ನಿವೃತ್ತ IAS ಅಧಿಕಾರಿ ಪರಮೇಶ್ವರನ್ ಐಯ್ಯರ್ ತಮ್ಮ ಕೃತಿ Method of the Madness: Insights from My Career as an Insider-Outsider-Insider ನಲ್ಲಿ ಹೀಗೆ ಬರೆಯುತ್ತಾರೆ, ಸರ್ಕಾರದ ಯಾವುದೇ ಯೋಜನೆಗಳು ಯಶಸ್ಸನ್ನು ಕಾಣಬೇಕಾದರೆ ಈ 4 ಅಂಶಗಳ ಪಾತ್ರ ಪ್ರಮುಖವಾಗಿರುತ್ತದೆ. ಅವುಗಳೆಂದರೆ ರಾಜಕೀಯ ನಾಯಕತ್ವ, ಸಾರ್ವಜನಿಕ ಧನಸಹಾಯ, ಪಾಲುದಾರಿಕೆ, ಸಾರ್ವಜನಿಕರ ಭಾಗವಹಿಸುವಿಕೆ. ಹೌದು, ಈ ನಾಲ್ಕು ಅಂಶಗಳಿಂದ ಯಶಸ್ಸು ಕಂಡ ಸ್ವಚ್ಛ ಭಾರತ್ ಮಿಷನ್ ಯೋಜನೆ ನಮ್ಮ ಕಣ್ಣ ಮುಂದೆ ಮಾದರಿಯಾಗಿ ನಿಂತಿದೆ. ಇಡೀ ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿ ಘೋಷಿಸುವಲ್ಲಿ ಈ ಮೇಲಿನ ನಾಲ್ಕು ಅಂಶಗಳ ಪಾತ್ರವನ್ನು ನಾವು ನಾವೆಲ್ಲರೂ ನೋಡಿದ್ದೇವೆ ಹಾಗೂ ಇದರ ಯಶಸ್ಸಿನಲ್ಲಿ ಭಾಗಿಗಳಾಗಿದ್ದೇವೆ.
ಇಂತಹದ್ದೇ ಮತ್ತೊಂದು ಯೋಜನೆಯನ್ನು ಕೇಂದ್ರ ಸರ್ಕಾರ 2019 ಜಲ ಜೀವನ್ ಮಿಷನ್ ಹೆಸರಿನಲ್ಲಿ ಜಾರಿಗೊಳಿಸಿದೆ. ಪ್ರಸ್ತುತ ಈ ಯೋಜನೆಯ ಪ್ರಕಾರ 2024 ರೊಳಗಾಗಿ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಮೂಲಕ ತಲಾ 55 ಲೀ. ಶುದ್ಧ ನೀರನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಇದರ ಜವಾಬ್ದಾರಿಯನ್ನು ಹೊತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅವಧಿಗೂ ಮುನ್ನ ಗುರಿಯನ್ನು ಸಾಧಿಸುವತ್ತ ಮುನ್ನುಗ್ಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಈ ಯೋಜನೆಯ ಯಶಸ್ವಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿರುವುದೇ ಸಮುದಾಯ ಪಾಲುದಾರಿಕೆ. ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಷ್ಠಾನ ನೆರವು ಸಂಸ್ಥೆಗಳನ್ನು ನೇಮಿಸಿಕೊಂಡು ಇವುಗಳ ಮೂಲಕ IEC/HRD ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಜೊತೆಗೆ ಗ್ರಾಮೀಣ ಸಮುದಾಯಕ್ಕೆ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಚಾಮರಾಜನಗರ ಜಿಲ್ಲೆ, ಚಾಮರಾಜನಗರ ತಾಲ್ಲೂಕಿನ ಅಮಚವಾಡಿ, ಬಿಸಲವಾಡಿ, ಹರದನಹಳ್ಳಿ ಹಾಗೂ ಬಂಡಿಗೆರೆ ಗ್ರಾಮಗಳು. ಮೊದ ಮೊದಲಿಗೆ ಈ ಗ್ರಾಮಗಳಲ್ಲಿ ನೀರಿಗೂ ದುಡ್ಡುಕೊಡಬೇಕಾ? ಎಂದು ಈ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ತದನಂತರ ಈ ಗ್ರಾಮಗಳಲ್ಲಿ ನಿರಂತರವಾಗಿ IEC/HRD ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಗ್ರಾಮಗಳ ಜನರಿಗೆ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಿಂದಾಗುವ ಲಾಭಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು. ಬಳಿಕ ಗ್ರಾಮ ಕ್ರಿಯಾ ಯೋಜನೆಯನ್ನು ರೂಪಿಸಿ ಸಾಮಾನ್ಯ ವರ್ಗದ ಜನರು 50% ಕ್ಕೂ ಹೆಚ್ಚಿರುವ ಗ್ರಾಮಗಳಾದ ಬಿಸಲವಾಡಿ, ಹರದನಹಳ್ಳಿ ಮತ್ತು ಬಂಡಿಗೆರೆ ಗ್ರಾಮಗಳಲ್ಲಿ 10% ಸಮುದಾಯ ವಂತಿಗೆ ಹಾಗೂ ಶೇಕಡಾ 55ಕ್ಕೂ ಹೆಚ್ಚಿನ ಜನಸಂಖ್ಯೆ ಪರಿಶಿಷ್ಠ ಜಾತಿ ಮತ್ತು ಪಂಗಡದ ಜನರಿರುವ ಅಮಚವಾಡಿ ಗ್ರಾಮದಲ್ಲಿ 5% ಸಮುದಾಯ ವಂತಿಗೆಯನ್ನು ಪಡೆಯಲಾಯಿತು. ಜಿಲ್ಲೆಯಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಈ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಗ್ರಾಮಗಳಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಇದೀಗ ಈ 4 ಗ್ರಾಮಗಳ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ಪ್ರತಿದಿನ ತಲಾ 55 ಲೀ. ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಈ ಗ್ರಾಮಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲು ಮೊದಲೆಲ್ಲಾ ಅಡ್ಡಿಪಡಿಸುತ್ತಿದ್ದ ಜನರು ನಿರಂತರ ಜಾಗೃತಿ ಕಾರ್ಯಕ್ರಮಗಳ ಬಳಿಕ ತಾವಾಗಿಯೇ ಮುಂದೆ ಬಂದು ಸಮುದಾಯ ವಂತಿಗೆಯನ್ನು ನೀಡಿ ತಮಗೂ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ನೀರನ್ನು ನೀಡುವಂತೆ ಮನವಿ ಮಾಡಲಾರಂಬಿಸಿದರು ಎನ್ನುತ್ತಾರೆ ಅನುಷ್ಠಾನ ನೆರವು ಚಟುವಟಿಕೆ ಸಂಸ್ಥೆಯ ತಂಡದ ನಾಯಕ.
ಒಟ್ಟಿನಲ್ಲಿ ಯಾವುದೇ ಯೋಜನೆಗಳು ಯಶಸ್ಸನ್ನು ಕಾಣಬೇಕಾದರೆ 4Psಗಳ ಜೊತೆ IEC/HRD ಚಟುವಟಿಕೆಗಳ ಪಾತ್ರವೂ ಮಹತ್ವದ್ದಾಗಿದೆ ಎಂಬುದು ಈ ಗ್ರಾಮಗಳ ಯಶೋಗಾಥೆಗಳಿಂದಲೇ ತಿಳಿಯುತ್ತದೆ.
5,555 total views, 2 views today