
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅತ್ತಿಮೊಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣ್ಣೆ ಗ್ರಾಮದಲ್ಲಿ 104 ಮನೆಗಳಿದ್ದು, 514 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಬಳಸುತ್ತಿದ್ದಾರೆ. ಈ ಊರಿನಲ್ಲಿ ಪ್ರಸಿದ್ಧವಾದ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮದುವೆ, ಶುಭ ಸಮಾರಂಭ, ಜಾತ್ರೆ, ಹರಿಸೇವೆಗಳು, ಗ್ರಾಮಸ್ಥರ ಸಭೆಗಳು, ಸ್ವ ಸಹಾಯ ಸಂಘಗಳ ಸಭೆ, ಸ್ತ್ರೀ ಶಕ್ತಿ ಸಂಘಗಳ ಸಭೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ಜಾತ್ರೆ, ಹಬ್ಬ ಅಥವಾ ಯಾವುದೇ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಅತಿ ಹೆಚ್ಚು ಜನಸಂದಣಿ ಸೇರುವ ಈ ಜಾಗದಲ್ಲಿ ಬೇರೆ ಊರುಗಳಿಂದ ಆಗಮಿಸಿದ ಜನರು ಮಲ-ಮೂತ್ರ ವಿಸರ್ಜನೆಗೆ ಬಯಲು ಕಡೆಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳಿಗೆ ಬಯಲಿಗೆ ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೆ, ನೀರಿನ ವ್ಯವಸ್ಥೆ ಇಲ್ಲದೆ ಬಯಲು ಶೌಚಕ್ಕೂ ತೊಂದರೆಯಾಗುತ್ತಿತ್ತು. ಜೊತೆಗೆ, ಜನರು ಬಯಲಿನಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ದೇವಸ್ಥಾನದ ಪರಿಸರವೂ ಹದಗೆಟ್ಟಿತ್ತು. ಇದನ್ನು ಗಮನಿಸಿದ ಆ ಊರಿನ ಗ್ರಾಮಸ್ಥರು ಮತ್ತು ದೇವಸ್ಥಾನದ ಸಮಿತಿ ಸದಸ್ಯರು ಗ್ರಾಮದ ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡಲು ಸಮುದಾಯ ಶೌಚಾಲಯದ ಅವಶ್ಯಕತೆಯಿದೆ ಎಂಬುದನ್ನರಿತು, ಅದರ ನಿರ್ಮಾಣಕ್ಕೆ ನಿರ್ಧರಿಸಿದರು.

“ಗ್ರಾಮಸ್ಥರೆಲ್ಲ ಚರ್ಚಿಸಿ, ಸಮುದಾಯ ಶೌಚಾಲಯ ನಿರ್ಮಾಣದ ಮನವಿಯನ್ನು ಆ ಊರಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿ, ಈ ವಿಷಯವಾಗಿ ಚರ್ಚಿಸಿದೆವು. ಈ ಬಗ್ಗೆ ಪರಿಶೀಲಿಸಿದ ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರೇಖಾ ಅವರು, 2019ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಡಿಯಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಗೆ ಈ ವಿಷಯದ ಕುರಿತು ಅರ್ಜಿ ಸಲ್ಲಿಸಿದ್ದರು. ಇದರ ಫಲವಾಗಿ ಸ್ವಚ್ಛ ಭಾರತ ಮಿಷನ್(ಗ್ರಾ) ಅಡಿಯಲ್ಲಿ ಸಮುದಾಯ ಶೌಚಾಲಯಕ್ಕೆ ಹಣವನ್ನು ಮಂಜೂರು ಮಾಡಲಾಯಿತು. ಅಷ್ಟೇ ಅಲ್ಲದೆ, ಸಮುದಾಯ ಶೌಚಾಲಯದ ಉನ್ನತೀಕರಣಕ್ಕಾಗಿ ದೇವಸ್ಥಾನದಿಂದ 2 ಲಕ್ಷ ರೂ.ಗಳನ್ನೂ ಸಹ ನೀಡಲಾಗಿದ್ದು, ಈಗ ಆ ಶೌಚಾಲಯ ಪ್ರಗತಿಯ ಹಂತದಲ್ಲಿದೆ” ಎಂದಿದ್ದಾರೆ ಗ್ರಾಮಸ್ಥರಾದ ಮಂಜುನಾಥ ಅವರು.
ಪ್ರಸ್ತುತ, ಸಮುದಾಯ ಶೌಚಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಆ ದೇವಸ್ಥಾನದ ಸಮಿತಿಯ ಸದಸ್ಯರೇ ವಹಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಸ್ವಂತ ಮನೆಯ ಶೌಚಾಲಯದಂತೆಯೇ, ಸಮುದಾಯ ಶೌಚಾಲಯವನ್ನೂ ಸ್ವಚ್ಛವಾಗಿಟ್ಟು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಸಮುದಾಯ ಶೌಚಾಲಯವನ್ನು ಉಪಯೋಗಿಸಲು ಭಕ್ತಾದಿಗಳಿಂದ ಯಾವುದೇ ಹಣವನ್ನು ಪಡೆಯದೇ ಉಚಿತವಾಗಿ ಸೇವೆ ನೀಡುತ್ತಿರುವುದು ನಿಜಕ್ಕೂ ಆ ಊರಿನ ಹೆಮ್ಮೆಯ ವಿಷಯ.

ಶೌಚಾಲಯದಿಂದ ಬಂದ ಕಪ್ಪು ಮತ್ತು ಬೂದು ನೀರು ಚರಂಡಿಗಳಲ್ಲಿ, ಮೋರಿಗಳಲ್ಲಿ ನಿಲ್ಲುವುದನ್ನು ತಡೆಗಟ್ಟಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು ಆಯೋಗದಿಂದ ಇಂಗು ಗುಂಡಿ (Soak Pit) ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಮುದಾಯ ಶೌಚಾಲಯವನ್ನು ಸ್ವಂತ ಶೌಚಾಲಯ ಎಂದು ಭಾವಿಸಿ ನಿರ್ವಹಣೆ ಮಾಡುತ್ತಿರುವ ಈ ಊರಿನ ಗ್ರಾಮಸ್ಥರು ಪರಿಸರದ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ನಿಜಕ್ಕೂ ಇದೊಂದು ಮಾದರಿ ಗ್ರಾಮವಾಗಿದೆ.
7,191 total views, 4 views today