡಿಸಬಹುದು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ “ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಕನಹಳ್ಳಿ” 1961 ರಲ್ಲಿ ಈ ಶಾಲೆ ಆರಂಭವಾದರೂ ಕಾಲಕ್ರಮೇಣ ಇಲ್ಲಿನ ಜನರು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಗರ ಪ್ರದೇಶಗಳಿಗೆ ಗುಳೆ ಹೋದ ಕಾರಣ ದಿನೇದಿನೇ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣಲಾರಂಭಿಸಿತು. ಗ್ರಾಮಪಂಚಾಯಿತಿಯ ಸುತ್ತಮುತ್ತಲಿನ ಹಳ್ಳಿಗಳಾದ ಸಂಕನಹಳ್ಳಿ, ಕೆಂಚನಹಳ್ಳಿ, ಬಾಚಹಳ್ಳಿ, ಎಲೆಮುದ್ದನ ಹಳ್ಳಿ ಗ್ರಾಮದ ಜನರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಈ ಶಾಲೆಗೆ ಸೇರಿಸುತ್ತಿದ್ದರು. 2005 ರಲ್ಲಿ 65 ಇದ್ದ ಶಾಲಾ ದಾಖಲಾತಿ ಸಂಖ್ಯೆ 2010 ರ ವೇಳೆಗೆ ಕೇವಲ 8ಕ್ಕೆ ಇಳಿಯುವ ಮೂಲಕ ಶಾಲೆಯು ಮುಚ್ಚುವ ಹಂತಕ್ಕೆ ತಲುಪಿತ್ತು.
ಮಕ್ಕಳ ಪೊಷಕರು ಮತ್ತು ಶಾಲೆಯ ಶಿಕ್ಷಕರ ನಡುವೆ ಸಾಮರಸ್ಯದ ಕೊರತೆಯಿಂದಾಗಿ ದಿನೇದಿನೇ ಶಾಲೆಗೆ ಮಕ್ಕಳ ನೋಂದಣಿ ಸಂಖ್ಯೆ ಕುಗ್ಗುತ್ತಾ ಹೋಯಿತು. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಗೆ ಮುಖ್ಯಶಿಕ್ಷಕರನ್ನಾಗಿ ಮಹೇಶ್.ಬಿ.ಆರ್ ಮತ್ತು ಸಹಶಿಕ್ಷಕರನ್ನಾಗಿ ಅರುಣ್ ಕುಮಾರ್.ಸಿ.ಪಿ ರವರನ್ನು ನೇಮಿಸಲಾಯಿತು. ಇವರುಗಳು ಈ ಸಾಲಿಗೆ ಬಂದು ವರದಿ ಮಾಡಿಕೊಂಡಾಗ ಶಾಲೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರು. ಜೊತೆಗೆ ಶಾಲೆಯ ಈ ಪರಿಸ್ಥಿತಿಗೆ ಕಾರಣಗಳನ್ನು ಹುಡುಕುತ್ತಾ ಹೊರಟಾಗ ಶಾಲಾ ಶಿಕ್ಷಕರು ಮತ್ತು ಮಕ್ಕಳ ಪೋಷಕರ ನಡುವಿನ ಸಾಮರಸ್ಯ ಅಷ್ಟು ಚೆನ್ನಾಗಿಲ್ಲದಿರುವುದನ್ನು ಗಮನಿಸಿ, ಗ್ರಾಮದ ಮುಖಂಡರು ಮತ್ತು ಪೋಷಕರೊಟ್ಟಿಗೆ ಸಭೆ ನಡೆಸಿ ಶಾಲೆಯ ಬಗೆಗಿನ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸುವ ಜೊತೆಗೆ ಶಾಲೆ ಎಂದರೆ ಹೇಗಿರಬೇಕು ಎಂಬ ಪೋಷಕರ ನಿರೀಕ್ಷೆಯನ್ನು ಗ್ರಾಮಸ್ಥರಿಂದ ತಿಳಿದುಕೊಂಡರು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳುವ ಬದಲಿಗೆ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಶಿಕ್ಷಣ ಇಲಾಖೆ ಮತ್ತು ಪಂಚಾಯಿತಿಯ ಸಹಕಾರ ಪಡೆದು ಮಾಡಲಾರಂಭಿಸಿದರು.
ಪಂಚಾಯಿತಿಯಲ್ಲಿ ಲಭ್ಯವಿದ್ದ 15ನೇ ಹಣಕಾಸು ಆಯೋಗದ ಸಹಾಯದಿಂದಾಗಿ ಶಾಲೆಯ ಕೊಠಡಿ ಮತ್ತು ಕಟ್ಟಡವನ್ನು ದುರಸ್ಥಿ ಮಾಡಿಸಲಾಯಿತು. ಸ್ವಚ್ಛ ಭಾರತ್ ಮಿಷನ್(ಗ್ರಾ)ಯೋಜನೆಯಡಿ ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯವನ್ನು ನಿರ್ಮಿಸಲಾಯಿತು. ಇದೇ ವೇಳೆಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಜಲ ಜೀವನ್ ಮಿಷನ್ ಯೋಜನೆಯ ನೂರು ದಿನಗಳ ವಿಶೇಷ ಆಂದೋಲನದಡಿ ಶಾಲೆಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕದ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಕ್ಕೆ ಕಾರ್ಯಾತ್ಮಕ ಗೃಹ ನಳ ಸಂಪರ್ಕದ ಮೂಲಕ ನೀರಿನ ವ್ಯವಸ್ಥೆ ಮಾಡಿ ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಲಾಯಿತು.
ಇದೆಲ್ಲಾ ವ್ಯವಸ್ಥೆಗಳಾದ ಬಳಿಕ ಸುತ್ತಮುತ್ತಲಿನ ಹತ್ತು ಹಳ್ಳಿಯವರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ದಾಖಲು ಮಾಡುತ್ತಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪಠ್ಯದ ಜೊತೆ ಉತ್ತಮ ನೈರ್ಮಲ್ಯ ಅಭ್ಯಾಸಗಳು, ತ್ಯಾಜ್ಯ ನಿರ್ವಹಣೆ, ನೀರಿನ ಮಿತಬಳಕೆ ಮತ್ತು ಸಂರಕ್ಷಣೆ, ಕೈತೋಟ ನಿರ್ವಹಣೆಯ ಮಹತ್ವ ಸೇರಿದಂತೆ ಉತ್ತಮ ಜೀವನದ ಕೌಶಲ್ಯಗಳ ಬಗ್ಗೆಯೂ ಬೋಧನೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಮಂತ್ರಿಮಂಡಲವನ್ನು ರಚನೆ ಮಾಡಲಾಗಿದ್ದು, ಆಯಾ ಖಾತೆಯ ಮಂತ್ರಿಗಳು ತಮ್ಮ ತಮ್ಮ ವಿಷಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಶಿಕ್ಷಕರು ಸಹಕಾರಿಯಾಗಿದ್ದಾರೆ.
ಇದೆಲ್ಲದರ ಪರಿಣಾಮವಾಗಿ ಮಕ್ಕಳ ಮನೆಗಳಲ್ಲಿ ಶೌಚಾಲಯವಿಲ್ಲದಿದ್ದರೆ ಅಂತಹ ಮಕ್ಕಳು ಈ ವಿಷಯವನ್ನು ಮುಖ್ಯೋಪಾಧ್ಯಾಯರ ಗಮನಕ್ಕೆ ತರಲಾಗಿ, ಮುಖ್ಯೋಪಾಧ್ಯಾಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಟ್ಟಿಗೆ ಚರ್ಚಿಸಿ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ, ಮಕ್ಕಳಿಂದ ಮನವಿ ಪಡೆದು ಶೌಚಾಲಯಗಳಿಲ್ಲದ ಮನೆಗಳಿಗೆ ತೆರಳಿ ಪೋಷಕರ ಮನವೊಲಿಸಿ 86 ಮನೆಗಳಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಪ್ರೋತ್ಸಾಹಧನದೊಂದಿಗೆ ಶೌಚಾಲಯಗಳನ್ನು ನಿರ್ಮಿಸಲಾಯಿತು. ಶಾಲೆಯಲ್ಲಿನ ಈ ಉತ್ತಮ ಕೆಲಸಗಳನ್ನು ಗಮನಿಸಿದ ಹನ್ಶಾನಿ ಸಂಸ್ಥೆಯು ಶಾಲೆಯ ಉನ್ನತೀಕರಣಕ್ಕಾಗಿ 25 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡುವ ಜೊತೆಗೆ 3 ಜನ ಶಿಕ್ಷಕರನ್ನು ನಿಯೋಜಿಸಿತು.
ಶಾಲಾ ಶಿಕ್ಷಕರ ಮುತುವರ್ಜಿ ಮತ್ತು ಪೋಷಕರ ಸಹಕಾರ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಇಂದು ಈ ಶಾಲೆ ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಹೊರಹೊಮ್ಮಿದ್ದು, 104 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮತ್ತು ಪ್ರತಿವರ್ಷವು ಮೊರಾರ್ಜಿ ದೇಸಾಯಿ ಮತ್ತು ನವೋದಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯವರು ಈ ಶಾಲೆಯ ವಿದ್ಯಾರ್ಥಿಗಳೇ ಆಗಿರುವುದು ಮತ್ತೊಂದು ವಿಶೇಷ.
ಶಾಲೆಗೆ ಮರುಜೀವ ಕೊಟ್ಟು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರನ್ನು ಇದೀಗ ಇಡೀ ಗ್ರಾಮವೇ ಕೊಂಡಾಡುತ್ತಿದೆ. ಗುರು ದೇವೋಭವ ಎಂಬ ವಾಕ್ಯಕ್ಕೆ ಈ ಶಾಲೆಯ ಶಿಕ್ಷಕರು ಸಾಕ್ಷಿಯಾಗಿದ್ದು. ಸಾಧಿಸುವ ಛಲವೊಂದಿದ್ದರೆ ಎಂತಹ ಕಠಿಣ ಕೆಲಸವನ್ನು ಸಾಧಿಸಿ ತೋರಿಸಬಹುದೆಂಬುದಕ್ಕೆ ಈ ಸರ್ಕಾರಿ ಶಾಲೆಯ ಶಿಕ್ಷಕರು ಮಾದರಿಯಾಗಿ ನಿಂತಿದ್ದಾರೆ. ಇಂತಹ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿ, ಎಲ್ಲೆಡೆ ಸರ್ಕಾರಿ ಶಾಲೆಗಳು ಉಳಿಯಲಿ ಎಂಬುದೇ ನಮ್ಮ ಧ್ಯೇಯ.
3,549 total views, 2 views today