ನಮ್ಮ ಸಂಸ್ಕೃತಿಯಲ್ಲಿ ಜಲಮೂಲಗಳಿಗೆ ಪೂಜ್ಯನೀಯ ಸ್ಥಾನವಿದೆ. ಸಹಸ್ರಾರು ಜನ ತಮ್ಮ ನೆರೆಯ/ಗ್ರಾಮದ ಕೊಳ, ಬಾವಿ ಹಾಗೂ ಪುಷ್ಕರಣಿ/ಕಲ್ಯಾಣಿಯನ್ನು ಮಾನಸ ಸರೋವರವೆಂದು ಪೂಜಿಸುವ ಸಂಸ್ಕೃತಿಯಿದೆ. ಇಂತಹ ಸಂಸ್ಕೃತಿ ಇರುವ ನಮ್ಮಲ್ಲಿ ಜೀವ ಜಲವನ್ನು ಗಂಗೆ ಸ್ವರೂಪವಾಗಿ ಆರಾಧಿಸುತ್ತೇವೆ.
ಇಂತಹ ಜೀವ ಜಲವನ್ನು ಸಂರಕ್ಷಿಸುವ ಹಾಗೂ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯೇ “ಜಲ ಜೀವನ್ ಮಿಷನ್”. ಇದನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ “ಮನೆ ಮನೆಗೆ ಗಂಗೆ” ಎಂಬ ಘೋಷ಼ವಾಕ್ಯದಿಂದ ಕರೆಯಲಾಗುತ್ತಿದೆ.
ಈ ಯೋಜನೆಯಲ್ಲಿ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೆ ತಲುಪಿಸುವುದರ ಜೊತೆಗೆ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಹಾಗು ಕೊಳವೆ ಬಾವಿ ಮತ್ತು ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಚಟುವಟಿಕೆಗಳು ಸಹ ಒಳಗೊಂಡಿದೆ.
ಕಲ್ಯಾಣಿ ಪುನಶ್ಚೇತನವನ್ನು ಮೈಸೂರು ಜಿಲ್ಲೆಯಲ್ಲಿ ವಿವಿಧ ಯೋಜನೆಗಳ(CONVERGENCE) ಅಡಿ ಆದ್ಯತೆ ಮೇರೆಗೆ ನಿರ್ವಹಿಸಲಾಗುತ್ತಿದೆ. ಈ ವಿಚಾರಕ್ಕೆ ಪುಷ್ಠಿ ನೀಡುವಂತಹ ಉದಾಹರಣೆಯೆಂದರೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿನ ಸುಮಾರು 150 ವರ್ಷಗಳ ಇತಿಹಾಸವಿರುವ ಕಾಳೇಗೌಡರ ಕಲ್ಯಾಣಿ ಪುನಶ್ಚೇತನ.
ಆಗಿನ ಕಾಲದಲ್ಲಿ ತಮ್ಮ ಸ್ವಂತ ಜಮೀನಿನ ಸುಮಾರು 17 ಗುಂಟೆ ಜಾಗವನ್ನು ಕಲ್ಯಾಣಿಗೆ ಮುಡಿಪಾಗಿಟ್ಟಿದ್ದ ಕಾಳೇಗೌಡರ ಹೆಸರನ್ನೇ ಈ ಕಲ್ಯಾಣಿಗೆ ಇಡಲಾಗಿದ್ದು, ಈ ಕಲ್ಯಾಣಿಯಿಂದ ಹಿಂದೆ ಹಿರಿಯರು ದೇವಸ್ಥಾನಕ್ಕೆ, ಕುಡಿಯಲು ಹಾಗೂ ಜಾನುವಾರುಗಳಿಗೆ ಕುಡಿಯಲೂ ಸಹ ನೀರನ್ನು ಜನರು ತೆಗೆದುಕೊಂಡು ಹೋಗುತ್ತಿದ್ದರು. ಆದರೇ ಕಳೆದ ಕೆಲವಾರು ವರ್ಷಗಳಿಂದ ಕಲ್ಯಾಣಿಯನ್ನು ಉಪಯೋಗಿಸಲಾಗದೇ ಬೇಡದ ಗಿಡ ಗಂಟಿಗಳು ಬೆಳೆದು ಹಾಳಾದ ಸ್ಥಿತಿಯಲ್ಲಿತ್ತು.
ಇದರ ಬಗ್ಗೆ ಗ್ರಾಮಸ್ಥರಲ್ಲಿ ವಿಚಾರಿಸಿ, ಇದರ ಇತಿಹಾಸವನ್ನು ತಿಳಿದು ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು ಹಾಗೂ ಆ ಗ್ರಾಮದ ಸದಸ್ಯರು, ಸಹಾಯಕ ಕಾರ್ಯಪಾಲಕ ಅಭಿಯಂತರರೊಂದಿಗೆ ಚರ್ಚಿಸಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕಲ್ಯಾಣಿ ಪುನಶ್ಚೇತನಕ್ಕಾಗಿ ಮೀಸಲಿರಿಸಿರುವ ಹಣವನ್ನು ಬಳಸಿಕೊಂಡು ಈ ಕಲ್ಯಾಣಿ ಪುನಶ್ಚೇತನ ಮಾಡಲು ತೀರ್ಮಾನಿಸಲಾಯಿತು. ಗ್ರಾಮಸ್ಥರ ಶ್ರಮದಾನದ ಸಹಾಯದಿಂದ ಕಲ್ಯಾಣಿಯಲ್ಲಿ ಸರಿಸುಮಾರು 7 ಅಡಿಯಷ್ಟು ಕೆಸರನ್ನು ತೆಗೆಯಲಾಯಿತು ಹಾಗೂ ಕಲ್ಯಾಣಿಯ ಸುತ್ತಮುತ್ತ ಬೆಳೆದಿದ್ದ ಉಪಯೋಗಕ್ಕೆ ಬಾರದ ಗಿಡಗಳನ್ನು ತೆಗೆದಿದ್ದು ಕಲ್ಯಾಣಿಗೆ ಸೇರಿದ ಜಾಗವನ್ನು ಸಮತಟ್ಟುಗೊಳಿಸಿ ಸ್ವಚ್ಚಗೊಳಿಸಲಾಯಿತು ಸುಮಾರು 15 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮದ ಸದಸ್ಯರುಗಳು ಸಕ್ರಿಯವಾಗಿ ಪಾಲ್ಗೊಂಡರು.
ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮದ ಮುಖಾಂತರ ಗ್ರಾಮದ ಜನತೆಗೆ ಪುಶ್ಚೇತನಗೊಳಿಸಿದ ಕಲ್ಯಾಣಿಯನ್ನು ಹಸ್ತಾಂತರಿಸಲಾಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮೈಸೂರು ಮತ್ತು ಭಗೀರಥ ಅನುಷ್ಟಾನ ಬೆಂಬಲ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಈ ಕಲ್ಯಾಣಿ ಪುನಶ್ಚೇತನ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಸಿದ್ದು, ಇತಿಹಾಸ ಮಹತ್ವವುಳ್ಳ ಈ ಕಲ್ಯಾಣಿಯನ್ನು ಶುಚಿಯಾಗಿಯೂ ಹಾಗೂ ಪಾರಂಪರಿಕ ಸ್ಥಳವಾಗಿಯೂ ಇಡುವ ಪ್ರತಿಜ್ಞೆಯನ್ನು ಮಾಡಿದರು. ಕಳೆದ ಕೆಲವಾರು ವರ್ಷಗಳಿಂದ ಆ ಗ್ರಾಮದ ಹಬ್ಬಕ್ಕೆ ಕಲ್ಯಾಣಿಯಿಂದ ನೀರನ್ನು ತೆಗೆದುಕೊಳ್ಳಲು ಸಾದ್ಯವಾಗದೇ ಇದ್ದದ್ದು, ಈ ವರ್ಷದಲ್ಲಿ ಅದೇ ಕಲ್ಯಾಣಿಯಿಂದ ಗ್ರಾಮದ ಹಬ್ಬದಂದು ಅಲ್ಲಿನ ಪ್ರಸಿದ್ದ ದೇವಸ್ಥಾನಕ್ಕೆ ಸಂಭ್ರಮ ಸಡಗರದಿಂದ ಕಲ್ಯಾಣಿ ನೀರನ್ನು ಕಳಸದಿಂದ ಪಡೆದು ಆಚರಿಸಿದ್ದಾರೆ.
“ನೀರು ಜೀವ ಜಲ” ಮುಂದಿನ ಪೀಳಿಗೆಗೆ ಈ ಜಲವನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು, ಅಂತೆಯೇ ನೀರಿನ ಮೂಲ ಹಾಗೂ ಅಂತರ್ಜಲ ನಿರ್ವಹಣೆ ಕೂಡ ನಮ್ಮ ಆದ್ಯ ಕರ್ತವ್ಯ.
2,927 total views, 2 views today