ಸ್ವಚ್ಛ ಪರಿಸರ, ಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಯ ಅಲೆ ಎಲ್ಲೆಲ್ಲೂ ಹರಡುತ್ತಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆ ಜಾರಿವೇಳೆ ಖುದ್ದು ಪ್ರಧಾನಮಂತ್ರಿಗಳು ಪೊರಕೆ ಹಿಡಿದು ರಸ್ತೆಯನ್ನು ಶುಚಿಗೊಳಿಸಲು ಮುಂದಾಗಿದ್ದೇ ತಡ ಇಡೀ ದೇಶದ ಜನರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾರಂಭಿಸಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡು ಬಯಲು ಬಹಿರ್ದೆಸೆಗೆ ವಿದಾಯ ಹೇಳುವ ಮೂಲಕ ಸ್ವಚ್ಛ, ಸುಂದರ ಗ್ರಾಮಗಳನ್ನು ರೂಪಿಸುವಲ್ಲಿ ಪ್ರತಿಯೊಬ್ಬರೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದುವರೆದು ಯೋಜನೆಯ ಲಾಭ ಪಡೆದು ರಾಜ್ಯಾದ್ಯಂತ ಅವಶ್ಯಕತೆ ಇರುವಡೆಗಳಲ್ಲೆಲ್ಲಾ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.
ಕೇವಲ ಮನೆಗಳಷ್ಟೇ ಶೌಚಾಲಯ ಹೊಂದಿದ್ದರೆ ಸಾಲದು, ಬದಲಿಗೆ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಸಮುದಾಯ ಶೌಚಾಲಯವಿರಬೇಕು. ಇದಕ್ಕೆ ಪೂರಕವೆಂಬಂತೆ ೧೦೫ ಗ್ರಾಮ ಪಂಚಾಯತಿಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ೯೩ ಗ್ರಾಮ ಪಂಚಾಯತಿಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ. ಈಗಾಗಲೇ ೫೦ ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಇನ್ನುಳಿದ ೪೩ ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಿಶೇಷವೆಂದರೆ, ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿಯಲ್ಲಿ ಸಂಚಾರಿ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿದೆ.
ಈ ಶೌಚಾಲಯವನ್ನು ಕ್ರೇನ್ ಬಳಸಿ ಅಗತ್ಯವಿರುವ ಪ್ರದೇಶಗಳಿಗೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಸಂಪೂರ್ಣ ಕಾಂಕ್ರಿಟ್ ಬಳಸಿ ನಿರ್ಮಿಸಲಾಗಿರುವ ಈ ಶೌಚಾಲಯ ನಾಲ್ಕು ಪ್ರತ್ಯೇಕ ಶೌಚಗೃಹಗಳನ್ನು ಒಳಗೊಂಡಿದೆ. ಇದರಲ್ಲಿ ಎರಡನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ನಿರ್ಮಾಣ ಹಂತದಲ್ಲಿಯೇ ಮುಂದಾಲೋಚನೆ ಮಾಡಿ ನೀರು ಮತ್ತು ಕರೆಂಟ್ ವ್ಯವಸ್ಥೆಗಾಗಿಯೇ ಪ್ರತ್ಯೇಕ ಪೈಪ್‌ಗಳನ್ನು ಅಳವಡಿಸಲಾಗಿದೆ. ಈ ಶೌಚಾಲಯದಿಂದ ಸುಲಭವಾಗಿ ಇಂಗು ಗುಂಡಿಗೂ ಸಂಪರ್ಕ ಕಲ್ಪಿಸಬಹುದಾಗಿದ್ದು ಸುರಕ್ಷಿತ ಮಲ ವಿಲೇವಾರಿಗೂ ಇದು ಸಹಕಾರಿಯಾಗಿದೆ. ೧೪ ಅಡಿ ಅಗಲ, ೮ ಅಡಿ ಉದ್ದವನ್ನು ಹೊಂದಿರುವ ಈ ಸಂಚಾರಿ ಸಮುದಾಯ ಶೌಚಾಲಯ ೧೩.೫೦ ಟನ್ ತೂಕವಿದೆ. ರೂ.೪ ಲಕ್ಷ ವೆಚ್ಚ ಮಾಡಿ ಈ ಸಂಚಾರಿ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿದ್ದು ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಕಾರ್ಯಕ್ರಮಗಳಾದರೂ ಸಾರ್ವಜನಿಕರ ಬಳಕೆಗಾಗಿ ಈ ಶೌಚಾಲಯವನ್ನು ಉಪಯೋಗಿಸಲಾಗುತ್ತಿದೆ. ಸದ್ಯ ಈ ಶೌಚಾಲಯವನ್ನು ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿಯೇ ಇರಿಸಲಾಗಿದ್ದು ಇದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿ ವಹಿಸಿಕೊಂಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಲಕ್ಷ್ಯವೇ ಹೆಚ್ಚಾಗಿರುವ ಪರಿಸ್ಥಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚಾರಿ ಸಮುದಾಯ ಶೌಚಾಲಯದ ಸದ್ಬಳಕೆಯಾಗುತ್ತಿರುವುದು ಖುಷಿಯ ವಿಚಾರವೇ ಸರಿ.
7,174 total views, 1 views today