ಪ್ರಕೃತಿಯ ವಿಶೇಷ ಸೃಷ್ಠಿ ಮಹಿಳೆ. ಆಧುನಿಕ ಯುಗದಲ್ಲಿ ಮಹಿಳೆ ತನ್ನನ್ನು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು, ಪ್ರಾಬಲ್ಯವನ್ನು ಮೆರೆದಿದ್ದಾಳೆ ಹಾಗೂ ಮೆರೆಯುತ್ತಿದ್ದಾಳೆ ಕೂಡ. ಹೊರಗಿನ ಮತ್ತು ಒಳಗಿನ ಕೆಲಸವನ್ನು ಸಮಾನ ಆಸಕ್ತಿಯಿಂದ ಮತ್ತು ಸಮಾನ ದಕ್ಷತೆಯಿಂದ ನಿಭಾಯಿಸುವ ಗುಣವೇ ಮಹಿಳೆಯರಲ್ಲಿರುವ ವಿಶೇಷತೆ ಎಂದರೆ ತಪ್ಪಾಗಲಾರದು. ಅದು ಚಿಕ್ಕ ಕೆಲಸವಾಗಿರಲಿ, ದೊಡ್ಡ ಜವಾಬ್ದಾರಿಯಾಗಿರಲಿ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಮಹಿಳೆಯರಿಗಿರುತ್ತದೆ. ಮೇಲ್ನೋಟಕ್ಕೆ ಮಹಿಳೆಯ ಮನಸ್ಸು ಮೃದು ಮತ್ತು ಕೋಮಲವೆಂದು ಕಂಡುಬಂದರೂ ಆಂತರ್ಯದಲ್ಲಿ ಆಕೆಯ ಸಂಕಲ್ಪ ಶಕ್ತಿ ದೃಢವಾಗಿರುತ್ತದೆ ಎಂಬುದಕ್ಕೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಮಾಕನೂರು ಗ್ರಾಮ ಪಂಚಾಯಿತಿಯ ನಿವಾಸಿ ಕುಮಾರಿ ಪ್ರೇಮ ಮೂಕಪ್ಪ ಮೂಕಣ್ಣನವರೇ (38) ನಿಜ ನಿದರ್ಶನ.
ಈಕೆ ಬಡ ಕುಟುಂಬದ ಹೆಣ್ಣುಮಗಳಾಗಿದ್ದು, ಇಡೀ ಸಂಸಾರದ ನೊಗವನ್ನು ಹೊತ್ತು ಸಾಗುತ್ತಿದ್ದಾರೆ. ಪಿಯುಸಿ ಓದುತ್ತಿದ್ದಾಗ ಕುಟುಂಬದಲ್ಲಿ ಎದುರಾದ ಆರ್ಥಿಕ ಸಂಕಷ್ಟಗಳನ್ನು ಕಣ್ಣಾರೆ ನೋಡುತ್ತಿದ್ದ ಈಕೆ ಓದನ್ನು ತ್ಯಜಿಸಿ ಕೆಲಸ ಮಾಡಬೇಂದು ನಿರ್ಧರಿಸಿದರು. ಶಿಕ್ಷಣ ಇಲಾಖೆಯ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ ಸಾಕ್ಷರತಾ ಆಂದೋಲನದಲ್ಲಿ ಪ್ರೇರಕಿಯಾಗಿ ಮೊದಲು ಕೆಲಸಕ್ಕೆ ಸೇರಿಕೊಂಡರು. ಈ ಕೆಲಸವನ್ನು ಮಾಡುತ್ತಿರುವಾಗಲೇ ಸ್ವ ಸಹಾಯ ಸಂಘದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡರು. ಹೀಗೆ ಹಲವು ವರ್ಷಗಳು ಈ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತಿರುವಾಗ ಶಿಕ್ಷಣ ಇಲಾಖೆಯು ಈ ಆಂದೋಲನವನ್ನು ಅಂತ್ಯಗೊಳಿಸಿತು. ಇದಾದ ಬಳಿಕ ತನ್ನ ಪೂರ್ತಿ ಸಮಯವನ್ನು ಸ್ವ ಸಹಾಯ ಸಂಘದಲ್ಲಿಯೇ ಕಳೆಯುತ್ತಿದ್ದ ಈಕೆಯ ಶ್ರಮವನ್ನು ಗುರುತಿಸಿ ಸಂಜೀವಿನಿ ಒಕ್ಕೂಟದಲ್ಲಿ ಎಂ.ಬಿ.ಕೆ (ಮಾಸ್ಟರ್ ಬುಕ್ ಕೀಪರ್ಸ್) ಯನ್ನಾಗಿ ಆಯ್ಕೆ ಮಾಡಲಾಯಿತು. ಹೀಗೆ ಸಂಘದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವಾಗ ಒಂದು ದಿನ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆಯನ್ನು ಕರೆಯಲಾಯಿತು ಹಾಗೂ ಎಲ್ಲಾ ಸ್ವಸಹಾಯ ಸಂಘಗಳ ಸದಸ್ಯರು ಹಾಜರಿರುವಂತೆ ಸೂಚಿಸಲಾಯಿತು.
ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣ ಮಾಡಲಾಗಿರುವ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ಹೊಣೆಯನ್ನು ಸ್ವ ಸಹಾಯ ಸಂಘಗಳಿಗೆ ನೀಡುವ ಬಗ್ಗೆ ಹಾಗೂ ಸ್ವಚ್ಛ ಸಂಕೀರ್ಣ ಘಟಕಗಳ ನಿರ್ವಹಣೆಗೆ ಖರೀದಿಸಿರುವ ಸ್ವಚ್ಛ ವಾಹಿನಿಗೆ ಮಹಿಳಾ ಚಾಲಕಿಯ ಅವಶ್ಯಕತೆಯಿದ್ದು, ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಚಿತವಾಗಿ ತರಬೇತಿ ನೀಡಿ ವಾಹನ ಚಾಲನಾ ಪರವಾನಗಿಯನ್ನೂ ನೀಡಲಿರುವುದಾಗಿ ತಿಳಿಸಿಲಾಯಿತು. ಆದರೆ ಈ ವೇಳೆ ಯಾರೂ ವಾಹನ ಚಾಲಕಿಯರಾಗಲು ಮುಂದೆ ಬಾರದೇ ಇದ್ದಾಗ ಕುಮಾರಿ ಪ್ರೇಮ ಮೂಕಪ್ಪ ಮೂಕಣ್ಣನವರು ಸಭೆಯಲ್ಲಿ ಆತ್ಮವಿಶ್ವಾಸದಿಂದ ಎದ್ದು ನಿಂತು ಈ ತರಬೇತಿಯನ್ನು ಪಡೆದುಕೊಂಡು ಸ್ವಚ್ಛ ವಾಹಿನಿಗೆ ಚಾಲಕಿಯಾಗುವುದಾಗಿ ಒಪ್ಪಿಕೊಂಡರು.
ಕುಮಾರಿ ಪ್ರೇಮ ಸದ್ಯ ಚಾಲನಾ ತರಬೇತಿ ಮತ್ತು ಪರವಾನಗಿಯನ್ನು ಪಡೆದುಕೊಂಡು ಕಳೆದ ನಾಲ್ಕು ತಿಂಗಳುಗಳಿಂದ 6125 ಜನಸಂಖ್ಯೆಯಿರುವ ಮಾಕನೂರು ಮತ್ತು ಮಾಕನೂರು ಪ್ಲಾಟ್ ಗ್ರಾಮಗಳಲ್ಲಿನ ಎಲ್ಲಾ ಮನೆಗಳಿಂದ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತಾ ಬರುತ್ತಿದ್ದಾರೆ. ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಮತ್ತು ವಿಲೇವಾರಿ ಮಾಡಲು ಈಕೆಯ ಜೊತೆಗೆ ಇಬ್ಬರು ಸಹಾಯಕಿಯರಿದ್ದು, ಪ್ರತಿದಿನ ಬೆಳಿಗ್ಗೆ 7-30 ರಿಂದ ತ್ಯಾಜ್ಯ ಸಂಗ್ರಣೆ ಕಾರ್ಯ ಆರಂಭಿಸಿ, ಸಂಗ್ರಹವಾದ ತ್ಯಾಜ್ಯವನ್ನು ಸ್ವಚ್ಛ ಸಂಕೀರ್ಣ ಘಟಕಕ್ಕೆ ತಂದು ತಲುಪಿಸುತ್ತಾರೆ. ಇದರ ಜೊತೆಯಲ್ಲಿಯೇ ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮನೆ ಮನೆ ಭೇಟಿ ವೇಳೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಬಹಳ ಮುತುವರ್ಜಿಯಿಂದ ಮಾಡಿಕೊಂಡು ಬಂದಿದ್ದು, “ಸ್ವಚ್ಛ ವಾಹಿನಿಗೆ ನನ್ನನ್ನು ಚಾಲಕಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಸಂಘಕ್ಕೆ ಮತ್ತು ಗ್ರಾಮ ಪಂಚಾಯಿತಿಗೆ, ತರಬೇತಿ ನೀಡಿ ನನ್ನನ್ನು ಸ್ವಾವಲಂಬಿಯನ್ನಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ.. ಹೀಗೆನ್ನುತ್ತಾರೆ ಪ್ರೇಮ,“ಸ್ವಚ್ಛ ಭಾರತ್ ಮಿಷನ್ ಉಯೋಜನೆಯಲ್ಲಿ ಈ ರೂಪದಲ್ಲಿ ನಾನು ಭಾಗಿಯಾಗಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣವಾದಾಗಿನಿಂದ ಗ್ರಾಮದಲ್ಲಿ ಸ್ವಚ್ಛತೆ ಹೆಚ್ಚಾಗಿದ್ದು, ತ್ಯಾಜ್ಯ ನಿರ್ವಹಣೆ ಸುಲಭವಾಗಿದೆ ಎನ್ನುತ್ತಾರೆ”
ಈಕೆಗೆ ತಂದೆ ತಾಯಿ ಮತ್ತು ಇಬ್ಬರು ತಮ್ಮಂದಿರ ವಿದ್ಯಾಭ್ಯಾಸದ ಜವಾಬ್ದಾರಿಯಿದೆ. ಈಕೆಯ ದುಡಿಮೆಯಿಂದಲೇ ಮನೆಯವರ ಹೊಟ್ಟೆ ತುಂಬಬೇಕಿದ್ದು ಈಕೆಯ ಆತ್ಮಸ್ಥೈರ್ಯ ಕಂಡು ಗ್ರಾಮಸ್ಥರು ಇದ್ದರೆ ಎಲ್ಲಾ ಮನೆಯೊಳಗೆ ಇಂತಹ ಹೆಣ್ಣುಮಗಳಿರಬೇಕು ಎನ್ನುತ್ತಿದ್ದಾರೆ.
3,514 total views, 1 views today