ಶೌಚಾಲಯ ಅಂದ್ರೇನೇ ಮೂಗು ಮುರಿಯುವ ಜನರಿರುವಾಗ ಶೌಚದಿಂದ ಬಯೋಗ್ಯಾಸ್ ತಯಾರಿಸಿ, ಶೌಚಾಲಯದಿಂದ ತಯಾರಾಗುವ ಅನಿಲವನ್ನೇ ಅಡುಗೆ ಮಾಡಲು ಬಳಸಿ ಅಂದ್ರೆ ಒಪ್ಪುತ್ತಾರಾ... ಖಂಡಿತಾ ಇಲ್ಲ. ಹೌದು ಈ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಬೂದನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗುಂಜಬಬಲಾದ ಗ್ರಾಮದ ಗ್ರಾಮಸ್ಥರು. ಜಿಲ್ಲಾ ಕೇಂದ್ರದಿಂದ ಸುಮಾರು 28 ಕಿ.ಮೀ ದೂರದಲ್ಲಿರುವ ಈ ಗ್ರಾಮವು ಸುಮಾರು 380 ಕುಟುಂಬಗಳನ್ನು ಹೊಂದಿದೆ. ಈ ಗ್ರಾಮದ ಎಲ್ಲಾ ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿದ್ದು, ಪ್ರತಿದಿನ, ಪ್ರತಿ ಸಲ ಮನೆ ಮಂದಿಯೆಲ್ಲಾ ಶೌಚಕ್ಕಾಗಿ ಶೌಚಾಲಯವನ್ನೇ ಬಳಸುತ್ತಾರೆ. ಈ ಗ್ರಾಮದ ಮತ್ತೊಂದು ವಿಶೇಷ ಅಂದ್ರೆ ಇಲ್ಲಿನ 18 ಕುಟುಂಬಗಳು ಬಯೋಗ್ಯಾಸ್ ಸಂಪರ್ಕವನ್ನು ಹೊಂದಿದ್ದು, ಬಯೋಗ್ಯಾಸ್‌ಗೆ ಸಗಣಿ ಹಾಕುವ ಜೊತೆಗೆ ನೇರವಾಗಿ ಶೌಚಾಲಯದ ಗುಂಡಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ.
ಈ ಬಯೋಗ್ಯಾಸ್‌ನಿಂದ ಉತ್ಪತ್ತಿಯಾಗುವ ಅನಿಲವನ್ನು ಅಡುಗೆ ಮಾಡಲು ಮತ್ತು ನೀರು ಕಾಯಿಸುವುದು ಸೇರಿದಂತೆ ಗೃಹ ಬಳಕೆಗೆ, ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಅಡುಗೆ ಅನಿಲಕ್ಕೆ ಆಗುತ್ತಿದ್ದ ಖರ್ಚಿನ ಉಳಿತಾಯ ಮಾಡುತ್ತಿದ್ದಾರೆ. ಮೊದಲಿಗೆ ಈ ಗ್ರಾಮಸ್ಥರು ಶೌಚಾಲಯವನ್ನೇ ಕಟ್ಟಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.ಬಳಿಕ ಇದೇ ಗ್ರಾಮದ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಜಿಲ್ಲಾ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಸಮಾಲೋಚಕರುಗಳು, ಚೆನ್ನಮ್ಮ, ಸ್ವಸಹಾಯ ಸಂಘದ ಸದಸ್ಯರ ಮನವೊಲಿಸಿ ಯೋಜನೆಯ ಲಾಭ ಪಡೆದು ಶೌಚಾಲಯ ಕಟ್ಟಿಕೊಳ್ಳುವಂತೆ ತಿಳಿಸಿದರು. ಬಳಿಕ ಗ್ರಾಮದಲ್ಲಿ ಬಯೋಗ್ಯಾಸ್ ನಿರ್ಮಿಸಲು ಮುಂದೆ ಬಂದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ (ಎಸ್.ಕೆ.ಜಿ.ಎಸ್) ಸಂಸ್ಥೆ ಸಮೀಕ್ಷೆ ನಡೆಸಿ ದನ ಕರುಗಳಿರುವ ಕುಟುಂಬಗಳಿಗೆ ಬಯೋಗ್ಯಾಸ್ ನೀಡುವಾಗ ಶೌಚಾಲಯದ ಗುಂಡಿಗೂ ಬಯೋಗ್ಯಾಸ್ ಸಂಪರ್ಕ ಕಲ್ಪಿಸಬಹುದು ಎಂಬ ಬಗ್ಗೆ ಸಂಘದ ಸದಸ್ಯರಿಗೆ ಮನವರಿಕೆ ಮಾಡಿದರು. ಬಳಿಕ ಸಂಘದ ಮಹಿಳೆಯರು ತಮ್ಮ ಮನೆಗಳಲ್ಲಿನ ಶೌಚಾಲಯದ ಗುಂಡಿಗಳಿಗೆ ಸಂಪರ್ಕ ಕಲ್ಪಿಸಿಕೊಳ್ಳಲು ಮುಂದಾದರು. ಮೊದಲಿಗೆ ಗ್ರಾಮದಲ್ಲಿನ ನಾಲ್ಕೈದು ಮನೆಗಳಲ್ಲಿದ್ದ ಈ ರೀತಿಯ ಬಯೋಗ್ಯಾಸ್ ಈಗ ಸಂಘದ ಸದಸ್ಯರ ಜಾಗೃತಿ ಕಾರ್ಯಕ್ರಮಗಳು ಮತ್ತು ಮನೆ ಮನೆ ಭೇಟಿಯಿಂದಾಗಿ ಈ ಸಂಖ್ಯೆ 20ಕ್ಕೇರಿದೆ. ಹೀಗೆ ಅನಿಲ ಉತ್ಪತ್ತಿ ಬಳಿಕ ಸಗಣಿ ಜೊತೆ ಸೇರಿ ಗೊಬ್ಬರವಾಗುವ ಮಲವನ್ನು ಇವರು ತಮ್ಮ ತೋಟಗಳಿಗೆ ಗೊಬ್ಬರವಾಗಿ ಬಳಿಸಕೊಳ್ಳುತ್ತಿದ್ದಾರೆ.
ಈ ಗ್ರಾಮದ 380 ಕುಟುಂಬಗಳು 2014ರ ಬಳಿಕ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಪ್ರೋತ್ಸಾಹಧನ ಪಡೆದುಕೊಂಡು ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ಇದಾದ ಬಳಿಕ ಈ ಗ್ರಾಮದ ಜನರೆಲ್ಲಿ 20 ಕುಟುಂಬಗಳು ರಾಷ್ಟ್ರೀಯಜೈವಾನಿಲ ಅಭಿವೃದ್ಧಿ ಯೋಜನೆ (ಎಸ್.ಕೆ.ಜಿ.ಎಸ್)ಯ ಪ್ರೋತ್ಸಾಹಧನದೊಂದಿಗೆ ವೈಯಕ್ತಿಕ ಬಯೋಗ್ಯಾಸ್‌ಗಳನ್ನು ಕಟ್ಟಿಸಿಕೊಂಡಿದ್ದಾರೆ. ಪ್ರತಿ ಬಯೋಗ್ಯಾಸ್ ನಿರ್ಮಾಣಕ್ಕೆ ಅಂದಾಜು 20 ರಿಂದ 25 ಸಾವಿರ ರೂಪಾಯಿಗಳು ಖರ್ಚಾಗಲಿದ್ದು, ಇದರಿಂದ ಪ್ರತಿದಿನ 1 ಕ್ಯೂಬಿಕ್ ಮೀಟರಿನಷ್ಟು ಅನಿಲ ಉತ್ಪತ್ತಿಯಾಗಲಿದ್ದು, ಇದು ಸಿಲೆಂಡರ್‌ಗೆ ಹೋಲಿಸಿದರೆ,0.45ಕೆ.ಜಿ ಗಳಷ್ಟು ಗ್ಯಾಸ್ ಪ್ರತಿನಿತ್ಯ ಉತ್ಪತ್ತಿಯಾಗುತ್ತದೆ. ಒಂದು ಕುಟುಂಬದಲ್ಲಿ ನಾಲ್ಕರಿಂದ ಐದು ಜನ ವಾಸವಿದ್ದಲ್ಲಿ ಅಡುಗೆಗೆ ಈ ಅನಿಲ ಸಾಕಾಗುತ್ತದೆ. ಒಟ್ಟಿನಲ್ಲಿ ಕಸದಿಂದ ರಸ ಎಂಬ ಮಾತಿಗೆ ಇದೊಂದು ಉತ್ತಮ ಉದಾಹರಣೆಯಾಗಿದ್ದು ಗ್ರಾಮೀಣ ಕರ್ನಾಟಕದ ಎಲ್ಲಾ ಕುಟುಂಬಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿರುತ್ತದೆ.
4,132 total views, 1 views today