Englishs
 • Become an activist

  If you gonna make it better

 • Next Meeting

  23/08/2017

 • Yout Support

  May Help Us

ಗ್ರಾಮೀಣ ಭಾರತದ ಪ್ರಗತಿಗಾಗಿ ಹಾಗೂ ಪ್ರಮುಖ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮಾಡುವಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಯು ದೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅತ್ಯುನ್ನತ ಸಾಧನೆಗೈದ ಪಂಚಾಯಿತಿಗಳನ್ನು ಗುರುತಿಸಿ, ಅಂತಹ ಪಂಚಾಯಿತಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತ ಸರ್ಕಾರವು ವಿವಿಧ ಹಂತಗಳಲ್ಲಿ ಪ್ರಮುಖ 4 ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪ್ರಶಸ್ತಿಗಳ ಪೈಕಿ ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರವೂ ಒಂದಾಗಿದೆ. ರಾಷ್ಟ್ರೀಯ ಪಂಚಾಯತ್‌ರಾಜ್ ದಿನವಾದ 24ನೇ ಏಪ್ರಿಲ್‌ರಂದು ಈ ಪ್ರಶಸ್ತಿಯನ್ನು ಉತ್ತಮ ಸಾಧನೆಗೈದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಿಗೆ ದೇಶದ ಪ್ರಧಾನ ಮಂತ್ರಿಗಳು ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.

ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ಸಶಕ್ತೀಕರಣ್ ಪುರಸ್ಕಾರ:

2021ನೇ ಸಾಲಿನ ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರವನ್ನು ಕರ್ನಾಟಕದ 6 ಪಂಚಾಯಿತಿಗಳು ತಮ್ಮದಾಗಿಸಿಕೊಂಡಿವೆ. ಇದರಲ್ಲಿ ಎಲ್ಲಾ ವಲಯಗಳಲ್ಲೂ ಉತ್ತಮ ಸಾಧನೆಗೈದ ಕಾರಣಕ್ಕಾಗಿ ಹಾಸನ ಜಿಲ್ಲಾ ಪಂಚಾಯಿತಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ತಾಲ್ಲೂಕು ಮಟ್ಟದಲ್ಲಿ ಉತ್ತಮ ಸಾಧನೆಗೈದ ಕಾರಣಕ್ಕಾಗಿ ಬೆಂಗಳೂರು ಪೂರ್ವ ಪಂಚಾಯಿತಿ ಹಾಗೂ ಪಾಂಡವಪುರ ತಾಲ್ಲೂಕು ಪಂಚಾಯಿತಿ ಈ ಸಾಲಿನ ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರವನ್ನು ತಮ್ಮ ಮುಡಿಗೇರಿಸಿಕೊಂಡು, ಉತ್ತಮ  ತಾಲ್ಲೂಕು ಪಂಚಾಯಿತಿಗಳಾಗಿ ಹೊರಹೊಮ್ಮಿವೆ.

ಇನ್ನು, ಗ್ರಾಮ ಪಂಚಾಯಿತಿಗಳ ವರ್ಗದಲ್ಲಿ ಹಾವೇರಿ ಜಿಲ್ಲೆಯ ತುಮ್ಮಿನಕಟ್ಟಿ, ಮಂಡ್ಯ ಜಿಲ್ಲೆಯ ಯಡಗಾನಹಳ್ಳಿ ಹಾಗೂ ಮೈಸೂರು ಜಿಲ್ಲೆಯ ಕರ್ಣಕುಪ್ಪೆ ಗ್ರಾಮ ಪಂಚಾಯಿತಿಗಳು ಈ ಸಾಲಿನ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿವೆ.

ಇನ್ನು ರಾಜ್ಯದಲ್ಲೇ ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರವನ್ನು ಪಡೆದುಕೊಂಡಿರುವ ಹಾಸನ ಜಿಲ್ಲಾ ಪಂಚಾಯಿತಿಯ ಬಗ್ಗೆ ನೋಡುವುದಾದರೆ, ಸಿಂಹಾಸನಪುರವೆಂದೇ ಕರೆಯಲ್ಪಡುತ್ತಿದ್ದ ಈ ಜಿಲ್ಲೆಯು ಶ್ರೀಮಂತ ಇತಿಹಾಸ ಹಾಗೂ ಸ್ಮರಣೀಯ ಘಟನೆಗಳನ್ನು ಒಳಗೊಂಡ ಶ್ರೀಮಂತ ಜಿಲ್ಲೆಯಾಗಿದೆ. ಸ್ವಚ್ಛತೆ, ಅಭಿವೃದ್ಧಿ ಕಾರ್ಯಗಳ ಸಮರ್ಪಕ ಅನುಷ್ಠಾನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಸಮರ್ಪಕ ಅನುಷ್ಠಾನ, ತಾಲ್ಲೂಕು, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾದ ಅನುದಾನದಡಿ ಅನುಷ್ಠಾನಗೊಳಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿರುವುದು ಸೇರಿದಂತೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾದ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಿಕೊಂಡಿರುವುದು ಸೇರಿದಂತೆ ಇನ್ನೂ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಕಾರಣಕ್ಕಾಗಿ 24ನೇ ಏಪ್ರಿಲ್ 2021 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಸನ ಜಿಲ್ಲಾ ಪಂಚಾಯಿತಿಗೆ ದೇಶದ ಪ್ರಧಾನಿಗಳು ಈ ಪ್ರಶಸ್ತಿ ಸಂದಿರುವುದಾಗಿ ಘೋಷಿಸಿ ಗೌರವಿಸಿದರು.

ಇತರೆ ಪುರಸ್ಕಾರಗಳು:

ಇದಿಷ್ಟೇ ಅಲ್ಲದೆ, ಕರ್ನಾಟಕದ 3 ಪಂಚಾಯಿತಿಗಳಿಗೆ ವಿವಿಧ  ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಅವುಗಳೆಂದರೆ:

 • ಮಂಡ್ಯ ಜಿಲ್ಲೆಯ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ – ನಾನಾಜಿ ದೇಶ್‌ಮುಖ್‌ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ
 • ಬೆಂಗಳೂರು ನಗರ ಜಿಲ್ಲೆಯ ರಾಜನಕುಂಟೆ ಗ್ರಾಮ ಪಂಚಾಯಿತಿ – ನಮ್ಮ ಗ್ರಾಮ ನಮ್ಮ ಯೋಜನೆ ಪ್ರಶಸ್ತಿ
 • ಮೈಸೂರು ಜಿಲ್ಲೆಯ ಮನುಗಾನಹಳ್ಳಿ ಗ್ರಾಮ ಪಂಚಾಯಿತಿ- ಅತ್ಯುತ್ತಮ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ

ಇತರ ಜಿಲ್ಲೆಗಳೂ ಸಹ ಇದರಿಂದ ಪ್ರೇರಣೆ ಪಡೆದು ಗ್ರಾಮ ಮಟ್ಟದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರ ಮಟ್ಟದಲ್ಲಿ ತಮ್ಮ ಜಿಲ್ಲೆಗೆ ಕೀರ್ತಿ ತಂದುಕೊಡಲು ಮುಂದಾಗಬೇಕಿದೆ.

 5,936 total views,  2 views today

WhatsApp chat