ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯು ದೇಶದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯೋಜನೆಯ ಮೂಲಕ ರಾಷ್ಟ್ರವನ್ನು 'ಬಯಲು ಬಹಿರ್ದೆಸೆ ಮುಕ್ತ ಪ್ಲಸ್ (ODF+)’ ಎಂದು ಘೋಷಿಸುವ ಉದ್ದೇಶದಿಂದ ಹಲವಾರು ಘಟಕಾಂಶಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತೆಗಾಗಿ ಶ್ರಮಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಪ್ರಸ್ತುತ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.
ಈ ಘಟಕಾಂಶಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸುವಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರ ಪಾತ್ರ ಹಿರಿದು. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಕ್ಕೂಟವು ಉತ್ತಮ ವೇದಿಕೆ ಒದಗಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಸಕ್ರಿಯವಾಗಿ ತೊಡಗಿದ್ದಾರೆ.
ಧಾರವಾಡ ಜಿಲ್ಲೆ, ಮರೇವಾಡ ಗ್ರಾಮ ಪಂಚಾಯತಿಯಲ್ಲಿ, ಸ್ವಸಹಾಯ ಗುಂಪಿನ ಸದಸ್ಯೆ ಕುಮಾರಿ ಮಂಜುಳಾ ಮಾಧನಭಾವಿ ಅವರು ಸ್ವಚ್ಛ ವಾಹಿನಿ ಚಾಲಕಿಯಾಗಿ ತಮ್ಮ ಜೀವನ ರೂಪಿಸಿಕೊಳ್ಳುವಲ್ಲಿ ಮುಂದಡಿ ಇಟ್ಟಿದ್ದಾರೆ. ಈ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಮಂಜುಳಾ ಅವರ ತಂದೆ ಉಳವಪ್ಪಾ ಮಾಧನಭಾವಿ ನ್ಯಾಯಬೆಲೆ ಅಂಗಡಿಯಲ್ಲಿ ಸೇವೆಯಲ್ಲಿದ್ದು, ತಾಯಿ ಈರವ್ವಾ ಮಾಧನಭಾವಿ ಅವರೂ ಕೂಲಿ ಕೆಲಸ ಮಾಡುತ್ತಾರೆ. 29 ವರ್ಷದ ಮಂಜುಳಾ, ದ್ವಿತೀಯ ಪಿ.ಯು.ಸಿವರೆಗೆ ಶಿಕ್ಷಣ ಪೂರೈಸಿದ್ದಾರೆ.
ಪ್ರಸ್ತುತ ಘನ ತ್ಯಾಜ್ಯ ಸ್ವಚ್ಛ ವಾಹಿನಿಯ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರತಿ ಮಾಹೆಗೆ ರೂ.4000/-ಗಳಂತೆ ಗೌರವಧನ ಪಡೆಯುತ್ತಿದ್ದಾರೆ.
ಮಂಜುಳಾ ರವರು ದ್ವಿತೀಯ ಪಿ.ಯು.ಸಿ ಶಿಕ್ಷಣ ಪಡೆಯುವಾಗ ವಾಹನ ಚಾಲಕರು ಪ್ರತಿ ನಿತ್ಯ ವಾಹನ ಚಲಾಯಿಸುವುದನ್ನು ನೋಡಿ ತಾನೂ ಸಹ ವಾಹನ ಚಾಲನೆ ಮಾಡಬೇಕು ಎಂದು ಮನದಲ್ಲೇ ನಿರ್ಧರಿಸಿದರು. ಇವರು ಧಾರವಾಡದ ಆರ್.ಎನ್.ಸಿ.ಯಲ್ಲಿ 2 ತಿಂಗಳ ಕಾಲ ತರಬೇತಿ ಪಡೆದು ವಾಹನ ಚಾಲನಾ ಪರವಾನಗಿ ಪಡೆದುಕೊಂಡರು.
ಕೆಲವು ದಿನಗಳ ನಂತರ ಮಂಜುಳಾರವರು ಸಂಜೀವಿನಿ ಮಹಿಳಾ ಒಕ್ಕೂಟದಲ್ಲಿ ಸದಸ್ಯತ್ವ ಪಡೆದು, ಒಕ್ಕೂಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಸಹಾಯಕಿಯರು, ಚಾಲಕಿಯರ ಆಯ್ಕೆಗೆ ಮುಂದಾದಾಗ, ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು/ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿ ಮಂಜುಳಾರವರನ್ನು ಸ್ವಚ್ಛ ವಾಹಿನಿ ಚಾಲಕಿಯಾಗಿ ಆಯ್ಕೆ ಮಾಡಿದರು.
“ಗ್ರಾಮ ಪಂಚಾಯಿತಿಗೆ ಸ್ವಚ್ಛ ವಾಹಿನಿಯ ಚಾಲಕರನ್ನು ನೇಮಿಸಲು ನಾವು ಸೂಕ್ತ ಅಭ್ಯರ್ಥಿಗಾಗಿ ಹುಡುಕುತ್ತಿದ್ದೆವು. ಸಂಜೀವಿನಿ ಒಕ್ಕೂಟದ ಜೊತೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಮಂಜುಳಾರವರನ್ನು ಸ್ವಚ್ಛ ವಾಹಿನಿ ಚಾಲಕಿಯಾಗಿ ನೇಮಿಸಿಕೊಂಡೆವು. ಅವರು ಉತ್ತಮವಾಗಿ ಕಾರ್ಯನಿರ್ವಹಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ಗ್ರಾಮದ ಸ್ವಚ್ಛತೆ ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ” ಎಂದು ಗ್ರಾಮ ಪಂಚಾಯಿತಿ ಅಧಕ್ಷರು ಅಭಿಪ್ರಾಯ ಪಡುತ್ತಾರೆ.
“ಗ್ರಾಮದ ಮನೆ ಮನೆಗೂ ಹೋಗಿ ಕಸ ಸಂಗ್ರಹಣೆ ಮಾಡುತ್ತಾ, ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ' ಎಂದು ಎಲ್ಲರೂ ಮಂಜುಳಾ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಅವಳು ಮನೆಯ ಜವಾಬ್ದಾರಿ ಜೊತೆಗೆ ಸಮಾಜಕ್ಕಾಗಿಯೂ ದುಡಿಯುತ್ತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಊರಿಗೆ ಒಳ್ಳೆಯ ಹೆಸರು ತಂದಿದ್ದಾರೆ” ಎಂದು ಗ್ರಾಮಸ್ಥರು ಮಂಜುಳಾ ಕುರಿತು ಶ್ಲಾಘನೆ ವ್ಯಕ್ತಪಡಿಸುತ್ತಾರೆ.
ಈ ವೃತ್ತಿಯಿಂದ ತಮ್ಮ ಜೀವನೋಪಾಯ ಕಂಡುಕೊಂಡು ಮಾದರಿ ಸ್ವಚ್ಛ ವಾಹಿನಿಯ ಚಾಲಕಿಯಾಗಿ ಧಾರವಾಡ ಜಿಲ್ಲೆಗೆ ಗೌರವ ತಂದರು. ಇದನ್ನು ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನಾ ಸಂಸ್ಥೆ ಬೆಂಗಳೂರು ಇವರು ಗುರುತಿಸಿ “ವಿಶ್ವ ಕೌಶಲ್ಯ ದಿನಾಚರಣೆ”ಯ ಕಾರ್ಯಕ್ರಮದಂದು ಕುಮಾರಿ ಮಂಜುಳಾ ಮಾಧನಭಾವಿಯವರನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಯವರು ಸನ್ಮಾನಿಸಿ ಶುಭ ಕೋರಿರುವುದು ಅವರಿಗೆ ಹೆಮ್ಮೆಯ ಸಂಗತಿಯಾಗಿದೆ.
ಮಂಜುಳಾರವರು ತಮ್ಮ ದೃಢ ನಿರ್ಧಾರದಿಂದ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರ ಮೂಲಕ ತಮ್ಮ ಊರಿಗೆ ಮಾದರಿಯಾಗಿದ್ದಾರೆ ಮತ್ತು ಗೌರವ ತಂದಿದ್ದಾರೆ. 'ಕಾಯಕ ಯಾವುದಾದರೇನು ನಿಷ್ಠೆ ಇದ್ದರೆ ಫಲವಿಹುದಯ್ಯಾ' ಎಂಬಂತೆ ಮಂಜುಳಾ ಅವರು ತಮ್ಮ ಕೆಲಸದ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ. ಗ್ರಾಮೀಣ ಸಂಜೀವಿನಿ ಒಕ್ಕೂಟಗಳು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿವೆ.
2,134 total views, 1 views today