ಸಮರ್ಪಕ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಬದ್ಧ
ಕಾಫಿನಾಡು ಎಂದೇ ಕರೆಯಲ್ಪಡುವ ಚಿಕ್ಕಮಗಳೂರು ಜಿಲ್ಲೆಯು ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ. ಗಿರಿ ಶ್ರೇಣಿಗಳು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲ ಸ್ಥಾನವಾಗಿದೆ. ರಾಜ್ಯದ ಅತ್ಯಂತ ಎತ್ತರ ಶಿಖರಗಳಲ್ಲೊಂದಾದ ಮುಳ್ಳಯ್ಯನಗಿರಿ ಶಿಖರವು ಇದೇ ಜಿಲ್ಲೆಯಲ್ಲಿದೆ. ಸುಮಾರು 8 ತಾಲ್ಲೂಕುಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆ, ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಆದರೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನೇ ದಿನೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ನಿರುಪಯುಕ್ತವೆಂದು ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಅನ್ನು ಶ್ರೆಡ್ಡಿಂಗ್ ಮೆಷಿನ್ ಸಹಾಯದಿಂದ ತುಂಡರಿಸಿ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿರುವ ಉಳಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗೆಂದು ಲೋಕೋಪಯೋಗಿ ಇಲಾಖೆ ವತಿಯಿಂದ 50 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿ, ಇದೇ ಗ್ರಾಮ ಪಂಚಾಯಿತಿಯ ದೊಡ್ಡವ್ವನಹಳ್ಳಿ ಗ್ರಾಮದಿಂದ ಉಳಿಗೆರೆ ಗ್ರಾಮ ಪಂಚಾಯಿತಿಗೆ ಸಂಪರ್ಕಕಲ್ಪಿಸುವ 1690 ಮೀಟರ್ ಉದ್ದದ ರಸ್ತೆ ನಿರ್ಮಾಣಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ 3.8 ಮೀಟರ್ ಅಗಲದ, 10 ಮೀಟರ್ ಉದ್ದದ ರಸ್ತೆಗೆ ಡಾಂಬರೀಕರಣ ಮಾಡಲು 20 ಕೆ.ಜಿ ಪ್ಲಾಸ್ಟಿಕ್ ಅನ್ನು ಬಳಕೆ ಮಾಡಲಾಗಿದೆ. ಇನ್ನುರಸ್ತೆ ನಿರ್ಮಾಣಕ್ಕೆ Mixed Plastic ಅನ್ನು ಶ್ರೆಡ್ಡಿಂಗ್ ಮೆಷಿನ್ ಸಹಾಯದಿಂದ ಚಿಕ್ಕಚಿಕ್ಕ ತುಂಡುಗಳನ್ನಾಗಿ ಮಾಡಿ ಜೆಲ್ಲಿ ಮತ್ತು ಟಾರಿನ ಮಿಶ್ರಣದ ಜೊತೆ ಸೇರಿಸಲಾಗುತ್ತದೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ಬಳಸುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವ ಜೊತೆಗೆ, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಕೂಡ ಬಳಕೆ ಮಾಡಿಕೊಳ್ಳಬಹುದಾಗಿದೆ. ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಸುವುದರಿಂದ ರಸ್ತೆಯು ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬುದು ತಜ್ಞರ ಅಬಿಪ್ರಾಯ.
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿರುವ ಈ ಪ್ಲಾಸ್ಟಿಕ್ ರಸ್ತೆಯು ಇಲ್ಲಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕನಸಿನ ಕೂಸಾಗಿದೆ. ಇದೇ ಮಾದರಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳ ನಿರ್ಮಾಣದಲ್ಲೂ ಪ್ಲಾಸ್ಟಿಕ್ ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲ್ಲಿನ ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಸಂಕೀರ್ಣಗಳ ಮೂಲಕ ಪ್ಲಾಸ್ಟಿಕ್ ಮತ್ತು ಒಣ ತ್ಯಾಜ್ಯ ಸಂಗ್ರಹಣೆ ಕಾರ್ಯಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಂಪನ್ಮೂಲವನ್ನಾಗಿ ಮಾಡಿಕೊಳ್ಳುವತ್ತ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಹೆಜ್ಜೆ ಇಟ್ಟಿದೆ.
6,173 total views, 1 views today