
ಗ್ರಾಮೀಣ ಭಾಗಗಳಲ್ಲಿ ಪ್ರವೇಶಿಸುತ್ತಿದ್ದಂತೆ ಕಿವಿಗೆ ಇಂಪಾಗಿ ಕೇಳುವ ಧ್ವನಿಯೆಂದರೆ ಬಾನುಲಿಯ ಧ್ವನಿ. ಸಾಧಾರಣವಾಗಿ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ, ಅಂಗಡಿಗಳಲ್ಲಿ ರೇಡಿಯೋಗಳು ಇರುತ್ತವೆ. ಜಮೀನಿನಲ್ಲಿ ಕೆಲಸ ಮಾಡುವವರು, ಕೂಲಿ ಕಾರ್ಮಿಕರು, ಕಿರಾಣಿ ಅಂಗಡಿಯವರು, ರೈತರು, ಮುಂತಾದ ಎಲ್ಲ ವರ್ಗದ ಜನರು ತಮ್ಮ ಕೆಲಸದ ವೇಳೆಯಲ್ಲಿ ರೇಡಿಯೋ ಕೇಳುವುದು ಸಾಮಾನ್ಯ. ಮನರಂಜನೆ, ಮಾಹಿತಿ ಎಲ್ಲವನ್ನೂ ಒದಗಿಸುವ ಬಾನುಲಿ, ಗ್ರಾಮಗಳ ಅತಿದೊಡ್ಡ ಶ್ರವ್ಯ ಮಾಧ್ಯಮ.
ಇದರಲ್ಲಿ ವಿಧಗಳಿವೆ. ಆರ್ಥಿಕ ಪ್ರಸಾರ ಮಾಧ್ಯಮವಾದ ಎಫ್‌ಎಂಗಳು, ಸಾರ್ವಜನಿಕರಿಗಾಗಿ ಕಾರ್ಯ ನಿರ್ವಹಿಸುವ ಆಕಾಶವಾಣಿಗಳು, ಜೊತೆಗೆ ಸಮುದಾಯ ಬಾನುಲಿ ಕೇಂದ್ರಗಳು. ಸಮುದಾಯ ಬಾನುಲಿ ಕೇಂದ್ರಗಳು ಒಂದು ನಿರ್ದಿಷ್ಟ ಕೇಳುಗರಿಗಾಗಿ, ನಿರ್ದಿಷ್ಟ ವಿಷಯದ ಕುರಿತಾಗಿ ಮಾಹಿತಿ ಬಿತ್ತರಿಸುತ್ತದೆ. ಭಾರತದಲ್ಲಿ ಸುಮಾರು 1990ನೆ ಇಸವಿಯಿಂದಲೇ ಸಮುದಾಯ ರೇಡಿಯೋಗಳನ್ನು ಆರಂಭಿಸುವುದರ ಕುರಿತಾಗಿ ಆಂದೋಲನ ಆರಂಭವಾಗಿತ್ತು. 1995 ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ವಾಯುತರಂಗಗಳು ಸಾರ್ವಜನಿಕರ ಸ್ವತ್ತು ಎಂದು ತೀರ್ಪು ನೀಡಿದ ನಂತರ ಸಮುದಾಯ ರೇಡಿಯೋಗಳ ಆರಂಭಕ್ಕೆ ಅನುಮತಿ ಸಿಕ್ಕಿದಂತಾಯಿತು. ಭಾರತದ ಮೊದಲ ಸಮುದಾಯ ಬಾನುಲಿ ಕೇಂದ್ರ ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆರಂಭವಾಯಿತು.

ಸಮುದಾಯ ಬಾನುಲಿ ಕೇಂದ್ರಗಳು ತಮ್ಮ ಸುತ್ತಲಿನ ಸುಮಾರು ೨೫-೪೦ ಕಿ.ಮೀ. ವಿಸ್ತೀರ್ಣದವರೆಗೂ ಮಾಹಿತಿ ಪ್ರಸಾರ ಮಾಡಬಲ್ಲವು. ಯಾವುದೇ ನಿರ್ದಿಷ್ಟ ವರ್ಗದ ಜನರಿಗಾಗಿ, ಉದಾ; ವಿದ್ಯಾರ್ಥಿಗಳು, ಮಹಿಳೆಯರು, ರೈತರು, ಸಂಗೀತಾಸಕ್ತಿ ಉಳ್ಳವರು, ವೈದ್ಯರು ಇತ್ಯಾದಿ ಹಲವಾರು ವರ್ಗಗಳಿಗಾಗಿ ಬಾನುಲಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ.
ಗ್ರಾಮೀಣ ಕರ್ನಾಟಕದ ನೀರು ಮತ್ತು ನೈರ್ಮಲ್ಯ ಸ್ಥಿತಿಯನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದ ಭಾಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯ್ದ ಸಮುದಾಯ ಬಾನುಲಿ ಕೇಂದ್ರಗಳನ್ನು ಅದರಲ್ಲಿ ನೀರು - ನೈರ್ಮಲ್ಯ ಕುರಿತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನೇಮಿಸಿಕೊಂಡಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ೮ ಸಮುದಾಯ ಬಾನುಲಿ ಕೇಂದ್ರಗಳನ್ನು ನೇಮಿಸಿಕೊಂಡಿದ್ದು ಅವುಗಳೆಂದರೆ:
ಕಲಬುರಗಿಯ ಅಂತರವಾಣಿ ಸಮುದಾಯ ರೇಡಿಯೋ, ಬೆಳಗಾವಿ ಜಿಲ್ಲೆಯ ವೇಣುಧ್ವನಿ, ಮಣಿಪಾಲದ ರೇಡಿಯೋ ಮಣಿಪಾಲ, ಮಂಗಳೂರಿನ ರೇಡಿಯೋ ಸಾರಂಗ್, ತುಮಕೂರಿನ ರೇಡಿಯೋ ಸಿದ್ಧಾರ್ಥ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರಥಿ ಝಲಕ್, ಸರಗೂರಿನ ಜನಧ್ವನಿ, ಕೋಲಾರ ಜಿಲ್ಲೆಯ ನಮ್ಮ ಧ್ವನಿ, ಬೆಳಗಾವಿಯ ಹುಕ್ಕೇರಿ ತಾಲೂಕಿನ ನಮ್ಮೂರ ಬಾನುಲಿ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಮುದಾಯ ಬಾನುಲಿ ಕೇಂದ್ರ.

ಈ ಎಲ್ಲ ಸಮುದಾಯ ಬಾನುಲಿ ಕೇಂದ್ರಗಳು ಪ್ರಸ್ತುತ ಅಂದಾಜು ೧೫೦೦ ಗ್ರಾಮಗಳಿಗೆ ಮಾಹಿತಿ ಬಿತ್ತರಿಸುತ್ತಿದೆ. ಈ ನೋಂದಾಯಿತ ಸಮುದಾಯ ಬಾನುಲಿ ಕೇಂದ್ರಗಳು ಅನುಮೋದನೆಯಾದ ಕ್ರಿಯಾಯೋಜನೆಯ ಅನುಸಾರ ಕಾರ್ಯಕ್ರಮ ಪ್ರಸಾರ ಮಾಡುವುದಲ್ಲದೆ ಇಲಾಖೆಯ ಅಧಿಕಾರಿಗಳು ಮತ್ತು ಆಯಾ ಜಿಲ್ಲೆಯ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯ ನೋಡಲ್ ಅಧಿಕಾರಿಗಳು ಮತ್ತು ಐಇಸಿ ಸಮಾಲೋಚಕರೊಂದಿಗೆ ಸಮನ್ವಯತೆ ಹೊಂದಿ ಕಾರ್ಯ ನಿರ್ವಹಿಸುತ್ತಿವೆ.
ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ ಎಂಬ ಘೋಷವಾಕ್ಯದಡಿಯಲ್ಲಿ ವಿವಿಧ ರೀತಿಯ ಜಿಂಗಲ್‌ಗಳು, ಸಂದರ್ಶನಗಳು, ನೇರ ಫೋನ್ ಇನ್ ಕಾರ್ಯಕ್ರಮಗಳು, ಕಥೆ, ನಾಟಕ, ಅನುಭವ ಹಂಚಿಕೊಳ್ಳುವಿಕೆ, ಸ್ಪೂರ್ತಿದಾಯಕ ಮಾತುಗಳು, ವಿಶೇಷ/ಇಲಾಖಾ ಫೋಷಣೆಗಳು ಇತ್ಯಾದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ಸಮುದಾಯ ರೇಡಿಯೋ ಕೇಂದ್ರಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಉದ್ದೇಶಗಳಾದ ಸ್ವಚ್ಛತೆ, ನೈರ್ಮಲ್ಯ, ವೈಯಕ್ತಿಕ ಶುಚಿತ್ವ, ಶೌಚಾಲಯದ ನಿರ್ಮಾಣ ಮತ್ತು ಬಳಕೆ, ಸಮರ್ಪಕ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ನೀರಿನ ಸಂರಕ್ಷಣೆ, ಮಿತ ಬಳಕೆ, ಮಳೆ ನೀರು ಕೊಯ್ಲು, ಅಂತರ್ಜಲ ಮರುಪೂರಣ, ಪ್ಲಾಸ್ಟಿಕ್ ಮರುಬಳಕೆ ಮುಂತಾದ ವಿಷಯಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಜನರಿಗೆ ಸುಲಭವಾಗಿ ಮತ್ತು ಸರಳವಾಗಿ ಮಾಹಿತಿಯನ್ನು ತಲುಪಿಸುತ್ತಾ, ಅವರನ್ನು ಸ್ವಚ್ಛತೆ ಮತ್ತು ಜಲ ಸಂರಕ್ಷಣೆ ಕುರಿತಾಗಿ ಜಾಗೃತರನ್ನಾಗಿ ಮಾಡುತ್ತಾ ಸ್ವಚ್ಛ ಸುಂದರ ಸಮೃದ್ಧ ಕರ್ನಾಟಕವನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ವಿಷಯ. ಇಲಾಖೆಯು ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳಿಗಾಗಿ ರೇಡಿಯೋ, ಟಿವಿ, ಸಾಮಾಜಿಕ ಮಾಧ್ಯಮ ಮುಂತಾದ ಎಲ್ಲ ವೇದಿಕೆಗಳನ್ನೂ ಸಮರ್ಥವಾಗಿ ಬಳಸಿಕೊಳ್ಳುತ್ತಾ ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸಲು ಶ್ರಮ ವಹಿಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವುದು ಮತ್ತು ಸಂದೇಶಗಳನ್ನು ಅಳವಡಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ.

8,182 total views, 5 views today