ವರದಿಯೊಂದರ ಪ್ರಕಾರ ರಾಜ್ಯದಲ್ಲಿ 2019 ಜನವರಿಯಲ್ಲಿ ಪ್ರತಿದಿನ 10,000 ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರಲ್ಲಿ ಕೇವಲ 3,200 ಟನ್ ಅಂದರೆ ಶೇ.32 ರಷ್ಟು ಮಾತ್ರ ವಿವಿಧ ಹಂತಗಳಲ್ಲಿ ಸಂಸ್ಕರಣೆಯಾಗುತ್ತಿದೆ. ರಾಜ್ಯ ಸರ್ಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಶೇ.68 ರಷ್ಟು ಸಂಸ್ಕರಿಸದ ತ್ಯಾಜ್ಯ ರಸ್ತೆ ಬದಿಗಳಲ್ಲಿ, ಜಲ ಮೂಲಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯಲ್ಪಡುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಜನರಲ್ಲಿರುವ ನಿರ್ಲಕ್ಷ ಧೋರಣೆ ಎಂದೇ ಹೇಳಬಹುದು. ಇದೆಲ್ಲವನ್ನು ಮನಗಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣ ಕರ್ನಾಟಕವನ್ನು ಸ್ವಚ್ಛ, ಸುಂದರ ಮತ್ತು ಸುಸ್ಥಿರವಾಗಿಸುವ ನಿಟ್ಟಿನಲ್ಲಿ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಾದ್ಯಂತ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಮುಂದಾಗಿದೆ. ಈಗಾಗಲೇ 450ಕ್ಕೂ ಹೆಚ್ಚು ಘನ ತ್ಯಾಜ್ಯ ನಿರ್ವಹಣಾ ಘಟಕಗಳು ರಾಜ್ಯದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
ತ್ಯಾಜ್ಯ ವಿಂಗಡಣೆ, ನಿರ್ವಹಣೆ ಕುರಿತು ಜನರ ಮನೋಭಾವನೆಯಲ್ಲಿ ಬಹು ದೊಡ್ಡ ಬದಲಾವಣೆ ತರುವ ಅಗತ್ಯವಿದ್ದು, ತ್ಯಾಜ್ಯ ನಿರ್ವಹಣಾ ಘಟಕವನ್ನು ಮಾಹಿತಿ ಕಣಜವನ್ನಾಗಿಸಲು ಇಲಾಖೆ ಮುಂದಾಗಿದೆ. ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ವಚ್ಛ ಸಂಕೀರ್ಣ ಎಂತಲೂ, ತ್ಯಾಜ್ಯ ವಿಲೇವಾರಿ ವಾಹನಗಳನ್ನು ಸ್ವಚ್ಛ ವಾಹಿನಿ ಎಂತಲೂ, ಸ್ವಚ್ಛತಾ ಕೆಲಸಗಾರರನ್ನು ಸ್ವಚ್ಛ ಕಾರ್ಮಿಕ ಎಂತಲೂ ಕರೆಯುವ ಮೂಲಕ ಒಂದು ಹೊಸ ಮುನ್ನುಡಿಯನ್ನು ಬರೆಯಹೊರಟಿದೆ ಕರ್ನಾಟಕ. ಗ್ರಾಮೀಣ ಕರ್ನಾಟಕದ ಘನ ಮತ್ತು ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಉಪ-ನಿಯಮಗಳು, ಗ್ರಾಮೀಣ ನೈರ್ಮಲ್ಯ ನೀತಿ ಮತ್ತು ಕಾರ್ಯತಂತ್ರವನ್ನು ಅಳವಡಿಸಿಕೊಂಡಿರುವ ಮೊದಲ ರಾಜ್ಯ ನಮ್ಮದಾಗಿದೆ.
ಇನ್ನು ಮುಂದುವರೆದು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಣ ಹಂತದ ಮತ್ತು ಮುಂದೆ ನಿರ್ಮಾಣವಾಗಬೇಕಿರುವ ಎಲ್ಲಾ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳು ಏಕರೂಪದಲ್ಲಿರುವಂತೆ ನೋಡಿಕೊಳ್ಳಲು ಏಕರೂಪದ ಬ್ರಾಂಡಿಂಗ್ ಅನ್ನು ಮಾಡಲಾಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮದಲ್ಲಿರುವ ಸ್ವಚ್ಛ ಸಂಕೀರ್ಣವನ್ನು ಅಕ್ಟೋಬರ್ 02, 2020 ರಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತ್ಯೋತ್ಸವದಂದು ಲೋಕಾರ್ಪಣೆ ಮಾಡಿದರು. ಅಂದೇ ಎಲ್ಲಾ ಜಿಲ್ಲೆಗಳಲ್ಲಿಯೂ ಆಯ್ದ ಸ್ವಚ್ಛ ಸಂಕೀರ್ಣಗಳನ್ನು ಲೋಕಾರ್ಪಣೆ ಮಾಡಲಾಯಿತು.
ವರ್ತುಲ ಆರ್ಥಿಕತೆಯ ಮಾದರಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನೊಳಗೊಂಡಿರುವ ಏಕೀಕೃತ ವಿನ್ಯಾಸವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಜೊತೆಯಲ್ಲಿಯೇ ರಾಜ್ಯದ ಮೂಲ ಸಂಪ್ರದಾಯಗಳಲ್ಲೊಂದಾದ ರಂಗೋಲಿಯ ಮೂಲಕ ತ್ಯಾಜ್ಯ ನಿರ್ವಹಣೆಯನ್ನು ಮಾದರಿ ಮತ್ತು ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಂಗೋಲಿಯ ಚಿತ್ರವುಳ್ಳ ಗೋಡೆ ಬರಹಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಇದಿಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷವಾದ ಮಾನ್ಯತೆಯಿದ್ದು, ಈ ದಿನಗಳಲ್ಲಿ ಎಲ್ಲರೂ ಹೇಗೆ ಮನೆಯಂಗಳವನ್ನು ಶುಚಿಗೊಳಿಸಿ, ಹೊಸ ಉಡುಪನ್ನು ಧರಿಸುವ ಮೂಲಕ ಕಂಗೊಳಿಸುತ್ತಾರೋ ಅದೇ ರೀತಿ ತ್ಯಾಜ್ಯ ನಿರ್ವಹಣೆಯೂ ಪ್ರತಿದಿನ ಒತ್ತು ನೀಡಬೇಕೆಂಬ ಕಾರಣಗಳಿಂದ “ಸ್ವಚ್ಛೋತ್ಸವ-ನಿತ್ಯೋತ್ಸವ” (02 ಅಕ್ಟೋಬರ್- 31ನೇ ಅಕ್ಟೋಬರ್) ಮಾಸಾಚರಣೆಯನ್ನೂ ಕೂಡ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಕಸದಿಂದ ರಸ ಎಂಬುದನ್ನು ಜನಸಾಮಾನ್ಯರಿಗೆ ಅರ್ಥಮಾಡಿಸುವ ನಿಟ್ಟಿನಲ್ಲಿ ಇಲಾಖೆ ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಲೇ ಇದೆ. “ಪ್ರಕೃತಿಗೆ ಒಮ್ಮೆ ಒಂದು ಅವಕಾಶ ಕೊಟ್ಟು ನೋಡಿ, ನೀವು ಊಹಿಸಲಾರದಷ್ಟು ವಿಧಗಳಲ್ಲಿ ಅದು ನಿಮಗೆ ಹಾಗೂ ನಿಮ್ಮ ಕುಟುಂಬಗಳಿಗೆ ವರದಾನ ನೀಡುತ್ತಲೇ ಹೋಗುತ್ತದೆ” ಈ ಮಾತುಗಳನ್ನು ನಾವು ನೀವೆಲ್ಲರೂ ಅರ್ಥಮಾಡಿಕೊಂಡು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಅಗತ್ಯವಿದೆ.
7,579 total views, 3 views today