Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

Rural Drinking Water and Sanitation Department, Karnataka

ಜೀವನದ ಅತ್ಯವಶ್ಯಕ ವಸ್ತುಗಳಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ. ನೀರು ಮಾನವನ ಪ್ರಗತಿಯ ಮಾನದಂಡ ಕೂಡ ಹೌದು. ಹಾಗಾದರೆ ನಾವು ಕುಡಿಯುವ ನೀರು ಹೇಗಿರಬೇಕು? ನೀರಿನಲ್ಲಿರುವ ಯಾವೆಲ್ಲಾ ಅಂಶಗಳು ನಮ್ಮನ್ನು ರೋಗಗ್ರಸ್ಥರನ್ನಾಗಿಸಬಹುದು ಬನ್ನಿ ತಿಳಿಯೋಣ.

ನಾವೆಲ್ಲರೂ ಕುಡಿಯುವ ನೀರಿಗಾಗಿ ಬಹುತೇಕ ಅಂತರ್ಜಲವನ್ನೇ ಅವಲಂಬಿಸಿದ್ದೇವೆ. ಅತೀ ಹೆಚ್ಚು ಅಂತರ್ಜಲವನ್ನು ಮನುಷ್ಯನ ಎಲ್ಲಾ ಉದ್ದೇಶಗಳಿಗೆ ಉಪಯೋಗಿಸುತ್ತಿರುವ ಕಾರಣ ಮತ್ತು ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣವು  ಕಡಿಮೆಯಾಗುತ್ತಿರುವುದರಿಂದ ಹಾಗೂ ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಮರುಪೂರಣ ಮಾಡದೇ ಇರುವುದರಿಂದ, ಅಂತರ್ಜಲ ಮಟ್ಟವು ಕ್ಷೀಣಗೊಂಡು ನೀರಿನಲ್ಲಿ ರಾಸಾಯನಿಕ ಅಂಶವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿರುವುದು ರಾಜ್ಯದ  ಕೆಲವು ಪ್ರದೇಶಗಳಲ್ಲಿ ಕಂಡು ಬಂದಿರುತ್ತದೆ.

ನಾವು ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಕಂಡುಬರುವ ರಾಸಾಯನಿಕಗಳೆಂದರೆ ಫ್ಲೋರೈಡ್, ಆರ್ಸೆನಿಕ್, ನೈಟ್ರೇಟ್, ಕಬ್ಬಿಣಾಂಶ, ಪಿ.ಹೆಚ್, ಕ್ಲೋರೈಡ್ ಇತ್ಯಾದಿ. ಅದೇ ರೀತಿ ಕೋಲಿಫಾರ್ಮ್, ಈ-ಕೋಲಿ ಎನ್ನುವ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಸೇರಿಕೊಂಡು ನೀರಿನ ಗುಣಮಟ್ಟವನ್ನು ಹಾಳುಮಾಡುತ್ತವೆ.

ನೀರಿನಲ್ಲಿ ಫ್ಲೋರೈಡ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವ ನೀರನ್ನು ಗರ್ಭಿಣಿ ಮಹಿಳೆಯರು ಕುಡಿಯುವುದರಿಂದ ಅವರಿಗೆ ಹುಟ್ಟುವ ಮಕ್ಕಳು ವಿಕಲಚೇತನರಾಗಿ (ಅಂಗವೈಕಲ್ಯ) ಹುಟ್ಟುತ್ತಾರೆ, ದಂತ ಮತ್ತು ಮೂಳೆಯ ಫ್ಲೊರೋಸಿಸ್ ಖಾಯಿಲೆಗೆ ತುತ್ತಾಗುತ್ತಾರೆ. ಇದರಿಂದ ಕೈಕಾಲುಗಳು ಊನವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವಯಸ್ಸಾದಂತೆ ಬೆನ್ನು ಬಾಗುವಿಕೆ, ಮೊಣಕಾಲು ನೋವು, ಮೂಳೆ ಸವೆತ, ಅನೀಮಿಯಾ, ಗ್ಯಾಸ್ಟ್ರಿಕ್ ತೊಂದರೆ ಹಾಗೂ ಮೂತ್ರ ಪಿಂಡಗಳ ಮೇಲೆ ಫ್ಲೋರೈಡ್ ಮಿಶ್ರಿತ ನೀರು ಪರಿಣಾಮ ಬೀರುತ್ತದೆ.

ಇನ್ನು ಆರ್ಸೆನಿಕ್ ಪ್ರಮಾಣ ಹೆಚ್ಚಿರುವ ನೀರನ್ನು ಕುಡಿಯುವುದರಿಂದ ಚರ್ಮದ ರೋಗಗಳು, ನರಮಂಡಲದ ತೊಂದರೆ, ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಕುಂದುವಿಕೆ ಉಂಟಾಗುತ್ತದೆ.

ನೈಟ್ರೇಟ್ ಹೆಚ್ಚಿರುವ ನೀರನ್ನು ಕುಡಿಯುವುದರಿಂದ ಹುಟ್ಟುವ ಮಕ್ಕಳು  ಮೆಥಾಮೊಗ್ಲೋಬಿನಿಮಿಯಾದಿಂದ (ಬ್ಲೂಬೇಬಿ ಸಿಂಡ್ರೋಮ್) ಬಳಲುತ್ತವೆ ಮತ್ತು ಇದರಿಂದ ವಯಸ್ಕರಲ್ಲಿ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಇನ್ನು ಕ್ಲೋರೈಡ್ ನೀರಿನ ಸ್ವಾದದ ಮೇಲೆ ಪರಿಣಾಮ ಬೀರಲಿದ್ದು. ಸೋಡಿಯಂ ಕ್ಲೋರೈಡ್ ಹೆಚ್ಚಾಗಿರುವ ನೀರನ್ನು ತೋಟಗಾರಿಕೆಗೆ ಬಳಸಿ ಅದರಿಂದ ಬರುವ ಉತ್ಪನ್ನಗಳನ್ನು ಸೇವನೆ ಮಾಡುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಲಿದೆ.

ಪಿ.ಹೆಚ್ ಪ್ರಮಾಣ ಹೆಚ್ಚಿದ್ದಲ್ಲಿ ಮನುಷ್ಯನ ಲೋಳೆಯ ಪೊರೆಯ (Mucous membrane) ಮೇಲೆ ಪರಿಣಾಮ  ಬೀರುತ್ತದೆ ಮತ್ತು ಆಮ್ಲೀಯ ನೀರು ಪೈಪ್‌ಲೈನ್ (ಕಬ್ಬಿಣದ ಪೈಪುಗಳನ್ನು)ನ್ನು ನಾಶಪಡಿಸುತ್ತದೆ. ಕಬ್ಬಿಣಾಂಶ, ಐರನ್, ಮ್ಯಾಗ್ನೀಷಿಯಮ್ ಸೇರಿದಂತೆ ಹಲವು ರಾಸಾಯನಿಕಗಳು ಅಧಿಕವಾಗಿ ನೀರಿನಲ್ಲಿ ಸೇರುವುದರಿಂದ ನೀರು ಕುಡಿಯಲು ಯೋಗ್ಯವಲ್ಲದ ಹಂತ ತಲುಪುತ್ತದೆ. ಅದೇ ರೀತಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳಿರುವ ನೀರಿನ ಸೇವನೆ ಕೂಡ ಮಾನವನ ದೇಹದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ.

ಮೇಲಿನ ಎಲ್ಲಾ ಅಂಶಗಳನ್ನು ಮಾನದಂಡಗಳನ್ನಾಗಿಟ್ಟುಕೊಂಡು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತಿದೆ. ನೀರಿನ ಗುಣಮಟ್ಟ ಪರೀಕ್ಷಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಮತ್ತು 47 ತಾಲ್ಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ. ಇದಿಷ್ಟೇ ಅಲ್ಲದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸಾವಿರಾರು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್(JJM) ಮೂಲಕ ಪ್ರತಿ ಮನೆಗೂ ಕಾರ್ಯಾತ್ಮಕ ನಳನೀರು ಸಂಪರ್ಕವನ್ನು (Functinal House Hold Tap Connection) ಮುಂದಿನ 3 ವರ್ಷಗಳಲ್ಲಿ ರಾಜ್ಯದ ಎಲ್ಲಾ ಮನೆ ಮನೆಗಳಿಗೂ ನೀಡುವಲ್ಲಿ ಇಲಾಖೆಯು ಕಾರ್ಯಪ್ರವೃತ್ತವಾಗಿರುತ್ತದೆ.

 7,569 total views,  1 views today

WhatsApp chat