Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಕಸಮುಕ್ತ ಪರಿಸರ ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಬಳಸಿ ಬಿಸಾಡುವ ಸಂಸ್ಕೃತಿ ನಮ್ಮ ಪರಿಸರಕ್ಕೆ ಮಾರಕವಾಗಿದೆ. ಆದ್ದರಿಂದ ತ್ಯಾಜ್ಯವನ್ನು ಸಮರ್ಪಕ ನಿರ್ವಹಣೆ ಮಾಡುವುದು ಮತ್ತು ಅದನ್ನು ಸಂಪನ್ಮೂಲವಾಗಿಸುವುದು ಅತ್ಯಂತ ಪ್ರಮುಖ ಹಾಗೂ ತುರ್ತಿನ ವಿಚಾರವಾಗಿದೆ. ಇದರಲ್ಲಿ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಬಹಳ ಮುಖ್ಯವಾಗಿದೆ.

ತ್ಯಾಜ್ಯವನ್ನು ಸಂಪನ್ಮೂಲವಾಗಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರವನ್ನು (ಮೆಟಿರಿಯಲ್ಸ್ ರಿಕವರಿ ಫೆಸಿಲಿಟಿ) ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದವು ಎಂಬಲ್ಲಿ ಮೇಟೆರಿಯಲ್ ರಿಕವರಿ ಫೆಲಿಸಿಟಿ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆಯಡಿ, ಜಿಲ್ಲಾ ಪಂಚಾಯಿತಿ ಉಡುಪಿ ನಿರ್ಮಿಸಿದೆ. ಕಾರ್ಕಳ, ಉಡುಪಿ, ಕಾಪು, ಹೆಬ್ರಿಯ ಸುಮಾರು 41 ಗ್ರಾಮ ಪಂಚಾಯಿತಿಗಳು ಈ ಯೋಜನೆಗೆ ಒಳಪಡುತ್ತವೆ.

 

ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದ ಉದ್ದೇಶ

ಕಡಿಮೆ ಮಾನವ ಸಂಪನ್ಮೂಲ ಬಳಸಿ ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ಸೇವೆ ಒದಗಿಸಿ ತ್ಯಾಜ್ಯವನ್ನು ಕೇಂದ್ರೀಕೃತವಾಗಿ ನಿರ್ವಹಣೆ ಮಾಡುವುದು ಈ ಕೇಂದ್ರದ ಉದ್ದೇಶವಾಗಿದೆ. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದ ಲಾಭವೆಂದರೆ; ಸರಳ ಯಂತ್ರಗಳ ಬಳಕೆಯಿಂದ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಮಾನವ ಸಂಪನ್ಮೂಲದ ದಕ್ಷತೆ ಹೆಚ್ಚಿಸುವುದು. ಸ್ವಚ್ಛ ಸಂಕೀರ್ಣದಲ್ಲಿ ಉತ್ಪತ್ತಿಯಾಗುವ ಮರುಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯದ ವಿಲೇವಾರಿಗೆ ಇದು ಪರಿಹಾರ ಒದಗಿಸಿದೆ. ಇಲ್ಲಿ ಮರುಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ರಿಸೈಕಲಿಂಗ್ ಕಂಪನಿಗಳಿಗೆ ಕಚ್ಚಾ ವಸ್ತುಗಳಾಗಿ ನೀಡಬಹುದಾಗಿದೆ.

ಯೋಜನೆಯ ಕಾರ್ಯವಿಧಾನ

ಯೋಜನೆ ವ್ಯಾಪ್ತಿಯ ಗ್ರಾಮದ ಮನೆ ಮನೆ ಯಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಮೊದಲು ಸ್ವಚ್ಛ ಸಂಕೀರ್ಣಕ್ಕೆ ತರಲಾಗುತ್ತದೆ. ನಂತರ ಸ್ವಚ್ಛ ಸಂಕೀರ್ಣದಲ್ಲಿ ತ್ಯಾಜ್ಯವನ್ನು ತೂಕ ಮಾಡಿ ಪ್ಯಾಕ್ ಮಾಡಿ ಇಡಲಾಗುತ್ತದೆ. ಪ್ರತಿವಾರ ಎಮ್.ಆರ್.ಎಫ್ ಕೇಂದ್ರದ ತ್ಯಾಜ್ಯ ಸಂಗ್ರಹಣಾ ವಾಹನವು ಸ್ವಚ್ಛ ಸಂಕೀರ್ಣಗಳಿಂದ ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತದೆ

ನಂತರ ಎಮ್.ಆರ್.ಎಫ್ ಕೇಂದ್ರದಲ್ಲಿ ಕನ್ವೆಯರ್ ಬೆಲ್ಟ್ ಸಹಾಯದಿಂದ ಸುಮಾರು 25 ರಿಂದ 30 ವಿಭಾಗವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಲಾಗುತ್ತದೆ. ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುನರ್ಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತದೆ.

ಘಟಕ ನಿರ್ಮಾಣದ ನಂತರದ ಬದಲಾವಣೆ

ಉಡುಪಿ ಜಿಲ್ಲೆಯಲ್ಲಿ ಅಧಿಕೃತ ಮರುಬಳಕೆದಾರರು ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿಗಳಿಗೆ ತ್ಯಾಜ್ಯವನ್ನು ಮಾರಾಟ ಮಾಡುವುದು ಕಷ್ಟವಾಗಿತ್ತು. ಈಗ ಎಮ್.ಆರ್.ಎಫ್ ಕೇಂದ್ರದಲ್ಲಿ ಸಾಕಷ್ಟು ಪ್ರಮಾಣದ ತ್ಯಾಜ್ಯ ಸಂಗ್ರಹವಾಗುವುದರಿಂದ ಬೃಹತ್ ಪ್ರಮಾಣದಲ್ಲಿ ದೂರದ ಅಧಿಕೃತ ಮರುಬಳಕೆದಾರ ಕಂಪನಿಗಳಿಗೆ ಮಾರಾಟ ಮಾಡಲು ಸುಲಭವಾಗಿದೆ ಮತ್ತು ಇದು ಲಾಭದಾಯಕವಗಿದೆ. ಈ ಮೊದಲು ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯವನ್ನು ಬೈಲಿಂಗ್ ಮಾಡುವ ಸೌಲಭ್ಯ ಇರಲಿಲ್ಲವಾದ್ದರಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗುವುದರಿಂದ ತ್ಯಾಜ್ಯ ಖರೀದಿದಾರರು ಗ್ರಾಮ ಪಂಚಾಯಿತಿಯಿಂದ ತ್ಯಾಜ್ಯವನ್ನು ಖರೀದಿಸಲು ಸಿದ್ದರಿರಲಿಲ್ಲ. ಈಗ ಎಮ್.ಆರ್.ಎಫ್ ಕೇಂದ್ರದಲ್ಲಿ ಬೈಲಿಂಗ್ ವ್ಯವಸ್ಥೆ ಇರುವುದರಿಂದ ಬೈಲ್ ಮಾಡಿ ಬೃಹತ್ ಪ್ರಮಾಣದಲ್ಲಿ ಮರುಬಳಕೆ ತ್ಯಾಜ್ಯ ಮಾರಾಟ ಮಾಡಲು ಸಾಧ್ಯವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮರುಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆ ಇರಲಿಲ್ಲ, ಆದ್ದರಿಂದ ಯೋಜನೆಯ ಉದ್ದೇಶಿತ ಗುರಿ ತಲುಪಲು ಕಷ್ಟವಾಗಿತ್ತು. ಇದೀಗ ಈ ಸಮಸ್ಯೆ ಬಗೆಹರಿದಿದೆ.

ಒಟ್ಟಿನಲ್ಲಿ ಈ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಿಂದ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯಾಗಿ ಪರಿಸರ ಸಂರಕ್ಷಣೆಯಾಗುತ್ತಿದೆ. ಜೊತೆಗೆ ತ್ಯಾಜ್ಯವು ಆದಾಯದ ಮೂಲವಾಗಿ ಮಾರ್ಪಟ್ಟು, ಸಂಪನ್ಮೂಲವಾಗುತ್ತಿದೆ.

ತ್ಯಾಜ್ಯ ಮರುಬಳಕೆಯತ್ತ ನಮ್ಮ ಚಿತ್ತ ಹರಿಸೋಣ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸೋಣ

 1,672 total views,  4 views today

WhatsApp chat