ಇಡೀ ಸೃಷ್ಟಿಗೆ ನೀರೇ ಮಾತೃ.ವಿಶ್ವದ ಅಳಿವು ಉಳಿವು ನಿಂತಿರೋದು ನೀರಿನ ಬುನಾದಿಯ ಮೇಲೇನೇ. ಹೀಗೆಂದು ಮಾತನಾಡುತ್ತಿರುವಾಗಲೇ ವಿಶ್ವಸಂಸ್ಥೆ ಆಘಾತಕಾರಿ ವಿಷಯವೊಂದನ್ನ ಹೊರಹಾಕಿದೆ. ನೀರಿನ ಅತಿಯಾದ ಬಳಕೆಯಿಂದಾಗಿ ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಲಿದ್ದು, ತೀವ್ರತರನಾದ ಬರಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಇಡೀ ಮನುಕುಲವನ್ನು ಎಚ್ಚರಿಸಿದೆ. ನೀರಿನ ಬವಣೆಯನ್ನು ಹೋಗಲಾಡಿಸಬೇಕಾದರೆ ಜಲಮೂಲಗಳ ಸಂರಕ್ಷಣೆ, ಮಳೆ ನೀರಿನ ಕೊಯ್ಲು ಅಳವಡಿಕೆ, ನೀರಿನ ಮಿತಬಳಕೆ, ಜಲ ಸಾಕ್ಷರತೆಯ ಮಹತ್ವವು ಹೆಚ್ಚಾಗಿದೆ. ನೀರಿನ ಬವಣೆಯನ್ನು ಅತೀ ಹತ್ತಿರದಿಂದ ಕಂಡಂತಹ ಸ್ವಯಂ ನಿವೃತ್ತಿ ಹೊಂದಿದ ಯೋಧರೊಬ್ಬರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ ನಂತರ ತಮ್ಮ ಪಂಚಾಯಿತಿಯನ್ನು ಜಲ ಸಮೃದ್ಧ ಪಂಚಾಯಿತಿಯನ್ನಾಗಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನಾವಿಲ್ಲಿ ಹೇಳಹೊರಟಿರೋದು ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ರವರ ಬಗ್ಗೆ. ಮೂಲತಃ ಚನ್ನರಾಯಪಟ್ಟಣದವರೇ ಆಗಿರುವ ಇವರು ಕಿರಿಯ ವಯಸ್ಸಿನಲ್ಲೇ ಸೇನೆಗೆ ಸೇರಿದರು. ರಾಜಸ್ಥಾನ, ಜಮ್ಮು ಕಾಶ್ಮೀರ ಸೇರಿದಂತೆ ದೇಶದ ಗಡಿ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಇವರು, ತಮ್ಮ ಸೇವಾವಧಿಯಲ್ಲಿ ಹನಿ ನೀರಿಗಾಗಿ ಪಟ್ಟ ಕಷ್ಟಗಳನ್ನು ಚೆನ್ನಾಗಿ ಮನವರಿಕೆ ಮಾಡಿಕೊಂಡಿದ್ದರು. ತಮ್ಮ ಸ್ವಯಂ ನಿವೃತ್ತಿ ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ ನಂತರ ತಮ್ಮ ವ್ಯಾಪ್ತಿಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ತಲೆದೋರಬಾರದೆಂದು ನಿರ್ಧರಿಸಿ ‘ಜಲಶಕ್ತಿ’ ಎಂಬ ಹೆಸರಿನ ನೀರಿನ ಯೋಜನೆಯೊಂದನ್ನು ಜಾರಿಗೆ ತಂದರು. ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನಗಳನ್ನೆಲ್ಲಾ ಕ್ರೋಢೀಕರಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬತ್ತಿಹೋಗಿರುವ ಬೋರ್‌ವೆಲ್‌ಗಳನ್ನು ಗುರುತಿಸಿ ಅವುಗಳಿಗೆ ಮರುಜೀವ ನೀಡಲು ನಿರ್ಧರಿಸಿ ಮಳೆನೀರಿನ ಕೊಯ್ಲು ಅಳವಡಿಸಿದರು. ಇದಿಷ್ಟೇ ಅಲ್ಲದೆ, ಮಾದಿಹಳ್ಳಿ ಸೇರಿದಂತೆ ಅಲ್ಲಲ್ಲಿ ಚೆಕ್‌ಡ್ಯಾಂ ಗಳನ್ನು ನಿರ್ಮಿಸಿ, ಮಳೆಗಾಲದಲ್ಲಿ ಹರಿದು ಪೋಲಾಗುತ್ತಿದ್ದ ಮಳೆ ನೀರನ್ನು ಸಂಗ್ರಹಿಸಲು ಆರಂಭಿಸಿದರು. ಪ್ರಸ್ತುತ ಈ ಚೆಕ್‌ಡ್ಯಾಂ ಗಳಲ್ಲಿ 4 ಲಕ್ಷ ಲೀಟರ್‌ಗೂ ಹೆಚ್ಚಿನ ನೀರು ಸಂಗ್ರಹವಾಗಿದ್ದು, ಅಂತರ್ಜಲ ಮರುಪೂರಣಕ್ಕೆ ಯೋಜನೆ ರೂಪಿಸಲಾಗಿದೆ.
ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಗೌಡಗೆರೆ ಗ್ರಾಮ ಪಂಚಾಯಿತಿ ಎದುರಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಾರಿಹೋಕರಿಗಾಗಿಯೇ ಒತ್ತುವ ಬೋರ್ ವೆಲ್‌ಅನ್ನು ನಿರ್ಮಿಸಿತ್ತು. ಕ್ರಮೇಣ ಬೋರ್‌ವೆಲ್‌ನಲ್ಲಿ ನೀರು ಬತ್ತಿಹೋದ ಕಾರಣ ಸಾವಿರಾರು ಪ್ರಯಾಣಿಕರ ದಣಿವಾರಿಸುತ್ತಿದ್ದ ಈ ಬೋರ್‌ವೆಲ್ ಪ್ರಯೋಜನಕ್ಕೆ ಬಾರದಾಯಿತು. ಇದನ್ನು ಹತ್ತಿರದಿಂದ ನೋಡಿದ್ದ ಬಸವರಾಜು ಅವರು, ತಾವು ಕೆಲಸಕ್ಕೆ ಹಾಜರಾದ ನಂತರ (2019-20) ಮೊದಲಿಗೆ ಕೈಗೆತ್ತಿಕೊಂಡ ಕೆಲಸವೇ ಮಳೆ ನೀರಿನ ಕೊಯ್ಲು. ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರಿನ ಕೊಯ್ಲು ಅಳವಡಿಕೆಗಾಗಿಯೇ 40 ಲಕ್ಷ ಮೊತ್ತವನ್ನು ಮೀಸಲಿಟ್ಟು, ಬತ್ತಿ ಹೋಗಿದ್ದ ಬೋರ್‌ವೆಲ್‌ಗಳಿಗೆ ರೀಚಾರ್ಜ್ ಮಾಡುವ ಕೆಲಸ ಆರಂಭಿಸಿದರು. ಇದರ ಪರಿಣಾಮವೇ ಹೈವೇಗೆ ಹೊಂದಿಕೊಂಡಂತ್ತಿದ್ದ ಬತ್ತಿ ಹೋಗಿದ್ದ ಬೋರ್‌ವೆಲ್ ಒಂದು ವರ್ಷದ ಬಳಿಕ ಯಥಾಸ್ಥಿತಿಗೆ ಮರಳಿದ್ದು, ದಾರಿಹೋಕರಿಗೆ ಮತ್ತೆ ನೀರುಣಿಸಲಾರಂಭಿಸಿದೆ.
ಬೋರ್‌ವೆಲ್‌ಗಳಿಗೆ ಮಳೆ ನೀರಿನ ಕೊಯ್ಲು, ಕಲ್ಲು ಬಾವಿಗಳ ಪುನಃಶ್ಚೇತನ, ಹೆಚ್ಚೆಚ್ಚು ನೀರು ಹರಿಯುವ ಕಡೆಗಳಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗವನ್ನು ಅರಣ್ಯೀಕರಣ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ.
ಈ ಯೋಜನೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಹೇಳುವ ಪ್ರಕಾರ, ‘ನೀರಿನ ಅಭಾವದಿಂದಾಗಿ ಮಲಮೂತ್ರ ವಿಸರ್ಜನೆಗೂ ಸಮಸ್ಯೆಯಾಗುತ್ತಿತ್ತು. ನನ್ನ ಪರಿಸ್ಥಿತಿಯೇ ಇನ್ನು ಮಹಿಳಾ ಸಿಬ್ಬಂದಿಗಳ ಪಾಡೇನು ಎಂಬುದನ್ನು ಅರ್ಥಮಾಡಿಕೊಂಡು ಮೊದಲು ಈ ಪಂಚಾಯಿತಿ ಕಟ್ಟಡಕ್ಕೆ ಮಳೆ ನೀರಿನ ಕೊಯ್ಲು ವಿಧಾನವನ್ನು ಅಳವಡಿಸಿ ವರ್ಷಪೂರ್ತಿ ನೀರು ಲಭ್ಯವಾಗುವಂತೆ ಮಾಡಿದೆ. ಇದೀಗ ಪಂಚಾಯಿತಿ ಸಿಬ್ಬಂದಿ ಯಾವುದೇ ಸಮಸ್ಯೆಗಳಿಲ್ಲದೆ ಶೌಚಾಲಯವನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ ಎಲ್ಲರಿಗೂ ಅನುಕೂಲವಾಗಿದೆ ಎನ್ನುತ್ತಾರೆ ಬಸವರಾಜ್.
ಪಂಚಾಯಿತಿ ಕಟ್ಟಡದಲ್ಲಿ ಸಂಗ್ರಹವಾದ ನೀರು ಕೇವಲ ಪಂಚಾಯಿತಿಗಷ್ಟೇ ಅಲ್ಲದೆ, ಪಕ್ಕದ ಪಶು ಆಸ್ಪತ್ರೆಯ ದೈನಂದಿನ ಚಟುವಟಿಕೆಗಳಿಗೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆ ಜೊತೆಯಲ್ಲಿಯೇ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೂದು ನೀರಿನ ನಿರ್ವಹಣೆ ಸೇರಿದಂತೆ, ಸ್ವಚ್ಛ ಸಂಕೀರ್ಣ ನಿರ್ಮಾಣ ಮಾಡಿ ಘನ ತ್ಯಾಜ್ಯ ನಿರ್ವಹಣೆಗೂ ಒತ್ತು ನೀಡಲಾಗುತ್ತಿದೆ.
ಒಟ್ಟಿನಲ್ಲಿ ಅಧಿಕಾರಿಯೊಬ್ಬರು ಮನಸ್ಸು ಮಾಡಿದರೆ ಇಡೀ ಪಂಚಾಯಿತಿಯನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸಬಹುದು ಎಂಬುವುದಕ್ಕೆ ಸ್ವಯಂ ನಿವೃತ್ತ ಯೋಧ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಸಾಕ್ಷಿಯಾಗಿದ್ದಾರೆ. ಇವರ ದೂರದೃಷ್ಟಿ ಮತ್ತು ಜನಪರ ಕಾಳಜಿಗೆ ಸಾರ್ವಜನಿಕರು ಫಿದಾ ಆಗಿದ್ದಾರೆ.
5,222 total views, 2 views today