Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಅಕ್ಷತಾ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ. ಪ್ರತಿದಿನ ಅವಳು ಕಾಲೇಜಿಗೆ ಹೋಗುವಾಗ ಮೊದಲ ಬಸ್ಸನ್ನು ತಪ್ಪಿಸಿಕೊಳ‍್ಳುತ್ತಾಳೆ. ಮೊದಲನೆಯ ತರಗತಿಗೆ ಗೈರುಹಾಜರಾಗುತ್ತಾಳೆ. ಪ್ರತಿದಿನ ಅಧ್ಯಾಪಕರು ಅವಳಿಗೆ ಎಚ್ಚರಿಸುತ್ತಾರೆ. ಇದಕ್ಕೆ ಕಾರಣ ಅವಳ ಮನೆಯಲ್ಲಿ ಶೌಚಾಲಯವಿಲ್ಲದಿರುವುದು. ದಿನಾ ಬಯಲಿಗೆ ಯಾರೂ ಇಲ್ಲದ ಸಮಯ ನೋಡಿ ಹೋಗಿ ಬರುವ ವೇಳೆಗೆ ಅವಳಿಗೆ ತಡವಾಗುತ್ತಿತ್ತು. ಮುಟ್ಟಿನ ದಿನಗಳಲ್ಲಂತೂ ಅವಳು ಕಾಲೇಜಿಗೆ ರಜೆ ಹಾಕುತ್ತಿದ್ದಳು. ಇದರಿಂದ ಅವಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿತ್ತು.

ವಿದ್ಯಾಳಿಗೆ ದಿನಾ ಬಯಲಿಗೆ ಹೋಗುವಾಗ ಯಾರೋ ಹುಡುಗ ಚುಡಾಯಿಸುತ್ತಾನೆ. ಒಮ್ಮೊಮ್ಮೆ ಅವಳು ಹೋಗುವ ದಾರಿಯಲ್ಲಿ ಬಂದು ಪೀಡಿಸುತ್ತಾನೆ. ಅವಳು ಅವನಿಗೆ ಹೆದರಿ ಮುಂಜಾನೆಗೆ ಮೊದಲೇ ಎದ್ದು ಬಯಲಿಗೆ ಹೋಗುವಂತಾಗಿದೆ. ಇಲ್ಲವೆ ತಡರಾತ್ರಿಯವರೆಗೂ ಕಾಯಬೇಕಾಗುತ್ತದೆ. ಸುರಕ್ಷತೆಗೆಂದು ಅಣ್ಣ ಅಥವಾ ಅಪ್ಪನನ್ನು ಕರೆದುಕೊಂಡು ಹೋಗುವುದು ಇನ್ನೂ ಮುಜುಗರವಾಗಿ ಕಾಡುತ್ತಿದೆ.

ಮಂಗಳಾ ಒಂದು ವರ್ಷದ ಮಗುವಿನ ತಾಯಿ. ಮನೆಯಲ್ಲಿ ಮಗುವನ್ನು ನೋಡಿಕೊಳ‍್ಳಲು ಬೇರೆ ಯಾರೂ ಇಲ್ಲ. ಶೌಚಾಲಯವಿಲ್ಲದ ಮನೆಯಲ್ಲಿ ಬಹಿರ್ದೆಸೆಗಾಗಿ ಬಯಲಿಗೇ ಹೋಗಬೇಕು. ಪುಟ್ಟ ಮಗುವನ್ನು ಬಿಟ್ಟು ಹೋಗುವ ಹಾಗೂ ಇಲ್ಲ ಕರೆದುಕೊಂಡು ಹೋಗಲೂ ಆಗುವುದಿಲ್ಲ. ಮುಂಜಾನೆ ಗಂಡ ಎದ್ದು ಕೆಲಸಕ್ಕೆ ಹೊರಡುವ ಮೊದಲು ಬಯಲಿಗೆ ಹೋದರೆ ರಾತ್ರಿ ಅವನು ಬರುವವರೆಗೂ ಅವಳು ಶೌಚಕ್ಕೆ ಹೊರಗೆ ಹೋಗಲಾಗುವುದಿಲ್ಲ.

ಕಾಳೇಗೌಡರಿಗೆ ವಯಸ್ಸಾಗಿದೆ. ಒಬ್ಬರ ಸಹಾಯವಿಲ್ಲದೇ ನಡೆಯಲಾಗುವುದಿಲ್ಲ. ಬೆಳಗ್ಗೆ ಮಗ ಬಯಲಿಗೆ ಕರೆದುಕೊಂಡು ಹೋಗುತ್ತಾನೆ. ಅಷ್ಟು ದೂರ ನಡೆದು ಹೋಗಿ ಬರುವಷ್ಟರಲ್ಲಿ ಅವರಿಗೆ ಉಬ್ಬಸ ಬಂದಿರುತ್ತದೆ. ಇದರಿಂದ ಅವರ ಆರೋಗ್ಯಕ್ಕೆ ಇನ್ನಷ್ಟು ಹಾನಿಯಾಗುತ್ತಿದೆ. ದಿನದ ಯಾವುದೇ ಹೊತ್ತಲ್ಲಿ ಮತ್ತೆ ಶೌಚಾಲಯಕ್ಕೆ ಹೋಗಲು ಕಷ್ಟ. ಮಗ ಸಂಜೆ ಬರುವವರೆಗೂ ಕಾಯಬೇಕು. ಸೊಸೆಯನ್ನು ಕೇಳಲು ಮುಜುಗರ. ಕಷ್ಟವೂ ಹೌದು.

ಪೋಲಿಯೋಗೆ ತುತ್ತಾಗಿರುವ ಚಂದ್ರುಗೆ ಬಯಲಿಗೆ ಕರೆದುಕೊಂಡು ಹೋಗಲು ಯಾರದಾದರೂ ನೆರವು ಅವಶ್ಯವಿದೆ. ಆದರೆ ಪದೇ ಪದೇ ಸಹಾಯ ಕೇಳುವುದು ಕಷ್ಟದ ಕೆಲಸ. ಊರುಗೋಲಿನ ಸಹಾಯದಿಂದ ಅಷ್ಟು ದೂರ ನಡೆಯುವುದು ಆಯಾಸವನ್ನುಂಟು ಮಾಡುತ್ತದೆ, ದಿನದಲ್ಲಿ ಹಲವು ಬಾರಿ ಹೋಗುವುದು ಸುಲಭದ ಮಾತಲ್ಲ.

ಸೂರಜ್ ಎರಡು ವರ್ಷದ ಮಗು, ಪದೇ ಪದೇ ಅತಿಸಾರಕ್ಕೆ ತುತ್ತಾಗುತ್ತಿದ್ದಾನೆ. ಆಗಾಗ ಆಸ್ಪತ್ರೆ ವೆಚ್ಚ ಭರಿಸುವುದು ಅವನ ಪೋಷಕರಿಗೂ ಹೊರೆಯಾಗುತ್ತಿದೆ, ಮಗುವಿಗೆ ಹುಷಾರು ತಪ್ಪುವ ಕಾರಣ ಅವರ ಕೆಲಸಗಳಿಗೆ ತೊಂದರೆಯಾಗಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿವೆ. ಗ್ರಾಮದಲ್ಲಿನ ಬಯಲು ಬಹಿರ್ದೆಸೆ ರೋಗಾಣುಗಳನ್ನು ಸಾಂಕ್ರಾಮಿಕವಾಗಿಸಲು ಕಾರಣವಾಗಿದೆ.

ಗರ್ಭಿಣಿಯಾದ ಆಶಾ ಮನೆಯಿಂದ ಬಯಲಿಗೆ ನಡೆಯುವ ದಾರಿ ದೂರವಿದೆ. ಕಲ್ಲುಗಳು, ಪೊದೆಗಳು ಇರುವ ಜಾಗ ಅದು. ಎಡವಿ ಬಿದ್ದು ತನಗೂ, ಹೊಟ್ಟೆಯಲ್ಲಿರುವ ಮಗುವಿಗೂ ಏನಾದರೂ ಆಗಬಹುದು ಎಂಬ ಆತಂಕ ಅವಳನ್ನು ಸದಾ ಕಾಡುತ್ತಲೇ ಇರುತ್ತದೆ. ಕತ್ತಲಾದಾಗ ಅಷ್ಟು ದೂರ ನಡೆಯುವುದು ಕಷ್ಟವಾಗುತ್ತದೆ. ದಿನದಲ್ಲಿ ಹಲವಾರು ಬಾರಿ ಶೌಚಕ್ಕೆ ಹೋಗುವುದು ಕಷ್ಟ, ಜೊತೆಗೆ ಬಯಲು ಶೌಚದಿಂದ ಸೋಂಕುಗಳು ಉಂಟಾಗುವ ಭಯ ಕೂಡ ಉಂಟಾಗುತ್ತದೆ

ಇಂತಹ ನೂರಾರು ಉದಾಹರಣೆಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತವೆ. ಬಯಲು ಬಹಿರ್ದೆಸೆಯಂತಹ ಅಭ್ಯಾಸಗಳು ಮನುಷ್ಯನ ಜೀವನದಲ್ಲಿ ಹಲವು ರೀತಿಯ ದುಷ್ಪರಿಣಾಮಗಳನ್ನು ಬೀರುತ್ತದೆ. ಆರೋಗ್ಯ, ಆರ್ಥಿಕತೆ, ಘನತೆ, ಭದ್ರತೆ ಎಲ್ಲದರ ಮೇಲೂ ಬಯಲು ಬಹಿರ್ದೆಸೆ ಪರಿಣಾಮ ಬೀರುತ್ತದೆ. ಇದಕ್ಕೆಲ್ಲ ಏಕೈಕ ಮತ್ತು ಶಾಶ್ವತ ಪರಿಹಾರವೆಂದರೆ ಶೌಚಾಲಯದ ನಿರ್ಮಾಣ ಮತ್ತು ಬಳಕೆ. ಪ್ರತಿ ಮನೆಯಲ್ಲಿಯೂ ಶೌಚಾಲಯವನ್ನು ನಿರ್ಮಿಸುವ ಉದ್ದೇಶದಿಂದ ಜಾರಿಗೆ ಬಂದ ಬೃಹತ್ ಯೋಜನೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ). ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮೊದಲು ಅಡ್ಡಿಯಾದದ್ದು ಜನರಲ್ಲಿರುವ ಅತಿಯಾದ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳು. ಅದನ್ನು ಹೋಗಲಾಡಿಸಲು ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಬಳಸಿ ಜನರಲ್ಲಿ ನಡವಳಿಕೆ ಬದಲಾವಣೆಯನ್ನು ತರಲಾಯಿತು. ಜನರಲ್ಲಿ ಅರಿವು ಮೂಡಿಸಿ ಶೌಚಾಲಯಗಳನ್ನು ನಿರ್ಮಿಸಲಾಯಿತು.

2018 ನವೆಂಬರ್ 19ರಂದು ಗ್ರಾಮೀಣ ಕರ್ನಾಟಕವು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲ್ಪಟ್ಟಿತು. ಶೌಚಾಲಯದ ನಿರ್ಮಾಣವಾಗಿದ್ದರೂ ಜನರು ಅದನ್ನು ಬಳಸಲು ಹಿಂಜರಿಯುತ್ತಿದ್ದರು. ಜನರನ್ನು ಶೌಚಾಲಯವನ್ನು ಬಳಸುವಂತೆ ಪ್ರೇರೇಪಿಸಲು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಶೌಚಾಲಯವನ್ನು ಸ್ವಚ್ಛ ಸುಂದರವಾಗಿಡಲು ಸ್ವಚ್ಛ ಸುಂದರ ಶೌಚಾಲಯ ಅಭಿಯಾನ, ಶೌಚಾಲಯ ನಿರ್ಮಿಸಲು ಸ್ಥಳಾವಕಾಶವಿಲ್ಲದಿದ್ದಾಗ ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ನಿರ್ಮಿಸಲು ಪ್ರೇರೇಪಿಸಿ ಸಮುದಾಯ ಶೌಚಾಲಯ ಅಭಿಯಾನ, ವಲಸೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಸ್ವಚ್ಛ ಸುಂದರ ಸಾಮುದಾಯಿಕ ಅಭಿಯಾನ ಮುಂತಾದ ಹಲವಾರು ಅಭಿಯಾನಗಳನ್ನು ಹಮ್ಮಿಕೊಳ‍್ಳಲಾಯಿತು.

ಗ್ರಾಮೀಣ ಕರ್ನಾಟಕವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಿ ಆರೋಗ್ಯಕರ ಸದೃಢ ನಾಡನ್ನಾಗಿಸಲು ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾದುದು. ಪ್ರತಿಯೊಬ್ಬರೂ ಬಯಲು ಬಹಿರ್ದೆಸೆ  ವೈಯಕ್ತಿಕ ಹಂತದಲ್ಲಿ ಮತ್ತು ಸಮುದಾಯ ಹಂತದಲ್ಲಿ ತಂದೊಡ್ಡುವ ಅಪಾಯಗಳ ಕುರಿತಾಗಿ ಅರಿಯಬೇಕಾಗಿದೆ. ಬದಲಾವಣೆ ಮೊದಲು ನಮ್ಮಿಂದಲೇ ಎನ್ನುವುದನ್ನು ಅರಿಯೋಣ. ಸ್ವಚ್ಛತೆಯೆಡೆಗೆ ಒಂದು ಹೆಜ್ಜೆಯಿಡೋಣ.

Jal Jeevan Mission Karnataka

 6,947 total views,  6 views today

WhatsApp chat